ಕಿಚ್ಚು: ಕಿಚ್ಚು ಹಚ್ಚುವ ಕಾಡಿನ ಬದುಕು
ಇಲ್ಲಿ ಪ್ರೀತಿ ಇದೆ, ಆದರೆ ಹೆಸರೇ ಸೂಚಿಸುವಂತೆ ಅದಕ್ಕಿಂತ ಹೆಚ್ಚಾಗಿ ಕಿಚ್ಚು ಇದೆ. ಈ ಕಿಚ್ಚು ಯುವ ಜೋಡಿಗಳ ಪ್ರೀತಿಯ ನಡುವೆ ಹುಟ್ಟಿದ್ದಲ್ಲ. ಬದಲಾಗಿ ಜೀವನ ಪ್ರೀತಿಯ ನಡುವೆ ಹುಟ್ಟಿಕೊಂಡಿದ್ದು. ಕಾಡಿಗೆ ಹೊಂದಿಕೊಂಡಂತೆ ಬದುಕುವವರ ಕಷ್ಟಗಳಲ್ಲಿ ಹುಟ್ಟಿಕೊಂಡಿದ್ದು. ಅದನ್ನು ತಿಳಿಯುವ ಆಸಕ್ತಿ ಇದ್ದರೆ ಚಿತ್ರ ನೋಡಬಹುದು. ಚಿತ್ರದಲ್ಲಿ ಧ್ರುವ ಶರ್ಮರದ್ದು ಸೂರಿ ಎಂಬ ಮೂಕ ಯುವಕನ ಪಾತ್ರ. ಆದರೆ ಆತ ಕಾಡಿನೊಂದಿಗೆ ವೌನದಲ್ಲೇ ಮಾತನಾಡಬಲ್ಲ. ಕಾಡಿನ ಕುರಿತಾದ ಹೋರಾಟವನ್ನು ತಂದೆಯಿಂದ ಕಲಿತುಕೊಂಡ ಸೂರಿ ತಂದೆಯ ಕೊಲೆಯ ನಂತರ ನಕ್ಸಲರ ಜೊತೆಗೆ ಸೇರಿಕೊಳ್ಳುತ್ತಾರೆ. ಸೂರಿಯ ಜೋಡಿಯಾಗಿ ಆತನ ಬಾಲ್ಯ ಸ್ನೇಹಿತೆ ನಂದಿನಿಯೂ ಇರುತ್ತಾಳೆ. ನಂದಿನಿಯಾಗಿ ಅಭಿನಯ ನಟಿಸಿದ್ದಾರೆ. ಆಕೆಯೂ ಮೂಗಿ. ಹೋರಾಟದ ನಡುವೆಯೇ ಇವರಿಬ್ಬರ ಮದುವೆಯಾಗುತ್ತದೆ. ಮದುವೆಯಂದೇ ಹಳ್ಳಿಯಲ್ಲಿನ ಸೂರಿಯ ತಾಯಿತಂದೆಯ ಸಾವಾಗುತ್ತದೆ. ನಕ್ಸಲರ ಜೊತೆಗೆ ಸೇರಿಕೊಂಡ ನಂದಿನಿಯ ಬಗ್ಗೆ ಕೋಪ ಹೊಂದಿದ್ದ ಆಕೆಯ ಅಕ್ಕ ಪದ್ದು ಈಗಂತೂ ತುಂಬಾನೇ ಕೋಪಗೊಳ್ಳುತ್ತಾಳೆ. ಆದರೆ ಆಕೆಗೆ ತಿಳಿದಿರದ ಸತ್ಯವೊಂದಿರುತ್ತದೆ. ಅದು ಅರಿತುಕೊಂಡ ಮೇಲೆ ಪದ್ದು ಕೂಡ ನಂದಿನಿ ಮತ್ತು ಸೂರಿಯನ್ನು ತಾನು ದ್ವೇಷಿಸಿರುವುದಕ್ಕೆ ಪಶ್ಚಾತಾಪ ಪಡುತ್ತಾಳೆ. ಆಕೆ ಅರಿತುಕೊಂಡ ಸತ್ಯವೇನು ಎನ್ನುವುದೇ ಚಿತ್ರದ ಸತ್ವವಾಗಿರುತ್ತದೆ.
