ಈ ಜಾತಕನಿಗೆ ವಿದ್ಯಾಯೋಗವಿಲ್ಲವು
ಕನ್ನಡದ ಪ್ರಸಿದ್ಧ ಬರಹಗಾರ ಹಾಗೂ ಚಿಂತಕರಾದ ಪುರುಷೋತ್ತಮ ಬಿಳಿಮಲೆಯವರ ಬಾಲ್ಯದ ನೆನಪು ಹಾಗೂ ಶಾಲೆ ಸೇರಿದ ಕತೆ.
ಜಾತಕ ಬರೆದ ಜೋಯಿಸರು ತಿಳಿಸಿದಂತೆ ಆ ದಿವಸ ಬಹಳ ಒಳ್ಳೆಯ ದಿವಸವಾಗಿತ್ತು. ಆ ಕಾರಣಕ್ಕಾಗಿಯೇ ಶಾಲೆಗೆ ರಜೆ ಸಾರಲಾಗಿತ್ತು! ಈ ಅನಿಷ್ಟಕ್ಕೆ ಬೆದರಿದ ಅಪ್ಪ ದಿಗ್ಭ್ರಾಂತರಾಗಿದ್ದರು. ಅವರಲ್ಲಿ ಮಾತಿರಲಿಲ್ಲ. ನನ್ನ ತಲೆ ಸವರಿ ಮತ್ತೆ ವಾಟೆಕಜೆಗೆ ಹಿಂದಿರುಗಲು ಹೇಳಿ, ಪಂಜದ ಕಡೆ ನಡೆದರು. ನಾನು ಬಂದ ದಾರಿಯಲ್ಲಿ ಹಿಂದೆ ಬಂದೆ. ಸಮಯಕ್ಕೆ ಮುನ್ನ ಒಂಟಿಯಾಗಿಯೇ ಮನೆಗೆ ಹಿಂದಿರುಗಿದ ನನ್ನನ್ನು ಕಂಡ ಅಮ್ಮನ ಕಣ್ಣಲ್ಲೂ ನೀರು. ಆದರೆ ಈಗ ಅವೆಲ್ಲ ನೆನಪು ಮಾತ್ರ. ಯಾರೋ ಬರೆದ ಜಾತಕವನ್ನು ನಂಬಿದ್ದರೆ, ನನಗೆ ವಿದ್ಯೆಯೇ ದೊರಕುತ್ತಿರಲಿಲ್ಲ.
ನಾನು ಪಂಜದ ಸಮೀಪದ ಬಿಳಿಮಲೆ ಎಂಬ ತುಂಬಾ ಹಿಂದುಳಿದ ಹಳ್ಳಿಯಲ್ಲಿ ಹುಟ್ಟಿ ಬೆಳೆದವನು. ಈಗ ದಿಲ್ಲಿಯಲ್ಲಿ ಕೆಲಸ ಮಾಡುವಷ್ಟು ಮುಂದೆ ಬಂದಿದ್ದೇನೆ. ಇದು ಅಹಂಕಾರದ ಮಾತಲ್ಲ, ಬದಲು ಆತ್ಮವಿಶ್ವಾಸದ ಮಾತು. ನಿಮ್ಮಲ್ಲಿ ಆತ್ಮ ವಿಶ್ವಾಸ ಬೆಳೆಯಬೇಕು. ನಮ್ಮಂಥವರ ಭವಿಷ್ಯವನ್ನು ಬೇರಾರೋ ರೂಪಿಸಲಾರರು. ಅದನ್ನು ನಾವೇ ರೂಪಿಸಿಕೊಳ್ಳಬೇಕು. ನಾನು ಭಯಾನಕ ಬಡತನದ ಕೆಟ್ಟ ಕಾಲದಲ್ಲಿ ಹುಟ್ಟಿದವನು. ಅದೂ ಒಂದು ಆದಿತ್ಯವಾರ, ಅಮಾವಾಸ್ಯೆಯ ದಿವಸ ರಣ ರಣ ಮಧ್ಯಾಹ್ನ ಜನಿಸಿದೆನಂತೆ. ಹಾಗೆ ನಾನು ಹುಟ್ಟುವಾಗ ತಂದೆ-ತಾಯಿಯರಿಗೆ ಅವರದ್ದೇ ಆದ ನೆಲ, ಮನೆ, ಬದುಕು ಯಾವುದೂ ಇರಲಿಲ್ಲ. ಕರ್ರನೆ, ಕುಳ್ಳಗೆ, ಕುರೂಪದಲ್ಲಿ ಎಲ್ಲರನ್ನೂ ಮೀರಿಸುವಂತಿದ್ದ ನಾನು ತಂದೆ ತಾಯಿಯರ ಬಡತನವನ್ನು ತೀವ್ರವಾಗಿ ಹೆಚ್ಚಿಸಿದ್ದಿರಬೇಕು. ಇಂಥ ಪರಿಸ್ಥಿತಿಯಲ್ಲಿ ಹೀಗೆ ಹುಟ್ಟಿದ ಮಗುವಿನ ಭವಿಷ್ಯ ಹೇಗಿರಬಹುದೆಂಬ ಕುತೂಹಲದಿಂದ ತಂದೆಯವರು ಕೇರಳ ಕರ್ನಾಟಕ ಗಡಿಭಾಗದ ಜ್ಯೋತಿಷಿಯೊಬ್ಬನಿಂದ ನನ್ನ ಜಾತಕ ಬರೆಯಿಸಿದರು. ಆತ ಯಥಾಪ್ರಕಾರ ಹುಟ್ಟಿದ ಕ್ಷಣದ ಎಲ್ಲ ಗ್ರಹಗಳನ್ನು ಲೆಕ್ಕ ಹಾಕಿ ‘‘ಈ ಜಾತಕನಿಗೆ ವಿದ್ಯಾಯೋಗವಿಲ್ಲವು’’ ಎಂದು ಬರೆದು, ಅಪ್ಪನಲ್ಲಿ ಇರುವಷ್ಟು ದುಡ್ಡನ್ನು ಕಿತ್ತುಕೊಂಡ. ಮನುಷ್ಯರೇ ಇಲ್ಲದ ಬಂಟಮಲೆಯಲ್ಲಿ ನಾನು ಕಾಡಿನ ಹುಳುಗಳ ಜೊತೆ ಬದುಕುತ್ತಿದ್ದೆ. ಹಾಗೆ ನಾಲ್ಕೈದು ವರ್ಷ ಕಳೆಯಿತು.
ಅಪ್ಪನಿಗೆ ಯಕ್ಷಗಾನ, ತಾಳಮದ್ದಳೆಯ ಹುಚ್ಚಿತ್ತು. ಅದಕ್ಕಾಗಿ ಮನೆ ಬಿಟ್ಟು ಹೋದರೆ ವಾರಗಟ್ಟಲೆ ಅವರು ಮನೆಗೆ ಬರುತ್ತಿರಲಿಲ್ಲ. ಆದರೆ ಮಗ ಚೆನ್ನಾಗಿ ಓದಿದರೆ, ಭಯಾನಕ ಬಡತನ ಮತ್ತು ಶೋಷಣೆಗಳಿಂದ ಪಾರಾಗಿಬಿಡಬಹುದು ಎಂಬ ತಿಳುವಳಿಕೆ ಅವರಿಗಿತ್ತು. ಆದರೇನು ಮಾಡೋಣ? ಅಮಾವಾಸ್ಯೆಯಲ್ಲಿ ಹುಟ್ಟಿದ ನನ್ನ ಜಾತಕದಲ್ಲಿ ವಿದ್ಯಾಯೋಗ ಇಲ್ಲವೆಂದು ಬರೆದಾಗಿದೆಯಲ್ಲ? ಆದರೆ ಕಾಡೊಳಗಿದ್ದ ನನ್ನ ಅಮ್ಮನ ತರ್ಕ ಯಾವಾಗಲೂ ಬೇರೆ. ‘ಜಾತಕ ಹೇಗಾದರೂ ಇರಲಿ, ನಾವು ಮಾಡುವ ಪ್ರಯತ್ನ ಮಾಡಲೇಬೇಕು’, ಎಂಬುದು ಅವಳ ವಾದ. ಹಾಗೂ ಹೀಗೂ ಐದು ವರ್ಷ ಕಳೆದು