ದಿಲ್ಲಿ ದರ್ಬಾರ್

Update: 2018-09-15 18:32 GMT

ಉರಿನಾಲಗೆಯ ಚೌಭೆ
ಕೇಂದ್ರ ಸಚಿವ ಅಶ್ವಿನಿ ಚೌಭೆ ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಬಗ್ಗೆ ಅತ್ಯಂತ ಆಘಾತಕಾರಿಯಾದ ಟೀಕೆಯನ್ನು ಮಾಡಿದ್ದರು ಹಾಗೂ ಅವರನ್ನು ‘ಚರಂಡಿಯ ಹುಳ’ ಎಂದು ನಿಂದಿಸಿದ್ದರು. ರಾಫೆಲ್ ಒಪ್ಪಂದದ ಕುರಿತು ಬಿಜೆಪಿಯ ಮೇಲೆ ಕಾಂಗ್ರೆಸ್ ಪಕ್ಷ ಹೊರಿಸಿರುವ ಆರೋಪಗಳ ಬಗ್ಗೆ ಪ್ರತಿಕ್ರಿಯಿಸುತ್ತಿದ್ದ ಚೌಭೆ ಅವರು, ರಾಹುಲ್ ಮಾನಸಿಕ ರೋಗದಿಂದ ನರಳುತ್ತಿದ್ದಾರೆಂದು ನಿಂದಿಸಿದ್ದರು.

ಪ್ರಧಾನಿ ಮೋದಿ ತನ್ನ ಮಹತ್ವಾಕಾಂಕ್ಷಿ ಅಂಚೆ ಬ್ಯಾಂಕ್ ಯೋಜನೆಗೆ ದಿಲ್ಲಿಯಲ್ಲಿ ಚಾಲನೆ ನೀಡಿದ ಸಂದರ್ಭದಲ್ಲೇ, ಚೌಭೆ ನೀಡಿದ ಹೇಳಿಕೆ ಮಾಧ್ಯಮಗಳಲ್ಲಿ ಕೋಲಾಹಲ ಸೃಷ್ಟಿಸಿದಂತೆ ಹಲವು ಬಿಜೆಪಿ ನಾಯಕರು ತಲೆಕೆರೆದು ಕೊಳ್ಳಲಾರಂಭಿಸಿದರು. ಕಳೆದ ಆಗಸ್ಟ್‌ನಲ್ಲಿ ಪ್ರಧಾನಿ ಮೋದಿಯವರು, ಅಶ್ವಿನಿ ಚೌಭೆಯವರನ್ನು ರಾಷ್ಟ್ರಪತಿ ಭವನದಲ್ಲಿ ಬೈದಿದ್ದನ್ನು ಹಿರಿಯ ಬಿಜೆಪಿ ನಾಯಕರೊಬ್ಬರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಆ ಘಟನೆ ನಡೆದ ವೇಳೆ, ಈ ಬಿಜೆಪಿ ನಾಯಕ ಚೌಭೆಯವರ ಜೊತೆಗಿದ್ದರಂತೆ. ಅವರು ಹೇಳುವ ಪ್ರಕಾರ, ‘‘ನಿಮ್ಮ ವಿವಾದಿತ ಹೇಳಿಕೆಗಳು ಆಗಾಗ ಕೇಂದ್ರ ಸರಕಾರವನ್ನು ಇಕ್ಕಟ್ಟಿನ ಸನ್ನಿವೇಶದಲ್ಲಿ ಸಿಲುಕಿಸುತ್ತವೆ’’ ಎಂದು ಮೋದಿ, ಚೌಭೆಯನ್ನು ತರಾಟೆಗೆ ತೆಗೆದುಕೊಂಡಿದ್ದರೆನ್ನಲಾಗಿದೆ. ಆನಂತರ ಚೌಭೆ, ತನ್ನ ಬೆಂಬಲಿಗರೊಂದಿಗೆ ಮೋದಿ ತನ್ನನ್ನು ಬೈದಿದ್ದರ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು. ಆದರೆ ಇಲ್ಲಿ ಒಂದಂತೂ ಸ್ಪಷ್ಟವಾಗಿದೆ. ಯಾರನ್ನಾದರೂ ನಿಂದಿಸಬೇಕೆಂದು ತೋರಿದಾಗ ಚೌಭೆಯವರು ಪ್ರಧಾನಿ ಮಾತನ್ನು ಕೂಡಾ ಕೇಳುವುದಿಲ್ಲವೆಂದಾಯಿತು.


