ಮಹಾತ್ಮ ಗಾಂಧಿ ಹತ್ಯೆಯ ಹಿಂದೆ 'ನಿಗೂಢ ವ್ಯಕ್ತಿ'ಯಿಲ್ಲ: ಸುಪ್ರೀಂ ಕೋರ್ಟ್ ಗೆ ಅಮಿಕಸ್ ಕ್ಯೂರಿ ಹೇಳಿಕೆ

Update: 2018-01-08 07:53 GMT

ಹೊಸದಿಲ್ಲಿ, ಜ.8: ನಾಥೂರಾಮ್ ಗೋಡ್ಸೆ ಹೊರತುಪಡಿಸಿ ಮಹಾತ್ಮ ಗಾಂಧಿಯನ್ನು ಬೇರೆ ಯಾರಾದರೂ  ಹತ್ಯೆ ಮಾಡಿರಬಹುದೆಂಬುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಹಿರಿಯ ವಕೀಲ ಅಮರೇಂದ್ರ ಶರಣ್ ಸೋಮವಾರ ಸುಪ್ರೀಂ ಕೋರ್ಟಿನ ಮುಂದೆ ಹೇಳಿದ್ದಾರೆ.

ಸಾವರ್ಕರ್ ಅವರ ಸ್ವಘೋಷಿತ ಅನುಯಾಯಿ ತಾನೆಂದು ಹೇಳಿಕೊಂಡ ಪಂಕಜ್ ಫಡ್ನಿಸ್ ಎಂಬವರು ಸುಪ್ರೀಂ ಕೋರ್ಟಿನ ಮುಂದೆ ಅಪೀಲೊಂದನ್ನು ಸಲ್ಲಿಸಿ ಮಹಾತ್ಮ ಗಾಂಧಿಯ ಬಲಿ ಪಡೆದ ನಾಲ್ಕನೇ ಗುಂಡನ್ನು 'ನಿಗೂಢ ವ್ಯಕ್ತಿ'ಯೊಬ್ಬ ಹಾರಿಸಿದ್ದಾನೆಂದು ಹೇಳಿಕೊಂಡ ನಂತರ ಸುಪ್ರೀಂ ಕೋರ್ಟ್ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಪರಿಶೀಲಿಸುವಂತೆ ಶರಣ್ ಅವರಿಗೆ ಸೂಚಿಸಿತ್ತು.

ಈ ಹತ್ಯೆ ಪ್ರಕರಣದ ಮರು ತನಿಖೆ ಅಥವಾ ಹೊಸ ಸತ್ಯ ಶೋಧನಾ ಆಯೋಗದ ರಚನೆಯ ಅಗತ್ಯವಿಲ್ಲವೆಂದು ಈ ಪ್ರಕರಣದಲ್ಲಿ ಅಮಿಕಸ್ ಕ್ಯೂರಿ ಆಗಿರುವ ಶರಣ್ ಹೇಳಿದ್ದಾರೆ. ಸುಮಾರು 4000 ಪುಟಗಳಷ್ಟಿದ್ದ ವಿಚಾರಣಾ ನ್ಯಾಯಾಲಯದ ದಾಖಲೆಗಳನ್ನು ಹಾಗೂ ಜೀವನ್ ಲಾಲ್ ಕಪೂರ್ ವಿಚಾರಣಾ ಆಯೋಗದ ವರದಿಯನ್ನು ಪರಿಶೀಲಿಸಲು ಶರಣ್ ಅವರಿಗೆ  ವಕೀಲರುಗಳಾದ ಸಂಚಿತ್ ಗುರು ಹಾಗೂ ಸಮರ್ಥ್ ಖನ್ನಾ ಸಹಾಯ ಮಾಡಿದ್ದರು.

ಈ ಪ್ರಕರಣದ ಬಗ್ಗೆ ಈ ಹಿಂದೆ ನಡೆದಿರುವ ತನಿಖೆಯು ಹಂತಕನನ್ನು, ಆತನ ಸಿದ್ಧಾಂತ ಹಾಗೂ ಹತ್ಯೆಗೆ ಆತ ಬಳಸಿದ್ದ ಬುಲೆಟ್ ಗಳನ್ನು ಸರಿಯಾಗಿಯೇ ಗುರುತಿಸಿದೆ ಎಂದು ಶರಣ್ ಹೇಳಿದರಲ್ಲದೆ ಗಾಂಧಿ ಮೇಲೆ ನಾಲ್ಕು ಗುಂಡುಗಳನ್ನು ಹಾರಿಸಿರುವ ಎರಡನೇ ಹಂತಕ ಇದ್ದಿರುವ ಸಾಧ್ಯತೆಯೇ ಇಲ್ಲ ಎಂದು ಶರಣ್ ಹೇಳಿದ್ದಾರೆ.

ಹತ್ಯೆಯ ಹಿಂದೆ ವಿದೇಶಿ ಗುಪ್ತಚರ ಏಜನ್ಸಿಯ ಶಾಮೀಲಾತಿ ಆರೋಪವನ್ನೂ  ಶರಣ್ ತಳ್ಳಿ ಹಾಕಿದ್ದಾರಲ್ಲದೆ ಅಪೀಲುದಾರನ ವಾದವನ್ನು ಪುಷ್ಠೀಕರಿಸಲು ಯಾವುದೇ ಪುರಾವೆಯಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News