ಓ ಮೆಣಸೇ..
ಒಂದು ವೇಳೆ ಎಡಪಕ್ಷಗಳು ದೇಶದ ರಾಜಕೀಯದಿಂದ ದೂರವಾದರೆ ವಿನಾಶವೇ ಸಂಭವಿಸಲಿದೆ
- ಜೈರಾಂ ರಮೇಶ್, ಕಾಂಗ್ರೆಸ್ ನಾಯಕ
ಕಾಂಗ್ರೆಸ್ ಕುರಿತಂತೆ ಸಂಪೂರ್ಣ ಭರವಸೆ ಕಳೆದುಕೊಂಡಿದ್ದೀರಿ ಎಂದಾಯಿತು.
---------------------
ನರೇಂದ್ರ ಮೋದಿ ಆಡಳಿತಕ್ಕೆ ಬಂದ ಮೇಲೆ ಕಾಶ್ಮೀರ ಬಿಟ್ಟರೆ ಎಲ್ಲೂ ಬಾಂಬ್ ದಾಳಿಯಾಗಿಲ್ಲ
- ನಳಿನ್ ಕುಮಾರ್ ಕಟೀಲು, ಸಂಸದ
ಅದಕ್ಕಾಗಿ ಕೇಸರಿ ಭಯೋತ್ಪಾದಕರಿಗೆ ಥ್ಯಾಂಕ್ಸ್ ಹೇಳಬೇಕೇ?
---------------------
ಸಿದ್ದರಾಮಯ್ಯ ತಮ್ಮ ಹೆಸರನ್ನು ಅಮಾನುಲ್ಲಾ ಖಾನ್ ಎಂದು ಬದಲಿಸಿಕೊಳ್ಳಲಿ
- ಶೋಭಾ ಕರಂದ್ಲಾಜೆ, ಸಂಸದೆ
ನೀವು ಖತೀಜಾ ಎಂದು ಬದಲಿಸಿಕೊಳ್ಳುವುದಾದರೆ ಅವರೂ ಸಿದ್ಧರಿದ್ದಾರಂತೆ.
---------------------
ಜಾತ್ಯತೀತ ಪಕ್ಷಗಳು ತಮ್ಮ ಉಳಿವಿಗಾಗಿ ಚುನಾವಣಾ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ
- ವೀರಪ್ಪ ಮೊಯ್ಲಿ, ಕಾಂಗ್ರೆಸ್ ಮುಖಂಡ
ಹಾಗಾದರೆ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುವುದೇ?
---------------------
ರಾಹುಲ್ ಗಾಂಧಿ ಕಾಂಗ್ರೆಸ್ ಪಾಲಿಗೆ ರಾಹು ಇದ್ದಂತೆ
- ಆರ್.ಅಶೋಕ್, ಮಾಜಿ ಉಪ ಮುಖ್ಯಮಂತ್ರಿ
ಬಿಜೆಪಿಯೊಳಗಿನ ಕೇತುಗಳ ಬಗ್ಗೆ ಏನು ಹೇಳುತ್ತೀರಿ?
---------------------
ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಇತ್ಯರ್ಥವಾಗದಿದ್ದರೆ ಭಾರತ ಮುಂದೆ ಮತ್ತೊಂದು ಸಿರಿಯ ಆಗಲಿದೆ
- ರವಿಶಂಕರ ಗುರೂಜಿ, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ
ಯಮುನಾ ನದಿಯನ್ನು ಕೆಡಿಸಿದಷ್ಟು ಸುಲಭವಲ್ಲ ದೇಶವನ್ನು ಸಿರಿಯ ಮಾಡುವುದು.
--------------------
ನಾನು ಮುಖ್ಯಮಂತ್ರಿಯಾದರೆ ಎಂಜಿಆರ್ ಮಾದರಿ ಆಡಳಿತ ಕೊಡುವೆ -ರಜನಿಕಾಂತ್, ನಟ
ಅಂದರೆ ಎಂಜಿಆರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆ.
