ಲಿಂಗಾಯತ ಬೆನ್ನಲ್ಲೇ ‘ಕೊಡವ ಧರ್ಮ'ಕ್ಕೆ ಬೇಡಿಕೆ

Update: 2018-03-21 16:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.21: ಲಿಂಗಾಯತ ಮತ್ತು ವೀರಶೈವ ಲಿಂಗಾಯತ (ಬಸವತತ್ವದಲ್ಲಿ ನಂಬಿಕೆಯುಳ್ಳ) ಪ್ರತ್ಯೇಕ ಧರ್ಮಕ್ಕೆ ಅಲ್ಪಸಂಖ್ಯಾತ ಸ್ಥಾನ ಕಲ್ಪಿಸಬೇಕೆಂದು ಕೇಂದ್ರಕ್ಕೆ ಶಿಫಾರಸು ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಸರ್ವಾನುಮತದ ತೀರ್ಮಾನ ಕೈಗೊಂಡಿರುವ ಬೆನ್ನಲ್ಲೇ, ಕೊಡವರನ್ನು ‘ಕೊಡವ ಧರ್ಮ’ವೆಂದು ಪರಿಗಣಿಸುವಂತೆ ಕೂಗು ಎದ್ದಿದೆ.

ಹೌದು, ಈ ಸಂಬಂಧ ಈಗಾಗಲೇ ರಾಜ್ಯ ಸರಕಾರಕ್ಕೆ ಅಧಿಕೃತ ಮನವಿ ಪತ್ರ ರವಾನೆಯಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಕಾರ್ಯದರ್ಶಿಗಳು, ಕರ್ನಾಟಕ ಅಲ್ಪಸಂಖ್ಯಾತರ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ ಈ ಬಗ್ಗೆ ಪರಿಶೀಲನೆ ನಡೆಸಿರುವ ಅಲ್ಪಸಂಖ್ಯಾತರ ಆಯೋಗ, ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಸರಕಾರಕ್ಕೆ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸ್ಪಷ್ಟನೆ ನೀಡಿದೆ ಎಂದು ತಿಳಿದುಬಂದಿದೆ.

ಕೊಡಗು ಜಿಲ್ಲೆಯ ವಿರಾಜಪೇಟೆ ಕುಕ್ಲೂರು ಗ್ರಾಮದ ಎಂ.ಎಂ.ಬನ್ಸಿ ಎಂಬುವರು, ಕೊಡವ ಸಮುದಾಯಕ್ಕೆ ಸೇರಿದವರನ್ನು ‘ಕೊಡವ ಧರ್ಮ’ವೆಂದು ಪರಿಗಣಿಸುವಂತೆ ಮತ್ತು ಅವರನ್ನು ಅಲ್ಪಸಂಖ್ಯಾತರೆಂದು ಸರಕಾರದಿಂದ ಘೋಷಿಸಬೇಕೆಂದು ಕೋರಿದ್ದಾರೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ಆದಷ್ಟು ಶೀಘ್ರವಾಗಿ ಸರಕಾರಕ್ಕೆ ವರದಿಯನ್ನು ಸಲ್ಲಿಸಬೇಕೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳು, ಅಲ್ಪಸಂಖ್ಯಾತರ ಆಯೋಗಕ್ಕೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಧರ್ಮಕ್ಕೆ ಕಾರಣ?: ಕೊಡವರು ಯಾವುದೇ ಪುರೋಹಿತ ಸಂಸ್ಕೃತಿಯನ್ನು ಆಚರಣೆ ಮಾಡುತ್ತಿಲ್ಲ. ನೆಲ, ಜಲ ಪ್ರಕೃತಿಯನ್ನು ಮತ್ತು ಈಶ್ವರನನ್ನು, ಯಾವುದೇ ವೈದಿಕ ಸಂಸ್ಕೃತಿಗೆ ಒಳಪಡದೇ ಬುಡಕಟ್ಟು ಗಿರಿಜನ ಆಚರಣೆಯನ್ನು ಮಾಡುತ್ತೇವೆ. ಇನ್ನು ಕೊಡಗು ಜಿಲ್ಲೆಯು 1956ರಲ್ಲಿ ಕರ್ನಾಟಕದೊಂದಿಗೆ ವಿಲೀನವಾಗಿ ನಮ್ಮ ಆಚಾರ-ವಿಚಾರ ಮತ್ತು ಭೌಗೋಳಿಕ ಪರಿಸರಕ್ಕೆ ಧಕ್ಕೆಯಾಗಿದ್ದು, ಜನಸಂಖ್ಯೆ ಮತ್ತು ರಾಜಕೀಯದಲ್ಲಿ ಪ್ರಾಬಲ್ಯ ಹೊಂದದೇ ಯಾವುದೇ ಸರಕಾರ ಇದುವರೆಗೂ ನಮ್ಮನ್ನು ಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ, ಅಳಿವಿನ ಅಂಚಿನಲ್ಲಿರುವ ಧರ್ಮವೆಂದು ಘೋಷಿಸಿ ನಮಗೆ ಅಲ್ಪಸಂಖ್ಯಾತ ಹಾಗೂ ಗಿರಿಜನರೆಂದು ಘೋಷಿಸಿ ರಕ್ಷಣೆ ಮಾಡಬೇಕು. ಜೊತೆಗೆ ಕೇಂದ್ರ ಸರಕಾರವೂ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಕೊಡವ ಸಮಾಜದ ಎಂ.ಎಂ.ಬನ್ಸಿ ಪತ್ರ ಬರೆದಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

Writer - -ಸಮೀರ್ ದಳಸನೂರು

contributor

Editor - -ಸಮೀರ್ ದಳಸನೂರು

contributor

Similar News