ಬಿ.ಎಸ್.ವೈಯಿಂದ ಈಶ್ವರಪ್ಪಗೆ ಟಿಕೆಟ್ ಘೋಷಣೆ ಬೆನ್ನಲ್ಲೆ ಭುಗಿಲೆದ್ದ ಅಸಮಾಧಾನ

Update: 2018-04-01 14:46 GMT
ಈಶ್ವರಪ್ಪ, ಬಿ.ಎಸ್.ವೈ, ಎಸ್.ರುದ್ರೇಗೌಡ

ಶಿವಮೊಗ್ಗ, ಏ. 1: ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಕಣಕ್ಕಿಳಿಯಲಿದ್ದಾರೆ ಎಂದು ಯಡಿಯೂರಪ್ಪರ ಘೋಷಣೆ ಬೆನ್ನಲ್ಲೇ ಭಿನ್ನಮತ ಭುಗಿಲೆದ್ದಿದೆ. ಪ್ರಬಲ ಟಿಕೆಟ್ ಆಕಾಂಕ್ಷಿ, ಪಕ್ಷದ ಜಿಲ್ಲಾಧ್ಯಕ್ಷ, ಯಡಿಯೂರಪ್ಪ ಬಲಗೈ ಭಂಟ ಎಸ್.ರುದ್ರೇಗೌಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ. ಇಲ್ಲದಿದ್ದರೆ ಪಕ್ಷ ತೊರೆಯುವ ಬೆದರಿಕೆಯೂ ಹಾಕಿದ್ದಾರೆ.

ಸಾಗರ ಟಿಕೆಟ್ ಕೈ ತಪ್ಪಿ ಹೋಗುತ್ತಿರುವುದಕ್ಕೆ ಬಂಡೆದ್ದು ಬಿಜೆಪಿ ತೊರೆಯಲು ಮಾಜಿ ಸಚಿವ ಹರತಾಳು ಹಾಲಪ್ಪ ಮುಂದಾಗಿರುವ ಸಂದರ್ಭದಲ್ಲಿಯೇ, ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ನಿರಾಕರಣೆಗೆ ಅಸಮಾಧಾನಗೊಂಡು ಸ್ವತಃ ಪಕ್ಷದ ಜಿಲ್ಲಾಧ್ಯಕ್ಷರೇ ಪಕ್ಷ ತೊರೆಯುವ ಗಂಭೀರ ಚಿಂತನೆ ನಡೆಸುತ್ತಿರುವುದು ಕಮಲ ಪಾಳೇಯದಲ್ಲಿ ತೀವ್ರ ತಳಮಳ ಉಂಟು ಮಾಡಿದೆ. ಪಕ್ಷದ ಮುಖಂಡರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಭಿನ್ನಮತ ಶಮನಕ್ಕೆ ಹರಸಾಹಸ ನಡೆಸುವಂತಾಗಿದೆ. 

ಸರ್ವೇ ಮೂಲಕ ಟಿಕೆಟ್ ಘೋಷಣೆ ಮಾಡುವುದಾಗಿ ಹೇಳಿ, ಇದೀಗ ಕೆ.ಎಸ್.ಈಶ್ವರಪ್ಪ ಅಭ್ಯರ್ಥಿಯಾಗಲಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿರುವುದು ಎಸ್.ರುದ್ರೇಗೌಡರನ್ನು ಗರಂ ಆಗಿಸಿದೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾರಂಭಿಸಿದ್ದಾರೆ. ಸರ್ವೇ ವರದಿಯಂತೆ ಅಭ್ಯರ್ಥಿ ಆಯ್ಕೆ ಮಾಡಿ. ಸರ್ವೇಯಲ್ಲಿ ತನ್ನ ಹೆಸರು ಮುಂಚೂಣಿಯಲ್ಲಿರುವುದರಿಂದ, ತನಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. 

