ಉತ್ತರ ಪ್ರದೇಶ: ಕಳ್ಳಭಟ್ಟಿ ಸೇವಿಸಿ 9 ಮಂದಿ ಮೃತ್ಯು
Update: 2018-01-11 15:59 IST

ಲಕ್ನೋ, ಜ.11: ಕಳ್ಳಭಟ್ಟಿ ಸೇವಿಸಿದ ಪರಿಣಾಮ 9 ಮಂದಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ. ಕಳ್ಳಭಟ್ಟಿ ಸೇವನೆಯಿಂದ ಅಸ್ವಸ್ತಗೊಂಡ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೃತರನ್ನು ನೋಮಿಲಾಲ್, ಕಮಲೇಶ್ ಕುಮಾರ್, ಉಮೇಶ್ ಕುಮಾರ್, ಕಾಂಶಿರಾಮ್, ಅವಿನೇಶ್, ರಾಕೇಶ್ ಕುಮಾರ್, ರಾಂಪಾಲ್ ಗೌತಮ್, ಮಾತಾ ಪ್ರಸಾದ್, ರಾಮ್ ಸುರೇಶ್ ಎಂದು ಗುರುತಿಸಲಾಗಿದೆ.
“ಕಳ್ಳಭಟ್ಟಿ ಸೇವನೆಯಿಂದ 9 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆದ ಬಳಿಕವಷ್ಟೇ ನಿಖರ ಕಾರಣ ತಿಳಿದುಬರಲಿದೆ” ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನಿಲ್ ಕುಮಾರ್ ಸಿಂಗ್ ಹೇಳಿದ್ದಾರೆ.