ಆರನೇ ವರ್ಷಕ್ಕೆ ಕಾಲಿಡುವಾಗ ಮಗನನ್ನು ಶಾಲೆಗೆ ಸೇರಿಸುವುದೋ ಬಿಡುವುದೋ ಎಂಬ ಬಗ್ಗೆ ತಂದೆ-ತಾಯಿಯರ ನಡುವೆ ಸಾಕಷ್ಟು ವಾದ-ವಿವಾದ ಬೆಳೆದು ಕೊನೆಗೂ ಶಾಲೆಗೆ ಸೇರಿಸುವುದೆಂದು ನಿರ್ಧರಿಸಲಾಯಿತು. ಆದರೆ ಶಾಲೆ ಹತ್ತಿರವೇನೂ ಇರಲಿಲ್ಲ. ಇಲ್ಲಿಂದ ಸುಮಾರು ಮೂರು ಕಿ.ಮೀ. ದೂರ ಕಾಡಿನೊಳಗೇ ಜಿಗಣೆಗಳ ಕಾಟ ತಾಳಿಕೊಂಡು ಹೊಳೆಯ ಬದಿಯಲ್ಲಿ ಇಳಿಯುತ್ತಾ, ಜಾರಿ ಬೀಳದಂತೆ ಜಾಗೃತೆ ವಹಿಸಿಕೊಂಡು ನಡೆಯಬೇಕು. ಆಮೇಲೆ ಅದೇ ಹೊಳೆಯನ್ನು ನಿರ್ದಿಷ್ಟ ಜಾಗವೊಂದರಲ್ಲಿ ದಾಟಬೇಕು. ಹಾಗೆ ದಾಟುವಾಗ ಹೊಳೆಯ ನಡುವಣ ಬಂಡೆಗಳನ್ನು ಚಾಕಚಕ್ಯತೆಯಿಂದ ಹಾರಬೇಕು. ಹೀಗೆ ಹೊಳೆದಾಟಿ ಮತ್ತೆ ಸುಮಾರು ಒಂದೆರಡು ಕಿಲೋಮೀಟರ್ ಮುಂದೆ ಹೋದರೆ ಕರ್ಮಜೆ ಎಂಬ ಊರು ಸಿಗುತ್ತದೆ. ಕರ್ಮಜೆ ತಲುಪಿದ ಮೇಲೆ ಅಲ್ಲಿ ಇಲ್ಲಿ ಕೆಲವು ಮನುಷ್ಯರು ಕಂಡರೂ ಕಾಣಬಹುದು. ಮುಂದೆ ಹೆಬ್ಬಾರ ಹಿತ್ಲು ಬರುತ್ತದೆ. ಅಲ್ಲಿಂದ ಮುಂದೆ ಗುಡ್ಡೆ ಏರಿದರೆ, ಸಮತಟ್ಟಾದ ಜಾಗವೊಂದರಲ್ಲಿ ಬೆಣಚು ಕಲ್ಲುಗಳ ನಡುವೆ ಕೂತ್ಕುಂಜ ಶಾಲೆ. ಅಂದರೆ ವಾಟೆಕಜೆಯಿಂದ ಏನಿಲ್ಲವೆಂದರೂ ಆರು ಕಿಮೀ ನಡೆಯಬೇಕು. ಆ ಶಾಲೆಗೆ ಸೇರಿಸುವ ಅಪ್ಪ ಅಮ್ಮನ ಮಾತು ಕೇಳಿ ನನಗೆ ಸಂಕೋಚ, ಭಯ, ಕುತೂಹಲ ಮತ್ತು ಆಸೆ ಎಲ್ಲ ಉಂಟಾಯಿತು. ಹುಳಗಳನ್ನು ಬಿಟ್ಟು ಬೇರೆ ಮನುಷ್ಯರನ್ನು ನೋಡಲು ಸಾಧ್ಯವಾಗುವ ಏಕೈಕ ಸ್ಥಳವಾದ ಆ ಶಾಲೆಯ ಬಗ್ಗೆ ನಾನು ಏನೇನು ಯೋಚಿಸುತ್ತಿದ್ದೆನೋ ಈಗ ನಿಮಗೆ ಹೇಳಲಾರೆ.
