ದಿಲ್ಲಿ ದರ್ಬಾರ್

Update: 2018-08-18 18:57 GMT

ಶಾ ಅವರ ಸ್ವಾತಂತ್ರ ದಿನದ ಪ್ರಮಾದ

ಕಾಂಗ್ರೆಸ್ ಅಥವಾ ಇತರ ಪಕ್ಷದ ಯಾವುದೇ ನಾಯಕರು ಸಣ್ಣದೊಂದು ತಪ್ಪು ಮಾಡಿದರೂ ಅದನ್ನು ಎತ್ತಿಹಿಡಿದು ಟೀಕೆಗಳ ಸುರಿಮಳೆಗರೆಯುವುದರಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಎತ್ತಿದ ಕೈ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಅವರು ಸ್ವಾತಂತ್ರ ದಿನದಂದು ಮಾಡಿದಂಥ ಪ್ರಮಾದ ಯಾವುದೇ ಅಪರಾಧಕ್ಕಿಂತ ಕಡಿಮೆಯಾಗಿರಲಿಲ್ಲ. ಅದರಲ್ಲೂ ಈ ಪ್ರಮಾದ ನಡೆದಿರುವುದು ಸೋಕಾಲ್ಡ್ ರಾಷ್ಟ್ರೀಯವಾದಿಯಿಂದ ಎಂಬುದು ಅದಕ್ಕೆ ಮತ್ತಷ್ಟು ಮಹತ್ವ ನೀಡುತ್ತದೆ. ಸ್ವಾತಂತ್ರ ದಿನದಂದು ಧ್ವಜಾರೋಹರಣ ಮಾಡುವ ವೇಳೆ ಶಾ ತಪ್ಪಾಗಿ ಹಗ್ಗವನ್ನು ಎಳೆದ ಕಾರಣ ರಾಷ್ಟ್ರಧ್ವಜ ನೆಲಕ್ಕೆ ಬಿದ್ದಿತ್ತು. ಸ್ವತಂತ್ರ ಭಾರತದ ಇತಿಹಾಸದಲ್ಲೇ ದೂರದರ್ಶನ ವಾರ್ತಾವಾಹಿನಿ ಒಂದು ಪಕ್ಷದ ಸ್ವಾತಂತ್ರ ದಿನಾಚರಣೆಯ ನೇರ ಪ್ರಸಾರ ಮಾಡಿತ್ತು. ಹಾಗಾಗಿ ಶಾ ಮಾಡಿದ ಪ್ರಮಾದ ಸಾರ್ವಜನಿಕರ ಗಮನಕ್ಕೆ ಬಂದಿದ್ದು ಮಾತ್ರವಲ್ಲ, ಅಯ್ಯೋ ಎಂಥ ದುರಂತ ಎಂಬ ಉದ್ಗಾರಗಳು ಅಲ್ಲಿ ನೆರೆದಿದ್ದ ಜನರಿಂದ ಬಂದಿರುವುದೂ ದಾಖಲಾಗಿತ್ತು. ಈ ದೃಶ್ಯಾವಳಿ ವೈರಲ್ ಆದ ನಂತರ ಅದರ ಪರಿಣಾಮದ ಬಗ್ಗೆ ಭಯವನ್ನು ಹೊಂದಿದ್ದ ದೂರದರ್ಶನ ವಾರ್ತಾವಾಹಿನಿ ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆಗೆ ಕಳುಹಿಸಿದೆ. ಈ ರೀತಿ ಉದ್ಗಾರ ತೆಗೆದ ವ್ಯಕ್ತಿಯು ಕಾರ್ಯಕ್ರಮಕ್ಕೆ ಆಗಮಿಸಿದ್ದ ಓರ್ವ ಅತಿಥಿ ಎಂಬುದು ತನಿಖೆಯ ವೇಳೆ ತಿಳಿದುಬಂದಿದೆ. ಬಹುಶಃ ಆ ವ್ಯಕ್ತಿಯನ್ನು ಇನ್ನು ಮುಂದೆ ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸುವುದು ಅನುಮಾನವೇ ಸರಿ. ಆದರೆ ಧ್ವಜವನ್ನು ನೆಲಕ್ಕುರುಳಿಸಿದ ಶಾರ ವೀಡಿಯೊವನ್ನು ವಿರೋಧಿಗಳು ಬಳಸುವುದರಲ್ಲಿ ಯಾವುದೇ ಅನುಮಾನವಿಲ್ಲ.


