‘ಕಡಕ್‌ನಾಥ್’ ಚಿಕನ್ ಮಾರಾಟಕ್ಕೆ ಮೊಬೈಲ್ ಆ್ಯಪ್
ಕಡಕ್‌ನಾಥ್ ತಳಿಯ ಅಪರೂಪದ ಕೋಳಿಗಳನ್ನು ಮಾರಾಟ ಮಾಡಲು ಮಧ್ಯಪ್ರದೇಶ ಸರಕಾರ ಮೊಬೈಲ್ ಅಪ್ಲಿಕೇಶನ್ ಒಂದನ್ನು ರೂಪಿಸಿದೆ. ‘ಕಡಕ್‌ನಾಥ್’ ತಳಿಯ ಕೋಳಿಗಳ ಮಾಂಸ ಅತಿ ಹೆಚ್ಚು ಪೋಷಕಾಂಶ ಹಾಗೂ ಔಷಧೀಯ ಗುಣ ಹೊಂದಿುವುದರಿಂದ ಅತ್ಯಧಿಕ ಬೇಡಿಕೆ ಇದೆ.
‘ಎಂಪಿ ‘ಕಡಕ್‌ನಾಥ್’ ಮೊಬೈಲ್ ಆ್ಯಪ್‌ನ ಉದ್ದೇಶ ದೇಶದ ಇತರ ಭಾಗಗಳಲ್ಲಿ ಇದೇ ತಳಿಯ ಕೋಳಿಗಳ ಸಾಕಣೆ ಕೇಂದ್ರಗಳನ್ನು ಜೋಡಿಸುವುದು.
‘‘ಈ ಆ್ಯಪ್ ಮೂಲಕ ದೇಶದ ಯಾವುದೇ ಮೂಲೆಯಿಂದ ‘ಕಡಕ್‌ನಾಥ್’ ಕೋಳಿಗಳನ್ನು ಖರೀದಿಸಬಹುದು. ‘ಕಡಕ್‌ನಾಥ್’ ಚಿಕನ್ ದೊರೆಯುವ ಕೋ-ಆಪರೇಟಿವ್ ಸೊಸೈಟಿಯನ್ನು ಕೂಡ ಈ ಆ್ಯಪ್‌ನಲ್ಲಿ ಕಾಣಬಹುದು.’’ ಎಂದು ಕೋ-ಆಪರೇಟಿವ್‌ನ ರಾಜ್ಯ ಸಚಿವ ವಿಸ್ವಾಸ್ ಸಾರಂಗ್ ತಿಳಿಸಿದ್ದಾರೆ.
ಪ್ರಸ್ತುತ ಈ ಆ್ಯಪ್ ಝಾಬುನಾ ಹಾಗೂ ಆಲಿರಾಜ್‌ಪುರದಲ್ಲಿರುವ 21 ಸೊಸೈಟಿಗಳು ಹಾಗೂ 430 ಸದಸ್ಯರಿಗೆ ವೇದಿಕೆ ಒದಗಿಸುತ್ತದೆ ಎಂದು ಅವರು ಹೇಳಿದ್ದಾರೆ. ‘‘ಕಡಕ್‌ನಾಥ್’’ ತಳಿ ರುಚಿ ಹಾಗೂ ಪೋಷಕಾಂಶ, ಮುಖ್ಯವಾಗಿ ಅತ್ಯಧಿಕ ಪ್ರೊಟೀನ್ ಇರುವ ಹಿನ್ನೆಲೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
‘‘ಇತರ ಕೋಳಿ ಮಾಂಸಕ್ಕೆ ಹೋಲಿಸಿದರೆ, ‘ಕಡಕ್‌ನಾಥ್’ ಚಿಕನ್ ಶೇ. 25-27 ಪ್ರೊಟೀನ್ ಹೊಂದಿರುತ್ತದೆ. ಇದರಲ್ಲಿ ಅತ್ಯಧಿಕ ಕಬ್ಬಿಣಾಂಶ ಇದೆ. ಕೊಲೆಸ್ಟ್ರಾಲ್ ಹಾಗೂ ಕೊಬ್ಬಿನ ಅಂಶ ತುಂಬಾ ಕಡಿಮೆ’’ ಎಂದು ಅವರು ಹೇಳಿದ್ದಾರೆ.
ರಾಜ್ಯ ಕೋ-ಆಪರೇಟಿವ್ ಇಲಾಖೆ ಅಭಿವೃದ್ಧಿಪಡಿಸಿದ ಈ ಆ್ಯಪ್ ಪ್ಲೇಸ್ಟೋರ್‌ನಲ್ಲಿ ಲಭ್ಯ.