ಬಿಳಿಮಲೆಯವರ ಪೋಷಕರಾದ ಬಿ.ಶೇಷಪ್ಪ ಗೌಡ ಮತ್ತು ಗಿರಿಜಾ
ಸರಿ. ಶಾಲೆಗೆ ಹೊರಡುವ ಸಕಲ ಸಿದ್ಧತೆಗಳಾದವು. ಜೂನ್ ತಿಂಗಳ ಒಂದು ಮುಂಜಾನೆ ಅಪ್ಪ ನನ್ನನ್ನು ಪಂಜ ಎಂಬ ನಾಲ್ಕಂಗಡಿಗಳ ಪೇಟೆಗೆ ಕರೆದೊಯ್ಯುವುದಾಗಿ ಹೇಳಿದರು. ನಾನು ಸಿದ್ಧನಾದೆ. ಬಂಟಮಲೆಯ ಸೆರಗಿನಿಂದ ಇಳಿದು, ಕಕ್ಯಾನ ದಾಟಿ, ಪೂನಡ್ಕದಲ್ಲಿ ಕುಪ್ಪಳಿಸಿ, ಜಳಕದ ಹೊಳೆದಾಟಿ, ದೇವಸ್ಥಾನ ಗುಡ್ಡೆ ಹತ್ತಿ ಇಳಿದು, ಕುದ್ವದ ಗದ್ದೆ ಪುಣಿಗಳನ್ನು ದಾಟಿ ಮುಂದೆ ಹೋದಾಗ ದೂರದಿಂದ ಪಂಜ ಕಾಣಿಸಿತು. ಆ ಪೇಟೆಯೇ ಆಗಿನ ನನ್ನ ಮಾಯಾನಗರಿ. ಮಧ್ಯದಲ್ಲಿ ಕೆಂಪನೆಯ ಕೆಸರು ತುಂಬಿದ ರಸ್ತೆ. ಅದರ ಎಡ ಬಲಗಳಲ್ಲಿ ಒಂದೆರಡು ಅಂಗಡಿಗಳು. ಅಲ್ಲಿಯ ‘ಮರಿಯಾ ಮಹಲ್’ ಎಂಬ ಅಂಗಡಿಯಲ್ಲಿ ಕುಳಿತಿದ್ದ ದರ್ಜಿಯ ಬಳಿ ತಂದೆ ನನ್ನನ್ನು ಕರೆದೊಯ್ದರು. ‘ಈತ ನನ್ನ ಮಗ, ಸದ್ಯ ಶಾಲೆ ಸೇರುವವನಿದ್ದಾನೆ. ಇವನಿಗೆ ಎಷ್ಟು ಸಲ ಹಾಕಿದರೂ ಹರಿದು ಹೋಗದಂಥ ದಪ್ಪ ಬಟ್ಟೆಯೊಂದರಿಂದ ಅಂಗಿಯೂ, ಅದಕ್ಕಿಂತ ಇನ್ನೂ ಸ್ವಲ್ಪ ದಪ್ಪದ ಬಟ್ಟೆಯಿಂದ ಚೆಡ್ಡಿಯೊಂದನ್ನು ಹೊಲಿದುಕೊಡಬೇಕು’ ಎಂದೂ ಕೇಳಿಕೊಂಡರು. ಜೊತೆಗೆ ಈಗ ಸುಮಾರು 6 ಕಿ.ಮೀ. ದಿನನಿತ್ಯ ನಡೆದು ಚೀಲ ಹೆಗಲಿಗೇರಿಸಿಕೊಂಡು ಶಾಲೆಗೆ ಹೋಗಬೇಕಾಗಿರುವುದರಿಂದ ಅಂಗಿಯ ಹೆಗಲ ಭಾಗದಲ್ಲಿ ಅದು ಬೇಗ ಹರಿದು ಹೋಗಿ ಬಿಡುವ ಸಾಧ್ಯತೆ ಇರುವುದರಿಂದ, ಆ ಭಾಗಗಳಲ್ಲಿ ಒಂದೆರಡು ಪಟ್ಟಿ ಹೆಚ್ಚಿಗೆ ಇರಿಸಬೇಕೆಂದೂ ಹೇಳಿದರು. ಎಷ್ಟು ಮಣ್ಣಾದರೂ ಕಾಣಬಾರದೆಂಬ ಉದ್ದೇಶದಿಂದ ಮಣ್ಣಿನ ಬಣ್ಣದ ಬಟ್ಟೆಯನ್ನೇ ಆರಿಸಲಾಯಿತು. ದರ್ಜಿ ಅಳತೆ ತಗೆದ, ಕಿವಿಯಲ್ಲಿದ್ದ ಬಣ್ಣದ ಪೆನ್ಸಿಲ್ ತೆಗೆದು ಏನೇನೋ ಬರೆದುಕೊಂಡ. ಒಂದು ವಾರದ ಒಳಗೆ ಅಂಗಿ-ಚಡ್ಡಿ ಸಿದ್ಧವಾಗುತ್ತದೆ ಎಂದೂ ಹೇಳಿದ. ಅಪ್ಪ ಮತ್ತೆ ಹಿಂದೆ ಬರುತ್ತಾ ಸೋಡಾ ಶರಬತ್ ಕೊಡಿಸಿದರು, ಅಕ್ರೋಟ್ ಭಟ್ಟರ ಅಂಗಡಿಯಿಂದ ಅಕ್ರೋಟ್ ಕೊಡಿಸಿದರು. ‘ಪರವಾಗಿಲ್ಲ ನನ್ನ ಅಪ್ಪ ಅಂತ’ ಅಂದುಕೊಂಡೆ. ಪಂಜದಂತಹ ದೊಡ್ಡ ಪೇಟೆಯಲ್ಲಿ ಓಡಾಡುವ, ಅವರಿವರಿಂದ ನಮಸ್ಕಾರ ಗಿಟ್ಟಿಸುವ ಅಪ್ಪನ ಬಗ್ಗೆ ಭಾರೀ ಗೌರವವೂ ಮೂಡಿತು. ಮತ್ತೆ ಪಂಜದಿಂದ ಬಂಟಮಲೆಯ ಮಡಿಲು ಸೇರಿದಾಗ ಮಾಯಾನಗರಿ ಬಿಟ್ಟು ಬಂದ ವಿಷಾದ, ಜೊತೆಗೆ ಕಾಣಿಸಿದ ವಿವಿಧ ಬಗೆಯ ಮನುಷ್ಯರ ಚಿತ್ರಗಳು ನೆನಪಿನ ತುಂಬ. ಅಪ್ಪ ಎಷ್ಟು ದೊಡ್ಡ ಜನ ಎಂಬುದನ್ನು ಅಮ್ಮನಿಗೆ ವಿವರಿಸಿ ಹೇಳಿ, ಅಪ್ಪನ ಬಗ್ಗೆ ಆಕೆ ಹೆಮ್ಮೆ ಪಟ್ಟುಕೊಳ್ಳುವಂತೆ ಮಾಡಿದೆ.
ಬಿಳಿಮಲೆಯವರ ನಿವಾಸ
ವಾರದ ಹೊತ್ತಿಗೆ ಅಪ್ಪ ಮತ್ತೆ ಆ ಜಾತಕ ಬರೆದ ಪುಣ್ಯಾತ್ಮನಲ್ಲಿಗೆ ಹೋಗಿ ‘‘ಹೇಗೂ ಮಗನಿಗೆ ವಿದ್ಯಾಯೋಗ ಇಲ್ಲ. ಆದರೂ ಜಾತಕ ನೋಡಿ ಒಳ್ಳೆ ದಿನ ಗೊತ್ತು ಮಾಡಿಕೊಡಿರಿ’’ ಎಂದು ಬೇಡಿಕೊಂಡ ಪ್ರಕಾರ ಆತ ಮತ್ತೆ ಗ್ರಹಗತಿ ಎಲ್ಲಾ ಲೆಕ್ಕ ಹಾಕಿ, ಆಗಸ್ಟ್ ತಿಂಗಳಲ್ಲಿ ಒಂದು ದಿನ ಗೊತ್ತು ಮಾಡಿಕೊಟ್ಟು, ಒಳ್ಳೆಯದಾಗಲಿ ಎಂದು ಹರಸಿದ.