ಪ್ರಿಯಾಂಕಾ ರಾಜಕೀಯ ಪ್ರವೇಶ

ಪ್ರಿಯಾಂಕಾ ಗಾಂಧಿ ವಾದ್ರಾ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸ್ಥಾನವನ್ನು ಹೊಂದದೆ ಇರಬಹುದು. ಆದರೆ ಪಕ್ಷವು ಸಂಕಷ್ಟಕ್ಕೆ ಸಿಲುಕಿದ ಸಂದರ್ಭದಲ್ಲಿ ರಕ್ಷಣೆಗೆ ಧಾವಿಸಿ ಸಲಹೆ, ಸೂಚನೆಗಳನ್ನು ನೀಡುವಲ್ಲಿ ಅವರು ಹಿಂದೆ ಬಿದ್ದಿಲ್ಲ. ಸದ್ಯ ಅವರ ರಾಜಕೀಯ ಪ್ರವೇಶಕ್ಕೆ ದಿನಗಣನೆ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಕೆಲದಿನಗಳ ಹಿಂದೆ ಮೃತಪಟ್ಟ ಡಿಎಂಕೆ ಪಕ್ಷದ ನಾಯಕ ಎಂ.ಕರುಣಾನಿಧಿ ಯವರ ಅಂತ್ಯಕ್ರಿಯೆಯ ವೇಳೆ ಪ್ರಿಯಾಂಕಾ ಉಪಸ್ಥಿತರಿದ್ದರು. ಅಷ್ಟು ಮಾತ್ರವಲ್ಲ ಈ ವರ್ಷ ಅವರು ಅನೇಕ ಬಾರಿ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗವ ಹಿಸಿದ್ದಾರೆ. ಸಕ್ರಿಯ ರಾಜಕಾರಣದಲ್ಲಿ ಅವರು ಭಾಗಿಯಾಗದಿದ್ದರೂ ಕಾಂಗ್ರೆಸ್‌ನ ಪ್ರಮುಖ ನಾಯಕರ ಜೊತೆ ಪ್ರಿಯಾಂಕಾ ನಿರಂತರ ಸಂಪರ್ಕವನ್ನು ಹೊಂದಿದ್ದಾರೆ ಮತ್ತು ಅವರ ಮಾತಿಗೆ ಪಕ್ಷದಲ್ಲಿ ಬಹಳಷ್ಟು ಬೆಲೆ ನೀಡಲಾಗುತ್ತದೆ.

ಪ್ರಿಯಾಂಕಾ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಊಹಾಪೋಹಗಳು ಇಂದು ನಿನ್ನೆಯದಲ್ಲ. ಒಂದು ವೇಳೆ ಪ್ರಿಯಾಂಕಾ ಮರೆಯಿಂದ ಆಚೆ ಬಂದು ಸಕ್ರಿಯ ರಾಜಕೀಯದಲ್ಲಿ ಭಾಗವಹಿಸಲು ಮುಂದಾದರೆ,ಈಗಷ್ಟೇ ರಾಜಕೀಯದಲ್ಲಿ ತಮ್ಮ ಕಾಲುಗಳನ್ನು ಊರಲು ಪ್ರಯತ್ನಿಸುತ್ತಿರುವ ಅವರ ಸಹೋದರ ರಾಹುಲ್ ಗಾಂಧಿಯ ಸ್ಥಿತಿ ಏನಾಗಬಹುದು ಎಂಬುದೇ ಕುತೂಹಲದ ವಿಷಯವಾಗಿದೆ.


