ದಿಲ್ಲಿ ದರ್ಬಾರ್

Update: 2018-09-01 18:32 GMT

ಅಮಿತ್ ಶಾಗೆ ಸಿಗದ ಆದ್ಯತೆ
ಚೆನ್ನೈನ ವೈಎಂಸಿಎ ಮೈದಾನದಲ್ಲಿ ಗುರುವಾರ ನಡೆದ ಡಿಎಂಕೆ ನಾಯಕ ದಿವಂಗತ ಕರುಣಾನಿಧಿಯವರ ಸ್ಮರಣೆ ಕಾರ್ಯಕ್ರಮದಲ್ಲಿ ಪಕ್ಷಭೇದ ಮರೆತು ಹಲವು ಮಂದಿ ಮುಖಂಡರು ಭಾಗವಹಿಸಿದ್ದರು. ಡಿಎಂಕೆಯ ಹೊಸ ನೇತಾರ ಎಂ. ಕೆ. ಸ್ಟಾಲಿನ್ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂಬ ವದಂತಿ ದಿಲ್ಲಿಯಲ್ಲಿ ಸಂಚಲನ ಮೂಡಿಸಿತ್ತು. ಇದು ಹೊಸ ರಾಜಕೀಯ ಸಮೀಕರಣದ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿತ್ತು. ಅಮಿತ್ ಶಾ ಅವರನ್ನು ಆಹ್ವಾನಿಸುವ ಹೊಣೆಯನ್ನು ಟಿ.ಆರ್.ಬಾಲು ಅವರಿಗೆ ವಹಿಸಿದರೂ, ಡಿಎಂಕೆ ಬಹುಶಃ ಅಮಿತ್ ಶಾ ಅವರನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ ಎನ್ನುವುದು ಇದೀಗ ಸ್ಪಷ್ಟವಾಗಿದೆ. ಆಹ್ವಾನಪತ್ರಿಕೆಯಲ್ಲಿ ಅವರ ಹೆಸರು ನಮೂದಿಸಿದ್ದರೂ, ಪ್ರಮುಖ ಆದ್ಯತೆ ನೀಡಿರಲಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಅಮಿತ್ ಶಾ ಕೊನೆಗೆ ನಿತಿನ್ ಗಡ್ಕರಿಯವರನ್ನು ಪಕ್ಷದ ಪ್ರತಿನಿಧಿಯಾಗಿ ಕಳುಹಿಸಿಕೊಡಲು ನಿರ್ಧರಿಸಿದರು. ಏನೇ ಆದರೂ ಬಿಜೆಪಿ ಹಾಗೂ ಎಐಎಡಿಎಂಕೆ ವಿರುದ್ಧ ತಮ್ಮ ಹೋರಾಟ ಎನ್ನುವುದನ್ನು ಸ್ಟಾಲಿನ್ ಸ್ಪಷ್ಟಪಡಿಸಿದ್ದು, ಜಾತ್ಯತೀತ ದೇಶದ ಬಗ್ಗೆಯೂ ಮಾತನಾಡಿದ್ದಾರೆ. ಆದ್ದರಿಂದ ಗಾಳಿ ಸುದ್ದಿ ಇನ್ನೂ ರೂಪುಗೊಳ್ಳುವ ಹಂತದಲ್ಲೇ ಸದ್ಯದ ಮಟ್ಟಿಗೆ ಕೊನೆಗೊಂಡಿದೆ.


ಶತ್ರುಘ್ನ ಸಿನ್ಹಾ ದಿಲ್ ಕಿ ಬಾತ್.. 
