ದಿಲ್ಲಿ ದರ್ಬಾರ್

Update: 2018-09-22 18:30 GMT

ಸಿಂಧಿಯಾರ ಕಾರ್ಯತಂತ್ರ

ಮಧ್ಯಪ್ರದೇಶ ಹಾಗೂ ಇತರ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಇನ್ನೇನು ಚುನಾವಣಾ ಆಯೋಗ ಶೀಘ್ರದಲ್ಲೇ ದಿನಾಂಕ ಘೋಷಿಸುವ ನಿರೀಕ್ಷೆಯಿದೆ. ಸದ್ಯ ಕೇಳಿಬರುತ್ತಿರುವ ಸುದ್ದಿಯೆಂದರೆ ಜ್ಯೋತಿರಾದಿತ್ಯ ಸಿಂಧಿಯಾ ಅವರ ಪತ್ನಿ ಪ್ರಿಯದರ್ಶಿನಿ ಮುಂದಿನ ಚುನಾವಣೆಯಲ್ಲಿ ಶಿವಪುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಸದ್ಯ ಈ ಕ್ಷೇತ್ರವನ್ನು ಜ್ಯೋತಿರಾದಿತ್ಯ ಸಿಂಧಿಯಾ ಅವರ ಚಿಕ್ಕಮ್ಮ, ರಾಜ್ಯ ಸರಕಾರದ ಸಚಿವೆಯಾಗಿರುವ ಯಶೋಧರಾ ಪ್ರತಿನಿಧಿಸುತ್ತಿದ್ದಾರೆ. ಈ ಬೆಳವಣಿಗೆಯನ್ನು ಯಶೋಧರಾ ವೌನವಾಗಿ ವೀಕ್ಷಿಸುವ ಮೂಲಕ ತನ್ನ ಹೊಸ ಪ್ರತಿಸ್ಪರ್ಧಿಯ ವಿರುದ್ಧ ಹೋರಾಡುವ ನಿರ್ಧಾರ ತೆಗೆದುಕೊಳ್ಳುತ್ತಾರೆಯೇ ಅಥವಾ ಕುಟುಂಬದೊಳಗೆ ಜಗಳವೇಕೆ ಎಂದು ತಮ್ಮ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಷ್ಟೇ. ಅಷ್ಟಕ್ಕೂ ಸಿಂಧಿಯಾ ಕುಟುಂಬಸ್ಥರು ಜಗಳವಾಡಿದ, ಅದರಲ್ಲೂ ಸಾರ್ವಜನಿಕವಾಗಿ ಕೆಸರೆರೆಚಾಟ ನಡೆಸಿದ ಉದಾಹರಣೆಗಳಿಲ್ಲ. ಪ್ರಿಯದರ್ಶಿನಿಯನ್ನು ಈ ಕ್ಷೇತ್ರದಿಂದ ಕಣಕ್ಕಿಳಿಸುವ ಕಾರ್ಯತಂತ್ರ ಜ್ಯೋತಿರಾದಿತ್ಯ ಸಿಂಧಿಯಾ ಅವರದ್ದು ಎಂದು ಹೇಳಲಾಗುತ್ತಿದೆ. ಆಮೂಲಕ, ಒಂದು ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ತನ್ನ ಹೆಸರು ಚಾಲ್ತಿಗೆ ಬಂದರೆ ಆಗ ಈ ಕ್ಷೇತ್ರದಿಂದ ತಾನು ಸ್ಪರ್ಧಿಸಬಹುದು ಎಂಬ ಲೆಕ್ಕಾಚಾರ ಸಿಂಧಿಯಾರದ್ದು ಎಂದು ಹೇಳಲಾಗುತ್ತಿದೆ.


