ಕೊಡಗಿನ ಕೈಹಿಡಿದ ಬೆಂಗಳೂರು: ವಿವಿಧೆಡೆ ಹಣ, ಆಹಾರ, ಬಟ್ಟೆ ಸಂಗ್ರಹ

Update: 2018-08-19 17:31 GMT

ಬೆಂಗಳೂರು, ಆ.19: ಕೊಡಗಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಉಂಟಾಗಿರುವ ಪ್ರವಾಹದಲ್ಲಿ ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ಅಷ್ಟೇ ಅಲ್ಲದೆ, ಅಪಾರ ಮೌಲ್ಯದ ಆಸ್ತಿ ನಾಶಗೊಂಡು, ಸಾವಿರಾರು ಜನ ನಿರ್ಗತಿಕರಾಗಿದ್ದಾರೆ. ಇವರ ಸಹಾಯಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಡೆ ಸ್ವಯಂ ಪ್ರೇರಿತವಾಗಿ ಸಾರ್ವಜನಿಕರಿಂದ ಪರಿಹಾರ ನಿಧಿ ಸಂಗ್ರಹಿಸಲಾಗುತ್ತಿದೆ.

ರವಿವಾರ ನಗರದ ಎಂಜಿ ರಸ್ತೆ, ಕಾರ್ಪೋರೇಷನ್ ವೃತ್ತ, ಕೆಂಪೇಗೌಡ ಬಸ್ ನಿಲ್ದಾಣ ವ್ಯಾಪ್ತಿ, ಆರ್‌ಟಿ ನಗರ, ಟ್ಯಾನಿ ರಸ್ತೆ, ಕೋರಮಂಗಲ, ಮಡಿವಾಳ ಹೀಗೆ, ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆಗಳು, ಅಂಗಡಿ ಮತ್ತು ಬೃಹತ್ ಮಳಿಗೆಗಳು, ಅಪಾರ್ಟ್ ಮೆಂಟ್‌ಗಳು ಸೇರಿದಂತೆ ವಿವಿಧೆಕಡೆ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು, ಸಾಫ್ಟ್‌ವೇರ್ ಇಂಜಿನಿಯರ್‌ಗಳು, ಸಂಘ-ಸಂಸ್ಥೆಗಳು ನಿಧಿ ಸಂಗ್ರಹಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಬೆಂಗಳೂರಿನ ಜೀವನಾಡಿ ಬಿಎಂಟಿಸಿ ಬಸ್‌ಗಳಲ್ಲೂ ಕಾಲೇಜು ವಿದ್ಯಾರ್ಥಿಗಳು ಪ್ರಯಾಣಿಕರಿಂದ ಪರಿಹಾರ ಹಣ ಸಂಗ್ರಹ ಮಾಡಿದರು. ಇನ್ನೂ, ಕೆಲ ಬಡಾವಣೆಗಳ ಮನೆಗಳಿಗೆ ತೆರಳಿ ಹಣ, ಬಟ್ಟೆ, ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ, ವಾಹನಗಳಿಗೆ ತುಂಬಿಸಿ, ಸಂಜೆ ಹಾಸನ ಮಾರ್ಗದ ಮೂಲಕ ಕೊಡಗು ಸಂತ್ರಸ್ಥರಿಗೆ ತಲುಪಿಸುವ ಕಾರ್ಯ ಜರುಗಿತು.

ಲಕ್ಷಾಂತರ ರೂ. ಸಂಗ್ರಹ: ಎಸ್‌ಯುಸಿಐ ಸದಸ್ಯರು ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ 1ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹ ಮಾಡಲಾಗಿದೆ. ಅದೇ ರೀತಿ, ಉಚಿತವಾಗಿ ಔಷಧಿಗಳನ್ನು ಸಂತ್ರಸ್ಥರಿಗೆ ರವಾನಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಎಸ್‌ಯುಸಿಐ(ಸಿ) ಸಂಚಾಲಕಿ ಐಶ್ವರ್ಯಾ ತಿಳಿಸಿದರು.
ಅದೇ ರೀತಿ, ಎಸ್‌ಎಫ್‌ಐ ಸಹ, ರಾಜ್ಯದೆಲ್ಲೆಡೆ ರವಿವಾರ ನಿಧಿ ಸಂಗ್ರಹ ಅಭಿಯಾನ ನಡೆಸಿದ್ದು, 1 ಲಕ್ಷಕ್ಕೂ ಅಧಿಕ ಹಣ ಸಂಗ್ರಹ ಮಾಡಿದೆ.ಇನ್ನೂ 3ದಿನಗಳ ಕಾಲ ಅಭಿಯಾನ ನಡೆಸಲಿದ್ದು, 5ರಿಂದ 10 ಲಕ್ಷದವರೆಗೂ ನಿಧಿ ಸಂಗ್ರಹಿಸಿ ಸಂತ್ರಸ್ಥರಿಗೆ ನೀಡುವ ಗುರಿಹೊಂದಲಾಗಿದೆ ಎಂದು ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಮಾಹಿತಿ ನೀಡಿದರು.