---------------------
ಕರಾವಳಿಯ ಭಯೋತ್ಪಾದಕ ಕಾರ್ಖಾನೆಗಳನ್ನು ಮುಚ್ಚಿಸುತ್ತೇವೆ
- ರಾಮಲಿಂಗಾರೆಡ್ಡಿ, ಸಚಿವ
ಕರಾವಳಿಯ ಹೆಂಚಿನ ಕಾರ್ಖಾನೆಗಳನ್ನಷ್ಟೇ ಕಾಂಗ್ರೆಸ್‌ಗೆ ಮುಚ್ಚಿಸಲು ಸಾಧ್ಯವಾಗಿರುವುದು.
---------------------
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇರುವ ತನಕ ಗೋರಕ್ಷಣೆ ಅಸಾಧ್ಯ
- ಮೇನಕಾ ಗಾಂಧಿ, ಕೇಂದ್ರ ಸಚಿವೆ
ರಾಜ್ಯಕ್ಕೀಗ ಜನರ ರಕ್ಷಣೆಯ ಅಗತ್ಯ ತುಂಬಾ ಇದೆ.
---------------------
ಕಾಂಗ್ರೆಸ್ ಸೇರುವವರ ಪಟ್ಟಿ ತುಂಬಾ ದೊಡ್ಡದಿದೆ
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಅವರೆಲ್ಲ ಮಾಜಿ ಆರೆಸ್ಸೆಸ್ ಮತ್ತು ಬಿಜೆಪಿಯವರೇ ಇರಬೇಕು.
---------------------
ಹತ್ಯಾ ಸಿದ್ಧಾಂತವನ್ನು ಬಿಜೆಪಿ ಯಾವತ್ತೂ ಒಪ್ಪುವುದಿಲ್ಲ
- ಸಿ.ಟಿ.ರವಿ, ಶಾಸಕ
ಹತ್ಯೆಯನ್ನಷ್ಟೇ ಒಪ್ಪುತ್ತದೆ ಅಂತೀರಾ?
---------------------
ತ್ರಿಪುರಾದಲ್ಲಿ ನಮ್ಮದು ಸೈದ್ಧಾಂತಿಕ ಜಯ
- ನರೇಂದ್ರ ಮೋದಿ, ಪ್ರಧಾನಿ
ಹಣವೂ ಸಿದ್ಧಾಂತದ ಭಾಗವೇ?
---------------------
ರಾಜ್ಯ ಬಿಜೆಪಿ ನಾಯಕರು ಭೋಗಿಗಳು
- ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಆದರೀಗ ಸದ್ಯಕ್ಕೆ ಹಳಿ ತಪ್ಪಿದ ಬೋಗಿಗಳು.
---------------------
ಸಂವಿಧಾನ ಇರುವವರೆಗೂ ಕಾಂಗ್ರೆಸ್ ಮುಕ್ತ ಮಾಡುವುದು ಅಸಾಧ್ಯ
- ಪ್ರಿಯಾಂಕಾ ಖರ್ಗೆ, ಸಚಿವ
ಅದಕ್ಕಾಗಿಯೇ ಸಂವಿಧಾನದ ವಿರುದ್ಧ ಅವರು ಬಿದ್ದಿರುವುದು.
---------------------
ನನಗೊಂದು ಗಾಯವಾಗಿತ್ತು, ಅದೀಗ ಗುಣವಾಗಿದೆ
- ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಮುಖಂಡ
ಹೊಸ ಗಾಯಗಳ ನಿರೀಕ್ಷೆಯೊಂದಿಗೆ.
---------------------
ಎಲ್ಲ ಪರದೆಗಳನ್ನು ಮೀರಿ, ಹರಿದು ಹೊರಗೆ ಬಂದರೆ ಯಶಸ್ಸು ಸಾಧ್ಯ
-ಉಮಾಶ್ರೀ, ಸಚಿವೆ
ಸಿನೆಮಾ ಪರದೆಗಳನ್ನು ಹರಿದು ಹೊರ ಬರಬೇಕೆ?