ಮುಂದಿನ ಎರಡು ದಿನಗಳಲ್ಲಿ ಈ ಕುರಿತಂತೆ ಸ್ಪಷ್ಟ ಅಭಿಪ್ರಾಯ ಕೈಗೊಳ್ಳಬೇಕು. ಇಲ್ಲದಿದ್ದರೆ ತನ್ನ ಮುಂದಿನ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ. ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಬೆಂಬಲಿಗರ ಅಭಿಪ್ರಾಯದಂತೆ ಮುನ್ನಡೆಯುತ್ತೇನೆ ಎಂದು ನೇರ ಎಚ್ಚರಿಕೆಯ ಸಂದೇಶ ಕೂಡ ಪಕ್ಷದ ವರಿಷ್ಠರಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. 

ಎಂಎಲ್‍ಸಿ ಬೇಡ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ವೇಳೆ ವಿಧಾನ ಪರಿಷತ್‍ಗೆ ಆಯ್ಕೆ ಮಾಡಲಾಗುವುದು ಎಂಬ ಬಿ.ಎಸ್.ವೈ. ಹೇಳಿಕೆಗೂ ಎಸ್.ರುದ್ರೇಗೌಡ ಸಹಮತ ವ್ಯಕ್ತಪಡಿಸಿಲ್ಲ. 'ಕಳೆದ ಬಾರಿ ಕೇವಲ 278 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದೇನೆ. ಈ ಬಾರಿ ತಾನು ಅಭ್ಯರ್ಥಿಯಾಗಿ ಅಖಾಡಕ್ಕಿಳಿದರೆ ಜಯ ಸಾಧಿಸುವುದು ನಿಶ್ಚಿತ. ಈಗಾಗಲೇ ಎಂಎಲ್‍ಸಿ ಆಗುವುದಿದ್ದರೆ ಈ ಹಿಂದೆಯೇ ಆಗಲು ಅವಕಾಶವಿತ್ತು. ಎಂಎಲ್‍ಸಿ ಸ್ಥಾನ ತನಗೆ ಬೇಡ. ಕೊಟ್ಟರೆ ವಿಧಾನಸಭೆ ಚುನಾವಣೆ ಸ್ಪರ್ಧೆಗೆ ಟಿಕೆಟ್ ಕೊಡಿ' ಎಂದು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ಪಕ್ಷದ ರಾಜ್ಯ ಮುಖಂಡರ ಬಳಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. 

ಸಂಧಾನಕ್ಕೆ ಕಸರತ್ತು: ಎಸ್.ರುದ್ರೇಗೌಡರವರು ಭಿನ್ನಮತದ ಕಹಳೆ ಮೊಳಗಿಸುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಕ್ಷದ ಹಿರಿಯ ನಾಯಕರು, ಆರಂಭದಲ್ಲಿಯೇ ವೈಮನಸ್ಸು ಶಮನಗೊಳಿಸುವ ಕಸರತ್ತು ನಡೆಸಲಾರಂಭಿಸಿದ್ದಾರೆ. 'ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳಬೇಡಿ. ಯೋಚಿಸಿ ನಿರ್ಧಾರ ಕೈಗೊಳ್ಳಿ. ಯಾವುದೇ ಕಾರಣಕ್ಕೂ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಡಿ' ಎಂದು ಮನವೊಲಿಸಲು ಯತ್ನಿಸುತ್ತಿದ್ದಾರೆ. 

ಮತ್ತೊಂದೆಡೆ ಕೆಲ ರಾಜ್ಯ ಮುಖಂಡರು ಅವರೊಂದಿಗೆ ಚರ್ಚಿಸಿ, 'ನಿಮ್ಮ ಅಭಿಪ್ರಾಯವನ್ನು ವರಿಷ್ಠರ ಗಮನಕ್ಕೆ ತರಲಾಗುವುದು. ಅಲ್ಲಿಯವರೆಗೂ ಯಾವುದೇ ನಿರ್ಧಾರ ಕೈಗೊಳ್ಳಬೇಡಿ' ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಎಲ್ಲ ಭರವಸೆಯ ಹಿನ್ನೆಲೆಯಲ್ಲಿ ಎಸ್.ರುದ್ರೇಗೌಡರವರು ಒಂದೆರೆಡು ದಿನಗಳ ಕಾಲ ಕಾದು ನೋಡುವ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 