ಶತ್ರುಘ್ನ ಸಿನ್ಹಾ ಪಕ್ಷದೊಳಗೇ ಕಿರಿ ಕಿರಿ ಎದುರಿಸುತ್ತಿದ್ದಾರೆ. ಬಿಜೆಪಿ ಸಂಸದ ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ಸಚಿವರಾದ ಮನೀಶ್ ಸಿಸೋಡಿಯಾ ಹಾಗೂ ರಾಜೇಂದ್ರಪಾಲ್ ಗೌತಮ್ ಜತೆ ದಿಲ್ಲಿ ಬಿಜೆಪಿ ಅಧ್ಯಕ್ಷ ಮನೋಜ್ ತಿವಾರಿಯವರ ಕ್ಷೇತ್ರದಲ್ಲೇ ವೇದಿಕೆ ಹಂಚಿಕೊಂಡಿದ್ದರು. ಜಾಡಮಾಲಿಗಳಿಗೆ ಹಮ್ಮಿಕೊಂಡಿದ್ದ ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಭಾಷಣದಲ್ಲಿ ಕೊನೆಗೆ ಸಿನ್ಹಾ, ‘‘ಎಎಪಿ ಚಿರಕಾಲ ಬಾಳಲಿ, ದಿಲ್ಲಿ ಸರಕಾರ ಚಿರಾಯುವಾಗಲಿ’’ ಎಂಬ ಘೋಷಣೆ ಕೂಗಿದರು. ‘‘ಇದು ಚಮಚಾಗಿರಿಯ ಯುಗ. ಸತ್ಯ ನುಡಿಯುವುದು ಅಪರಾಧವಲ್ಲ ಎಂದು ಜನ ತಿಳಿದುಕೊಳ್ಳಬೇಕು...ನನ್ನ ಮನಸ್ಸಿನಲ್ಲಿರುವುದನ್ನು (ಮನ್ ಕಿ ಬಾತ್) ನಾನು ಮಾತನಾಡಲು ಸಾಧ್ಯವಿಲ್ಲ ಎನ್ನುವುದು ನನಗೆ ಗೊತ್ತು. ಏಕೆಂದರೆ ಕೆಲವರಿಗೆ ಇದರ ಮೇಲೆ ಪೇಟೆಂಟ್ ಇದೆ. ಆದರೆ ನಾನು ನನ್ನ ಹೃದಯದಿಂದ ಮಾತನಾಡಬಹುದು’’ ಎಂದೂ ಚುಚ್ಚಿದರು. ಸಿನ್ಹಾ ಅವರ ದಿಲ್ ಕಿ ಬಾತ್, ಬಿಜೆಪಿ ಕಾರ್ಯಕರ್ತರಿಗೆ ಪಥ್ಯವಾಗಲಿಲ್ಲ. ಅವರ ವಿರುದ್ಧ ಕಪ್ಪುಬಾವುಟ ಪ್ರದರ್ಶನವೂ ನಡೆಯಿತು. ಸಿನ್ಹಾ ಟ್ವಿಟರ್ ಮೂಲಕ ಕೂಡಾ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ಶ್ಲಾಘಿಸಿದರು. ಬಹುಶಃ ಬಿಜೆಪಿಗೆ ಅವರ ಸಂದೇಶ ‘‘ಬನ್ನಿ...ನನ್ನನ್ನು ಗಮನಿಸಿ’’ ಎಂಬ ಆಹ್ವಾನ ನೀಡುವಂತಿತ್ತು. ಆದರೆ ಸದ್ಯದ ಮಟ್ಟಿಗಂತೂ ಪಕ್ಷ ಏನೂ ಮಾಡಿಲ್ಲ.


ಶ್ರದ್ಧಾಂಜಲಿ ಅಥವಾ ತೋರಿಕೆಯ ಅನುಕಂಪ?