ಜೇಟ್ಲಿಯ ಪ್ರಸ್ತುತವಾಗಿರಬೇಕೆಂಬ ಬಯಕೆ

ಇತ್ತೀಚೆಗೆ ವಿತ್ತ ಸಚಿವ ಅರುಣ್ ಜೇಟ್ಲಿ ಯಾವ ಮಟ್ಟದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದರೆ ಅವರು ಅಮರ್ ಸಿಂಗ್‌ರಿಂದ ಪ್ರಾಮಾಣಿಕತೆಯ ಪ್ರಮಾಣ ಪತ್ರ ಪಡೆಯಬೇಕಾದ ಅನಿವಾರ್ಯತೆಯಿದೆ ಎಂಬ ಮಾತುಗಳು ತಮಾಷೆಯಾಗಿ ದಿಲ್ಲಿಯಿಂದ ಕೇಳಿಬರುತ್ತಿವೆ. ಮುಲಾಯಂ ಸಿಂಗ್ ಯಾದವ್‌ಗೆ ಸಾಮಿಪ್ಯ ಹೊಂದಿದ್ದ ಅಮರ್ ಸಿಂಗ್ ತಮ್ಮ ರಾಜಕೀಯ ಪರ್ವಕಾಲದಲ್ಲಿ ಒಪ್ಪಂದ ಕುದುರಿಸುವ ಕಲೆಯಿಂದ ಖ್ಯಾತರಾಗಿದ್ದರು. ಅರುಣ್ ಜೇಟ್ಲಿಯನ್ನು ಸಿಂಗ್ ಟ್ವಿಟರ್‌ನಲ್ಲಿ ಸಮರ್ಥಿಸಿರುವುದು ಟ್ವಿಟಿಗರನ್ನು ಆಶ್ಚರ್ಯಕ್ಕೀಡುಮಾಡಿದೆ. ಇದೇ ವೇಳೆ ಜೇಟ್ಲಿಯನ್ನು ಸಮರ್ಥಿಸಲು ಬಿಜೆಪಿ ಇನ್ನೂ ತನ್ನ ಉನ್ನತ ವರ್ಗವನ್ನು ನೇಮಿಸಿಲ್ಲ. ಕಾರಣವೇನೆಂದರೆ, ಜೇಟ್ಲಿ ಖುದ್ದು ಓರ್ವ ಅನುಭವಿ ರಾಜಕಾರಣಿ ಮತ್ತು ವಕೀಲರಾಗಿದ್ದು ತಮ್ಮನ್ನು ಸಮರ್ಥಿಸಿಕೊಳ್ಳಲು ಶಕ್ತವಾಗಿದ್ದಾರೆ ಎಂಬ ಆತ್ಮವಿಶ್ವಾಸವನ್ನು ಬಿಜೆಪಿ ಹೊಂದಿದೆ. ಅಷ್ಟುಮಾತ್ರವಲ್ಲದೆ, ಜೇಟ್ಲಿ ಖುದ್ದು ತಮ್ಮನ್ನು ಸಮರ್ಥಿಸಿಕೊಳ್ಳಲಿ ಎಂಬ ಸೂಚನೆ ಮೇಲಿನಿಂದಲೂ ಬಂದಿರಬಹುದು. ಜೇಟ್ಲಿ, ಬ್ಲಾಗ್ ಮತ್ತು ಮಾಧ್ಯಮದಲ್ಲಿರುವ ತಮ್ಮ ಸ್ನೇಹಿತರ ಮೂಲಕ ತಮ್ಮ ಹೋರಾಟವನ್ನು ಮುಂದುವರಿಸಿದ್ದಾರೆ. ಆರ್ಥಿಕ ನಿರ್ಧಾರಗಳನ್ನು ಪ್ರಧಾನ ಮಂತ್ರಿ ಕಚೇರಿಯೇ ತೆಗೆದುಕೊಳ್ಳಲಿದೆ ಎಂಬ ಸುದ್ದಿಯು ಇತ್ತೀಚೆಗೆ ಪ್ರಮುಖ ವಾರಪತ್ರಿಕೆಯಲ್ಲಿ ವರದಿಯಾಗಿರುವುದು ದಿಲ್ಲಿಯ ಆಡಳಿತಗಾರರಿಗೆ ಕಸಿವಿಸಿ ಉಂಟುಮಾಡಿದೆ. ಪ್ರಧಾನ ಮಂತ್ರಿ ಕಚೇರಿಯೇ ನೇರವಾಗಿ ನಿರ್ಧಾರ ತೆಗೆದುಕೊಳ್ಳುವುದಾದರೆ ವಿತ್ತ ಸಚಿವರ ಪಾತ್ರವಾದರೂ ಏನು? ಒಟ್ಟಾರೆಯಾಗಿ ಅರುಣ್ ಜೇಟ್ಲಿ ಆತಂಕಿತರಾಗಿದ್ದಾರೆ.