ನಿರೀಕ್ಷಿಸಿದಂತೆ ಶಾಲೆಗೆ ಸೇರುವ ಮುನ್ನಾ ದಿನ ಹೊಸ ಅಂಗಿ-ಚೆಡ್ಡಿ ಬಂತು. ಆದರೆ ಅದಕ್ಕೆ ಆತ ಇಸ್ತ್ರಿ ಮಾಡಿರಲಿಲ್ಲ. ಇಸ್ತ್ರಿ ಹಾಕಿದ ಅಂಗಿ ಹೇಗೆ ಗರಿ ಗರಿಯಾಗಿ ಇರುತ್ತದೆ ಎಂಬುದನ್ನು ಪಂಜದಲ್ಲಿ ನೋಡಿದ್ದ ನನಗೆ ಒಂದು ಉಪಾಯ ಹೊಳೆಯಿತು. ನಾನೇ ಅಂಗಿ-ಚಡ್ಡಿಗಳನ್ನು ಚೆನ್ನಾಗಿ ಮಡಚಿದೆ. ಪಂಜದಿಂದ ಆಗೀಗ ಅಪ್ಪ ತರುತ್ತಿದ್ದ ಆಗಿನ ‘ನವಭಾರತ’ ಪತ್ರಿಕೆಯಲ್ಲಿ ಅದನ್ನು ಇರಿಸಿ, ಸ್ವಲ್ಪ ಸ್ಥೂಲಕಾಯರಾಗಿದ್ದ ಅಪ್ಪನನ್ನು ಅದರ ಮೇಲೆ ಕುಳಿತುಕೊಳ್ಳಲು ವಿನಂತಿಸಿಕೊಂಡೆ. ಅದಕ್ಕೊಪ್ಪಿದ ಅಪ್ಪ ಸಮಯ ಸಿಕ್ಕಾಗಲೆಲ್ಲ ಅದರ ಮೇಲೆ ಕುಳಿತು ‘ಕುಂಡೆ ಇಸ್ತ್ರಿ’ಗೆ ಸಹಕರಿಸಿದ್ದರು. ಅಮ್ಮ ಅದಾವುದೊ ಹಳೆಯ ಕತ್ತರಿಯಿಂದ ನನ್ನ ನೆತ್ತಿ ಸಿಗಿಯುವ ಹಾಗೆ ಕೂದಲನ್ನು ಕತ್ತರಿಸಿದರು. ‘ನಿನ್ನ ತಲೆ ಇಲಿ ತಿಂದಂತೆ ಕಾಣುತ್ತಿದೆ’ ಅಂತ ಅಪ್ಪ ತಮಾಷೆ ಮಾಡುತ್ತಿದ್ದರು.
ಅಂತೂ ಸಕಲ ಸಿದ್ಧತೆಗಳೊಂದಿಗೆ ಆ ದಿನ ಶಾಲೆಗೆ ಹೊರಡಲು ಸಿದ್ಧವಾದೆ. ಎಲ್ಲಕ್ಕಿಂತ ಕಾತರ ಅಮ್ಮನದಾಗಿತ್ತು. ‘ಮಗುವನ್ನು ಶಾಲೆವರೆಗೂ ಕೈ ಹಿಡಿದುಕೊಂಡು ಕರೆದುಕೊಂಡು ಹೋಗಬೇಕು. ಅವ ಹಿಂದೆ ಬರುವಾಗ ಹೊಳೆವರೆಗೆ ಬರಲಿ, ಹೊಳೆ ದಾಟಿಸಲು ನಾನಿದ್ದೇನೆ’ ಅಂತ ಅಪ್ಪನಿಗೆ ಹೇಳುತ್ತಿದ್ದರು. ನಾನು ಹೊರಡಲು ಸಿದ್ಧವಾದೆ. ನವಭಾರತದ ಕಟ್ಟೊಳಗಿಂದ ಅಂಗಿ-ಚಡ್ಡಿಗಳನ್ನು ತೆಗೆಯತೊಡಗಿದ್ದಂತೆ ನನ್ನ ಕೈಕಾಲುಗಳೆಲ್ಲ ತಣ್ಣಗಾಗಿ ಬಿಟ್ಟಿತು. ಅಪ್ಪನ ಕುಂಡೆ ಇಸ್ತ್ರಿಯ ಪರಿಣಾಮವಾಗಿ ನವಭಾರತ ಪತ್ರಿಕೆಯ ಅಕ್ಷರಗಳೆಲ್ಲ ನನ್ನ ಹೊಸ ಅಂಗಿಯ ಮೇಲೆ ಅಕರಾಳ-ವಿಕರಾಳವಾಗಿ ಮೂಡಿ ಹೊಸ ವಿನ್ಯಾಸವೊಂದು ಸಿದ್ಧಗೊಂಡಿತ್ತು. ಬಳಬಳನೆ ಕಣ್ಣೀರು ಉರುಳತೊಡಗಿತು. ಮೆಲ್ಲನೆ ಅಂಗಿಯ ಮೇಲೆ ಕೈಯಾಡಿಸಿದೆ. ಪತ್ರಿಕೆ ಯ ಶಾಯಿ ಇನ್ನಷ್ಟು ಹರಡಿಕೊಂಡಿತು. ‘‘ನಿನ್ನ ಹಣೆಯಲ್ಲಿ ವಿದ್ಯೆ ಬರೆದಿಲ್ಲ’’ ಎಂಬ ಅಪ್ಪನ ಉದ್ಗಾರ ಸ್ವಲ್ಪ ಗಡುಸಾಗಿಯೇ ಕೇಳಿತು.