ಮುಂಬರುವ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ, ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಪರಂಪರೆಯ ಚುನಾವಣಾ ಲಾಭ ಪಡೆಯುವ ನಿರೀಕ್ಷೆಯಲ್ಲಿದೆ. ಆದರೆ ಅದು ತನ್ನ ನಿರೀಕ್ಷೆಯನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಬಿಜೆಪಿ ಮುತ್ಸದ್ದಿಯ ಚಿತಾಭಸ್ಮವನ್ನು ಎರಡು ರಾಜ್ಯಗಳ ನದಿಗಳಲ್ಲಿ ತೇಲಿ ಬಿಡುವ ಸಂದರ್ಭದಲ್ಲಿ ನಡೆದ ಕೆಲ ಘಟನೆಗಳು ಕೇಸರಿ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತೆ ಮಾಡಿವೆ. ರಾಯಪುರದಲ್ಲಿ ಅಂತಿಮ ನಮನ ಸಲ್ಲಿಸುವ ಸಲುವಾಗಿ ಅಸ್ಥಿಕಲಶ ಇರಿಸಿದ ಸ್ಥಳದಲ್ಲಿ ಕೆಲ ಬಿಜೆಪಿ ಸಚಿವರು ನಗುತ್ತಿರುವುದು ಕಂಡುಬಂದಿದೆ. ಇಂಥದ್ದೇ ಘಟನೆ ನರ್ಮದಾ ನದಿ ತೀರದಲ್ಲಿ ಮಧ್ಯಪ್ರದೇಶದಲ್ಲೂ ನಡೆದಿದೆ. ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ರಾಜ್ಯ ಸರಕಾರ ಅಟಲ್ ನಿಕಟ ಸಂಬಂಧಿಕರ ಸಂಚಾರಕ್ಕೂ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ, ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸಲು ಆಟೊ ಬಾಡಿಗೆಗೆ ಪಡೆಯಬೇಕಾಯಿತು ಎನ್ನಲಾಗಿದೆ.


ಪಿಎಂ ‘ಜಾ’ ಅಲ್ಲ ‘ಜೈ’
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸಿದ ಮಹತ್ವಾಕಾಂಕ್ಷಿ 5 ಲಕ್ಷ ರೂಪಾಯಿಯ ಆರೋಗ್ಯ ಸುರಕ್ಷಾ ಯೋಜನೆಯ ಹೆಸರು ಬದಲಾಗಲು ಏನು ಕಾರಣ ಗೊತ್ತೇ? ಕೆಂಪುಕೋಟೆಯಿಂದ ಈ ಯೋಜನೆ ಘೋಷಿಸಿದ ಮೋದಿ ಇದಕ್ಕೆ ಪ್ರಧಾನಮಂತ್ರಿ ಜನ ಆರೋಗ್ಯ ಅಭಿಯಾನ (ಪಿಎಂಜೆಎಎ) ಎಂದು ಹೆಸರಿಟ್ಟರು. ಆದರೆ ಕೆಲ ದಿನಗಳ ಬಳಿಕ ಯೋಜನೆಯ ವಿವರಗಳನ್ನು ಪ್ರಕಟಿಸುವ ವೇಳೆ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಇದನ್ನು ಭಿನ್ನ ಹೆಸರಿನಿಂದ ಕರೆದರು. ಅದು ಪ್ರಧಾನಮಂತ್ರಿ ಜನ ಆರೋಗ್ಯ ಯೋಜನಾ (ಪಿಎಂಜೆಎವೈ) ಆಯಿತು. ಕೆಲ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾದಂತೆ ಇದಕ್ಕೆ ಕಾರಣ, ಸಂಕ್ಷಿಪ್ತ ರೂಪ. ಚುನಾವಣಾ ವರ್ಷದಲ್ಲಿ ಪಿಎಂಜಾ (ಪಿಎಂಜೆಎಎ) ಎನ್ನುವುದು ಆಕರ್ಷಕ ಎನಿಸಲಿಲ್ಲ. ಏಕೆಂದರೆ ‘ಜಾ’ ಎಂದರೆ ಹಲವು ಭಾರತೀಯ ಭಾಷೆಗಳಲ್ಲಿ ‘ಹೋಗು’ ಎಂಬ ಅರ್ಥ ನೀಡುತ್ತದೆ. ಆದ್ದರಿಂದ ಇದನ್ನು ಪಿಎಂಜೆಎವೈ ಎಂದು ಕರೆಯಲಾಯಿತು. ಇದು ಬಹುಶಃ ಪಿಎಂಜೈ ಎಂಬಂತೆ ಧ್ವನಿಸುತ್ತದೆ. ಇಂಥ ಸೂಕ್ಷ್ಮ ಅಂಶವನ್ನು ಕೂಡಾ ಗಮನಿಸುವ ಸರಕಾರಕ್ಕೆ ಏನೆನ್ನಬೇಕು!


