ಮಲಬದ್ಧತೆಯಿಂದ ದೂರವಿರಲು ಈ ಆಹಾರಗಳನ್ನು ಸೇವಿಸಿ
ಮಲಬದ್ಧತೆ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ. ವಯಸ್ಸಾದವರನ್ನು ಅದು ಸುದೀರ್ಘ ಸಮಸ್ಯೆಯಾಗಿ ಕಾಡಬಹುದು. ಹೆಚ್ಚಿನ ಪ್ರಕರಣಗಳಲ್ಲಿ ಆಹಾರ ಕ್ರಮದಲ್ಲಿ ಸರಳ ಬದಲಾವಣೆಗಳು ಮತ್ತು ಸಾಕಷ್ಟು ನೀರಿನ ಸೇವನೆಯಿಂದ ಮಲಬದ್ಧತೆಯನ್ನು ತಡೆಯಬಹುದು. ಇದಕ್ಕಾಗಿ ಸೇವಿಸಬಹುದಾದ ಕೆಲವು ಅತ್ಯುತ್ತಮ ಆಹಾರಗಳ ಮಾಹಿತಿಯಿಲ್ಲಿದೆ.....
►ಕಿವಿ ಹಣ್ಣು
ಪ್ರತಿ 120 ಗ್ರಾಂ ಕಿವಿಹಣ್ಣಿನಲ್ಲಿ 2-3 ಗ್ರಾಂ ನಾರಿನಂಶ ಇರುತ್ತದೆ ಮತ್ತು ಇದು ಮಲಬದ್ಧತೆಯನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಹಣ್ಣಿನಲ್ಲಿರುವ ಕಿಣ್ವವೊಂದು ಜಠರಗರುಳು ನಾಳದ ಮೇಲ್ಭಾಗದ ಚಲನಶೀಲತೆಯನ್ನು ಪ್ರಚೋದಿಸುತ್ತದೆ. ನಾಲ್ಕು ವಾರಗಳ ಕಾಲ ಪ್ರತಿದಿನ ಎರಡು ಕಿವಿ ಹಣ್ಣುಗಳನ್ನು ತಿಂದರೆ ಮಲವಿಸರ್ಜನೆ ಸರಾಗಗೊಳ್ಳುತ್ತದೆ ಮತ್ತು ವಿರೇಚಕಗಳನ್ನು ಬಳಸುವುದು ಕಡಿಮೆಯಾಗುತ್ತದೆ.
►ಬಾಳೆಹಣ್ಣು
ಸುಮಾರು 100 ಗ್ರಾಂ ತೂಗುವ ಮಧ್ಯಮ ಗಾತ್ರದ ಬಾಳೆಹಣ್ಣು ಸುಮಾರು ಮೂರು ಗ್ರಾಂ ನಾರನ್ನೊಳಗೊಂಡಿರುತ್ತದೆ. ಮಲವಿಸರ್ಜನೆಯನ್ನು ಸರಾಗಗೊಳಿಸಿ ಮಲಬದ್ಧತೆಯನ್ನು ತಡೆಯುವಲ್ಲಿ ನಾರಿನ ಪಾತ್ರವನ್ನು ಹಲವಾರು ಅಧ್ಯಯನಗಳು ಸಾಬೀತುಗೊಳಿಸಿವೆ. ಅದು ನೀರನ್ನು ಹೀರಿಕೊಳ್ಳುವ ಮೂಲಕ ಮಲವನ್ನು ಮೃದುವಾಗಿಸಿ ಕರುಳಿನ ಮೂಲಕ ಅದು ಸರಾಗವಾಗಿ ಸಾಗುವಂತೆ ಮಾಡುತ್ತದೆ.
ಪ್ರತಿದಿನ ಒಂದು ಬಾಳೆಹಣ್ಣು ಸೇವಿಸುವುದರಿಂದ ಮಲವಿಸರ್ಜನೆಯು ನಿಯಮಿತಗೊಳ್ಳುತ್ತದೆ ಮತ್ತು ದೀರ್ಘಕಾಲದ ಮಲಬದ್ಧತೆಯನ್ನು ತಡೆಯುತ್ತದೆ.
►ಒಣದ್ರಾಕ್ಷಿ
ಒಣದ್ರಾಕ್ಷಿಯು ಮಲಬದ್ಧತೆಯ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತದೆ. ಪ್ರತಿ 100 ಗ್ರಾಂ ಒಣದ್ರಾಕ್ಷಿಯು 6.1 ಗ್ರಾಂ ನಾರನ್ನೊಳಗೊಂಡಿರುತ್ತದೆ. ಇದು ಸಾಮಾನ್ಯವಾಗಿ ಲಭ್ಯವಿರುವ ಇತರ ಹಣ್ಣುಗಳಿಗೆ ಹೋಲಿಸಿದರೆ ಅಧಿಕವಾಗಿದೆ. ಜೊತೆಗೆ ಒಣದ್ರಾಕ್ಷಿಯಲ್ಲಿ ಫ್ರುಕ್ಟೋಸ್ ಸಮೃದ್ಧವಾಗಿರುತ್ತದೆ ಮತ್ತು ಅದರಲ್ಲಿಯ ಸಾರ್ಬಿಟೋಲ್ ಎಂಬ ಸಂಯುಕ್ತವು ವಿರೇಚಕ ಗುಣಗಳನ್ನು ಹೊಂದಿದೆ.