ಮುಕುಲ್ ಮತ್ತು ಟಿಎಂಸಿ

ತೃಣಮೂಲ ಕಾಂಗ್ರೆಸ್‌ನಲ್ಲಿದ್ದು ಸದ್ಯ ಬಿಜೆಪಿ ಸೇರಿರುವ ಮುಕುಲ್ ರಾಯ್ ತಮ್ಮ ಹಳೆಯ ನಾಯಕಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸಂದರ್ಭ ಸಿಕ್ಕಾಗಲೆಲ್ಲಾ ವಾಗ್ದಾಳಿ ನಡೆಸುತ್ತಾರೆ. ಆಮೂಲಕ ಬಿಜೆಪಿಯಲ್ಲಿ ತನಗೆ ಗೌರವ ಆದರಗಳು ಸಿಗುವಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ, ಈ ಹಿಂದೆ ಮಮತಾ ಬ್ಯಾನರ್ಜಿಯ ಬಲಗೈ ಬಂಟ ಎಂದೇ ಕರೆಯಲ್ಪಡುತ್ತಿದ್ದ ಮುಕುಲ್ ಇತ್ತೀಚೆಗೆ ದಿಲ್ಲಿಯಲ್ಲಿ ಮುಜುಗರ ಅನುಭವಿಸುವಂತಾಗಿತ್ತು. ದಿಲ್ಲಿಗೆ ಅವರು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ಭಾಷಣವನ್ನು ಕೇಳಲು ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ಜೊತೆ ಬಿಜೆಪಿ ಹಲವು ನಾಯಕರು ಉಪಸ್ಥಿತರಿದ್ದರು. ಈ ವೇಳೆ ಸುದ್ದಿವಾಹಿನಿಯೊಂದು ಮುಕುಲ್ ಅವರಲ್ಲಿ, ‘‘ನೀವ್ಯಾಕೆ ಈ ಸಭೆಗೆ ಆಗಮಿಸಿದ್ದೀರಿ’’ ಎಂದು ಪ್ರಶ್ನಿಸಿತು. ಇದಕ್ಕೆ ಮುಕುಲ್, ‘‘ನಾನು ಆರೆಸ್ಸೆಸ್ ಮೇಲೆ ನಂಬಿಕೆಯಿರುವಾತ’’ ಎಂದು ಉತ್ತರಿಸಿದ್ದರು. ಆಗ ವರದಿಗಾರ, ‘‘ಇದರಿಂದ ಮಮತಾ ಬ್ಯಾನರ್ಜಿ ಕೋಪಗೊಳ್ಳುವುದಿಲ್ಲವೇ?’’ ಎಂದು ಮರುಪ್ರಶ್ನಿಸಿದ್ದ. ಇದರಿಂದ ವಿಚಲಿತರಾದಂತೆ ಕಂಡುಬಂದ ಮುಕುಲ್, ‘‘ನಾನು ಬಿಜೆಪಿ ಸೇರಿ ಬಹಳ ಸಮಯವಾಗಿದೆ’’ ಎಂದು ಉತ್ತರಿಸಿದರು. ಮುಕುಲ್ ಉತ್ತರದಿಂದ ವರದಿಗಾರ ತಬ್ಬಿಬ್ಬಾದರೂ ಸ್ಥಳದಲ್ಲಿದ್ದ ಇತರ ಬಿಜೆಪಿ ನಾಯಕರ ಮುಖದಲ್ಲಿ ನಗು ಅರಳಿತ್ತು.


ಅವರು ಬರುತ್ತಾರೆಯೇ, ಇಲ್ಲವೇ?