ನಂದಿನಿಯ ಅಕ್ಕ ಪದ್ದುವಿನ ಪಾತ್ರದಲ್ಲಿ ರಾಗಿಣಿ ಮತ್ತು ನಂದಿನಿಗೆ ಚಿಕಿತ್ಸೆ ನೀಡಲು ಬಂದು ಬುದ್ಧಿಮಾತುಗಳನ್ನು ಹೇಳುವ ಡಾಕ್ಟರ್ ಆಗಿ ಸುದೀಪ್ ನಟಿಸಿದ್ದಾರೆ. ಸ್ಟಾರ್ ಪಾತ್ರಗಳಾಗಿದ್ದರೂ ವೀಕ್ಷಕರ ಮೇಲೆ ಇವರ ಪಾತ್ರಗಳು ವಿಶೇಷ ಪರಿಣಾಮವೇನೂ ಬೀರುವುದಿಲ್ಲ. ಅದಕ್ಕೆ ಕಾರಣ ಇಬ್ಬರದೂ ಕಮರ್ಷಿಯಲ್ ವ್ಯಾಪ್ತಿಯನ್ನು ದಾಟಿದಂಥ ಪಾತ್ರಗಳು. ಕಾಫಿತೋಟದಲ್ಲಿ ಕೆಲಸ ಮಾಡುವ ಯುವತಿಯಾಗಿ ರಾಗಿಣಿ ಪಾತ್ರ ಮಾಡಿರುವುದನ್ನು ಮೆಚ್ಚಬಹುದು. ಆದರೆ ಅಂತ್ಯದಲ್ಲಿ ಆ ಪಾತ್ರ ಎಲ್ಲಿ ಹೋಯಿತೆಂದೇ ತಿಳಿಯದಂತಾಗುವುದು ದುರಂತ. ಅದೇ ರೀತಿ ವೈದ್ಯರಾಗಿ ಬರುವ ಸುದೀಪ್ ಪಾತ್ರಕ್ಕೆ ಬಿಲ್ಡಪ್‌ಗಳನ್ನು ನೀಡಿ ಕತೆ ಕೆಡಿಸಿಲ್ಲ ಎನ್ನುವುದನ್ನು ಮೆಚ್ಚಬಹುದು. ಆದರೆ ರಾತ್ರಿ ಹೊತ್ತಲ್ಲಿ ಬರುವ ಡಾಕ್ಟರ್ ಪಾತ್ರ ಬೆಳಕು ಹರಿಯುವ ಮುನ್ನ ಮರೆಯಾಗುವ ಕಾರಣ ಮನದಿಂದಲೂ ಮಾಯವಾಗುತ್ತಾರೆ. ಸಾಯಿಕುಮಾರ್ ಮತ್ತೆ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತದಲ್ಲಿ ಒಂದೆರಡು ಹಾಡುಗಳು ಆಕರ್ಷಕವಾಗಿವೆ. ನಕ್ಸಲ್ ಪಾತ್ರಧಾರಿ ಸುಚೇಂದ್ರ ಪ್ರಸಾದ್‌ರ ಡ್ಯಾನ್ಸ್ ಹೈಲೈಟ್ ಎನ್ನಬಹುದು! ನಿರ್ದೇಶಕ ಪ್ರದೀಪ್ ರಾಜ್ ಕೂಡ ಒಂದು ಪಾತ್ರಕ್ಕೆ ಜೀವನೀಡಿದ್ದು ನೈಜ ನಟನೆಯಿಂದ ಗಮನ ಸೆಳೆಯುತ್ತಾರೆ.
ಒಟ್ಟಿನಲ್ಲಿ ಕಾಡಿಗಾಗಿ ಹೋರಾಟ ಮಾಡುವ ಉಮೇದು ಉಂಟುಮಾಡುವಂಥ ಈ ಚಿತ್ರ ಸದಭಿರುಚಿಯ ಸಿನೆಮಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರೀತಿ, ಹೋರಾಟ ಎಲ್ಲವೂ ಅರ್ಥಪೂರ್ಣವಾಗಬೇಕಾದ ದಾರಿಯಲ್ಲಿ ಅರ್ಧ ಅಪೂರ್ಣದಂತೆ ಕಾಣುತ್ತದೆ. ಚಿತ್ರದಲ್ಲಿ ನಿಜ ಜೀವನದಲ್ಲಿ ಕಿವುಡ ಮತ್ತು ಮೂಕರಾಗಿರುವ ಧ್ರುವ ಮತ್ತು ಅಭಿನಯಾರನ್ನು ಅದೇ ರೀತಿ ತೋರಿಸಿರುವ ಅಗತ್ಯ ಏನಿತ್ತು ಎನ್ನುವುದನ್ನು ಸಿನೆಮಾ ಹೇಳುವುದಿಲ್ಲ. ವಿಭಿನ್ನ ಚಿತ್ರಗಳನ್ನು ಬಯಸುವ ವೀಕ್ಷಕರು ಖಂಡಿತ ಒಮ್ಮೆ ನೋಡಬಹುದಾದ ಚಿತ್ರ.
ತಾರಾಗಣ: ಧ್ರುವ ಶರ್ಮ,
ಅಭಿನಯಾ, ರಾಗಿಣಿ ದ್ವಿವೇದಿ,
ನಿರ್ದೇಶಕ: ಪ್ರದೀಪ್ ರಾಜ್
ನಿರ್ಮಾಪಕ: ರೂಬಿ ಶರ್ಮ