ಸೂಕ್ಷ್ಮ ಸಮತೋಲನ

ಇತ್ತೀಚಿನ ದಿನಗಳಲ್ಲಿ ಗಳಿಸಿರುವ ಹಲವು ಸಫಲತೆಗಳ ಹೊರತಾಗಿಯೂ ರಾಹುಲ್ ಗಾಂಧಿ ಭಾರತೀಯ ರಾಜಕೀಯದಿಂದ ಕಲಿಯುವುದು ಇನ್ನೂ ಬಹಳಷ್ಟಿದೆ. ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ವಿರೋಧ ಪಕ್ಷದ ಅಭ್ಯರ್ಥಿಯ ಸೋಲು ಇದಕ್ಕೆ ಸಾಕ್ಷಿಯಾಗಿದೆ. ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ ಸದಸ್ಯೆ ವಂದನಾ ಚವ್ಹಾಣ್ ಅವರನ್ನು ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕೆ ಸ್ಪರ್ಧೆಗೆ ಆರಿಸುವ ವಿಷಯದಲ್ಲಿ ಎನ್‌ಡಿಎಯೇತರ ಪಕ್ಷಗಳು ಬಹುತೇಕ ಒಮ್ಮತಕ್ಕೆ ಬಂದಿದ್ದವು. ಆದರೆ ಕೊನೆಯ ಘಳಿಗೆಯಲ್ಲಿ ಆಕೆಯ ಹೆಸರನ್ನು ಕೈಬಿಡಲಾಯಿತು ಮತ್ತು ಕಾಂಗ್ರೆಸ್ ಬಿ.ಕೆ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಬೇಕಾಯಿತು. ಚವ್ಹಾಣ್ ಅವರ ಹೆಸರನ್ನು ಯಾಕೆ ಕೈಬಿಡಲಾಯಿತು ಎಂಬ ಬಗ್ಗೆ ಊಹಾಪೋಹಗಳು ಎದ್ದಿವೆ. ನರೇಂದ್ರ ಮೋದಿ ಸರಕಾರದ ಪ್ರತಿನಿಧಿಯನ್ನು ಭೇಟಿಯಾದ ನಂತರ ಎನ್‌ಸಿಪಿ ಮುಖಂಡ ಶರದ್ ಪವಾರ್, ಚವ್ಹಾಣ್ ಹೆಸರನ್ನು ಕೈಬಿಟ್ಟಿದ್ದಾರೆ ಎಂದು ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು, ಇದು ಎನ್‌ಸಿಪಿ ನಾಯಕ ಪ್ರಫುಲ್ ಪಟೇಲ್ ಅವರ ಕೆಲಸ ಎಂದು ಆರೋಪಿಸುತ್ತಿದ್ದಾರೆ. ಪ್ರಫುಲ್ ಪಟೇಲ್ ಈ ಹಿಂದೆ ಅಹಮದ್ ಪಟೇಲ್ ಅವರ ಮರುಚುನಾವಣೆಯ ವೇಳೆ ಡಬಲ್ ಗೇಮ್ ಆಡುವ ಮೂಲಕ ಟೀಕೆಗೊಳಗಾಗಿದ್ದರು. ಒಟ್ಟಾರೆಯಾಗಿ, ಗುಜರಾತ್‌ನಲ್ಲಿ ಅಹಮದ್ ಪಟೇಲ್ ಅವರನ್ನು ಗೆಲ್ಲಿಸುವಲ್ಲಿ ವಿರೋಧ ಪಕ್ಷಗಳು ಪ್ರದರ್ಶಿಸಿದ ಒಗ್ಗಟ್ಟು ಈ ಬಾರಿ ಉಪಸಭಾಪತಿ ಚುನಾವಣೆಯಲ್ಲಿ ಮಾಯವಾಗಿತ್ತು. ಇನ್ನು ರಾಹುಲ್ ಗಾಂಧಿ ರಾಜ್ಯಸಭೆಯಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲುವಂತೆ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಲ್ಲಿ ಕೇಳಲಿಲ್ಲ. ರಾಜಕೀಯ ಎಂಬುದು ವಿರೋಧಾಭಾಸಗಳನ್ನು ನಿರ್ವಹಿಸುವ ಒಂದು ಕಲೆ. ಈ ತಂತ್ರವನ್ನು ಗಾಂಧಿ ವಂಶದ ಕುಡಿ ಇನ್ನಷ್ಟೇ ಕರಗತ ಮಾಡಿಕೊಳ್ಳಬೇಕಿದೆ.


ವಿರೋಧ ಪಕ್ಷಗಳ ಇಷ್ಟದ ಗಡ್ಕರಿ?