ಭುಗಿಲು: ಶಿವಮೊಗ್ಗ ನಗರ ಕ್ಷೇತ್ರದಿಂದ ಎಸ್.ರುದ್ರೇಗೌಡರನ್ನೇ ಅಭ್ಯರ್ಥಿಯನ್ನಾಗಿಸುವ ಉದ್ದೇಶದಿಂದ ಸ್ವತಃ ಬಿ.ಎಸ್.ಯಡಿಯೂರಪ್ಪ ಅವರನ್ನು ಜಿಲ್ಲಾಧ್ಯಕ್ಷರನ್ನಾಗಿ ನಿಯೋಜಿಸಿದ್ದರು. ಅಭ್ಯರ್ಥಿಯಾಗುವ ನಿರೀಕ್ಷೆಯಲ್ಲಿಯೇ ಎಸ್.ರುದ್ರೇಗೌಡ ಕೂಡ ಕಳೆದ ಐದು ವರ್ಷದಿಂದ ಪಕ್ಷ ಸಂಘಟನೆಯ ಕೆಲಸ ಮಾಡಿಕೊಂಡು ಬಂದಿದ್ದರು. ಇನ್ನೊಂದೆಡೆ ಈಶ್ವರಪ್ಪರವರು ಟಿಕೆಟ್‍ಗೆ ಪ್ರಬಲ ಹೋರಾಟ ನಡೆಸಿಕೊಂಡು ಬಂದಿದ್ದರು. ತನಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದರು. ಎಸ್.ರುದ್ರೇಗೌಡಗೆ ಟಿಕೆಟ್ ಖಚಿತವಾಗುತ್ತಿದ್ದಂತೆ, ಅವರು ಯಡಿಯೂರಪ್ಪ ವಿರುದ್ದ ಮುನಿಸಿಕೊಂಡಿದ್ದರು. ಇತ್ತೀಚೆಗೆ ಅವರು ಭಾಗವಹಿಸುತ್ತಿದ್ದ ಸಮಾರಂಭಗಳಿಂದ ದೂರ ಉಳಿದಿದ್ದರು. ಈ ನಡುವೆ ಪಕ್ಷದ ವರಿಷ್ಠರು ಮಧ್ಯಪ್ರವೇಶಿಸಿ ಈಶ್ವರಪ್ಪಗೆ ಟಿಕೆಟ್ ಖಚಿತಪಡಿಸಿದ್ದರು. 

ಮತ್ತೊಂದೆಡೆ ಯಡಿಯೂರಪ್ಪ ತಮ್ಮ ಬಲಗೈ ಭಂಟ ಎಸ್.ರುದ್ರೇಗೌಡ ಪರವಾಗಿ ಟಿಕೆಟ್ ಲಾಬಿ ಮುಂದುವರಿಸಿದ್ದರು. ಕಳೆದ ಕೆಲ ದಿನಗಳ ಹಿಂದೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಅಮಿತ್ ಶಾರವರು ಈಶ್ವರಪ್ಪಗೆ ಟಿಕೆಟ್ ಖಚಿತಪಡಿಸಿದ್ದರು. ಇಬ್ಬರು ಒಟ್ಟಾಗಿ ಕೆಲಸ ಮಾಡಿಕೊಂಡು ಹೋಗುವಂತೆ ಯಡಿಯೂರಪ್ಪಗೆ ಸ್ಪಷ್ಟ ಸಂದೇಶ ರವಾನಿಸಿದ್ದರು.

ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಯಡಿಯೂರಪ್ಪ ಈಶ್ವರಪ್ಪಗೆ ಬೆಂಬಲ ವ್ಯಕ್ತಪಡಿಸಿದ್ದರು. ಇದೀಗ ಅವರ ಬಲಗೈ ಭಂಟ ಎಸ್.ರುದ್ರೇಗೌಡರೇ ತಿರುಗಿ ಬಿದ್ದಿದ್ದಾರೆ. ತನಗೆ ಟಿಕೆಟ್ ಸಿಗದಿದ್ದರೆ ತನ್ನ ದಾರಿ ತನಗೆ ಎಂಬ ಸಂದೇಶ ರವಾನಿಸಿದ್ದಾರೆ. ಈ ಹೊಸ ಬೆಳವಣಿಗೆಯು ಮುಂದೆ ಇನ್ನು ಯಾವ ತಿರುವು ಪಡೆದುಕೊಳ್ಳಲಿದೆಯೋ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ. 

