ಮೊದಲ ಬಾರಿಗೆ ಕಬ್ಬಿಣ ಪೂರ್ವ ಯುಗದ ರಥ ಪತ್ತೆ

Update: 2018-06-05 18:29 GMT

ಉತ್ತರಪ್ರದೇಶದ ಸನೌಲಿಯಲ್ಲಿ ಉತ್ಖನನ  

ಭಾರತದಲ್ಲೇ ಮೊದಲ ಬಾರಿಗೆ ಸಮಾಧಿ ಹೊಂಡದಲ್ಲಿ ಪೂರ್ವ ಕಬ್ಬಿಣ ಯುಗ(ಕಂಚು)ದ ರಥ ಪತ್ತೆಯಾಗಿದೆ. ಇದು ಮಹಾಭಾರತ ಅವಧಿಯ ಕಾಲದ ಕುರಿತ ಹಾಗೂ ಹರಪ್ಪಾ ಕಾಲದಲ್ಲಿ ಕುದುರೆಗಳ ಉಗಮದ ಬಗ್ಗೆ ಹೆಚ್ಚಿನ ಸಂಶೋಧನೆಗೆ ದಾರಿ ಮಾಡಿ ಕೊಟ್ಟಿದೆ ಎಂದು ಉತ್ತರಪ್ರದೇಶದ ಸಾನೌಲಿಯಲ್ಲಿ ಕಳೆದ ಮೂರು ತಿಂಗಳಿಂದ ಸಂಶೋಧನೆ ನಡೆಸುತ್ತಿರುವ ತಜ್ಞರು ಹೇಳಿದ್ದಾರೆ. ಸಮಾಧಿ ಹೊಂಡದಲ್ಲಿ ಪೂರ್ವ ಕಬ್ಬಿಣ ಯುಗ (ಕಂಚು)ದ ರಥವನ್ನು ಪುರಾತತ್ವ ತಜ್ಞರ ತಂಡ ಪತ್ತೆ ಹಚ್ಚಿದೆ. ಈ ಹಿಂದೆ ಕಾಖಿಗರಿ, ಕಾಲಿಬಂಗನ್ ಹಾಗೂ ಲೋಥಾಲ್‌ನಲ್ಲಿ ಉತ್ಖನನ ನಡೆಸಿದಾಗ ಸಮಾಧಿ ಹೊಂಡಗಳು ಪತ್ತೆಯಾಗಿದ್ದವು. ಆದರೆ, ರಥ ಪತ್ತೆಯಾಗುತ್ತಿರುವುದು ಇದೇ ಮೊದಲು. ಸನೌಲಿಯಲ್ಲಿ ಈ ಉತ್ಖನನ 2018ರಲ್ಲಿ ಆರಂಭವಾಗಿತ್ತು. 1985ರಲ್ಲಿ ಸ್ಥಾಪಿಸಲಾದ ಪುರಾತತ್ವ ಸಂಸ್ಥೆಯ ಎಸ್.ಕೆ. ಮುಂಜುಳಾ ನೇತೃತ್ವದ 10 ಸದಸ್ಯರ ತಂಡ ಈ ಉತ್ಖನನವನ್ನು ನಡೆಸಿತ್ತು. ಇದರ ಸಹ ನಿರ್ದೇಶಕಿ ಅರ್ವಿನ್ ಮಂಜುಳಾ. ಈ ಬಗ್ಗೆ ಮಾತನಾಡಿರುವ ಮಂಜುಳಾ, ‘‘ಪ್ರಾಚೀನ ಜಾಗತಿಕ ಚರಿತ್ರೆಯಲ್ಲಿ ಭಾರತಕ್ಕೆ ಸ್ಥಾನವಿದೆ. ನಮ್ಮ ಸಮಕಾಲೀನ ನಾಗರಿಕತೆಗಳಾದ ಮೆಸಪಟೋಮಿಯಾ, ಜಾರ್ಜಿಯಾ ಹಾಗೂ ಗ್ರೀಕ್‌ನಲ್ಲಿ ರಥಗಳು ದೊರಕಿವೆ. ಈ ಸಂಶೋಧನೆ ಮೂಲಕ ಇತರ ನಾಗರಿಕತೆಗಳಂತೆ ನಮ್ಮ ನಾಗರಿಕತೆಯಲ್ಲೂ ಪೂರ್ವ ಕಬ್ಬಿಣ ಯುಗದ ರಥ ಪತ್ತೆಯಾಗಿದೆ ಎಂದು ಹೇಳಬಹುದು. ಇದು ನಮ್ಮ ಚರಿತ್ರೆಗೆ ನೂತನ ಆಯಾಮ ನೀಡಿದೆ. ನಾವು ನಮ್ಮ ಭೂತಕಾಲದ ಬಗ್ಗೆ ಮರು ಚಿಂತಿಸಬೇಕಿದೆ.’’ ಎಂದು ಅವರು ಹೇಳಿದ್ದಾರೆ. ಇದು ಕಂಚಿನ ಯುಗದ ರಥವಾಗಿದ್ದರೆ, ಇದನ್ನು ಚಲಾಯಿಸಲು ಏನನ್ನು ಬಳಸುತ್ತಿದ್ದರು. ಎತ್ತು ಅಥವಾ ಕುದುರೆ? ‘‘ಇದು ಚರ್ಚಾರ್ಹ ವಿಚಾರ. ಅದು ಎತ್ತು ಅಥವಾ ಕುದುರೆ ಆಗಿರಬಹುದು. ಆದರೆ, ಪ್ರಾಥಮಿಕ ಸಂಶೋಧನೆಯ ಆಧಾರದಲ್ಲಿ ಹೇಳುವುದಾದರೆ ಈ ರಥಕ್ಕೆ ಕುದುರೆಯನ್ನು ಬಳಸುತ್ತಿದ್ದರು. ಈ ರಥ ಮೆಸಪಟೋಮಿಯಾದ ನಾಗರಿಕತೆಯಲ್ಲಿ ಕಂಡು ಬಂದ ರಥದಂತೇ ಇದೆ’’ ಎಂದು ಮಂಜುಳಾ ಹೇಳಿದ್ದಾರೆ.
 

Writer - *ವಿಸ್ಮಯ

contributor

Editor - *ವಿಸ್ಮಯ

contributor

Similar News