ತನ್ನ ತಂದೆ ಎಲ್.ಎಂ ಸಿಂಘ್ವಿ ಅವರ ಲೇಖನಗಳು ಮತ್ತು ಭಾಷಣಗಳ ಸಂಗ್ರಹ ವನ್ನು ಹೊಂದಿರುವ ಪುಸ್ತಕದ ಬಿಡುಗಡೆ ಸಮಾರಂಭದ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಜಕೀಯ ನಾಯಕರನ್ನು ಅಭಿಷೇಕ್ ಮನು ಸಿಂಘ್ವಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಶ್ಲಾಘಿಸಿದರು. ಕೇಂದ್ರ ಸಚಿವ ನಿತಿನ್ ಗಡ್ಕರಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳ ಪೈಕಿ ಒಬ್ಬರಾಗಿದ್ದರು. ಅವರನ್ನು ಹೊಗಳಿದ ಸಿಂಘ್ವಿ, ಮೋದಿ ಸರಕಾರದಲ್ಲಿ ಇರುವ ಇತರ ಸಚಿವರಿಗಿಂತ ಗಡ್ಕರಿ ಹೆಚ್ಚು ಆನಂದದಿಂದ ಇರುತ್ತಾರೆ ಎಂದು ತಿಳಿಸಿದ್ದರು. ತಮ್ಮ ಮಾತುಗಳನ್ನು ಮುಂದುವರಿಸಿದ ಅವರು, ಗಡ್ಕರಿಯವರು ತಮ್ಮ ಮಾತಿಗೆ ಬದ್ಧವಾಗಿರುತ್ತಾರೆ ಎಂದು ತಿಳಿಸುವ ಜೊತೆಗೆ ನನ್ನ ಮಾತುಗಳು ನಾನು ಹೇಳಲು ಬಯಸಿದ್ದಕ್ಕಿಂತಲೂ ಹೆಚ್ಚಿನ ಅರ್ಥವನ್ನು ಹೊಂದಿದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ನೆರೆದಿದ್ದ ಗಣ್ಯರು ಸಿಂಘ್ವಿ ಮಾತಿಗೆ ಜೋರಾಗಿ ನಕ್ಕರೆ, ಮಾಜಿ ರೈಲ್ವೆ ಸಚಿವ ಮತ್ತು ಟಿಎಂಸಿ ಮುಖಂಡ ದಿನೇಶ್ ತ್ರಿವೇದಿ, ಗಡ್ಕರಿಯವರು ..........ಗೆ ಅತ್ಯಂತ ಸೂಕ್ತ ವ್ಯಕ್ತಿ. ಮಧ್ಯದಲ್ಲಿ ನಾನು ಖಾಲಿ ಜಾಗ ಬಿಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಬಹುಶಃ ಅವರ ಅರ್ಥ ಸದ್ಯದ ಸರಕಾರದಲ್ಲಿ ಗಡ್ಕರಿಯವರು ಇತರರಿಗಿಂತ ಹೆಚ್ಚು ಒಪ್ಪಬಹುದಾದ ವ್ಯಕ್ತಿ ಎಂದಾಗಿರಬಹುದು. 2019ರ ಚುನಾವಣೆಯಲ್ಲಿ ಮೋದಿ-ಶಾ ಜುಗಲ್‌ಬಂದಿ ವಿಫಲವಾದರೆ ಪ್ರಧಾನ ಮಂತ್ರಿ ಸ್ಥಾನಕ್ಕೆ ಗಡ್ಕರಿಯೇ ಹೆಚ್ಚು ಸೂಕ್ತ ವ್ಯಕ್ತಿಯಾಗಿದ್ದಾರೆಯೇ? ಇತರ ಪಕ್ಷಗಳಲ್ಲಿ ಗಡ್ಕರಿಯ ಜನಪ್ರಿಯತೆ ಹೆಚ್ಚುತ್ತಿರು ವುದನ್ನು ಕಂಡರೆ ಪ್ರಧಾನ ಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿ ಅವರು ಮುಂದಿರುವಂತೆ ಕಾಣುತ್ತಿದೆ. ಆದರೆ ರಾಜಕೀಯದ ಬಗ್ಗೆ ಭವಿಷ್ಯ ನುಡಿಯುವುದು ಅಸಾಧ್ಯದ ಮಾತು ಎಂಬುದು ಅಷ್ಟೇ ಸತ್ಯ.