'ಎಂಎಲ್‍ಸಿ ಸ್ಥಾನ ಬೇಡ : ಪಕ್ಷೇತರ ಅಭ್ಯರ್ಥಿಯಾಗುವುದಿಲ್ಲ' : ಎಸ್.ರುದ್ರೇಗೌಡ
'ತನ್ನನ್ನು ವಿಧಾನ ಪರಿಷತ್‍ಗೆ ಆಯ್ಕೆ ಮಾಡುವುದಾಗಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಒಂದು ವೇಳೆ ಎಂಎಲ್‍ಸಿ ಆಗುವುದಿದ್ದರೆ ಈ ಹಿಂದೆಯೇ ಆಗಲು ಅವಕಾಶವಿತ್ತು. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ 278 ಮತಗಳ ಅಂತರದಲ್ಲಿ ಸೋತಿದ್ದರಿಂದ ಈ ಬಾರಿ ಜಯ ಸಾಧಿಸುವ ವಿಶ್ವಾಸವಿತ್ತು. ಎಂಎಲ್‍ಎ ಚುನಾವಣೆಗೆ ಕಣಕ್ಕಿಳಿಯಬೇಕೆಂಬ ಕಾರಣದಿಂದ ಎಂಎಲ್‍ಸಿ ಸ್ಥಾನ ನಿರಾಕರಿಸಿದ್ದೆ. ಆದರೆ ಇದೀಗ ಟಿಕೆಟ್ ನಿರಾಕರಣೆ ಮಾಡಲು ಮುಂದಾಗಿರುವುದು ತನಗೆ ಅತೀವ ಬೇಸರ ಉಂಟು ಮಾಡಿದೆ' ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಭಾನುವಾರ ತನ್ನನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿ.ಎಸ್.ಯಡಿಯೂರಪ್ಪರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಉದ್ದೇಶದಿಂದ, ಅವರ ಮಾರ್ಗದರ್ಶನದಲ್ಲಿ ರಾಜಕೀಯ ಕ್ಷೇತ್ರಕ್ಕೆ ಪ್ರವೇಶ ಮಾಡಿದ್ದೆ. ಈಗಲೂ ಯಡಿಯೂರಪ್ಪರ ಮಾತಿಗೆ ಬದ್ದನಾಗಿದ್ದೇನೆ. ಸರ್ವೇ ಮೂಲಕ ಟಿಕೆಟ್ ಘೋಷಿಸುವುದಾಗಿ ಹೇಳಿ, ಇದೀಗ ಈಶ್ವರಪ್ಪರನ್ನು ಕಣಕ್ಕಿಳಿಸಲಾಗುವುದು ಎಂದು ಹೇಳುತ್ತಿರುವುದು ಸಹಜವಾಗಿಯೇ ತನ್ನಲ್ಲಿ ಬೇಸರ ಉಂಟು ಮಾಡಿದೆ. ಜವಾಬ್ದಾರಿಯುತ ಪಕ್ಷದ ಜಿಲ್ಲಾಧ್ಯಕ್ಷನಾಗಿದ್ದೇನೆ. ತಾನು ಏನೇ ನಿರ್ಧಾರ ಕೈಗೊಂಡರು ಯೋಚಿಸಿ ತೀರ್ಮಾನ ಕೈಗೊಳ್ಳುತ್ತೇನೆ. ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂಬುವುದು ಸತ್ಯಕ್ಕೆ ದೂರವಾದುದಾಗಿದೆ. ಇಲ್ಲಿಯವರೆಗೂ ಆ ರೀತಿಯ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. 

ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯುವುದಿಲ್ಲ. ಪಕ್ಷದ ಮುಖಂಡರ ಜೊತೆ ಮಾತನಾಡಿದ್ದೇನೆ. ಎರಡು ದಿನಗಳಲ್ಲಿ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸುವಂತೆ ಮನವಿ ಮಾಡಿಕೊಂಡಿದ್ದೇನೆ. ಅವರು ಕೈಗೊಳ್ಳುವ ನಿರ್ಧಾರ ಗಮನಿಸಿ, ಮುಂದಿನ ಹೆಜ್ಜೆಯಿಡಲಿದ್ದೇನೆ. ಯಾವುದೇ ಕಾರಣಕ್ಕೂ ತನ್ನ ಬೆಂಬಲಿಗರು ಬಹಿರಂಗವಾಗಿ ಹೇಳಿಕೆ ನೀಡದಂತೆಯೂ ಮನವಿ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ. 

ಬಲಗೈ ಭಂಟನ ಜೊತೆ ಬಿಎಸ್‍ವೈ ಮಾತುಕತೆ
ಕೆ.ಎಸ್.ಈಶ್ವರಪ್ಪಗೆ ಟಿಕೆಟ್ ಖಚಿತ ಪಡಿಸಿದ ನಂತರ ಎಸ್.ರುದ್ರೇಗೌಡ ಅಸಮಾಧಾನಗೊಂಡಿದ್ದಾರೆ. ಹೆಚ್ಚು ಕಡಿಮೆಯಾದರೆ ಪಕ್ಷ ತೊರೆಯುವ ಸಾಧ್ಯತೆಯೂ ಇದೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ, ಬಿ.ಎಸ್.ಯಡಿಯೂರಪ್ಪರವರು ದೂರವಾಣಿಯಲ್ಲಿ ಎಸ್.ರುದ್ರೇಗೌಡರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ ಎಂದು ಬಿಜೆಪಿಯ ಮೂಲಗಳು ಮಾಹಿತಿ ನೀಡಿವೆ. 'ಮತ್ತೊಮ್ಮೆ ವರಿಷ್ಠರ ಜೊತೆ ಸಮಾಲೋಚನೆ ನಡೆಸುತ್ತೇನೆ. ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಕೈಗೊಳ್ಳದಂತೆ ಎಸ್.ರುದ್ರೇಗೌಡಗೆ ಯಡಿಯೂರಪ್ಪರವರು ಸಲಹೆ ನೀಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. 

'ಅಮಿತ್ ಶಾ - ಬಿಎಸ್‍ವೈ ಋಣ ತೀರಿಸುತ್ತೇನೆ' : ಕೆ.ಎಸ್.ಈಶ್ವರಪ್ಪ 
ಈ ನಡುವೆ ಭಾನುವಾರ ಶಿವಮೊಗ್ಗ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಕೆ.ಎಸ್.ಈಶ್ವರಪ್ಪ ಮಾತನಾಡಿದರು. ಶಿವಮೊಗ್ಗ ನಗರ ಕ್ಷೇತ್ರದಿಂದ ತಾನು ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದನ್ನು ಖಚಿತಪಡಿಸಿರುವ ಬಿ.ಎಸ್.ಯಡಿಯೂರಪ್ಪ ಕ್ರಮಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 'ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚರ್ಚಿಸಿ ತನ್ನಮ್ಮನ್ನು ಶಿವಮೊಗ್ಗ ನಗರ ಕ್ಷೇತ್ರದಿಂದ ಕಣಕ್ಕಿಳಿಸುವ ನಿರ್ಧಾರ ಮಾಡಿದ್ದಾರೆ. ಈ ಚುನಾವಣೆಯಲ್ಲಿ ತಾನು ಜಯಶಾಲಿಯಾಗುವ ಮೂಲಕ ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ' ಎಂದು ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. 

Writer - ವರದಿ : ಬಿ. ರೇಣುಕೇಶ್

contributor

Editor - ವರದಿ : ಬಿ. ರೇಣುಕೇಶ್

contributor

Similar News