ಇಬ್ಬರು ಮಕ್ಕಳನ್ನು ರಕ್ಷಿಸಿ ಬಲಿಯಾದ ಕ್ರೀಡಾಪಟುವಿಗೆ ಶೌರ್ಯ ಪ್ರಶಸ್ತಿ

Update: 2018-01-25 05:45 GMT

ಹೊಸದಿಲ್ಲಿ, ಜ.25 ಪ್ರವಾಹಪೀಡಿದ ಪ್ರದೇಶದಲ್ಲಿ ಕುಸಿಯುತ್ತಿದ್ದ ಕಟ್ಟಡದಿಂದ ಇಬ್ಬರು ಮಕ್ಕಳನ್ನು ರಕ್ಷಿಸಿ, ಅವಶೇಷಗಳಡಿ ಸಿಕ್ಕಿಹಾಕಿಕೊಂಡು ಮೃತಪಟ್ಟ ಕ್ರೀಡಾಪಟು ಬಬ್ಲೂ ಮಾರ್ಟಿನ್ ಅವರಿಗೆ ಈ ಬಾರಿಯ ಅತ್ಯುನ್ನತ ನಾಗರಿಕ ಶೌರ್ಯ ಪದಕವನ್ನು ಮರಣೋತ್ತರವಾಗಿ ಘೋಷಿಸಲಾಗಿದೆ.

ಮಾರ್ಟಿನ್ ಅವರಿಗೆ 'ಸರ್ವೋತ್ತಮ ಜೀವನ ರಕ್ಷಾ ಪದಕ'ವನ್ನು ಘೋಷಿಸಲಾಗಿದ್ದು, ಗಣರಾಜ್ಯೋತ್ಸವ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

 2016ರ ಆಗಸ್ಟ್‌ನಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಕಂಗೆಟ್ಟಿದ್ದ ಮಧ್ಯಪ್ರದೇಶದ ಮೈಹಾರ್‌ನಲ್ಲಿ ಈ ಘಟನೆ ನಡೆದಿತ್ತು. ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಫುಟ್ಬಾಲ್ ಹಾಗೂ ಕ್ರಿಕೆಟ್‌ನಲ್ಲಿ ಉಚಿತ ಕೋಚಿಂಗ್ ನೀಡುತ್ತಿದ್ದ ಮಾರ್ಟಿನ್ (40) ಪ್ರವಾಹದಿಂದಾಗಿ ಕುಸಿಯುತ್ತಿದ್ದ ಕಟ್ಟಡದಲ್ಲಿ ಇಬ್ಬರು ಮಕ್ಕಳು ನಿಂತಿದ್ದುದನ್ನು ನೋಡಿ ಅವರ ರಕ್ಷಣೆಗೆ ಮುಂದಾಗಿದ್ದರು. ಕಟ್ಟಡದ ವಾಚ್‌ಮನ್‌ನ ಮಗಳು ಸೇರಿದಂತೆ ಇಬ್ಬರು ಮಕ್ಕಳನ್ನು ರಕ್ಷಿಸುವಲ್ಲಿ ಅವರು ಯಶಸ್ವಿಯಾಗಿದ್ದರು. ಮಕ್ಕಳನ್ನು ಸುರಕ್ಷಿತ ಜಾಗಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರೂ, ಕಟ್ಟಡದ ಅವಶೇಷಗಳಡಿ ಮಾರ್ಟಿನ್ ಸಿಕ್ಕಿಹಾಕಿಕೊಂಡಿದ್ದರು. ಅವಶೇಷಗಳಡಿ ಕೊನೆಕ್ಷಣದಲ್ಲಿ ಕಣ್ಣಗಲಿಸಿಕೊಂಡು ನೋಡುತ್ತಿದ್ದ ಚಿತ್ರ ಮರುದಿನ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಾಗ ಈ ಯೋಧನಿಗೆ ಸ್ಥಳೀಯರು ಗೌರವಯುತ ವಿದಾಯ ಹೇಳಿದ್ದರು.

ಸಿಎಂ ಶಿವರಾಜ್‌ಸಿಂಗ್ ಚೌಹಾಣ್, ಮಾರ್ಟಿನ್ ನಿವಾಸಕ್ಕೆ ಭೇಟಿ ನೀಡಿ ಐದು ಲಕ್ಷ ರೂ. ಪರಿಹಾರಧನ ವಿತರಿಸಿದ್ದರು. ಜೀವರಕ್ಷಣೆಯಲ್ಲಿ ತಮ್ಮ ಪ್ರಾಣ ತ್ಯಾಗ ಮಾಡುವ ವ್ಯಕ್ತಿಗಳಿಗೆ ಅತ್ಯುನ್ನತ ನಾಗರಿಕ ಶೌರ್ಯ ಪ್ರಶಸ್ತಿಯಾದ ಸರ್ವೋತ್ತಮ ಜೀವನ ರಕ್ಷಾ ಪದಕ ನೀಡಿ ಗೌರವಿಸಲಾಗುತ್ತದೆ. ಮಾರ್ಟಿನ್ ಜತೆಗೆ ಇತರ ಆರು ಮಂದಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News