ಓ ಮೆಣಸೇ...
ಭಾರತದಂತಹ ದೊಡ್ಡ ದೇಶದಲ್ಲಿ ಒಂದೆರಡು ಅತ್ಯಾಚಾರ ಪ್ರಕರಣಗಳು ಸಾಮಾನ್ಯ -ಸಂತೋಷ್ ಗಂಗ್ವಾರ್, ಕೇಂದ್ರ ಸಚಿವ
ಅತ್ಯಾಚಾರಗಳನ್ನು ಅವಮಾನ ಎಂದು ಸರಕಾರ ಅರಿತುಕೊಳ್ಳುವವರೆಗೆ ಘಟನೆಗಳು ನಡೆಯುತ್ತಲೇ ಇರುತ್ತವೆ.
--------------------
ಕ್ರೈಸ್ತ ಧರ್ಮ ಪ್ರಚಾರ ಮಾಡುವ ಮಿಷನರಿಗಳು ಈ ದೇಶದ ಏಕತೆ ಮತ್ತು ಸಾರ್ವಭೌಮತೆಗೆ ಅಪಾಯಕಾರಿ -ಭರತ್ ಸಿಂಗ್, ಸಂಸದ
ಅವರು ಮಾಡುವ ಸೇವೆಯನ್ನು ನೀವೇ ಯಾಕೆ ಮಾಡಬಾರದು?
---------------------
ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರತಿಭಟನೆಗಳು ಹೆಚ್ಚಿವೆ ಎಂದರೆ ಅದರರ್ಥ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರುತ್ತದೆ ಎಂದಲ್ಲವೇ? -ವೀರಪ್ಪ ಮೊಯ್ಲಿ, ಸಂಸದ
ಅದಕ್ಕಾಗಿ ಪ್ರತಿಭಟನೆಗಳನ್ನು ದಿಲ್ಲಿಯಲ್ಲಿ ಕುಳಿತು ಪ್ರಾಯೋಜಿಸಿದ್ದೀರಿ ಎಂದಾಯಿತು.
---------------------
ಬಿಜೆಪಿ ನಾಯಕರು ಅಸಂಬದ್ಧ ಮಾತುಗಳಿಂದ ಮೀಡಿಯಾಕ್ಕೆ ಮಸಾಲೆಯಾಗಬಾರದು - ನರೇಂದ್ರ ಮೋದಿ, ಪ್ರಧಾನಿ
ಕೋಳಿಯನ್ನು ಕೇಳಿ ಮಸಾಲೆ ಅರೆಯುವುದಿಲ್ಲ.
---------------------
ರಾಜ್ಯದಲ್ಲಿ ಸದ್ಯ ಕುರುಕ್ಷೇತ್ರ ಯುದ್ಧ ನಡೆಯುತ್ತಿದೆ. ಇದರಲ್ಲಿ ಪಾಂಡವರೇ ಗೆಲ್ಲಲಿದ್ದಾರೆ - ಶ್ರೀರಾಮುಲು, ಸಂಸದ
ಅದಕ್ಕೆ ಮೊದಲು ದ್ರೌಪದಿ ವಸ್ತ್ರಾಪಹರಣ, ವನವಾಸಗಳನ್ನೆಲ್ಲ ಪಾಂಡವರು ಅನುಭವಿಸುವುದಿದೆಯಲ್ಲ?
---------------------
ಜಾಣ ಕುರುಡು, ಜಾಣ ಕಿವುಡಿಗೆ ವಿಶ್ವದಲ್ಲಿ ಎಲ್ಲಿಯೂ ಔಷಧವಿಲ್ಲ - ಸಿಟಿ ರವಿ, ಶಾಸಕ
ಈಗಾಗಲೇ ಔಷಧಿಗಾಗಿ ಹುಡುಕಿ ನಿರಾಶನಾಗಿರುವ ರೋಗಿಯ ಅಳಲು.
---------------------
ಸದ್ಯದಲ್ಲೇ ನಕ್ಸಲ್ ಸಿದ್ಧಾಂತವನ್ನು ದೇಶದಿಂದ ನಿರ್ಮೂಲನ ಮಾಡಲಿದ್ದೇವೆ -ರಾಜನಾಥ್‌ಸಿಂಗ್, ಕೇಂದ್ರ ಸಚಿ
ಆಹಾರ, ಆರೋಗ್ಯ, ಶಿಕ್ಷಣ ಕೇಳಿದವರ ತಲೆಗೆ ನಕ್ಸಲೀಯರ ಹಣೆಪಟ್ಟಿ ಕಟ್ಟುವ ಹುನ್ನಾರವೇ?
