ಮತ ಎಣಿಕೆಗೆ ಟೋಟಲೈಸರ್ ಬಳಕೆ ಯಾಕಿಲ್ಲ?: ಕೇಂದ್ರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ
ಹೊಸದಿಲ್ಲಿ,ಮಾ.5: ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ತಿರುಚಲಾಗುತ್ತಿ ದೆಯೆಂಬ ಬಲವಾದ ಆರೋಪಗಳು ವಿವಾದವನ್ನು ಸೃಷ್ಟಿಸಿರುವ ನಡುವೆಯೇ, ಇವಿಎಂ ಮೂಲಕ ಮತ ಎಣಿಕೆಗೆ ಟೋಟಲೈಸರ್ ಅನ್ನು ಬಳಸುವುದಕ್ಕೆ ಅವಕಾಶ ಮಾಡಿಕೊಡಲು ಚುನಾವಣಾ ಕಾನೂನಿನಲ್ಲಿ ತಿದ್ದುಪಡಿ ಮಾಡಲು ಸರಕಾರಕ್ಕೆ ಏನು ಅಡ್ಡಿಯಾಗಿದೆಯೆಂದು ಸುಪ್ರೀಂಕೋರ್ಟ್ ಸೋಮವಾರ ಪ್ರಶ್ನಿಸಿದೆ.
ಸುಪ್ರೀಂಕೋರ್ಟ್ ನ್ಯಾಯಪೀಠಕ್ಕೆ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಕೇಂದ್ರ ಸರಕಾರವು, ಇವಿಎಂಗಳ ಮೂಲಕ ಮತಏಣಿಕೆಯನ್ನು ಟೋಟಲೈಸರ್‌ಗಳ ಬಳಕೆಗೆ ಇತ್ತೀಚೆಗೆ ನಡೆದ ಸರ್ವ ಪಕ್ಷಸಭೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ವಿರೋಧ ವ್ಯಕ್ತಪಡಿಸಿದ್ದಾರೆಂದು ತಿಳಿಸಿತು.
ಮತ ಏಣಿಕೆಗೆ ಟೋಟಲೈಸರ್ ಬಳಕೆಯನ್ನು ಜಾರಿಗೊಳಿಸಿದಲ್ಲಿ ದತ್ತಾಂಶಗಳ ಸೋರಿಕೆಯಾಗುವ ಸಾಧ್ಯತೆಯಿಯೆಂದು ಸರ್ವಪಕ್ಷ ಸಭೆಯಲ್ಲಿ ಆತಂಕ ವ್ಯಕ್ತವಾಗಿತ್ತೆಂದು ಕೇಂದ್ರ ಸರಕಾರ ತಿಳಿಸಿದೆ.
ಎರಡು ವಾರಗಳ ಆನಂತರ ಮತ್ತೆ ತಾನು ಈ ಪ್ರಕರಣದ ಆಲಿಕೆ ನಡೆಸುವುದಾಗಿ ಸುಪ್ರೀಂಕೋರ್ಟ್ ನ್ಯಾಯಪೀಠ ತಿಳಿಸಿದೆ ಹಾಗೂ ಈ ವಿಷಯವಾಗಿ ಅಫಿದಾವಿತ್ ಒಂದನ್ನು ಸಲ್ಲಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ಮತಯಂತ್ರಗಳಲ್ಲಿ ಮತಏಣಿಕೆಗೆ ಟೋಟಲೈಸರ್ ಅನ್ನು ಅಳವಡಿಸುವ ಬಗ್ಗೆ ಕಳೆದೊಂದು ದಶಕದಿಂದ ಚುನಾವಣಾ ಆಯೋಗ ಚಿಂತಿಸುತ್ತಾ ಬಂದಿದೆ. ಆದಾಗ್ಯೂ ಕೇಂದ್ರ ಸರಕಾರವು ಟೋಟಲೈಸರ್ ಬಳಕೆಯಿಂದ ಮತಗಟ್ಟೆ ನಿರ್ವಹಣೆ ಕಾರ್ಯತಂತ್ರದ ಮೇಲೆ ಪರಿಣಾಮವಾಗಲಿದೆಯೆಂದು ವಾದಿಸಿತ್ತು.
ದಶಕದ ಹಿಂದೆಯೇ ಟೋಟಲೈಸರ್ ಬಳಕೆಯನ್ನು ಪ್ರಸ್ತಾಪಿಸಿದ್ದ ಚು.ಆಯೋಗ
1980ರ ದಶಕದಲ್ಲಿ ಚುನಾವಣೆಗಳಿಗೆ ಇವಿಎಂಗಳ ಬಳಸುವುದಕ್ಕೆ ಮುನ್ನ, ಮತಪತ್ರಗಳನ್ನು ಬಳಸಲಾಗುತ್ತಿತ್ತು. ಆಗ ಮತಗಟ್ಟೆಗಳಲ್ಲಿ ಮತಚಲಾವಣೆಯ ನಮೂನೆಯ ಬಗ್ಗೆ ಗೌಪ್ಯತೆಯನ್ನು ಕಾಪಾಡುವುದಕ್ಕಾಗಿ ಬೇರೆಬೇರೆ ಮತಗಟ್ಟೆಗಳ ಮತಪತ್ರಗಳನ್ನು ಮಿಶ್ರಗೊಳಿಸಲಾಗುತ್ತಿತ್ತು. ಆದರೆ ಇವಿಎಂಗಳಲ್ಲಿ ಮತದಾರರ ಮತಚಲಾವಣೆಯನ್ನು ಪತ್ತೆಹಚ್ಚುವುದು ತುಂಬಾ ಸುಲಭವಾಗಿದೆ. ಮಾತ್ರವಲ್ಲದೆ ಯಾವ ಮತಗಟ್ಟೆಗಳಲ್ಲಿ ತಮ್ಮ ಪಕ್ಷಕ್ಕೆ ಅಧಿಕ ಅಥವಾ ಕಡಿಮೆ ಮತಗಳು ಬಿದ್ದಿವೆಯೆಂಬುದನ್ನು ಗುರುತಿಸಲು ಸಾಧ್ಯವಾಗುತ್ತದೆ.
