ಇನ್ನು ಮುಂದೆ ವಿವಿ ಪ್ರಾಧ್ಯಾಪಕರಿಗೆ ಪಿಎಚ್‌ಡಿ ಕಡ್ಡಾಯ !

Update: 2018-05-01 03:44 GMT

ಹೊಸದಿಲ್ಲಿ, ಮೇ 1: ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಬೋಧಕ ಸಿಬ್ಬಂದಿಯ ಕನಿಷ್ಠ ವಿದ್ಯಾರ್ಹತೆಯನ್ನು 2021ರಿಂದ ಪಿಎಚ್‌ಡಿಗೆ ನಿಗದಿಪಡಿಸಲು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ ನಿರ್ಧರಿಸಿದೆ.

ಇದು ವಿವಿ ಬೋಧನೆಯ ಪ್ರವೇಶ ಹಂತದ ಬೋಧಕ ಹುದ್ದೆಯಾದ ಸಹಾಯಕ ಪ್ರಾಧ್ಯಾಪಕರಿಗೂ ಅನ್ವಯವಾಗಲಿದೆ ಎಂದು ಕರಡು ನೀತಿಯಲ್ಲಿ ಸ್ಪಷ್ಟವಾಗಿದ್ದು, ಕರಡು ನೀತಿಯ ಪ್ರತಿ 'ಹಿಂದೂಸ್ತಾನ್ ಟೈಮ್ಸ್‌'ಗೆ ಲಭ್ಯವಾಗಿದೆ.

ಪ್ರಾಧ್ಯಾಪಕರು ಸೇವೆಗೆ ನಿಯೋಜನೆಯಾದ ತಕ್ಷಣ ಒಂದು ತಿಂಗಳ ಅವಧಿಯ ಕಡ್ಡಾಯ ತರಬೇತಿ ಇರುತ್ತದೆ. ಇದರ ಜತೆಗೆ ಸಮುದಾಯ ಅಭಿವೃದ್ಧಿ/ ಪಠ್ಯೇತರ ಚಟುವಟಿಕೆಗೆ ಮಾರ್ಗದರ್ಶನ ನೀಡಲು ಪ್ರತಿದಿನ ಎರಡು ಗಂಟೆ ಕಾಲ ಕಡ್ಡಾಯವಾಗಿ ವಿನಿಯೋಗಿಸಬೇಕಾಗುತ್ತದೆ.

ದೇಶದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಈ ಕ್ರಮಕ್ಕೆ ಮುಂದಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಯುಜಿಸಿ ಸದ್ಯದಲ್ಲೇ ಕನಿಷ್ಠ ವಿದ್ಯಾರ್ಹತೆಯನ್ನು ವ್ಯಾಖ್ಯಾನಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಪ್ರವೇಶ ಹಂತಕ್ಕೆ ಅಂದರೆ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ, ಸ್ನಾತಕೋತ್ತರ ಪದವಿ ಮತ್ತು ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ)ಯಲ್ಲಿ ಉತ್ತೀರ್ಣರಾಗಿರಬೇಕು.

ಸರ್ಕಾರ ಹೊಸ ವಿದ್ಯಾರ್ಹತೆ ಮತ್ತು ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಳಕ್ಕೆ ಸದ್ಯದಲ್ಲೇ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಪಿಎಚ್‌ಡಿ ಆಕಾಂಕ್ಷಿಗಳು ಎನ್‌ಇಟಿ ಅಥವಾ ಎಸ್‌ಇಟಿ ಉತ್ತೀರ್ಣರಾಗುವುದು ಕಡ್ಡಾಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News