ಅಶೋಕ್ ಗೆಹ್ಲೋಟ್ ಜನಪ್ರಿಯತೆ

ರಾಜಸ್ಥಾನದ ಜೈಪುರದಲ್ಲಿ ಮುಂದಿನ ರಾಜ್ಯ ವಿಧಾನಸಭೆ ಚುನಾವಣೆಯ ಅಭಿಯಾನಕ್ಕೆ ಚಾಲನೆ ನೀಡಿ ರಾಜ್ಯದಲ್ಲಿ ಅಧಿಕಾರಕ್ಕೇರುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿ ಮುಂದೆ ರಾಜ್ಯ ಕಾಂಗ್ರೆಸ್ ನಾಯಕರು ಒಗ್ಗಟ್ಟಿನ ಮಂತ್ರ ಜಪ ಮಾಡಿದ್ದಾರೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ಎಲ್ಲರೂ ತಮ್ಮ ಭಿನ್ನಾಭಿಪ್ರಾಯ ಗಳನ್ನು ಬದಿಗೊತ್ತಿ ಪಕ್ಷಕ್ಕಾಗಿ ಹೋರಾಡಬೇಕಿದೆ ಎಂದು ರಾಹುಲ್ ಗಾಂಧಿ ಕರೆ ನೀಡಿದ ಹಿನ್ನೆಲೆಯಲ್ಲಿ ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಚಿನ್ ಪೈಲಟ್ ಪರಸ್ಪರ ಆಲಂಗಿಸಿಕೊಂಡರು. ಇದಕ್ಕೂ ಮುನ್ನ ಮಾತನಾಡಿದ ಸಚಿನ್ ಪೈಲಟ್ ರಾಜ್ಯದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯಶಾಲಿಯಾಗಲು ಎಲ್ಲ ಹಿರಿಯ ನಾಯಕರೇ ಕಾರಣ ಎಂದು ತಿಳಿಸುತ್ತಾ ಪಕ್ಷವು ಒಗ್ಗಟ್ಟಿನಿಂದ ಚುನಾವಣೆ ಯನ್ನು ಎದುರಿಸಿ ರಾಜ್ಯದಲ್ಲಿ ಸರಕಾರ ರಚಿಸಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು. ಪೈಲಟ್ ಓರ್ವ ಪರಿಶ್ರಮಪಡುವ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದು ಕಾರ್ಯಕರ್ತರ ಮಧ್ಯೆ ಜನಪ್ರಿಯ ರಾಗಿದ್ದಾರೆ. ಆದರೆ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಯಾರು ಸೂಕ್ತ ಎಂದು ನಡೆಸಲಾದ ಸಮೀಕ್ಷೆಯಲ್ಲಿ ಅಶೋಕ್ ಗೆಹ್ಲೋಟ್ ಅವರ ಹೆಸರು ಎಲ್ಲರಿಗಿಂತ ಮೇಲಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣೆಯನ್ನು ಗೆಲ್ಲುವ ಸಾಧ್ಯತೆಯಿದೆ. ಆದರೆ ಪಕ್ಷದಲ್ಲಿ ಎಲ್ಲ ಜನಪ್ರಿಯ ನಾಯಕರಿಗೆ ಆಗುವಂತೆ, ಗೆಹ್ಲೋಟ್ ಅವರನ್ನೂ ಬದಿಗೆ ತಳ್ಳಿದರೆ ಈ ಬಾರಿಯೂ ಕಾಂಗ್ರೆಸ್ ಸೋಲನುಭವಿಸಬಹುದು. ಇದನ್ನು ಗೆಹ್ಲೋಟ್ ಎಲ್ಲರಿಗಿಂತ ಹೆಚ್ಚು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ತನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವಂತೆ ಅವರು ಹೈಕಮಾಂಡ್ ಮೇಲೆ ಒತ್ತಡ ಹೇರುವ ಸಾಧ್ಯತೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News