783 ದಿನಗಳ ನಂತರ ಕೊನೆಗೂ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಶ್ರೀಜಿತ್

Update: 2018-01-31 16:24 IST
783 ದಿನಗಳ ನಂತರ ಕೊನೆಗೂ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ ಶ್ರೀಜಿತ್
  • whatsapp icon

ತಿರುವನಂತಪುರಂ,ಜ.31: ಪೊಲೀಸ್ ಕಸ್ಟಡಿಯಲ್ಲಿರುವಾಗ ಸಂಶಯಾಸ್ಪದವಾಗಿ ಮೃತಪಟ್ಟ ತನ್ನ ಸಹೋದರನ ಸಾವಿಗೆ ನ್ಯಾಯ ಆಗ್ರಹಿಸಿ ಶ್ರೀಜಿತ್ ಎಂಬ ಯುವಕ ಕಳೆದ 783 ದಿನಗಳಿಂದ ಇಲ್ಲಿನ ರಾಜ್ಯ ಸೆಕ್ರಟೇರಿಯಟ್ ಹೊರಗಡೆ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಬುಧವಾರ ಅಂತ್ಯಗೊಳಿಸಿದ್ದಾನೆ. ರಾಜ್ಯ ಸರಕಾರ ಸಿಬಿಐ ತನಿಖೆಗೆ ಭರವಸೆ ನೀಡಿದ ಬೆನ್ನಲ್ಲೇ ಇಂದು ಸಿಬಿಐ ಆತನ ಹೇಳಿಕೆ ದಾಖಲಿಸಿಕೊಂಡ ಕೂಡಲೇ ತನ್ನ ಪ್ರತಿಭಟನೆ ಅಂತ್ಯಗೊಳಿಸಿದ ಶ್ರೀಜಿತ್ ಈ ಬೆಳವಣಿಗೆ ತನಗೆ ಸಂತಸ ತಂದಿದೆ ಎಂದು ಹೇಳಿದ್ದಾನೆ.

"ತನಿಖೆ ಪ್ರಗತಿಯಲ್ಲಿದೆ ಎಂದು ನಮಗೆ ತಿಳಿಸಲಾಗಿದೆ. ನನಗೆ ಸಮಾಧಾನವಾಗಿದೆ'' ಎಂದು ಶ್ರೀಜಿತ್ ತಿಳಿಸಿದ್ದಾನೆ. ಶ್ರೀಜಿತ್ ಮತ್ತಾತನ ತಾಯಿ ರೆಮಣಿ ಇಂದು ನಗರದಲ್ಲಿರುವ ಸಿಬಿಐ ಕಚೇರಿಗೂ ಭೇಟಿ ನೀಡಿದ್ದಾರೆ.  ಜನವರಿ 19ರಂದೇ ರಾಜ್ಯ ಸರಕಾರ ಆತನ ಕೋರಿಕೆಗೆ ಒಪ್ಪಿದ್ದರೂ  ತನಿಖೆಯ ಬಗ್ಗೆ ಸ್ಪಷ್ಟತೆ ದೊರೆತ ನಂತರ ಸತ್ಯಾಗ್ರಹ ಅಂತ್ಯಗೊಳಿಸುವುದಾಗಿ ತಿಳಿಸಿದ್ದ. ಶ್ರೀಜೀವ್ ಸಾವಿಗೆ ಕಾರಣರಾದ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಬೇಕೆಂದೂ ಆತನ ತಾಯಿ ಆಗ್ರಹಿಸಿದ್ದಾರೆ.

ಶ್ರೀಜೀವ್ ನನ್ನು ಪರಸ್ಸಲ ಪೊಲೀಸರು ಮೇ 2014ರಲ್ಲಿ ಕಳ್ಳತನದ ಆರೋಪದ ಮೇರೆಗೆ ಕಸ್ಟಡಿಗೆ ತೆಗೆದುಕೊಂಡ ಕೆಲವೇ ದಿನಗಳಲ್ಲಿ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಆತ ವಿಷ ಸೇವಿಸಿದ್ದನೆಂದು ಪೊಲೀಸರು ಹೇಳಿದ್ದರೂ ಆತ ಕಸ್ಟಡಿ ಹಿಂಸೆಯಿಂದಾಗಿ ಸತ್ತಿದ್ದಾನೆಂದು ಆತನ ಕುಟುಂಬ ವಾದಿಸಿತ್ತು. 2016ರಲ್ಲಿ ಪೊಲೀಸ್ ದೂರು ಪ್ರಾಧಿಕಾರ ನಡೆಸಿದ ತನಿಖೆಯಲ್ಲಿ ಆತ ಪೊಲೀಸ್ ಕಸ್ಟಡಿಯಲ್ಲಿದ್ದ ವೇಳೆ ಅನುಭವಿಸಿದ್ದ ಹಿಂಸೆಯಿಂದ ಸತ್ತಿದ್ದಾನೆಂದು ತಿಳಿದು ಬಂದಿತ್ತು. ಸೆಪ್ಟೆಂಬರ್ 2016ರಲ್ಲಿ ಈ ಪ್ರಕರಣದ ತನಿಖೆಯನ್ನು  ವಿಶೇಷ ತನಿಖಾ ತಂಡಕ್ಕೆ ವಹಿಸುವಂತೆ ಕೇರಳ ಸರಕಾರ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿತ್ತು. ಶ್ರೀಜೀವ್ ಕುಟುಂಬಕ್ಕೆ ರಾಜ್ಯ ಸರಕಾರ ರೂ. 10 ಲಕ್ಷ ಪರಿಹಾರ ನೀಡಿದ್ದರೂ ಆತನ ಸಾವಿಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಕಟುಂಬ ಆಗ್ರಹಿಸಿತ್ತು.

ಸಹೋದರನ ಸಾವಿಗೆ ನ್ಯಾಯ ಆಗ್ರಹಿಸಿ ಶ್ರೀಜಿತ್ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ  ರಾಜ್ಯದ ನಾನಾ ಮೂಲೆಗಳಿಂದ ಬೆಂಬಲ ಹರಿದು ಬಂದಿತ್ತಲ್ಲದೆ ಹಲವಾರು ನಟರೂ ಆತನಿಗೆ ಬೆಂಬಲ ಸೂಚಿಸಿದ್ದರು. ಸಾಮಾಜಿಕ ಜಾಲತಾಣದಲ್ಲೂ ಶ್ರೀಜಿತ್ ಗೆ ಬೆಂಬಲದ ಮಹಾಪೂರವೇ ಹರಿದು ಬಂದ ನಂತರ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶ್ರೀಜಿತ್ ಮತ್ತಾತನ ತಾಯಿಯನ್ನು ಭೇಟಿಯಾಗಿ ಸಿಬಿಐ ತನಿಖೆ ನಡೆಸುವಂತೆ ಕೇಂದ್ರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News