ದಿಲ್ಲಿ ದರ್ಬಾರ್

Update: 2018-10-20 18:37 GMT

ಮೋದಿ ಪತನದ ಆರಂಭ?
ವಿದೇಶಾಂಗ ಖಾತೆ ರಾಜ್ಯ ಸಚಿವ ಎಂ.ಜೆ.ಅಕ್ಬರ್ ವಿರುದ್ಧ ಸುಮಾರು 20 ಮಹಿಳೆಯರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದಾಗ, ಮೋದಿ ಸರಕಾರದಿಂದ ಅವರನ್ನು ಪದಚ್ಯುತಗೊಳಿಸಲಾಗುತ್ತದೆ ಎಂದೇ ಬಹುತೇಕ ಮಂದಿ ಮಾತನಾಡಿಕೊಳ್ಳುತ್ತಿದ್ದರು. ಆದರೆ ಆಕ್ರೋಶಭರಿತ ಮಹಿಳೆಯರಿಗೆ ಮತ್ತು ಹೋರಾಟಗಾರರಿಗೆ ವಜಾ ಮಾಡಿಸುವುದು ಸಾಧ್ಯವಾಗಲಿಲ್ಲ. ಹಲವು ಬಿಜೆಪಿ ಮುಖಂಡರು ಖಾಸಗಿಯಾಗಿ ಹೇಳಿಕೊಂಡಂತೆ, ಮೋದಿ ಸರಕಾರದ ಮುಖ್ಯಸ್ಥರಾದ ಬಳಿಕ ಯಾವ ಸಚಿವರೂ ರಾಜೀನಾಮೆ ನೀಡಲಿಲ್ಲ. ಗುಜರಾತ್ ಹಿಂಸಾಚಾರದಲ್ಲಿ ಶಾಮೀಲಾದ ಬಗ್ಗೆ ಪೊಲೀಸರಿಂದ ಆರೋಪ ಎದುರಾದಾಗಲೂ ಅವರು ರಾಜೀನಾಮೆ ನೀಡಲಿಲ್ಲ. ಸಚಿವರ ರಾಜೀನಾಮೆ ಎಂದರೆ ತಪ್ಪುಒಪ್ಪಿಕೊಂಡಂತೆ. ಮೋದಿ ಅದನ್ನು ಮಾಡಲಾರರು ಎಂದು ಮುಖಂಡರೊಬ್ಬರು ಖಚಿತವಾಗಿ ಹೇಳಿದ್ದರು. ಈ ಕಾರಣದಿಂದ ರಾಜೀನಾಮೆ ನೀಡುವಂತೆ ಅಕ್ಬರ್ ಅವರನ್ನು ಕೇಳಲಿಲ್ಲ. ಆದರೆ ಮೋದಿ ಸರಕಾರದ ಪರವಾಗಿರುವ ಸುದ್ದಿವಾಹಿನಿಗಳಲ್ಲಿ ಕೂಡಾ ಬಹಳಷ್ಟು ಮಹಿಳೆಯರು ತಮ್ಮ ಅಳಲು ತೋಡಿಕೊಳ್ಳುತ್ತಿರುವುದು ಪ್ರಸಾರವಾದಾಗ ಮತ್ತು ಅಕ್ಬರ್ ವಿರೋಧಿ ಕಾರ್ಯಕ್ರಮಗಳು ಪ್ರಸಾರವಾಗತೊಡಗಿದಾಗ, ರಾಜೀನಾಮೆ ನೀಡುವುದು ಅನಿವಾರ್ಯವಾಯಿತು. ಬಹುಶಃ ಮೋದಿಯವರು ತಳಮಟ್ಟದ ನಾಡಿಮಿಡಿತವನ್ನು ಅರಿತುಕೊಂಡಿಲ್ಲ ಎಂದು ಇದೀಗ ಕೆಲ ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಇದು ಮೋದಿಯವರ ಕುಸಿತದ ಆರಂಭವೇ ಎನ್ನುವ ಪ್ರಶ್ನೆಯನ್ನು ಹಲವರು ಮುಂದಿಡುತ್ತಿದ್ದಾರೆ. ಆದರೆ ಇದಕ್ಕೆ ಉತ್ತರ ನೀಡುವ ಸಾಹಸಕ್ಕೆ ಯಾರೂ ಕೈ ಹಾಕಿಲ್ಲ.


