ಪತನದಂಚಿನಲ್ಲಿ ನೀರವ್ ವಜ್ರ ಸಾಮ್ರಾಜ್ಯ
ನೀರವ್ ಮೋದಿ ಅವರು ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 280 ಕೋಟಿ ರೂ. ವಂಚಿಸಿದ ಆರೋಪದಲ್ಲಿ ತನಿಖೆಯನ್ನೆದುರಿಸುತ್ತಿದ್ದಾರೆ. ಕಪ್ಪುಹಣವನ್ನು ಬಿಳುಪುಗೊಳಿಸಿದ ಆರೋಪದಲ್ಲಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.
ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಲ್ಲಿ 11,400 ಕೋಟಿ ರೂ. ವಂಚನೆ ಹಗರಣದಲ್ಲಿ ಸಂದೇಹದ ಸುಳಿಗೆ ಸಿಲುಕಿರುವ ಶತಕೋಟ್ಯಧಿಪತಿ, ವಜ್ರೋದ್ಯಮಿ ನೀರವ್ ಮೋದಿ, ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಹಲವಾರು ಅಂತಾರಾಷ್ಟ್ರೀಯ ಅರ್ಥಿಕ ದೈನಿಕಗಳು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳಾದ ಲಂಡನ್‌ನ 31 ಓಲ್ಡ್ ಬಾಂಡ್ ಸ್ಟ್ರೀಟ್ ಹಾಗೂ 727 ಮ್ಯಾಡಿಸನ್ ಅವೆನ್ಯೂನಲ್ಲಿರುವ ಮಳಿಗೆಗಳ ಜಾಹೀರಾತುಗಳನ್ನು ಪ್ರಕಟಿಸುವ ಫ್ಯಾಶನ್ ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ರಾರಾಜಿಸುತ್ತಿರುತ್ತಾರೆ. ಭಾರತದ ವಾಣಿಜ್ಯ ರಾಜಧಾನಿ ಮುಂಬೈನ ಕೊಲಬಾದಲ್ಲಿ 2016ರಲ್ಲಿ ಮುಚ್ಚಲ್ಪಟ್ಟ ಪ್ರಸಿದ್ಧ ರಿಥಮ್ ಹೌಸ್‌ನ ಜಾಗವನ್ನಲಂಕರಿಸಲಿದೆ. ನೀರವ್ ಮೋದಿ ಒಡೆತನದ ಪ್ರಸಿದ್ಧ ಜ್ಯುವೆಲ್ಲರಿ ಮಳಿಗೆಗಳ ಬ್ರಾಂಡ್‌ನ ಜಾಹೀರಾತು ಫಲಕಗಳನ್ನು ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾರ ಭಾವಚಿತ್ರಗಳಿಂದ ಆಲಂಕರಿಸಲ್ಪಟ್ಟಿವೆ. ಆದರೆ ಆದು ಆವಾಗಿನ ವಿಷಯವಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ 47 ವರ್ಷ ವಯಸ್ಸಿನ ಈ ಬಿಲಿಯಾಧೀಶನ ಬದುಕು ಕಾದಬಾಣಲೆಯಂತಾಗಿದೆ. 2014ರಿಂದೀಚೆಗೆ, ನೀರವ್ ಮೋದಿ ಅವರು ಫೋರ್ಬ್ಸ್ ಶತಕೋಟ್ಯಧೀಶರ ಪಟ್ಟಿಯಲ್ಲಿ ಅವರು ಕಣ್ಗಾವಲಿಗೊಳಪಟ್ಟಿದ್ದು, ಅಕ್ರಮ ಹಣಕಾಸು ವರ್ಗಾವಣೆಗಳು ಹಾಗೂ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಸಿಬಿಐ, ಇಡಿ ಹಾಗೂ ಆದಾಯ ತೆರಿಗೆ ಇಲಾಖೆ ಸೇರಿದಂತೆ ವಿವಿಧ ಕಾನೂನು ಅನುಷ್ಠಾನ ಇಲಾಖೆಗಳಿಂದ ಬೆನ್ನಟ್ಟಲ್ಪಡುತ್ತಿದ್ದಾರೆ. 