ದಿವ್ಯಸ್ಪಂದನ ನಿರ್ಗಮನ?
ಕಾಂಗ್ರೆಸ್‌ನ ಕೆಲ ಮುಖಂಡರು ಸುದೀರ್ಘ ಕಾಲದಿಂದಲೂ ತಮ್ಮ ಕೌಶಲ್ಯಕ್ಕಾಗಿ ಮಾತ್ರವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಇಲ್ಲದಿರುವ ಬಗ್ಗೆಯೂ ಅಪಹಾಸ್ಯಕ್ಕೀಡಾಗುತ್ತಿದ್ದರು. ಕೊನೆಗೂ ಎಚ್ಚೆತ್ತುಕೊಂಡ ಪಕ್ಷ ಹೊಸ ಮಾಧ್ಯಮಕ್ಕೆ ತೆರೆದುಕೊಂಡಿತು. ಇದಕ್ಕೆ ಮುಖ್ಯ ಕಾರಣ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಮಾಜ ಮಾಧ್ಯಮ ಘಟಕದ ಮುಖ್ಯಸ್ಥೆ ಜನಪ್ರಿಯ ನಟಿ- ರಾಜಕಾರಣಿ, ರಮ್ಯಾ ಎಂದೇ ಖ್ಯಾತರಾಗಿರುವ ದಿವ್ಯಸ್ಪಂದನ. ಎಐಸಿಸಿ ಬಿಗಿಮುಷ್ಟಿಯ ನಡುವೆಯೂ ಈ ವಿಭಾಗಕ್ಕೆ ಅನುದಾನ ಹತ್ತು ಪಟ್ಟು ಹೆಚ್ಚಿತು ಮತ್ತು ರಮ್ಯಾ ಅವರ ದಿಢೀರ್ ಜನಪ್ರಿಯತೆ ಕೆಲ ಕಾಂಗ್ರೆಸಿಗರ ಹೊಟ್ಟೆಕಿಚ್ಚಿಗೂ ಕಾರಣವಾಯತು. ರಮ್ಯಾ ಎಐಸಿಸಿ ಮುಖ್ಯ ಸಂಸ್ಥೆಗೆ ಲಗ್ಗೆ ಇಡಲು ಉತ್ಸುಕರಾಗಿದ್ದಾರೆ ಎಂಬ ಮಾತುಗಳು ಎಐಸಿಸಿ ಸಮಾಜ ಮಾಧ್ಯಮ ವಿಭಾಗದಿಂದ ಕೇಳಿಬರುತ್ತಿವೆ. ಮಾರ್ಗರೆಟ್ ಆಳ್ವಾ ಅವರ ಮಗ ನಿಖಿಲ್, ರಮ್ಯಾ ಸ್ಥಾನ ತುಂಬಲಿದ್ದಾರೆ ಎಂದು ಪಕ್ಷದ ಆಂತರಿಕ ಮೂಲಗಳು ಹೇಳುತ್ತವೆ. ಗುರುದ್ವಾರ ರಕಬ್‌ಗಂಜ್ ರಸ್ತೆಯ 15ನೇ ನಂಬರ್ ಕಟ್ಟಡದಲ್ಲಿ ನೆಲೆ ನಿಂತಿರುವ ಸಮಾಜ ಮಾಧ್ಯಮ ತಂಡವನ್ನು ಹಳೆ ಹುಲಿಗಳು ಅಣಕಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ರಮ್ಯಾ ಇರಲಿ, ಹೊರಹೋಗಲಿ, ಸಮಾಜ ಮಾಧ್ಯಮದಲ್ಲಿ ಕಾಂಗ್ರೆಸ್‌ಗೆ ಒಂದು ಸ್ಥಾನ ತಂದುಕೊಟ್ಟ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75