ರಾಹುಲ್‌ಗೆ ಹೊಸ ಹುರುಪು
ರಾಹುಲ್ ಗಾಂಧಿಯವರು ಹಿಂದೆಂದಿಗಿಂತಲೂ ಈಗ ಸುದ್ದಿಗೋಷ್ಠಿಗಳಿಗಾಗಿ ತುಂಬಾ ಚೆನ್ನಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ವಿಜಯ ಮಲ್ಯ ಪ್ರಕರಣಕ್ಕೆ ಸಂಬಂಧಿಸಿ ಪತ್ರಕರ್ತರ ಪ್ರಶ್ನೆಗಳಿಗೆ ಇತ್ತೀಚೆಗೆ ಅವರು ನೀಡಿದ ಉತ್ತರಗಳಿಂದ ಇದು ಸ್ಪಷ್ಟವಾಗಿ ತಿಳಿಯುತ್ತದೆ. ಅವರು ಯಾಕೆ ಇಷ್ಟೊಂದು ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆಂಬುದಕ್ಕೆ ಕಾರಣವೂ ಇದೆ. ಕೆಲವರು ಹೇಳುವ ಪ್ರಕಾರ, ‘ಪ್ರಕಾಂಡ ಪಂಡಿತರು’ ಎಂದೇ ಕರೆಯಲ್ಪಡುವ ವಿವಿಧ ವಿಷಯಗಳ ತಜ್ಞರನ್ನು ರಾಹುಲ್ ಆಗಾಗ ಭೇಟಿ ಮಾಡುತ್ತಿದ್ದಾರಂತೆ. ಕಾನೂನು, ನೀತಿ, ಮೂಲಸೌಕರ್ಯ, ಸಂಶೋಧನೆಯಂತಹ ಕ್ಷೇತ್ರಗಳಿಗೆ ಸಂಬಂಧಿಸಿದ 50ಕ್ಕೂ ಅಧಿಕ ತಜ್ಞರನ್ನು ಅವರು ಭೇಟಿಯಾಗಿ, ಸಮಾಲೋಚನೆ ನಡೆಸುತ್ತಿದ್ದಾರೆ. ಅವರೆಲ್ಲರೂ ಒಬ್ಬೊಬ್ಬರಾಗಿ ಕಾಂಗ್ರೆಸ್ ಅಧ್ಯಕ್ಷರ ಜೊತೆ ಮುಕ್ತವಾಗಿ ಮಾತುಕತೆ ನಡೆಸಿದ್ದಾರೆ.

