ಹೊಸ ಕಪ್ಪೆ ಪ್ರಭೇದ ಪತ್ತೆ
ವೆನೆಜುವೆಲಾ ಹಾಗೂ ಕೊಲಂಬಿಯಾದ ನಡುವೆ ಹರಡಿಕೊಂಡಿರುವ ಪೆರಿಜಾ ಪರ್ವತ ಶ್ರೇಣಿಯಲ್ಲಿ ಹೊಸ ಪ್ರಭೇದದ ಕಪ್ಪೆಯೊಂದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಬಹುವರ್ಣದ ಚರ್ಮ ಹಾಗೂ ವಿಭಿನ್ನ ರೀತಿಯಲ್ಲಿ ಸದ್ದು ಮಾಡುವ ಕಪ್ಪೆ ಹೈಲೋಸ್ಕರ್ಟಸ್ ಜಾಪ್ರೇರಿಯಾವನ್ನು ವಿಜ್ಞಾನ ಪ್ರವಾಸದ ಸಂದರ್ಭ ಗುರುತಿಸಲಾಗಿದೆ. ಈ ಕಪ್ಪೆಗಳು 1,000 ಮೀಟರ್ ಎತ್ತರದ ಜಲಪಾತ ಹಾಗೂ ನದಿಗಳಲ್ಲಿ ಕಳೆದ ಹಲವು ದಶಕಗಳಿಂದ ಜೀವಿಸುತ್ತಿವೆ. ಜುಲಿಯಾದ ವಾಯುವ್ಯ ವೆನೆಜುವೆಲಾ ರಾಜ್ಯದ ಪೆರಿಜಾದಲ್ಲಿದ್ದು, ಕಣ್ಮರೆಯಾಗಿರುವ ಸ್ಥಳೀಯ ಜನಾಂಗೀಯ ಗುಂಪು ಜಾಪ್ರೇರಿಯಾರ ನೆನಪಿಗಾಗಿ ಈ ಹೊಸ ಕಪ್ಪೆ ಪ್ರಭೇದಕ್ಕೆ ಇದೇ ಹೆಸರನ್ನು ಇರಿಸಲಾಗಿದೆ. ವೈಜ್ಞಾನಿಕ ಪತ್ರಿಕೆ ‘ಜೂಟಾಕ್ಸಾ’ದಲ್ಲಿ ಫೆಬ್ರವರಿಯಲ್ಲಿ ಪ್ರಕಟಿಸಲಾದ ಲೇಖನದಲ್ಲಿ ಹೈಲೋಸ್ಕರ್ಟಸ್ ಕುಲಕ್ಕೆ ಸೇರಿದ 37 ಪ್ರಭೇದಗಳನ್ನು ಗುರುತಿಸಲಾಗಿದೆ. ಇದರಲ್ಲಿ ಈಗ ಪತ್ತೆಯಾಗಿರುವ ಪ್ರಭೇದ ಕೂಡ ಸೇರಿದೆ. ಸಣ್ಣ ಗಾತ್ರದ ಗಂಡು ಕಪ್ಪೆ 2.8 ಸೆ.ಮೀ. ನಿಂದ 3.2 ಸೆಂ. ಮೀ. ಉದ್ದ ಇದೆ ಹಾಗೂ ಹೆಣ್ಣು ಕಪ್ಪೆ 3.5ರಿಂದ 3.9 ಸೆ.ಮೀ. ಉದ್ದ ಇದೆ. ಈ ಸಂಶೋಧನೆಗಾಗಿ ವಿಜ್ಞಾನಿಗಳ ಪ್ರಯಾಣ 2008ರಲ್ಲಿ ಆರಂಭವಾಗಿತ್ತು. ‘‘ಇದು ಕಪ್ಪೆಯ ಹೊಸ ಪ್ರಭೇದ ಎಂದು ಸಾಕಷ್ಟು ಪುರಾವೆ ದೊರಕಲು ನಮಗೆ ಹಲವು ವರ್ಷಗಳು ಬೇಕಾಯಿತು’’ ಎಂದು ಜೀವಶಾಸ್ತ್ರಜ್ಞ ಹಾಗೂ ಅಧ್ಯಯನದ ಸಂಚಾಲಕ ಫೆರ್ನಾಡೊ ರೋಜ್-ರುಂಜೈಕ್ ತಿಳಿಸಿದ್ದಾರೆ. ಈ ಕಪ್ಪೆಯ ವಿಭಿನ್ನ ಬಣ್ಣವನ್ನು ಸೆರೆಹಿಡಿಯಲು ಹಾಗೂ ಸದ್ದನ್ನು ವಿಶ್ಲೇಷಿಸಲು ವಿಜ್ಞಾನಿಗಳು ಕ್ಯಾಮರಾ ಹಾಗೂ ಹೈಡೆಫಿನಿಶನ್ ಸೌಂಡ್ ರೆಕಾರ್ಡ್ ಬಳಸಿದ್ದಾರೆ.
ಈ ಪ್ರಭೇದದ ಕಪ್ಪೆ ಹೊರಡಿಸುವ ಸದ್ದು 15 ಮೀಟರ್ ದೂರದ ವರೆಗೆ ಕೇಳಿಸಬಲ್ಲುದು. ಇದು ಈ ಕಪ್ಪೆಯ ವಿಭಿನ್ನ ಸ್ವಭಾವ ಎಂದು ಸಂಶೋಧಕರ ತಂಡದಲ್ಲಿದ್ದ ಎಡ್ವಿನ್ ಇನ್‌ಫೆಂಟೆ ಹೇಳಿದ್ದಾರೆ. ಎಚ್. ಜಾಪ್ರೇರಿಯಾ ಕಪ್ಪೆಗಳ ಬೆನ್ನು ಪ್ರದೇಶ ನಸು ಹಳದಿ ಬಣ್ಣ ಹೊಂದಿದೆ ಹಾಗೂ ಪುಟ್ಟ ಕಂದು ಚುಕ್ಕೆಗಳು ಹಾಗೂ ಪುಟ್ಟ ಕೆಂಬಣ್ಣದ ಕಲೆಗಳು ಕಂಡು ಬಂದಿವೆ.