ಅಂಟಾರ್ಟಿಕದಲ್ಲಿ 1.5 ದಶಲಕ್ಷ ಪೆಂಗ್ವಿನ್ ಪತ್ತೆ

Update: 2018-03-03 18:47 GMT

ಅಂಟಾರ್ಟಿಕ ದ್ವೀಪಕಲ್ಪದಲ್ಲಿ ಸಾಮಾನ್ಯವಾಗಿ ಕಂಡು ಬರುವ ಅಡೇಲಿ ಪೆಂಗ್ವಿನ್‌ಗಳ ಸಂಖ್ಯೆ ತೀವ್ರ ಇಳಿಮುಖವಾಗುತ್ತಿದೆ ಎಂದು ವಿಜ್ಞಾನಿಗಳು ಆತಂಕಪಟ್ಟುಕೊಂಡಿದ್ದರು. ಆದರೆ, ಈಗ ಈ ಆತಂಕ ದೂರವಾಗಿದೆ. ಯಾಕೆಂದರೆ ಅಂಟಾರ್ಟಿಕದಲ್ಲಿ 1.5 ದಶಲಕ್ಷ ಪೆಂಗ್ವಿನ್‌ಗಳು ಕಂಡು ಬಂದಿವೆ. ದಕ್ಷಿಣ ಅಮೆರಿಕ ಸಮೀಪದ ಅಂಟಾರ್ಟಿಕ ಪೆನಿನ್ಸುಲಾ ತುದಿಯಲ್ಲಿರುವ 9 ಸರಣಿ ಬೆಟ್ಟಗಳ ದ್ವೀಪವಾದ ‘ಡೇಂಜರ್ ದ್ವೀಪ’ಗಳಲ್ಲಿ ಈ ಪೆಂಗ್ವಿನ್‌ಗಳು ಕಂಡು ಬಂದಿವೆ. ಇಲ್ಲಿ 7,50,000 ಅಡೆಲಿ ಪ್ರಭೇದದ ಜೋಡಿ ಪೆಂಗ್ವಿನ್‌ಗಳಿವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಮೆರಿಕ ಮೂಲದ ವುಡ್ಸ್ ಹೋಲೆ ಓಶಿಯನೊಗ್ರಫಿ ಇನ್‌ಸ್ಟಿಟ್ಯೂಷನ್‌ನ ಸಂಶೋಧಕರ ನೇತೃತ್ವದ ತಂಡ ಜರ್ನಲ್ ಆಫ್ ಸೈಂಟಿಫಿಕ್ ರಿಪೋರ್ಟ್ಸ್‌ನಲ್ಲಿ ತಮ್ಮ ಸಂಶೋಧನೆ ಬಗ್ಗೆ ವರದಿ ಮಾಡಿದೆ. ದುರ್ಗಮ ಪ್ರದೇಶ ಹಾಗೂ ಸುತ್ತುವರಿದಿರುವ ನೀರು ಇಲ್ಲಿ ಪೆಂಗ್ವಿನ್‌ಗಳ ಸಂಖ್ಯೆ ಹೆಚ್ಚಾಗಲು ಕಾರಣ. ಬೇಸಗೆ ಕಾಲದಲ್ಲಿ ಇಲ್ಲಿಗೆ ತಲುಪಲು ಸಮುದ್ರದ ದಪ್ಪ ಪದರದ ಮಂಜುಗಡ್ಡೆ ಭೇದಿಸಬೇಕಾಗುತ್ತದೆ. ಇದು ಕಷ್ಟಕರ. ನಾಲ್ಕು ವರ್ಷಗಳ ಹಿಂದೆ ನಾಸಾದ ಮ್ಯಾಥ್ಯೂ ಸ್ಕ್ವಾಲ್ಲರ್ ಹಾಗೂ ಲಿಂಚ್ ತಂಡ ಈ ಪ್ರದೇಶದಲ್ಲಿ ಅಚ್ಚರಿ ಎಂಬಂತೆ ಪೆಂಗ್ವಿನ್‌ಗಳು ದೊಡ್ಡ ಸಂಖ್ಯೆಯಲ್ಲಿ ಇರುವುದರ ಬಗ್ಗೆ ಉಪಗ್ರಹದ ಛಾಯಾಚಿತ್ರಗಳು ಸೂಚಿಸಿದ್ದು, ಈ ಬಗ್ಗೆ ಅಧ್ಯಯನ ನಡೆಸಿತ್ತು. ಆನಂತರ ಈ ಪ್ರದೇಶದಲ್ಲಿ ಸಂಶೋಧನೆ ನಡೆಸಲು ನಿರ್ಧರಿಸಿತ್ತು. 2014ರಲ್ಲಿ ಅವರು ಆ ದ್ವೀಪಕ್ಕೆ ತೆರಳಿದ್ದರು ಹಾಗೂ ಡ್ರೋನ್ ಸಹಾಯದಿಂದ ಪೆಂಗ್ವಿನ್‌ಗಳ ಸಂಖ್ಯೆಯನ್ನು ಲೆಕ್ಕ ಹಾಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News