ಮಾತುಕತೆಗಳ ಬಗ್ಗೆ ರಾಹುಲ್ ತುಂಬಾ ಗಮನಹರಿಸಿದ್ದರು ಮಾತ್ರವಲ್ಲದೆ ತಾನೇ ಸಿದ್ಧಪಡಿಸಿದ ಪ್ರಶ್ನೆಗಳನ್ನೂ ತಜ್ಞರಿಗೆ ಕೇಳುತ್ತಿದ್ದರು. ಕಾಂಗ್ರೆಸ್ ಪಕ್ಷದಲ್ಲಿನ ಹಿರಿತಲೆಗಳಿಗೆ ಈ ವಿಷಯದಲ್ಲಿ ರಾಹುಲ್‌ಗೆ ನೆರವಾಗಲು ಸಾಧ್ಯವಾಗಲಿಲ್ಲ. ಆದರೆ 1982-83ರ ಅವಧಿಯಲ್ಲಿ ರಾಜೀವ್ ಗಾಂಧಿ ಅವರು ಭಾರತದಂತಹ ವೈವಿಧ್ಯಮಯ ರಾಷ್ಟ್ರದಲ್ಲಿ ಆಡಳಿತ ನಡೆಸಲು ಮುಖ್ಯವಾದಂತಹ ಹಲವು ಪ್ರಮುಖ ವಿಷಯಗಳ ಬಗ್ಗೆ ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದುದನ್ನು ಈ ಹಿರಿಯ ನಾಯಕರು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಅದೇ ರೀತಿ, ಸೋನಿಯಾಗಾಂಧಿ ಕೂಡಾ ದೇಶಕ್ಕೆ ಸಂಬಂಧಿಸಿದ ಸಂಕೀರ್ಣ ವಿಷಯಗಳ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳಲು ಇತಿಹಾಸತಜ್ಞರು, ಕಾನೂನು ವಿದ್ವಾಂಸರು ಹಾಗೂ ವಿದೇಶ ನೀತಿ ತಜ್ಞರೊಂದಿಗೆ ಮಾತುಕತೆ ನಡೆಸುತ್ತಿದ್ದರು. ಇದೀಗ ಗಾಂಧಿ ವಂಶದ ಕುಡಿ ರಾಹುಲ್ ಕೂಡಾ ತನ್ನ ಪಾಲಕರ ಹೆಜ್ಜೆಯನ್ನು ಅನುಸರಿಸುತ್ತಿದ್ದಾರೆ.


ಬಿಜೆಪಿಗರಿಗೆ ಮೋದಿ ಸಂದೇಶ?
ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ‘ಚಲೋ ಜೀತೇ ಹೈ’ (ಬನ್ನಿ ಗೆಲ್ಲೋಣ) ಎಂಬ ಕಿರುಚಿತ್ರವನ್ನು ಪ್ರದರ್ಶಿಸಲಾಯಿತು. ಮುಂಬರುವ ಲೋಕಸಭಾ ಚುನಾವಣೆ ಹಾಗೂ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಕುರಿತು ಚಿಂತನಮಂಥನ ನಡೆಸಲು ಈ ಸಭೆಯನ್ನು ಕರೆಯಲಾಗಿತ್ತು. ಆದರೆ, ನರೇಂದ್ರ ಮೋದಿಯವರ ಕುರಿತಾದ ಸಾಕ್ಷಚಿತ್ರವನ್ನು ಕಾರ್ಯಕಾರಿಣಿ ಸಭೆಯಲ್ಲಿ ಪ್ರದರ್ಶಿಸಲು ಪಕ್ಷದ ಕಾರ್ಯಕರ್ತರು ತೋರಿದ ಉತ್ಸಾಹವನ್ನು ಕಂಡು ಕೆಲವು ಹಿರಿಯ ನಾಯಕರು ಅಚ್ಚರಿಗೊಂಡರು. 