2014ರಲ್ಲಿ ಕಂದಾಯ ಬೇಹುಗಾರಿಕಾ ಇಲಾಖೆಯು ಅವರನ್ನು ಆಮದು, ತೆರಿಗೆಮುಕ್ತ, ಕತ್ತರಿಸಲ್ಪಟ್ಟ ಹಾಗೂ ಪಾಲಿಶ್ ಮಾಡಲಾದ ವಜ್ರಗಳನ್ನು ಹಾಗೂ ರತ್ನಗಳನ್ನು ದೇಶೀಯ ಮಾರುಕಟ್ಟೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ವಿಚಾರಣೆಗೊಳಪಡಿಸಿತ್ತು. ಕಂದಾಯ ಬೇಹುಗಾರಿಕಾ ಇಲಾಖೆಯು ಅದನ್ನು ಆಮದು-ರಫ್ತು ನಿಯಮಗಳ ಉಲ್ಲಂಘನೆಯೆಂದು ಆರೋಪಿಸಿತ್ತು. ಪ್ರಸ್ತುತ ನೀರವ್ ಮೋದಿ ಅವರು ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 280 ಕೋಟಿ ರೂ. ವಂಚಿಸಿದ ಆರೋಪದಲ್ಲಿ ತನಿಖೆಯನ್ನೆದುರಿಸುತ್ತಿದ್ದಾರೆ. ಕಪ್ಪುಹಣವನ್ನು ಬಿಳುಪುಗೊಳಿಸಿದ ಆರೋಪದಲ್ಲಿ ಅವರ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು.
ಭಾರತದಲ್ಲಿ ಜನಿಸಿದ ನೀರವ್ ಮೋದಿ ಜಗತ್ತಿನ ವಜ್ರೋದ್ಯಮದ ರಾಜಧಾನಿ ಎಂದೇ ಖ್ಯಾತವಾದ ಬೆಲ್ಜಿಯಂನ ಆ್ಯಂಟೆವರ್ಪ್‌ನಲ್ಲಿ ಬೆಳೆದರು. ಸಹಜವಾಗಿಯೇ ಅವರಿಗೆ ವಜ್ರೋದ್ಯಮದ ಒಳಹೊರಗುಗಳ ನಿಖರವಾದ ಪರಿಚಯವಾಯಿತು. ಅವರ ಕುಟುಂಬದ ವೃತ್ತಿಯೂ ವಜ್ರೋದ್ಯಮವಾಗಿದ್ದರಿಂದ, ಊಟದ ಸಮಯದಲ್ಲೂ ಕುಟುಂಬವು ವಜ್ರಗಳನ್ನು ಕತ್ತರಿಸುವುದು, ಸಾಣೆಹಿಡಿಯುವುದು, ಮಾರಾಟ ಮಾಡುವ ಕುರಿತಾದ ವಿಷಯಗಳನ್ನೇ ಚರ್ಚಿಸುತ್ತಿತ್ತು. ಆದಾಗ್ಯೂ, ಹದಿಹರೆಯದ ಯುವಕನಾಗಿದ್ದಾಗ ನೀರವ್ ವಜ್ರೋದ್ಯಮಿಯಾಗಲು ಬಯಸಿರಲಿಲ್ಲ. ಮೃದುಭಾಷಿಯಾದ ನೀರವ್, ಸಂಗೀತ ಸಂಯೋಜಕರಾಗಲು ಆಶಿಸಿದರೆಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಅತ್ಯಾಧುನಿಕ ಸಂಗೀತ ಉಪಕರಣಗಳ ಬಗ್ಗೆಯೂ ಅವರಿಗೆ ಅಪಾರ ಒಲವಿತ್ತು. ಬ್ಯಾಂಗ್ ಹಾಗೂ ಓಲುಫ್ಸೆನ್‌ನಂತಹ ಪಾಶ್ಚಾತ್ಯ ಹಾಡುಗಾರಿಕಾ ಸಂಸ್ಥೆಗಳ ಜೊತೆ ವಿಶ್ವಪರ್ಯಟನೆ ಮಾಡುವುದಾಗಿಯೂ ಅವರು ಹೇಳಿಕೊಳ್ಳುತ್ತಿದ್ದರು.