►ಸೇಬು
ಪ್ರತಿದಿನ ಒಂದು ಸೇಬುಹಣ್ಣು ತಿನ್ನುವುದರಿಂದ ಮಲಬದ್ಧತೆಯನ್ನು ದೂರವಿಡಲು ನೆರವಾಗುತ್ತದೆ ಮತ್ತು ಈಗಾಗಲೇ ಮಲಬದ್ಧತೆಯಿಂದ ಬಳಲುತ್ತಿರುವರಲ್ಲಿ ಆ ಸಮಸ್ಯೆ ಕಡಿಮೆಯಾಗುತ್ತದೆ. ಮಧ್ಯಮ ಗಾತ್ರದ ಸೇಬು ಸುಮಾರು 4.4 ಗ್ರಾಂ ನಾರನ್ನು ಒಳಗೊಂಡಿದ್ದು,ಇದು ಬಹ್ವಂಶ ಪೆಕ್ಟಿನ್ ರೂಪದಲ್ಲಿರುತ್ತದೆ. ಕರುಳಿನಲ್ಲಿಯ ಬ್ಯಾಕ್ಟೀರಿಯಾಗಳು ಪೆಕ್ಟಿನ್‌ನ್ನು ಶಾರ್ಟ್ ಚೈನ್ ಫ್ಯಾಟಿ ಆ್ಯಸಿಡ್‌ಗಳನ್ನಾಗಿ ವಿಭಜಿಸುತ್ತದೆ ಮತ್ತು ಈ ಫ್ಯಾಟಿ ಆ್ಯಸಿಡ್‌ಗಳು ನೀರನ್ನು ಹೀರಿಕೊಳ್ಳುವ ಮೂಲಕ ಮಲವನ್ನು ಮೃದುಗೊಳಿಸುತ್ತವೆ ಮತ್ತು ಅದು ಕರುಳಿನಿಂದ ಹಾದುಹೋಗುವ ಸಮಯವನ್ನು ತಗ್ಗಿಸುತ್ತವೆ. ಶರೀರವು ಹೆಚ್ಚಿನ ನಾರನ್ನು ಪಡೆಯುವಂತಾಗಲು ಸೇಬು ಹಣ್ಣನ್ನು ಸಿಪ್ಪೆಸಹಿತ ತಿನ್ನಬೇಕು.
►ಪೇರಳೆ ಹಣ್ಣು
ಒಂದು ಮಧ್ಯಮ ಗಾತ್ರದ ಪೇರಳೆ ಹಣ್ಣು ನಮ್ಮ ಶರೀರದ ಶೇ.22ರಷ್ಟು ದೈನಂದಿನ ನಾರಿನ ಅಗತ್ಯವನ್ನು ಒದಗಿಸುತ್ತದೆ. ಈ ಹಣ್ಣು ನಾರಿನ ಜೊತೆಗೆ ಫ್ರುಕ್ಟೋಸ್ ಮತ್ತು ಸಾರ್ಬಿಟಾಲ್‌ಗಳನ್ನೂ ಸಮೃದ್ಧವಾಗಿ ಹೊಂದಿದೆ. ಪೇರಳೆಯನ್ನು ಇಡಿಯಾಗಿ ತಿಂದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಆದರೆ ಮಕ್ಕಳಲ್ಲಿ ಕರುಳಿನ ವ್ಯವಸ್ಥೆ ಪೂರ್ಣವಾಗಿ ರೂಪುಗೊಂಡಿರುವುದಿಲ್ಲವಾದ್ದರಿಂದ ಪೇರಳೆ ರಸವನ್ನು ಕುಡಿಸುವುದು ಒಳ್ಳೆಯದು.
►ಅಂಜೂರ
ಕಚ್ಚಾ ಮತ್ತು ಒಣಗಿಸಿದ ಅಂಜೂರ ಹಣ್ಣುಗಳು ನಾರಿನ ಸಮೃದ್ಧ ಮೂಲಗಳಾಗಿವೆ. ಸುಮಾರು 75 ಗ್ರಾಂ ಒಣಗಿಸಿದ ಮತ್ತು ಕಚ್ಚಾ ಅಂಜೂರ ಹಣ್ಣುಗಳು ಅನುಕ್ರಮವಾಗಿ 7.3 ಗ್ರಾಂ ಮತ್ತು 2 ಗ್ರಾಂ ನಾರನ್ನು ಒಳಗೊಂಡಿರುತ್ತವೆ. ಅಂಜೂರ ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಮಲವಿಸರ್ಜನೆಯು ಕ್ರಮಬದ್ಧಗೊಳ್ಳುತ್ತದೆ ಮತ್ತು ಹೊಟ್ಟೆಯ ತೊಂದರೆಗಳೂ ದೂರವಾಗುತ್ತವೆ.