32 ನಿಮಿಷಗಳ ಈ ಕಿರುಚಿತ್ರವು, ಅಧಿಕೃತವಾಗಿ ಪ್ರಧಾನಿ ನರೇಂದ್ರ ಮೋದಿಯವರ ಜೀವನಕಥೆಯೆಂದು ಹೇಳಿಕೊಂಡಿಲ್ಲವಾದರೂ, ಅದು ಅವರ ಆರಂಭಿಕ ಬದುಕಿನಿಂದ ಸ್ಫೂರ್ತಿ ಪಡೆದುಕೊಂಡಿದೆ. ಇತರರಿಗಾಗಿ ಯಾರು ಬದುಕುತ್ತಾರೋ ಅವರೇ ಜಯಶಾಲಿಯೆಂದು ಬಾಲಕನೊಬ್ಬ ಹೇಳುವ ಮೂಲಕ ಈ ಚಿತ್ರವು ಸಂದೇಶವೊಂದನ್ನು ನೀಡುತ್ತದೆ. ಹಾಗಾದರೆ ಪಕ್ಷದ ಕಾರ್ಯಕರ್ತರು ಹಾಗೂ ಇತರ ನಾಯಕರಿಗೆ ಈ ಚಿತ್ರದ ಕಥೆ ನೀಡುವ ಸಂದೇಶವೇನು?.‘‘ ಮೋದಿಗಾಗಿ ಬದುಕಿರಿ ಎಂಬ ಸಂದೇಶ ತಾನೇ?’’ ಎಂದು ಪತ್ರಕರ್ತರೊಬ್ಬರು, ಮೋದಿಯ ಬಗ್ಗೆ ಒಲವಿರದ ಹಿರಿಯ ಬಿಜೆಪಿ ನಾಯಕರೊಬ್ಬರನ್ನು ಪ್ರಶ್ನಿಸಿದ್ದರು. ಆದಕ್ಕೆ ಆ ಹಿರಿಯ ನಾಯಕ ಕೇವಲ ಮುಗುಳ್ನಗೆಯ ಉತ್ತರವನ್ನಷ್ಟೇ ನೀಡಿದ್ದಾರೆ.


ಶಾ ಕಾರ್ಯತಂತ್ರ
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹಲವಾರು ಬಿಜೆಪಿ ನಾಯಕರಲ್ಲಿ ನಡುಕ ಶುರುವಾಗಿದೆ. ಅಮಿತ್ ಶಾ ಟಿಕೆಟ್ ನೀಡಿಕೆಯಲ್ಲಿ ಕಟ್ಟುನಿಟ್ಟಾಗಿ ವರ್ತಿಸಲಿದ್ದಾರೆಂಬ ಮಾತುಗಳು ಕೇಳಿಬರಲಾರಂಭಿಸಿದೆ. ಮತದಾರರ ನಡುವೆ ಜನಪ್ರಿಯತೆ ಕಳೆದುಕೊಂಡಿರುವ ಸಂಸದ್ ಸದಸ್ಯರಿಗೆ ಅವರು ನಿರ್ದಾಕ್ಷಿಣ್ಯವಾಗಿ ಟಿಕೆಟ್ ನಿರಾಕರಿಸಲಿದ್ದಾರಂತೆ. ಅಭ್ಯರ್ಥಿಯ ಗೆಲುವಿನ ಅವಕಾಶಗಳನ್ನು ನಿರ್ಧರಿಸುವುದಕ್ಕಾಗಿ ಖಾಸಗಿ ಏಜೆನ್ಸಿಗಳಿಂದ ಕ್ಷೇತ್ರವಾರು ಸಮೀಕ್ಷೆಯನ್ನು ಪಕ್ಷದ ಹೈಕಮಾಂಡ್ ನಡೆಸಲಿದ್ದು, ಅದರ ಆಧಾರದಲ್ಲಿ ಸೂಕ್ತ ತೀರ್ಮಾನವನ್ನು ಕೈಗೊಳ್ಳಲಾಗುವುದು. ಈ ಹಿಂದೆಲ್ಲಾ, ಇಂತಹ ಸಮೀಕ್ಷೆಗಳನ್ನು ಪಕ್ಷದೊಳಗಿನ ವ್ಯಕ್ತಿಗಳೇ ನಡೆಸುತ್ತಿದ್ದರು. ಇದರಿಂದಾಗಿ ಸಮೀಕ್ಷೆಯನ್ನು ನಡೆಸುವವರ ಮೇಲೆ ಪ್ರಭಾವವನ್ನು ಬೀರುವುದು ಕೂಡಾ ಕಷ್ಟಕರವಾಗಿರಲಿಲ್ಲ. ಆದರೆ ಇದೀಗ ಪಕ್ಷದೊಂದಿಗೆ ಯಾವುದೇ ನಂಟು