ಭಾರತದ ಗಡಿಯಲ್ಲಿ ಬಂಕರ್, ಸೇನಾ ಸೌಕರ್ಯಗಳ ನಿರ್ಮಾಣ

Update: 2018-01-06 20:50 IST
ಭಾರತದ ಗಡಿಯಲ್ಲಿ ಬಂಕರ್, ಸೇನಾ ಸೌಕರ್ಯಗಳ ನಿರ್ಮಾಣ
  • whatsapp icon

ಹೊಸದಿಲ್ಲಿ, ಜ.6: ಪಾಕಿಸ್ತಾನದ ನೆಲದಲ್ಲಿ ಚೀನಿ ಸೇನೆಯ ಜಮಾವಣೆ ಹೆಚ್ಚಾಗುತ್ತಿದ್ದು, ರಾಜಸ್ಥಾನದಲ್ಲಿ ಭಾರತದ ಗಡಿಯುದ್ದಕ್ಕೂ ಸೇನಾ ಸೌಕರ್ಯಗಳನ್ನು ಹೆಚ್ಚಿಸಲು ಪಾಕಿಸ್ತಾನವು ಚೀನಾದ ನೆರವನ್ನು ಪಡೆಯುತ್ತಿರುವ ಬಗ್ಗೆ ಮಾಹಿತಿ ಬಯಲಾಗಿದೆ. ಪಾಕಿಸ್ತಾನಿ ಸೇನೆಗಾಗಿ ಚೀನಾವು ವಾಯುನೆಲೆಗಳ ಉನ್ನತೀಕರಣ, 3,550ಕ್ಕೂ ಅಧಿಕ ಬಂಕರ್‌ಗಳ ನಿರ್ಮಾಣ, ಗಡಿಯಲ್ಲಿ ಹೊರಠಾಣೆಗಳ ನಿರ್ಮಾಣ ಮತ್ತು ರಸ್ತೆ ಕಾಮಗಾರಿ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಭಾರತದ ಗಡಿಯುದ್ದಕ್ಕೂ 350 ಬಂಕರ್‌ಗಳನ್ನು ಈಗಾಗಲೇ ನಿರ್ಮಿಸಲಾಗಿದ್ದು, ಇವುಗಳ ನಿರ್ಮಾಣ ಹೊರಜಗತ್ತಿಗೆ ತಿಳಿಯಬಾರದು ಎಂಬ ಕಾರಣಕ್ಕೆ ಮುಚ್ಚಿಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಬಂಕರ್‌ಗಳ ನಿರ್ಮಾಣದ ಬಗ್ಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುವ ಧ್ವಜಸಭೆಯಲ್ಲೂ ಪಾಕಿಸ್ತಾನಿ ಭದ್ರತಾ ಪಡೆಗಳು ಭಾರತಕ್ಕೆ ಮಾಹಿತಿ ನೀಡಿಲ್ಲ ಎಂದು ವರದಿಗಳು ತಿಳಿಸಿವೆ. ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದ ಖೈರ್‌ಪುರ್ ವಾಯುನೆಲೆಯಲ್ಲಿ ಚೀನಿ ಸೇನೆಯ ಚಟುವಟಿಕೆಗಳು ಹೆಚ್ಚಾಗಿದೆ. ಖೈರ್‌ಪುರ್ ವಾಯುನೆಲೆಯ ಉನ್ನತೀಕರಣ ಮತ್ತು ವಿಸ್ತರಣೆ ಸೇರಿದಂತೆ ಭಾರತದ ಗಡಿಗೆ ತಾಗಿಕೊಂಡಂತೆ ಇನ್ನೂ ಮೂರು ವಾಯುಮಾರ್ಗಗಳ ನಿರ್ಮಾಣ ಬಿರುಸಾಗಿ ನಡೆಯುತ್ತಿದೆ.

ಈ ವಾಯುಮಾರ್ಗಗಳು ಮತ್ತು ಇತರ ಮೂಲಭೂತ ಸೌಕರ್ಯಗಳ ನಿರ್ಮಾಣದಿಂದ ತೈಲ, ನೈಸರ್ಗಿಕ ಅನಿಲ ಮತ್ತು ಇತರ ಖನಿಜ ಸಂಪನ್ಮೂಲಗಳನ್ನು ಸಾಗಾಟ ಮಾಡುವುದು ಸುಲಭವಾಗಲಿದೆ ಎಂದು ಪಾಕಿಸ್ತಾನ ತಿಳಿಸಿದೆ. ಕರಾಚಿ ಮೂಲಕ ಸಂಪನ್ಮೂಲಗಳನ್ನು ಸಾಗಾಟ ಮಾಡುವುದು ದೂರ ಮತ್ತು ದಟ್ಟಣೆಯ ಕಾರಣದಿಂದಾಗಿ ಕಷ್ಟಕರವಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News