ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?

Update: 2018-01-09 10:13 IST
ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ಸುಪ್ರೀಂಕೋರ್ಟ್ ಹೇಳಿದ್ದೇನು?
  • whatsapp icon

ಹೊಸದಿಲ್ಲಿ, ಜ. 9: ಪತ್ರಿಕೆಗಳ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿರುವ ಸುಪ್ರೀಂಕೋರ್ಟ್, ಕೆಲ ನಿರ್ದಿಷ್ಟ ವ್ಯಕ್ತಿಗಳನ್ನೊಳಗೊಂಡ ಹಗರಣಗಳ ವರದಿಗಾರಿಕೆಯಲ್ಲಿ ಆಗುವ ಸಣ್ಣ ಪುಟ್ಟ ತಪ್ಪುಗಳು ಹಾಗೂ ಉತ್ಸಾಹವನ್ನು ಮಾನಹಾನಿ ಎಂದು ಪರಿಗಣಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್ 12ರಂದು ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಬಿಹಾರದ ಮಾಜಿ ಸಚಿವೆಯೊಬ್ಬರ ಪುತ್ರಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಪತ್ರಕರ್ತರೊಬ್ಬರು ಟಿವಿ ಸುದ್ದಿ ಪ್ರಸಾರ ಮಾಡುವ ವೇಳೆ ತಮ್ಮ ಹಾಗೂ ಕುಟುಂಬದ ಸದಸ್ಯರ ಮಾನಹಾನಿ ಮಾಡಿದ್ದಾರೆ ಎಂದು ಆಪಾದಿಸಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ಪಾಟ್ನಾ ಹೈಕೋರ್ಟ್ ತಳ್ಳಿಹಾಕಿತ್ತು.

ಬಿಹಾರ ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಆಹಾರ ಸಂಸ್ಕರಣಾ ಘಟಕವೊಂದಕ್ಕೆ 2010ರಲ್ಲಿ ಮಾಡಿದ ಭೂಮಿ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಸುದ್ದಿ ಪ್ರಸಾರವಾಗಿತ್ತು. ಹಿಂದಿ ಟಿವಿ ಚಾನಲ್ ಒಂದು ಉದ್ದೇಶಪೂರ್ವಕವಾಗಿ ತಮ್ಮ ಪೋಷಕರ ವಿರುದ್ಧ ಹಾಗೂ ತಮ್ಮ ವಿರುದ್ಧ ಮಾನಹಾನಿಕರ ಹೇಳಿಕೆ ಪ್ರಸಾರ ಮಾಡಿತ್ತು ಎಂದು ಮಹಿಳೆ ಆಪಾದಿಸಿದ್ದರು.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ "ಪ್ರಜಾಸತ್ತಾತ್ಮಕವಾಗಿ ನೀವು ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಈ ಪ್ರಕರಣ 2011ರಿಂದಲೂ ನಡೆಯುತ್ತಿದೆ. ತಮ್ಮನ್ನು ರಕ್ಷಿಸಿಕೊಳ್ಳುವಲ್ಲಿ ಪತ್ರಕರ್ತರು ಸಾಕಷ್ಟು ಸಮಯ ಹಾಗೂ ಹಣವನ್ನು ವ್ಯಯಿಸಿರಬೇಕು. ಮಾನಹಾನಿಗೆ ಸಂವಿಧಾನಾತ್ಮಕ ಮಾನ್ಯತೆ ಇರಬಹುದು. ಆದರೆ ಹಗರಣ ಬಗೆಗಿನ ತಪ್ಪು ಸುದ್ದಿ ಮಾನಹಾನಿಯಾಗುವುದಿಲ್ಲ" ಎಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News