ಹೊಂದಿರದ ವೃತ್ತಿಪರರು ಸಮೀಕ್ಷೆಯನ್ನು ನಡೆಸಲಿರುವುದು, ಟಿಕೆಟ್ ಆಕಾಂಕ್ಷಿಗಳ ತಂತ್ರಗಾರಿಕೆಗೆ ಕೊಡಲಿಯೇಟು ಬಿದ್ದಂತಾಗಿದೆ. ಆದರೂ ಅವರು ಸುಲಭವಾಗಿ ಬಿಟ್ಟುಕೊಡುವವರಲ್ಲ. ಈಗಾಗಲೇ ಹಾಲಿ ಸಂಸದರು, ಈ ಸಮೀಕ್ಷೆಗೆ ನಿಯೋಜಿಸಲ್ಪಡುವ ಏಜೆನ್ಸಿಗಳನ್ನು ಕಂಡುಹಿಡಿಯುವ ಕೆಲಸದಲ್ಲಿ ತೊಡಗಿದ್ದಾರೆ ಹಾಗೂ ಸಮೀಕ್ಷೆಯಲ್ಲಿ ‘ಉತ್ತಮ ಸಾಧನೆ’ ತೋರಲು ತಮ್ಮ ಶಸ್ತ್ರಾಸ್ತ್ರಗಳ ಬತ್ತಳಿಕೆಯನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತಿದ್ದಾರೆ.


ಸುದ್ದಿಗೋಷ್ಠಿಗೆ ಒಲ್ಲದ ಸುಶ್ಮ್ಮಾ, ನಿರ್ಮಲಾ
 ಪ್ರಧಾನಿ ನರೇಂದ್ರ ಮೋದಿಯವರು ಪತ್ರಿಕಾಗೋಷ್ಠಿಗಳನ್ನು ಇಷ್ಟಪಡುವುದಿಲ್ಲ ಹಾಗೂ ಹೇಗಾದರೂ ಮಾಡಿ ಅವುಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಸುದ್ದಿಗೋಷ್ಠಿಗಳ ಬಗ್ಗೆ ಮೋದಿಯವರಿಗಿರುವ ‘ದ್ವೇಷ’ವು ಈಗ ಸಾಂಕ್ರಾಮಿಕವಾಗುತ್ತಿರುವಂತೆ ಕಾಣುತ್ತಿದೆ. ಸುಶ್ಮಾ ಸ್ವರಾಜ್ ಹಾಗೂ ನಿರ್ಮಲಾ ಸೀತಾರಾಮನ್ ಅವರಂತಹ ನೇರಮಾತಿನ ಬಿಜೆಪಿ ಸಚಿವರು ಕೂಡಾ ಈಗೀಗ ತಮ್ಮ ನಾಲಗೆ ಬಿಗಿಹಿಡಿದುಕೊಳ್ಳತೊಡಗಿದ್ದಾರೆ. ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಅಮೆರಿಕ ಹಾಗೂ ಭಾರತ ದೇಶಗಳ ನಡುವೆ ನಡೆದ ರಕ್ಷಣಾ ಮಾತುಕತೆಯ ಸಂದರ್ಭದಲ್ಲಿ ಜಂಟಿ ಪತ್ರಿಕಾ ಹೇಳಿಕೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಪ್ರಶ್ನೋತ್ತರ ಕಾರ್ಯಕ್ರಮವನ್ನು ಏರ್ಪಡಿಸಬೇಕೆಂದು ಅಮೆರಿಕ ಬಯಸಿತ್ತು. ಆದರೆ ಈ ಬೇಡಿಕೆಯನ್ನು ತಳ್ಳಿಹಾಕಲಾಗಿತ್ತು. ಈ ಮಾತುಕತೆಯಲ್ಲಿ ಭಾರತವು ಆತಿಥೇಯ ರಾಷ್ಟ್ರವಾದುದರಿಂದ ಅದರ ತೀರ್ಮಾನವೇ ಮೇಲುಗೈ ಸಾಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75