ನಟರಿಂದ ಸಹಾಯ: ನಟ ಯಶ್ ಅವರ ಯಶೋಮಾರ್ಗ ಟ್ರಸ್ಟ್ ನೆರೆಪೀಡಿತ ಕೊಡಗು ಜಿಲ್ಲೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದು, ರವಿವಾರ ಟ್ರಕ್‌ಯೊಂದರಲ್ಲಿ ಆಹಾರ ಸಮಗ್ರಿಗಳನ್ನು ತುಂಬಿಸಿಕೊಂಡು ಕೊಡಗು ಕಡೆ ಹೊರಟರು.ಅದೇ ರೀತಿ, ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಸಹ ಆಹಾರ ಸಮಗ್ರಿಗಳನ್ನು ನಿರಾಶ್ರಿತರಿಗೆ ಸಾಗಿಸಿದರು.

ಸ್ವಯಂ ಪ್ರೇರಿತವಾಗಿ ನಟ, ಹೋರಾಟಗಾರ ಚೇತನ್ ಅವರು ರವಿವಾರ ಗಾಂಧಿನಗರದಲ್ಲಿ ಕೊಡಗು ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಿದರು. ಬಳಿಕ ಅವರು, ಪ್ರತಿಯೊಬ್ಬರು ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ನಮ್ಮ ರಾಜ್ಯದ ಜನತೆ ಮಾನವೀಯತೆ ಮೆರೆಯುತ್ತಿದ್ದಾರೆ. ಯಾವುದೇ ಕಷ್ಟ ಬಂದರೂ, ಯುವ ಜನತೆ ಸಿದ್ದವಿದ್ದಾರೆ. ಹೀಗಾಗಿಯೇ, ನಿಧಿ ಸಂಗ್ರಹ ಮಾಡಲಾಗುತ್ತಿದೆ ಎಂದರು.

ವೈದ್ಯರ ತಂಡ : ಭಾರೀ ಮಳೆಯಿಂದ ಪ್ರವಾಹ ಪೀಡಿತವಾಗಿರುವ ಪ್ರದೇಶಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ 20ಕ್ಕೂ ಹೆಚ್ಚು ವೈದ್ಯ ತಂಡ ಬೆಂಗಳೂರಿನಿಂದ ಹೊರಟಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ವೈದ್ಯರ ತಂಡ, ರವಿವಾರ ರಾತ್ರಿ ಕೊಡಗಿನ ಪ್ರವಾಹ ಪೀಡಿತ ಪ್ರದೇಶಗಳತ್ತ ಹೊರಟಿದೆ. ಪ್ರವಾಹ ಪರಿಹಾರ ನಿಧಿಗೆ ತಮ್ಮ ಒಂದು ದಿನದ ವೇತನವನ್ನು ನೀಡಲು ವೈದ್ಯಕೀಯ ಶಿಕ್ಷಣ ಇಲಾಖೆಯ ಸಿಬ್ಬಂದಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನೂ, ಕರ್ನಾಟಕ ರಣಧೀರ ಪಡೆವತಿಯಿಂದಲೇ ನಿಧಿ ಸಂಗ್ರಹಿಸಿ ಅಗತ್ಯ ವಸ್ತುಗಳು ಹಾಗೂ ಔಷಧಿಗಳನ್ನು ಖರೀದಿ ಮಾಡಿದ್ದು, ಸೋಮವಾರ(ಆ.20) ಕೊಡಗಿನ ದಿಡ್ಡಳ್ಳಿಗೆ ಕಳುಹಿಸಲಾಗುತ್ತಿದೆ ಎಂದು ಸಂಘಟನೆಯ ರಮಾನಂದ ಅಂಕೋಲಾ ತಿಳಿಸಿದರು.