---------------------
ಮುಖ್ಯಮಂತ್ರಿ ಆಯ್ಕೆಯಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಕರ್ನಾಟಕದ ಹೈಕಮಾಂಡ್ ಸಿದ್ದರಾಮಯ್ಯ ಎನ್ನುವ ಆರೋಪಗಳಿವೆ.
---------------------
ಮುಂದೆ ನಾನು ಕೂಡ ಮುಖ್ಯಮಂತ್ರಿಯಾಗುತ್ತೇನೆ - ಡಿ.ಕೆ. ಶಿವಕುಮಾರ್, ಸಚಿವ
ಯಾವ ಪಕ್ಷದಿಂದ ಎನ್ನುವುದನ್ನು ಹೇಳಿದ್ದರೆ ಚೆನ್ನಾಗಿತ್ತು.
---------------------
ಯಡಿಯೂರಪ್ಪರಿಗೆ ಮಠ, ವೀರಶೈವ, ಲಿಂಗಾಯತ ಬಗ್ಗೆ ಏನೂ ಗೊತ್ತಿಲ್ಲ - ಸಿ.ಎಂ. ಇಬ್ರಾಹೀಂ, ಮಾಜಿ ಸಚಿವ
ಅವೆಲ್ಲ ಓಟಿನ ಖಜಾನೆಗಳು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ.
---------------------
ಭಾರತೀಯರು ಮತ್ತು ಚೀನಿಯರು ಪರಸ್ಪರ ಭಾಷೆ ಕಲಿಯುವುದು ಅಗತ್ಯ - ಸುಶ್ಮ್ಮಾ ಸ್ವರಾಜ್, ಕೇಂದ್ರ ಸಚಿವೆ
ಪರಸ್ಪರ ನಿಂದಿಸಿಕೊಳ್ಳುವುದಕ್ಕಾಗಿಯಾದರೂ.
---------------------
ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ - ತನ್ವೀರ್ ಸೇಠ್, ಸಚಿವ
ಆಸೆ ದುಃಖಕ್ಕೆ ಮೂಲ ಎಂದಿದ್ದಾನೆ ಬುದ್ಧ.
---------------------
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಬಾಲ ಸುಟ್ಟ ಬೆಕ್ಕು - ಪ್ರಹ್ಲಾದ್ ಜೋಷಿ, ಸಂಸದ
ಈ ಬೆಕ್ಕು ಸುಟ್ಟಿರುವುದು ಯಾರ ಬಾಲವನ್ನು ಎನ್ನುವುದನ್ನಾದರೂ ಹೇಳಬಾರದೇ?
---------------------
ಕಾಂಗ್ರೆಸ್ ಸಮುದ್ರ ಇದ್ದಂತೆ. ಈಜಲು ಸಾಧ್ಯವಿಲ್ಲದವರು ಮಾತ್ರ ಇಲ್ಲಿಂದ ಹೊರಹೋಗುತ್ತಾರೆ - ಎಚ್.ಎಂ. ರೇವಣ್ಣ, ಸಚಿವ
ಹೊರಹೋಗುವುದಲ್ಲ, ಸಮುದ್ರದೊಳಗಿರುವ ಶಾರ್ಕ್‌ಗಳ ಹೊಟ್ಟೆಯ ಒಳ ಹೋಗುವುದು.
---------------------
ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದಾಗಲೇ ನನ್ನ ಯೋಗ್ಯತೆ ಗೊತ್ತಾಯಿತು - ಅಂಬರೀಷ್, ಮಾಜಿ ಸಚಿವ
ಈಗಲಾದರೂ ಗೊತ್ತಾದದ್ದು ಜನರ ಭಾಗ್ಯ.
---------------------
ನಾನು ಅವಕಾಶವಾದಿ ರಾಜಕಾರಣಿ ಅಲ್ಲ - ದೇವೇಗೌಡ, ಮಾಜಿ ಪ್ರಧಾನಿ
ಬರೇ ಅವಕಾಶವಾದಿ ಅಪ್ಪ ಎಂದು ಕರೆಯೋಣವೇ?
---------------------
ನನಗೆ ಭ್ರಮೆಯೇ ಇಷ್ಟ - ಉಪೇಂದ್ರ, ನಟ
ಭ್ರಮೆ ಹರಿದ ಬಳಿಕದ ಹತಾಶೆಯ ಮಾತು.