ಇವಿಎಂಗಳ ಮತಏಣಿಕೆಗೆ ಟೋಟಲೈಸರ್ ಬಳಕೆಯನ್ನು ಚುನಾವಣಾ ಆಯೋಗವು 2008ರಲ್ಲಿ ಮೊದಲ ಬಾರಿಗೆ ಪ್ರಸ್ತಾಪಿಸಿತ್ತು. ಕಾನೂನು ಆಯೋಗ ಕೂಡಾ ಚುನಾವಣಾ ಆಯೋಗದ ಈ ಬೇಡಿಕೆಯನ್ನು ಬೆಂಬಲಿಸುತ್ತಾ, ಟೋಟಲೈಸರ್ ಬಳಕೆಯಿಂದ ಮತಏಣಿಕೆಯ ಸಂದರ್ಭದಲ್ಲಿ ಗೌಪ್ಯತೆಯನ್ನು ಅಧಿಕಗೊಳಿಸಲಿದೆ. ಆ ಮೂಲಕ ಮತದಾನದ ನಮೂನೆಗಳನ್ನು ಬಹಿರಂಗಪಡಿಸುವುದನ್ನು ತಡೆಗಟ್ಟಲಿದೆ ಮತ್ತು ಮತದಾರರನ್ನು ಬೆದರಿಸುವುದನ್ನು ಹಾಗೂ ಅವರಿಗೆ ತೊಂದರೆ ನೀಡುವ ಭೀತಿಯನ್ನು ನಿವಾರಿಸಲಿದೆಯೆಂದು ಪ್ರತಿಪಾದಿಸಿತ್ತು. ಆದಾಗ್ಯೂ ಇವಿಎಂಗಳ ಮತಏಣಿಕೆಗೆ ಟೋಟಲೈಸರ್ ಬಳಕೆ ಬಗ್ಗೆ ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸುತ್ತಲೇ ಬಂದಿವೆ.
ಈಗ ಇವಿಎಂಗಳಲ್ಲಿ ಮತಏಣಿಕೆಗೆ ಟೋಟಲೈಸರ್ ಯಂತ್ರಗಳನ್ನು ಬಳಸುವುದಿಲ್ಲವಾದ ಕಾರಣ ಪ್ರತಿಯೊಂದು ಮತಗಟ್ಟೆಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಮತ ಬಿದ್ದಿದೆಯೆಂಬುದನ್ನು ತಿಳಿದುಬರುವುದರಿಂದ ರಾಜಕೀಯ ಪಕ್ಷಗಳು ಬೆಂಬಲಿಗರು ಅನೇಕ ಸಂದರ್ಭಗಳಲ್ಲಿ ಮತದಾರಿಗೆ ಬೆದರಿಕೆ ಹಾಕುತ್ತಿದ್ದಾರೆಂದು ಅರ್ಜಿದಾರರು ದೂರಿದ್ದರು
ಏನಿದು ಟೋಟಲೈಸರ್?
ಮತಯಂತ್ರಗಳ ಮೂಲಕ ಮತಗಳನ್ನು ಏಣಿಕೆ ಮಾಡುವಾಗ ಬೂತ್‌ಮಟ್ಟದಲ್ಲಿ ಮತದಾನದ ನಮೂನೆಯನ್ನು ಗೌಪ್ಯವಾಗಿಡಲು ಟೋಟಲೈಸರ್ ಇಂಟರ್‌ಫೇಸ್ ಯಂತ್ರವನ್ನು ಬಳಸಲಾಗುತ್ತಿದೆ. ಒಂದು ಟೋಟಲೈಸರ್ ಇಂಟರ್‌ಫೇಸ್ ಮೂಲಕ 14 ಮತಗಟ್ಟೆಗಳ ಇವಿಎಂಗಳನ್ನು ಜೋಡಿಸಿ, ಒಟ್ಟಾಗಿ ಏಣಿಕೆ ಮಾಡಬಹುದಾಗಿದೆ. ಪ್ರಸ್ತುತ ಪ್ರತಿಯೊಂದು ಮತಗಟ್ಟೆಯಲ್ಲಿ ಚಲಾವಣೆಯಾದ ಮತಗಳನ್ನು ಬೇರೆ ಬೇರೆಯಾಗಿ ಏಣಿಕೆ ಮಾಡಲಾಗುತ್ತದೆ. ಇದರಿಂದಾಗಿ ಆಯಾ ಮತಗಟ್ಟೆಯಲ್ಲಿ ಯಾವ ಪಕ್ಷಕ್ಕೆ ಅಥವಾ ಅಭ್ಯರ್ಥಿಗೆ ಅಧಿಕ ಮತಗಳು ಬಿದ್ದಿವೆಯೆಂಬುದು ಸುಲಭದಲ್ಲಿ ತಿಳಿದುಬರುತ್ತದೆ.