ಗಣರಾಜ್ಯ ಸಮಾರಂಭಕ್ಕೆ ಇನ್ನೂ ಬಹಳ ಸಮಯವಿದೆ. ಆದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸುವ ಚಿಂತನೆ ಈಗಲೇ ನಡೆಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಟ್ರಂಪ್ ಈ ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ ಎಂದು ಕೆಲವು ತಿಂಗಳ ಹಿಂದೆ ಸುದ್ದಿ ಹರಡಿತ್ತು. ಆದರೆ ನಂತರ ಅವರು ಇದಕ್ಕೆ ನಿರಾಕರಿಸಿದ್ದಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಅಂತಿಮ ನಿರ್ಧಾರ ಇನ್ನಷ್ಟೇ ಹೊರಬೀಳಲಿದೆ. ಈ ವಿಷಯದಲ್ಲಿ ವಿದೇಶಾಂಗ ಸಚಿವಾಲಯ ವೌನವಾಗಿದೆ. ಕೆಲವರ ಪ್ರಕಾರ, ಸಮಾರಂಭದ ಆಹ್ವಾನ ಪತ್ರಿಕೆಯನ್ನು ಈಗಾಗಲೇ ಶ್ವೇತಭವನಕ್ಕೆ ಕಳುಹಿಸಲಾಗಿದೆ. ಆದರೆ ಟ್ರಂಪ್‌ರಿಂದ ಈ ಕುರಿತು ಇನ್ನೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಒಂದು ವೇಳೆ ಟ್ರಂಪ್‌ರನ್ನು ಈ ಕಾರ್ಯಕ್ರಮದಕ್ಕೆ ಆಹ್ವಾನಿಸಿದರೆ ಅದು ಆಡಳಿತಾರೂಢ ಸರಕಾರದ ವರ್ಚಸ್ಸನ್ನು ಹೆಚ್ಚಿಸಲಿದೆ. ಆದರೆ ಒಂದು ವೇಳೆ ಟ್ರಂಪ್ ಈ ಆಹ್ವಾನವನ್ನು ನಿರಾಕರಿಸಿದರೆ, ಅದು ಸರಕಾರಕ್ಕೆ ಕೆಟ್ಟ ಪ್ರಚಾರ ನೀಡಲಿದೆ. ಹಾಗಾಗಿ ಶ್ವೇತಭವನದಿಂದ ಯಾವುದೇ ಪ್ರತಿಕ್ರಿಯೆ ಹೊರಬೀಳುವವರೆಗೆ ವೌನವಹಿಸುವುದೇ ಉತ್ತಮ ಎಂದು ಸರಕಾರ ಯೋಚಿಸಿದಂತಿದೆ.


ರಾಮಗೋಪಾಲ ಯಾದವ್ ಮತ್ತು ಬಿಜೆಪಿ

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆರೆಸ್ಸೆಸ್ ಮತ್ತು ಬಿಜೆಪಿಯ ಕಡುವೈರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆರೆಸ್ಸೆಸ್‌ನ್ನು ದೂರವಿಟ್ಟರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂದು ಅವರು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು. ಆದರೆ ಅವರ ಚಿಕ್ಕಪ್ಪ ರಾಮಗೋಪಾಲ ಯಾದವ್‌ಗೆ ಭಿನ್ನ ದೃಷ್ಟಿಕೋನ ಇರುವಂತಿದೆ. ಕಳೆದ ವರ್ಷ ಪಕ್ಷ ಮತ್ತು ಕುಟುಂಬದಲ್ಲಿ ಸಮಸ್ಯೆಗಳು ಎದುರಾದಾಗ ರಾಮಗೋಪಾಲ ಯಾದವ್ ಅಖಿಲೇಶ್ ಜೊತೆ ನಿಂತು ಬೆಂಬಲಿಸಿದ್ದರು. ಆದರೆ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಘಟನೆಗೆ ಸಂಬಂಧಿಸಿದ ಎರಡು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ರಾಮಗೋಪಾಲ ಅವರು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಧ್ಯೆ ಕುಳಿತಿದ್ದರು. ದಿಲ್ಲಿಯ ಕಾರ್ಯಕ್ರಮದಲ್ಲಿ ಯಾದವ್ ಏನು ಮಾಡುತ್ತಿದ್ದರು ಎಂಬುದೇ ಎಲ್ಲರ ಪ್ರಶ್ನೆ. ಈ ಪುಸ್ತಕಗಳನ್ನು ಬರೆದ ಹಿರಿಯ ಪತ್ರಕರ್ತ ಹೇಮಂತ್ ಶರ್ಮಾ, ಯಾದವ್‌ಗೆ ಆಪ್ತರಾಗಿದ್ದ ಕಾರಣ ಅವರು ಈ ಸಮಾರಂಭದಲ್ಲಿ ಭಾಗಿಯಾಗಿರಬಹುದು ಎಂಬ ಮಾತುಗಳೂ ಕೇಳಿಬರುತ್ತಿವೆ. ಆದರೆ ಉತ್ತರ ಪ್ರದೇಶ ರಾಜಕಾರಣದಲ್ಲಿ ಏನೋ ನಡೆಯುತ್ತಿದೆ ಎಂಬ ಮಾತುಗಳೂ ಹರಡುತ್ತಿದೆ. ಸಮಯವೇ ಎಲ್ಲವನ್ನೂ ಸ್ಪಷ್ಟಪಡಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75