ಆದರೆ ಅವರು ಎನಿಸಿದಂತೆ ಆಗಲಿಲ್ಲ. 19ನೆ ವಯಸ್ಸಿನವರಾಗಿದ್ದಾಗ ಪೆನ್ಸಿಲ್ವೆನಿಯಾ ವಿವಿಯ ವಾರ್ಟನ್ ಸ್ಕೂಲ್‌ನಲ್ಲಿ ಅನುತ್ತೀರ್ಣರಾದ ಆನಂತರ ನೀರವ್ ತನ್ನ ತಾಯಿಯ ಚಿಕ್ಕಪ್ಪ ಅವರ ಕುಟುಂಬಕ್ಕೆ ಸೇರಿದ ವಜ್ರ ವ್ಯಾಪಾರದ ಸಂಸ್ಥೆ ಗೀತಾಂಜಲಿ ಜೆಮ್ಸ್ ಲಿಮಿಟೆಡ್‌ನಲ್ಲಿ ಸೇರಿಕೊಂಡರು. ಅವರ ಚಿಕ್ಕಪ್ಪ ಗೀತಾಂಜಲಿ ಜೆಮ್ಸ್‌ನ ಚೇರ್‌ಮನ್ ಮೆಹುಲ್ ಚೊಕ್ಸಿ ಕೂಡಾ ಸಿಬಿಐ ತನಿಖೆ ನಡೆಸುತ್ತಿರುವ 280 ಕೋಟಿ ರೂ. ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣದ ನಾಲ್ವರು ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಆದಾಗ್ಯೂ ಮೆಹುಲ್ ಅವರು ತನಗೆ ನೀರವ್ ಮೋದಿಯ ಯಾವುದೇ ಕಂಪೆನಿಗಳಲ್ಲಿ ಸಂಪರ್ಕವಿರುವುದನ್ನು ಅವರು ನಿರಾಕರಿಸಿದ್ದಾರೆ.
ಗೀತಾಂಜಲಿ ಜೆಮ್ಸ್‌ನಲ್ಲಿ ಸೇರಿಕೊಂಡ ಆನಂತರದ 9 ವರ್ಷಗಳಲ್ಲಿ ನೀರವ್ ತನ್ನ ಸ್ವಂತ ಜ್ಯುವೆಲ್ಲರಿ ಉದ್ಯಮಕ್ಕೆ ತಳಹದಿ ಹಾಕಿಕೊಂಡರು. ಪಿಎನ್‌ಬಿ ಬ್ಯಾಂಕ್, ಇತರ 30 ಸಾಲಿಗಸಂಸ್ಥೆಗಳ ಕಳುಹಿಸಿದ ಎಚ್ಚರಿಕೆಯ ನೋಟಿಸ್‌ನಲ್ಲಿ ಸಾಲ ಪಡೆಯುವಾಗ ಖಾತರಿ ಪತ್ರಗಳನ್ನು ಪಡೆಯುವುದಕ್ಕಾಗಿ ನೀರವ್ ಮೋದಿ ಒಡೆತನದ ಕಂಪೆನಿಗಳು ಅನುಸರಿಸಿದ ವಿಧಾನವನ್ನೇ ಗೀತಾಂಜಲಿ ಸಮೂಹದ ಕಂಪೆನಿಗಳು ಬಳಸಿಕೊಂಡಿವೆ ಎಂದು ತಿಳಿಸಿದರು. ಫೆಬ್ರವರಿ 7ರಂದು ಗೀತಾಂಜಲಿ ಜೆಮ್ಸ್ ಕಂಪೆನಿಯು, ಶೇರು ವಿನಿಮಯ ಮಾರುಕಟ್ಟೆಗೆ ನೀಡಿದ ಮಾಹಿತಿಯೊಂದರಲ್ಲಿ ನೀರವ್ ಒಡೆತನ ದ ಸಂಸ್ಥೆಗಳ ಜೊತೆ ಪ್ರಸ್ತುತ ಮೆಹುಲ್ ಚೊಕ್ಸಿ ಅವರಿಗೆ ಯಾವುದೇ ರೀತಿಯ ವ್ಯವಹಾರಗಳಿಲ್ಲವೆಂದು ತಿಳಿಸಿತ್ತು ಹಾಗೂ ಅವರು 1999ರಲ್ಲೇ ನೀರವ್ ಕಂಪೆನಿಗಳ ಪಾಲುದಾರಿಕೆಯಿಂದ ನಿವೃತ್ತರಾಗಿದ್ದಾರೆಂದು ತಿಳಿಸಿತ್ತು.