ಆ ದರ್ಜಿ ಅದೇನು ಅಳತೆ ತೆಗೆದಿದ್ದನೋ ತಿಳಿಯದು. ಆತ ಹೊಲಿದ ಅಂಗಿ ಮೊಣಕಾಲಿನವರೆಗೂ ಚಾಚಿಕೊಂಡು ನನ್ನ ಹೊಸ ಚಡ್ಡಿಯನ್ನು ಮುಚ್ಚಿ ಹಾಕಿತ್ತು. ಹೊಸ ಚಡ್ಡಿ ಹೊರಜಗತ್ತಿಗೆ ಕಾಣದಾದದ್ದರ ಬಗ್ಗೆ ನನಗೆ ತುಂಬ ಅಸಮಾಧಾನವಾಯಿತು. ಆದರೆ ಅಪ್ಪ ಹೇಳಿದಂತೆ ಆತ ಅಂಗಿಯ ಭುಜದ ಭಾಗಕ್ಕೆ ಒಂದೆರಡು ಪಟ್ಟಿಗಳನ್ನು ಹೆಚ್ಚಿಗೆ ಸೇರಿಸಿದ್ದ. ಹಾಗಾಗಿ ಅದು ದಪ್ಪವಾಗಿ ಸುಮಾರಾಗಿ ನನ್ನ ಕಿವಿವರೆಗೆ ತಲುಪಿ ನಿಂತಿತ್ತು. ಒತ್ತಿದರೆ ಮೆತ್ತನಾಗುವ ಅದರ ಮೇಲೆ ಅಮ್ಮ ಕೊಟ್ಟ ಚೀಲ ಹೆಗಲಿಗೇರಿಸಿದೆ. ಮಳೆಗಾಲವಾದ್ದರಿಂದ ಅಮ್ಮ ನನ್ನ ಬೆನ್ನಿಗೆ ಗೊರಬೆಯೇರಿಸಿದರು. ಅದು ಅಮ್ಮನ ಗೊರಬೆಯಾದ್ದರಿಂದ ನನ್ನ ಸೈಜಿನದ್ದಾಗಿರಲಿಲ್ಲ. ಅಮ್ಮ ಗೊರಬೆಯ ಕೆಳಗಣ ಭಾಗವನ್ನು ಹರಿತವಾದ ಕತ್ತಿಯಿಂದ ಕತ್ತರಿಸಿ, ನನ್ನ ಎತ್ತರಕ್ಕೆ ಒಗ್ಗಿಸಲು ಪ್ರಯತ್ನಿಸಿದ್ದು ನಿಜ. ಆದರೂ ಆ ಗೊರಬೆ ತಲೆಯ ಮೇಲಿಂದ ಕೆಳಗಿನವರೆಗೆ ಚಾಚಿಕೊಂಡು ನಡೆದಾಗ ನೆಲಕ್ಕೆ ತಾಗಿ ಬರ ಬರನೆ ಸದ್ದು ಮಾಡುತ್ತಿತ್ತು. ಜೊತೆಗೆ ಕಾಡಲ್ಲಿ ನಡೆಯುವಾಗ ಜಿಗಣೆಗಳು ಗೊರಬೆಯ ಮೂಲಕ ಸುಲಭವಾಗಿ ನನ್ನ ಬೆನ್ನೇರಬಹುದು. ನಾನು ಸ್ವಲ್ಪ ಬಗ್ಗಿದರೆ ಗೊರಬೆಯ ಹಿಂಭಾಗ ನೆಲದಿಂದ ಮೇಲೆದ್ದು ಸದ್ದು