---------------------
ಪಾಶ್ಚಾತ್ಯ ಪ್ರೇರಿತ ಆರ್ಥಿಕ ಚಿಂತನೆಗಳು ಭಾರತಕ್ಕೆ ಒಗ್ಗಲಾರದು - ಮೋಹನ್ ಭಾಗವತ್, ಆರೆಸ್ಸೆಸ್ ಮುಖ್ಯಸ್ಥ
ಮನು ಪ್ರೇರಿತ ಆರ್ಥಿಕ ಚಿಂತನೆಗಳ ಮರು ಅನುಷ್ಠಾನದ ಸಂಚು.
---------------------
ಮಹಿಳೆಯರ ಲೈಂಗಿಕ ದುರ್ಬಳಕೆಗೆ ಸಂಸತ್ ಕೂಡ ಹೊರತಾಗಿಲ್ಲ - ರೇಣುಕಾ ಚೌಧರಿ, ಮಾಜಿ ಕೇಂದ್ರ ಸಚಿವೆ
ರಾಜಕಾರಣವೆಂದರೆ ದುರ್ಬಳಕೆಯ ಇನ್ನೊಂದು ಹೆಸರು.
---------------------
ಟಿಕೆಟ್ ಕೈ ತಪ್ಪಿದಾಗ ಕಾರ್ಯಕರ್ತರು ಆಕ್ರೋಶಗೊಳ್ಳುವುದು ಸಹಜ - ನಳಿನ್ ಕುಮಾರ್ ಕಟೀಲು, ಸಂಸದ
ಜಿಲ್ಲೆಗೆ ಬೆಂಕಿ ಹಚ್ಚಿದಷ್ಟು ಸುಲಭವಲ್ಲ, ಆ ಆಕ್ರೋಶವನ್ನು ತಣಿಸುವುದು.
---------------------
ಝಮೀರ್ ಅಹ್ಮದ್ ಖಾನ್ ಒಬ್ಬ ಅನಾಗರಿಕ. ಆತನ ಮಾತುಗಳಿಗೆ ಉತ್ತರಿಸಿದರೆ ನಾನೂ ಅನಾಗರಿಕನಾಗುತ್ತೇನೆ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಎಲ್ಲ ಒಂದು ಕಾಲದಲ್ಲಿ ತಮ್ಮ ಬಳಿಕ ಕಲಿತ ಮಾತುಗಳಂತೆ.
---------------------
ಭ್ರಷ್ಟಾಚಾರದಲ್ಲಿ ಯಡಿಯೂರಪ್ಪರಿಗೆ ಗೋಲ್ಡ್ ಮೆಡಲ್, ಸಿ.ಟಿ. ರವಿಗೆ ಸಿಲ್ವರ್ ಮೆಡಲ್ ಸಿಗಬೇಕು - ಜೈರಾಮ್ ರಮೇಶ್, ಕೇಂದ್ರದ ಮಾಜಿ ಸಚಿವ
ನನಗೊಂದು ಕಂಚಿನ ಮೆಡಲ್ ಇರಲಿ ಎಂದರಂತೆ ಈಶ್ವರಪ್ಪ.
---------------------
ಯಡಿಯೂರಪ್ಪರನ್ನು ಜೈಲಿಗೆ ಕಳುಹಿಸಿದ್ದೇ ಸಂಸದ ಪ್ರಹ್ಲಾದ್ ಜೋಷಿ ಮತ್ತವರ ತಂಡ - ವಿನಯ್ ಕುಲಕರ್ಣಿ, ಸಚಿವ
ಅದಕ್ಕಾಗಿ ಪ್ರಹ್ಲಾದ್ ಜೋಷಿ ತಂಡಕ್ಕೆ ಮತ ಹಾಕೋಣವೇ?
---------------------
ದಲಿತರ ಹಕ್ಕುಗಳನ್ನು ರಕ್ಷಿಸುವಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ವಿಫಲವಾಗಿವೆ. -ಮಾಯಾವತಿ, ಬಿಎಸ್ಪಿ ನಾಯಕಿ
ದಲಿತರ ಹಕ್ಕುಗಳನ್ನು ಜೆಡಿಎಸ್ ಎಲ್ಲಿ, ಹೇಗೆ ರಕ್ಷಿಸಿದೆ ಎನ್ನುವುದನ್ನೂ ವಿವರಿಸಿ..