ತೊಗಾಡಿಯಾರನ್ನು ವಿಶ್ವ ಹಿಂದೂ ಪರಿಷತ್ತಿನಿಂದ ಶೀಘ್ರವೇ ಕಿತ್ತೆಸೆಯಲಾಗುವುದು: ಸ್ವಾಮಿ ಚಿನ್ಮಯಾನಂದ

ಅಲಹಾಬಾದ್, ಜ.21: ವಿಶ್ವ ಹಿಂದೂ ಪರಿಷತ್ತಿನ ಆಂತರಿಕ ಕಚ್ಚಾಟ ಇದೀಗ ಬೀದಿಜಗಳದ ಸ್ವರೂಪ ಪಡೆದುಕೊಂಡಿದೆ. ಸಂಘಟನೆಯ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರನ್ನು ಸದ್ಯದಲ್ಲೇ ಕಿತ್ತೆಸೆಯಲಾಗುವುದು ಎಂದು ಮಾರ್ಗದರ್ಶಕ ಮಂಡಳಿಯ ಹಿರಿಯ ಸದಸ್ಯರೊಬ್ಬರು ಘೋಷಿಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ರಾಜಸ್ಥಾನ ಸರ್ಕಾರದ ವಿರುದ್ಧ ಹೇಳಿಕೆ ನೀಡುತ್ತಿರುವ ತೊಗಾಡಿಯಾ ಅವರ ಅಶಿಸ್ತಿನ ವರ್ತನೆ ಮುಂದುವರಿದಿದೆ. ಈ ಕಾರಣಕ್ಕೆ ಸದ್ಯವೇ ಅವರನ್ನು ಕಿತ್ತೆಸೆಯಲಾಗುವುದು" ಎಂದು ಸ್ವಾಮಿ ಚಿನ್ಮಯಾನಂದ ಪ್ರಕಟಿಸಿದ್ದಾರೆ.
ಕಳೆದ ಸೋಮವಾರ ಕೆಲ ಗಂಟೆಗಳ ಕಾಲ ನಾಪಪತ್ತೆಯಾಗಿದ್ದ ತೊಗಾಡಿಯಾ, "ರಾಜಸ್ಥಾನ ಪೊಲೀಸರು ನನ್ನನ್ನು ಗುಂಡಿಕ್ಕಿ ಕೊಲ್ಲಲು ಹುನ್ನಾರ ನಡೆಸಿದ್ದಾರೆ" ಎಂದು ಆಪಾದಿಸಿದ್ದರು.
"ಸಂಘಟನೆಯಲ್ಲಿ ತೊಗಾಡಿಯಾ ಪ್ರಾಮುಖ್ಯ ಕಳೆದುಕೊಂಡಿದ್ದಾರೆ. ಅವರನ್ನು ಮೂಲೆಗುಂಪು ಮಾಡಿರುವ ಬಗ್ಗೆ ಬಹುತೇಕ ಮಂದಿಗೆ ಸಂತಸವಿದೆ. ಅವರ ಇತ್ತೀಚಿನ ವರ್ತನೆ ಅಶಿಸ್ತಿಗೆ ಹಿಡಿದ ಕನ್ನಡಿ. ವಿಎಚ್‌ಪಿಯಲ್ಲಿ ಅವರನ್ನು ಸಹಿಸುವ ಪ್ರಶ್ನೆಯೇ ಇಲ್ಲ" ಎಂದು ಸಂಘಟನೆಯ ಅತ್ಯುನ್ನತ ವಿಭಾಗದ ಸದಸ್ಯ ವಿವರಿಸಿದ್ದಾರೆ. ತೊಗಾಡಿಯಾಗೂ ವಿಎಚ್‌ಪಿಗೂ ಯಾವ ಸಂಬಂಧವೂ ಇಲ್ಲ ಎಂದು ಚಿನ್ಮಯಾನಂದ ಸ್ಪಷ್ಟಪಡಿಸಿದ್ದಾರೆ.
ಆದರೆ ವಿಎಚ್‌ಪಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ತೊಗಾಡಿಯಾ ಅವರನ್ನು ಯಾರೂ ಮೂಲೆಗುಂಪು ಮಾಡಿಲ್ಲ. ಅವರು ನಮಗೂ ಸಮಾಜಕ್ಕೂ ಇಂದಿಗೂ ಆತ್ಮೀಯರು ಎಂದು ಸಮರ್ಥಿಸಿಕೊಂಡಿದ್ದಾರೆ.