---------------------
ಜಿಲ್ಲೆಯಲ್ಲಿರುವ ಎರಡೂ ರೀತಿಯ ಮತೀಯವಾದಿಗಳನ್ನು ನಾವು ಒಪ್ಪುವುದಿಲ್ಲ
- ರಮಾನಾಥ ರೈ, ಸಚಿವ
ಕಾಂಗ್ರೆಸ್‌ನೊಳಗಿದ್ದರೆ ಒಪ್ಪಿಗೆಯೇ?
---------------------
ಬಿಜೆಪಿ ಗೆದ್ದರೆ ಸಿದ್ದರಾಮಯ್ಯ ಸರಕಾರದ ಹಗರಣಗಳ ಬಗ್ಗೆ ಮರು ತನಿಖೆ
- ಜಗದೀಶ್ ಶೆಟ್ಟರ್, ಬಿಜೆಪಿ ಮುಖಂಡ
ಜೊತೆಗೆ ಯಡಿಯೂರಪ್ಪ ಅವರ ಹಗರಣಗಳನ್ನೂ ಸೇರಿಸಿಕೊಳ್ಳಿ.
---------------------
ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಕಲಿ ನಾಯಕ
- ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ಸದ್ಯಕ್ಕೆ ಬಿಜೆಪಿಯೊಳಗೆ ನೀವು ನಾಯಕರಲ್ಲಿ ತುಂಬಾ ಹಿಂದುಳಿದ ಅಸಲಿ ಖಳನಾಯಕ.
---------------------
ವಿವಿಧ ರೀತಿಯ ಚಿಂತನೆ ಮತ್ತು ಸಿದ್ಧಾಂತಗಳು ಒಂದೇ ಗುರಿಯನ್ನು ಸಾಧಿಸಬಲ್ಲವು
- ಅಮಿತ್ ಶಾ, ಬಿಜೆಪಿ ಅಧ್ಯಕ್ಷ
ಆದರೆ ಜೊತೆಗೆ ಇವಿಎಂ ಯಂತ್ರ ಅತ್ಯಗತ್ಯ.
---------------------
ಅಪನಂಬಿಕೆ-ಮೂಢನಂಬಿಕೆ ತೊಲಗಲಿ
- ಡಾ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿ ಧರ್ಮಸ್ಥಳ
ಅದಕ್ಕಾಗಿ ಉನ್ನತ ಮಟ್ಟದ ತನಿಖೆ ನಡೆಯುವುದು ಅನಿವಾರ್ಯ.
---------------------
ಕಾಂಗ್ರೆಸ್‌ಗೆ ಬರುವವರಿಗೆ ಪಕ್ಷದ ಬಾಗಿಲು ಸದಾ ತೆರೆದಿದೆ
- ಡಾ.ಜಿ.ಪರಮೇಶ್ವರ್, ಕಾಂಗ್ರೆಸ್ ಅಧ್ಯಕ್ಷ
ಆದರೆ ಹೊರಹೋಗುವುದಕ್ಕಾಗಿ ತೆರೆದ ಬಾಗಿಲು ಎಂದು ಕೆಲವರು ತಪ್ಪು ತಿಳಿದಿದ್ದಾರೆ.
---------------------
ಭಾರತದ ಆನೆ ಹಾಗೂ ಚೀನಾದ ಡ್ರಾಗನ್ ಕಚ್ಚಾಡಬಾರದು, ಒಟ್ಟಿಗೆ ನೃತ್ಯ ಮಾಡಬೇಕು
ವಾಂಗ್ ಯಿ, ಚೀನಾದ ವಿದೇಶಾಂಗ ಸಚಿವ
ನರೇಂದ್ರ ಮೋದಿಯವರು ನೃತ್ಯ ಶಾಲೆಗೆ ಸೇರಿದ್ದಾರಂತೆ.
---------------------
ಹೆಣ್ಣು ದೇಶದ ಹೆಮ್ಮೆ
-ನರೇಂದ ಮೋದಿ, ಪ್ರಧಾನಿ
ಮತ್ತೇಕೆ ಆ ಹೆಮ್ಮೆಯನ್ನು ತ್ಯಜಿಸಿದಿರಿ?