ಕಡಿಮೆಯಾಗುತ್ತಿತ್ತು, ಜಿಗಣೆಗಳಿಂದ ತಪ್ಪಿಸಿಕೊಳ್ಳಬಹುದಿತ್ತು. ಹೇಗೋ ಸುಧಾರಿಸಿಕೊಂಡು, ಒಂದು ಕೈಯಲ್ಲಿ ಬುತ್ತಿ, ಇನ್ನೊಂದು ಕೈಯಲ್ಲಿ ಮೈಮೇಲೇರುವ ಸಹಸ್ರ ಸಂಖ್ಯೆಯ ಜಿಗಣೆಗಳನ್ನು ಉದುರಿಸಲು ಬಟ್ಟೆಯಲ್ಲಿ ಕಟ್ಟಿಕೊಂಡ ಉಪ್ಪು, ಉಬ್ಬಿದ ಹೆಗಲ ಮೇಲೆ ಚೀಲ, ಸ್ವಲ್ಪ ಬಗ್ಗಿದ ಬೆನ್ನಿನ ಮೇಲೆ ಗೊರಬೆ ಇರಿಸಿಕೊಂಡು, ಅಪ್ಪನ ಹಿಂದೆ ಹೆಜ್ಜೆ ಹಾಕುತ್ತಾ ಸುಮಾರು 6 ಕಿ.ಮೀ. ನಡೆದು 12 ಗಂಟೆ ಸುಮಾರಿಗೆ ಕೂತ್ಕುಂಜ ಶಾಲೆಗೆ ತಲುಪಿದೆ.
ಬಿಳಿಮಲೆಯವರ ಬಾಲ್ಯದ ಚಿತ್ರ
ಜಾತಕ ಬರೆದ ಜೋಯಿಸರು ತಿಳಿಸಿದಂತೆ ಆ ದಿವಸ ಬಹಳ ಒಳ್ಳೆಯ ದಿವಸವಾಗಿತ್ತು. ಆ ಕಾರಣಕ್ಕಾಗಿಯೇ ಶಾಲೆಗೆ ರಜೆ ಸಾರಲಾಗಿತ್ತು! ಈ ಅನಿಷ್ಟಕ್ಕೆ ಬೆದರಿದ ಅಪ್ಪ ದಿಗ್ಭ್ರಾಂತರಾಗಿದ್ದರು. ಅವರಲ್ಲಿ ಮಾತಿರಲಿಲ್ಲ. ನನ್ನ ತಲೆ ಸವರಿ ಮತ್ತೆ ವಾಟೆಕಜೆಗೆ ಹಿಂದಿರುಗಲು ಹೇಳಿ, ಪಂಜದ ಕಡೆ ನಡೆದರು. ನಾನು ಬಂದ ದಾರಿಯಲ್ಲಿ ಹಿಂದೆ ಬಂದೆ. ಸಮಯಕ್ಕೆ ಮುನ್ನ ಒಂಟಿಯಾಗಿಯೇ ಮನೆಗೆ ಹಿಂದಿರುಗಿದ ನನ್ನನ್ನು ಕಂಡ ಅಮ್ಮನ ಕಣ್ಣಲ್ಲೂ ನೀರು. ಆದರೆ ಈಗ ಅವೆಲ್ಲ ನೆನಪು ಮಾತ್ರ ಯಾರೋ ಬರೆದ ಜಾತಕವನ್ನು ನಂಬಿದ್ದರೆ, ನನಗೆ ವಿದ್ಯೆಯೇ ದೊರಕುತ್ತಿರಲಿಲ್ಲ.
(ಮುಂದುವರಿಯುವುದು)