‘100 ಮೊಬೈಲ್ ಟಾಯ್ಲೆಟ್’
ಕೊಡಗು ನೆರೆಸಂತ್ರಸ್ತರಿಗೆ ನೆರವಾಗಲು ಈಗಾಗಲೇ ಸುಮಾರು 100 ಸಂಖ್ಯೆಯ ಮೊಬೈಲ್ ಟಾಯ್ಲೆಟ್‌ಗಳನ್ನು ಕಳುಹಿಸಲಾಗಿದೆ.ಜೊತೆಗೆ ವೈದ್ಯಕೀಯ ಔಷದಿ ಜೊತೆಗೆ ವೈದ್ಯ ಸಿಬ್ಬಂದಿ ಯನ್ನು ನಿಯೋಜಿಸಲಾಗುದು.
-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತ

ಕೊಡಗಿಗೆ ಹೊರಟ ಬಿಬಿಎಂಪಿ ಸಿಬ್ಬಂದಿ

ಬಿಬಿಎಂಪಿ ವತಿಯಿಂದ ಕೊಡಗು ನೆರೆಸಂತ್ರಸ್ತರಿಗೆ ನೆರವಾಗಲು 300 ಕ್ಕೂ ಹೆಚ್ಚು ಸ್ವಚ್ಚತಾ ಸಿಬ್ಬಂದಿ ವರ್ಗದ ಜೊತೆಗೆ 10ಕ್ಕೂ ಹೆಚ್ಚಿನ ಅಧಿಕಾರಿಗಳು 7 ಕೆಎಸ್ಸಾರ್ಟಿಸಿ ಬಸ್ಸುಗಳಲ್ಲಿ ರವಿವಾರ ಸಂಜೆ ಕೊಡಗಿಗೆ ಹೊರಟರು.

ಪ್ರಶಸ್ತಿ ನಗದು ನೀಡಿ ‘ನಾದಬ್ರಹ್ಮ’..!
ಕೊಡಗಿನಲ್ಲಿರುವ ಸಂತ್ರಸ್ತರಿಗೆ ನಾದ ಬ್ರಹ್ಮ ಡಾ.ಹಂಸಲೇಖ ತಮ್ಮ ಪ್ರಶಸ್ತಿಯ ನಗದು ಮೊತ್ತವನ್ನು ನೀಡಿ ಮಾದರಿಯಾಗಿದ್ದಾರೆ. ನಗರದ ರವೀಂದ್ರ ಕಲಾಕ್ಷೇತ್ರದ ಸಭಾಂಗಣದಲ್ಲಿ ಡಾ.ವೇಮಗಲ್ ನಾರಾಯಣ ಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ ಆಯೋಜಿಸಿದ್ದ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಅವರು, ನಗದು ಮೊತ್ತ 25 ಸಾವಿರ ರೂ.ಗಳನ್ನು ಸಂತ್ರಸ್ತರಿಗೆ ನೀಡುತ್ತೇನೆ ಎಂದು ಘೋಷಿಸಿ, ಪ್ರತಿಷ್ಠಾನದ ಮುಖ್ಯಸ್ಥರಿಗೆ ವಾಪಸ್ಸು ನೀಡಿ, ಮುಖ್ಯಮಂತ್ರಿಗಳ ನಿಧಿಗೆ ತಲುಪಿಸುವಂತೆ ಕೋರಿದರು.

ಪ್ರಾಣಿ ಸಂರಕ್ಷಣೆಗೆ ಹೊರಟ ತಂಡ..!
ಕೊಡಗಿನಲ್ಲಿ ಜನರು ಮಾತ್ರವಲ್ಲದೆ, ಸಾವಿರಾರು ಪ್ರಾಣಿಗಳಿಗೆ ರಕ್ಷಣೆ ಬೇಕಾಗಿದೆ.ಈ ಹೀಗಾಗಿ, ಬೆಂಗಳೂರಿನಿಂದ ಹತ್ತಾರು ಮಂದಿ ಮಡಿಕೇರಿ, ಕೊಡಗು ಪ್ರದೇಶಗಳಿಗೆ ಹೊರಟ್ಟಿದ್ದು, ಪ್ರಾಣಿ ಸಂಪತ್ತು ಉಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.
-ಪ್ರತಿಮಾ ನಾಯ್ಕ, ಸಂಚಾಲಕಿ ಕೊಡಗು ಪ್ರಾಣಿ ಸಂರಕ್ಷಣಾ ತಂಡ

Writer - -ಸಮೀರ್ ದಳಸನೂರು

contributor

Editor - -ಸಮೀರ್ ದಳಸನೂರು

contributor

Similar News