ಆಭರಣ ವಿನ್ಯಾಸಗಳ ಜೊತೆ ನೀರವ್ ಮೋದಿಯ ಒಡನಾಟವು ಆರಂಭಗೊಂಡಿದ್ದು ಒಂದು ರೀತಿಯಲ್ಲಿ ಆಕಸ್ಮಿಕವೆಂದೇ ಹೇಳಬಹುದು. ಮೊದಲಿಗೆ ಅವರು ಸ್ನೇಹಿತೆಯೊಬ್ಬರ ಒತ್ತಾಯಕ್ಕೆ ಮಣಿದು ಅವರಿಗಾಗಿ ನೀರವ್ ಮೋದಿ, ಒಂದು ಜೋಡಿ ಕಿವಿಯೊಲೆಗಳನ್ನು ವಿನ್ಯಾಸಗೊಳಿಸಿದ್ದರು. ಇದು ನಡೆದಿದ್ದು 2009ರಲ್ಲಿ. ಆನಂತರ ನೀರವ್, ಆಭರಣ ವಿನ್ಯಾಸ ಉದ್ಯಮದಲ್ಲಿ ಹಿಂದೆ ನೋಡಿದ್ದೇ ಇಲ್ಲ.
2010ರಲ್ಲಿ ಹಾಂಕಾಂಗ್‌ನಲ್ಲಿ ನಡೆದ ಹರಾಜಿನಲ್ಲಿ ನೀರವ್ ಅವರ ಗೋಲ್ಕೊಂಡಾ ವಜ್ರದ ನೆಕ್ಲೆಸ್ 3.56 ದಶಲಕ್ಷ ಡಾಲರ್‌ಗೆ ಹರಾಜಾಗಿತ್ತು. ಈ ಸಂದರ್ಭದಲ್ಲಿ ಹರಾಜುದಾರ ಸಂಸ್ಥೆ ಕ್ರಿಸ್ಟಿ ಪ್ರಕಟಿಸಿದ ಕ್ಯಾಟಲಾಗ್‌ನಲ್ಲಿ ನೀರವ್ ಫೋಟೊ ಪ್ರಕಟವಾಗಿತ್ತು. ಇದರೊಂದಿಗೆ ಕ್ರಿಸ್ಟಿಯ ಹರಾಜು ಕ್ಯಾಟಲಾಗ್‌ನಲ್ಲಿ ಕಾಣಿಸಿಕೊಂಡ ಪ್ರಥಮ ಭಾರತೀಯನೆಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. 2012ರಲ್ಲಿ ನೀರವ್‌ರ ರಿವೆರೆ ವಜ್ರದ ನೆಕ್ಲೆಸ್, ಹಾಂಕಾಂಗ್‌ನಲ್ಲಿ ನಡೆದ ಹರಾಜಿನಲ್ಲಿ 5.1 ದಶಲಕ್ಷ ಡಾಲರ್‌ಗೆ ಹರಾಜಾಗಿತ್ತು. 2013ರಲ್ಲಿ ನೀರವ್ ಮೊದಲ ಬಾರಿಗೆ, ಫೋರ್ಬ್ಸ್ ಶತಕೋಟ್ಯಧಿಪತಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇಂದು ಅವರ ಸಂಸ್ಥೆಗಳು ವಿನ್ಯಾಸಗೊಳಿಸುವ ವಜ್ರದ ಜ್ಯುವೆಲ್ಲರಿಗಳ ಗ್ರಾಹಕರಲ್ಲಿ ಹಾಲಿವುಡ್ ನಟಿ ಕೇಟ್ ವಿನ್ಸ್‌ಲೆಟ್ ಮತ್ತಿತರ ಜಗತ್ಪ್ರಸಿದ್ಧ ಗಣ್ಯರು ಸೇರಿದ್ದಾರೆ. ಇದರ ಜೊತೆಗೆ ಭಾರತದ ಅನೇಕ ಉದ್ಯಮ ದಿಗ್ಗಜರ ಕುಟುಂಬಿಕರು, ಹಲವು ವರ್ಷಗಳಿಂದ ನೀರವ್ ಮೋದಿ ಸಂಸ್ಥೆಯಿಂದ ವಜ್ರಗಳನ್ನು ಖರೀದಿಸುತ್ತಿವೆ.
2017ರಲ್ಲಿ ಫೋರ್ಬ್ಸ್ ಪ್ರಕಟಿಸಿದ ವಿಶ್ವ ಶತಕೋಟ್ಯ ಧಿಪತಿಗಳ ಪಟ್ಟಿಯಲ್ಲಿ ನೀರವ್ 1,234 ರ್ಯಾಂಕ್‌ನಲ್ಲಿದ್ದರೆ, ಭಾರತದಲ್ಲಿ ಅವರು 85ನೇ ಸ್ಥಾನದಲ್ಲಿದ್ದರು.ತನ್ನ ಆಭರಣ ವಿನ್ಯಾಸ ಹಾಗೂ ರಿಟೇಲ್ ಉದ್ಯಮಗಳ ಮೂಲಕ ಅವರು 1.73 ಶತಕೋಟಿ ಡಾಲರ್ ವೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.
ಮೂವರು ಮಕ್ಕಳ ತಂದೆಯಾಗಿರುವ ನೀರವ್ ಅವರ ಮಾತೃಭಾಷೆ ಗುಜರಾತಿಯಾಗಿದೆ. ತಾನು ಕೌಟುಂಬಿಕ ರಿವಾಜುಗಳು ಹಾಗೂ ಸಂಪ್ರದಾಯಗಳಿಗೆ ಬದ್ಧನಾಗಿರುವುದಾಗಿ ಆತ 2016ರಲ್ಲಿ ಮಿಂಟ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಪ್ರತಿದಿನವೂ ಒಂದು ಡಝನ್‌ಗೂ ಅಧಿಕ ಸುದ್ದಿಪತ್ರಿಕೆಗಳನ್ನು,ನಿಯತಕಾಲಿಕಗಳನ್ನು ಓದುತ್ತಾರೆ. ಪ್ರವಾಸದ ಹವ್ಯಾಸವನ್ನು ಹೊಂದಿರುವ ನೀರವ್ ಮ್ಯೂಸಿಯಂಗಳಿಗೆ ಸಂದರ್ಶಿಸುವುದನ್ನು ತುಂಬಾ ಇಷ್ಟಪಡುತ್ತಾರಂತೆ.
ಆದರೆ ಕೋಟ್ಯಂತರ ರೂ. ವಂಚನೆ ಹಗರಣವು ನೀರವ್ ಅವರ ವಜ್ರ ಸಾಮ್ರಾಜ್ಯವನ್ನು ಪತನದಂಚಿಗೆ ತಂದು ನಿಲ್ಲಿಸಿದೆ.