‘ಅನಿಲ ಭಾಗ್ಯ’ ಯೋಜನೆ ಅನುಷ್ಠಾನದಲ್ಲಿ ನೀತಿ ಸಂಹಿತೆ ಉಲ್ಲಂಘನೆ: ಜಗದೀಶ್ ಶೆಟ್ಟರ್ ಆರೋಪ

Update: 2018-03-30 13:06 GMT

ಬೆಂಗಳೂರು, ಮಾ. 30: ವಿಧಾನಸಭಾ ಚುನಾವಣೆ ಸಂದರ್ಭದಲ್ಲೆ ‘ಅನಿಲ ಭಾಗ್ಯ’ ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಕಾಂಗ್ರೆಸ್ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.

ಶುಕ್ರವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರದ ಉಜ್ವಲ ಯೋಜನೆಗೆ ಸಿಕ್ಕ ಜನಬೆಂಬಲದಿಂದ ಪ್ರೇರಣೆಗೊಂಡು ರಾಜ್ಯ ಸರಕಾರ ‘ಅನಿಲ ಭಾಗ್ಯ’ ಯೋಜನೆ ಘೋಷಿಸಿತು. 1ಲಕ್ಷ ಗ್ಯಾಸ್ ಸ್ಟೌವ್ ವಿತರಣೆಗೆ ರಾಜ್ಯ ಸರಕಾರ ಸಿದ್ಧತೆ ನಡೆಸಿದ್ದು, ಸ್ಟೌವ್‌ಗಳನ್ನು ಗೋದಾಮುಗಳಲ್ಲಿ ದಾಸ್ತಾನು ಮಾಡಲಾಗಿದೆ ಎಂದು ದೂರಿದರು.

ಈ ಬಗ್ಗೆ ಚುನಾವಣಾ ಆಯೋಗ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ಬಿಜೆಪಿ ಆಯೋಗಕ್ಕೆ ದೂರು ನೀಡಲಿದೆ ಎಂದ ಅವರು, ಸಿಲಿಂಡರ್, ಸ್ಟೌವ್ ಸೇರಿದಂತೆ ಒಂದು ಅಡುಗೆ ಅನಿಲ ಸಂಪರ್ಕಕ್ಕೆ 3,700 ರೂ.ವೆಚ್ಚವಾಗುತ್ತದೆ. ಆದರೆ, ಸಿದ್ದರಾಮಯ್ಯ ನೇತೃತ್ವದ ಸರಕಾರ 4,500 ರೂ.ವೆಚ್ಚ ಮಾಡಿದ್ದು, ಇದರಲ್ಲಿ ಅಕ್ರಮ ನಡೆಸಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕುವವರಿಗೆ ಸ್ಟೌವ್ ಕೊಡಲು ಯತ್ನಿಸುತ್ತಿದ್ದಾರೆ. ಈಗಾಗಲೇ ಸ್ಟೌವ್ ಪೂರೈಕೆಗೆ ಎರಡು ಕಂಪೆನಿಗಳಿಗೆ ಕಾನೂನು ಬಾಹಿರವಾಗಿ ಗುತ್ತಿಗೆ ನೀಡಲಾಗಿದೆ ಎಂದ ಅವರು, ಈ ಬಗ್ಗೆ ಆಯೋಗ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಸ್ವಜನ ಪಕ್ಷಪಾತ: ವಿಶ್ವ ವಿದ್ಯಾಲಯ ಕಾಯ್ದೆ ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ. ಆದರೆ, ರಾಯಚೂರು ವಿವಿ ವಿಶೇಷ ಅಧಿಕಾರಿಯಾಗಿ ಪ್ರೊ.ಮುಝಾಫರ್ ಅಸಾದಿ ಅವರನ್ನು ನೇಮಕ ಮಾಡಲಾಗಿದೆ. ಮೈಸೂರು ವಿವಿಯಲ್ಲಿ ಪ್ರೊಫೆಸರ್ ಆಗಿದ್ದ ಅಸಾದಿ ನೇಮಕ ಕಾನೂನು ಬಾಹಿರ ಎಂದು ಜಗದೀಶ್ ಶೆಟ್ಟರ್ ಟೀಕಿಸಿದರು.

ವಿಧಾನಸಭಾ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಸ್ವಜನ ಪಕ್ಷಪಾತ ಮಾಡುತ್ತಿದ್ದು, ಚುನಾವಣೆ ಅನುಕೂಲಕ್ಕಾಗಿ ಅಸಾದಿ ನೇಮಕ ಮಾಡಿದ್ದು, ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

‘ಬಿಜೆಪಿ-ಆರೆಸೆಸ್ಸ್ ಕಾರ್ಯಕರ್ತರಿಗೆ ಪೊಲೀಸ್ ಅಧಿಕಾರಿಗಳು, ಮುಖ್ಯಮಂತ್ರಿ ಸಿದ್ದರಾಮಯ್ಯರ ಕುಮ್ಮಕ್ಕಿನಿಂದ ಪೊಲೀಸ್ ಠಾಣೆಗೆ ಬಂದು ಸಹಿ ಹಾಕುವಂತೆ ಬೆದರಿಸುತ್ತಿದ್ದು, ಪಕ್ಷದ ಕಾರ್ಯಕರ್ತರು ಸಹಿ ಹಾಕಲು ಪೊಲೀಸ್ ಠಾಣೆಗೆ ಹೋಗಬಾರದು, ಪೊಲೀಸರಿಗೆ ತಾಕತ್ತಿದ್ದರೆ ಕಾರ್ಯಕರ್ತರನ್ನು ಬಂಧಿಸಲಿ’

-ಪ್ರಹ್ಲಾದ್‌ಜೋಷಿ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News