►ಪಾಲಕ್
ಪಾಲಕ್ ಸೊಪ್ಪು ಸಮೃದ್ಧ ನಾರನ್ನು ಒಳಗೊಂಡಿದೆ.ಅಲ್ಲದೆ ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿವಿಧ ಖನಿಜಗಳು ಮತ್ತು ವಿಟಾಮಿನ್‌ಗಳು ಪಚನ ಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ಒಂದು ಕಪ್ ಪಾಲಕ್ ಸುಮಾರು 4 ಗ್ರಾಂ ನಾರನ್ನು ಒಳಗೊಂಡಿರುತ್ತದೆ.
►ಓಟ್ಸ್
ಓಟ್ಸ್ ಅಥವಾ ತೋಕೆಗೋದಿ ಹೇರಳ ನಾರನ್ನು ಒಳಗೊಂಡಿರುವುದರಿಂದ ಮಲಬದ್ಧತೆಯಿಂದ ಬಳಲುತ್ತಿರುವವರಿಗೆ ಪರಿಪೂರ್ಣ ಆಹಾರವಾಗಿದೆ. ಓಟ್ ಬ್ರಾನ್ ಅಥವಾ ಅದರ ಹೊರಗಿನ ಸಿಪ್ಪೆಯು ನಾರಿನಿಂದ ಸಮೃದ್ಧವಾಗಿದೆ. ಪ್ರತಿದಿನ 8 ಗ್ರಾಂ ಓಟ್ ಬ್ರಾನ್ ಅನ್ನು ಆಹಾರದೊಂದಿಗೆ ಸೇರಿಸಿ ಸೇವಿಸುವುದರಿಂದ ಮಲವಿಸರ್ಜನೆಯು ಸುಗಮಗೊಳ್ಳುತ್ತದೆ ಮತ್ತು ವಿರೇಚಕಗಳನ್ನು ಬಳಸಬೇಕಾದ ಅಗತ್ಯವು ಕಡಿಮೆಯಾಗುತ್ತದೆ.
►ಅಗಸೆ ಬೀಜ
ಮಲಬದ್ಧತೆಯನ್ನು ನಿವಾರಿಸಲು ಸಾಂಪ್ರದಾಯಿಕವಾಗಿ ಬಳಸಲ್ಪಡುತ್ತಿರುವ ಪರಿಹಾರಗಳಲ್ಲಿ ಒಂದಾಗಿರುವ ಅಗಸೆ ಬೀಜಗಳು ಕರಗಬಲ್ಲ ಮತ್ತು ಕರಗದ ನಾರನ್ನೊಳಗೊಂಡಿದ್ದು,ನೈಸರ್ಗಿಕ ವಿರೇಚಕವಾಗಿ ಕೆಲಸ ಮಾಡುತ್ತವೆ. ಒಂದು ಟೇಬಲ್‌ಸ್ಪೂನ್ ಹುರಿದ ಅಗಸೆ ಬೀಜಗಳಲ್ಲಿ ಸುಮಾರು 3 ಗ್ರಾಂ ನಾರು ಇರುತ್ತದೆ.
ಆದರೆ ಗರ್ಭಿಣಿಯರು ಈ ಬೀಜಗಳನ್ನು ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.
►ಸಿಹಿಗೆಣಸು
ಸಿಹಿಗೆಣಸಿನಲ್ಲಿ ನಾರು ಸಮೃದ್ಧವಾಗಿರುತ್ತದೆ. ಮಧ್ಯಮ ಗಾತ್ರದ ಸಿಹಿಗೆಣಸಿನಲ್ಲಿ ಸೆಲ್ಯುಲೋಸ್ ಮತ್ತು ಲಿಗ್ನಿನ್‌ನಂತಹ ಕರಗದ ನಾರು ಮತ್ತು ಪೆಕ್ಟಿನ್‌ನಂತಹ ಕರಗಬಲ್ಲ ನಾರು ಸುಮಾರು 3.8 ಗ್ರಾಮ್‌ನಷ್ಟು ಇರುತ್ತವೆ. ಇವೆರಡೂ ವಿಧದ ನಾರುಗಳು ಕರುಳಿನ ಚಲನವಲನವನ್ನು ಹೆಚ್ಚಿಸಿ ಮಲವಿಸರ್ಜನೆಯನ್ನು ಸರಾಗಗೊಳಿಸುತ್ತವೆ.