ಅಖಿಲೇಶ್ ಸೃಷ್ಟಿಸಿದ ಗೊಂದಲ
ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಇತ್ತೀಚೆಗೆ ಪಕ್ಷದ ಪರವಾಗಿ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಮಾತನಾಡಲು ಅಧಿಕಾರ ನೀಡಿ ಹಲವು ಮಂದಿ ವಕ್ತಾರರ ಹೆಸರು ಘೋಷಿಸಿದ್ದಾರೆ. ಆದರೆ ಇಲ್ಲೂ ಒಂದು ಸಮಸ್ಯೆ ಇದೆ. ವಕ್ತಾರರ ಸಂಖ್ಯೆ 40ನ್ನು ತಲುಪಿದ್ದು, ಯಾರು ಯಾವಾಗ ಯಾವ ಚಾನೆಲ್‌ಗಳಿಗೆ ಮಾತನಾಡಬೇಕು ಎಂಬ ಬಗ್ಗೆ ಇವರಲ್ಲೇ ಅಕ್ಷರಶಃ ಕಚ್ಚಾಟ ಆರಂಭವಾಗಿದೆ. ಆದರೆ ಹೆಚ್ಚು ಚಿರಪರಿಚಿತರಲ್ಲದ, ರಾಷ್ಟ್ರೀಯವಾಗಿ ಹಾಗೂ ಪ್ರಾದೇಶಿಕವಾಗಿ ಹೆಚ್ಚು ಬಳಕೆಯಲ್ಲಿಲ್ಲದ ಮಂದಿಯನ್ನು ಯಾವ ಚಾನೆಲ್‌ಗಳು ಕೂಡಾ ಕರೆಯುತ್ತಿಲ್ಲ. ಕೆಲವರು ಚಾನೆಲ್ ಕಚೇರಿಗಳಿಗೆ ಭೇಟಿ ನೀಡುವ ಮತ್ತು ಚಾನೆಲ್ ಮುಖ್ಯಸ್ಥರಿಗೆ ದೂರವಾಣಿ ಕರೆ ಮಾಡುವ ಮೂಲಕ ಪರಿಚಯಿಸಿಕೊಳ್ಳುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಉತ್ತಮ ಸಾಧನೆಯ ವಿಶ್ವಾಸವಿದ್ದ ಅಖಿಲೇಶ್ ಯಾದವ್ ಅವರಿಗೆ ಇದು ಅನಪೇಕ್ಷಿತ ತೊಂದರೆಗೆ ಕಾರಣವಾಗಲಿದೆ. ಚಾನೆಲ್‌ಗಳ ಸಂಖ್ಯೆಗಿಂತಲೂ ಹೆಚ್ಚು ವಕ್ತಾರರನ್ನು ಬಹುಶಃ ಅವರು ನೇಮಕ ಮಾಡಿದ್ದಾರೆ. ಟಿವಿ ಪರದೆ ಮೇಲೆ ಕಾಣಿಸಿಕೊಳ್ಳುವ ವಿಚಾರದಲ್ಲಿ ಕಚ್ಚಾಟದ ಸರದಿ ಈಗ ಈ ನಾಯಕರದ್ದು. ಈ ಸಮರದಲ್ಲಿ ಗೆಲ್ಲುವವರು ಯಾರು ಎಂದು ಕಾದು ನೋಡಬೇಕಿದೆ.


ಪ್ರಶಾಂತ್ ಕಿಶೋರ್ ಕಸರತ್ತು
ರಾಜಕಾರಣಿಯಾಗಿ ಬದಲಾಗಿ ಸಂಯುಕ್ತ ಜನತಾದಳ ಸೇರಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಇತ್ತೀಚೆಗೆ ದಿಲ್ಲಿಗೆ ಆಗಮಿಸಿದ್ದರು. 2015ರ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾದಳ, ಕಾಂಗ್ರೆಸ್ ಹಾಗೂ ಸಂಯುಕ್ತ ಜನತಾದಳವನ್ನು ಒಟ್ಟು ಸೇರಿಸಿ ಮಹಾಘಟಬಂಧನ ಸ್ಥಾಪಿಸಿ, ಬಿಜೆಪಿಯನ್ನು ಮಣ್ಣುಮುಕ್ಕಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ಕಿಶೋರ್ ಇದೀಗ ತಮ್ಮ ಹಳೆಯ ಪಾತ್ರವನ್ನು ಮತ್ತೆ ನಿರ್ವಹಿಸುತ್ತಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲೂ ಮೈತ್ರಿಕೂಟ ರಚಿಸುವ ಪ್ರಯತ್ನದಲ್ಲಿದ್ದಾರೆ. ನಿತೀಶ್ ಕುಮಾರ್ ಅವರು ನರೇಂದ್ರ ಮೋದಿ ಜತೆಗಿನ ಸಖ್ಯವನ್ನು ಮತ್ತೆ ಬೆಸೆದುಕೊಂಡಿರುವುದರಿಂದ ಈ ಬಾರಿ ಕಿಶೋರ್ ಎನ್‌ಡಿಎಗೆ ನೆರವು ನೀಡುತ್ತಿದ್ದಾರೆ. ಎನ್‌ಡಿಎ ಮಿತ್ರಪಕ್ಷಗಳಾದ ಬಿಜೆಪಿ, ಜೆಡಿಯು, ರಾಮವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿ ಮತ್ತು ಇತರ ಸಣ್ಣ ಪಕ್ಷಗಳ ನಡುವೆ ಲೋಕಸಭಾ ಸ್ಥಾನ ಹಂಚಿಕೆ ಸಂಬಂಧ ವೈಮನಸ್ಯ ಇದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಕಿಶೋರ್, ಪಾಸ್ವಾನ್ ಅವರನ್ನು ಭೇಟಿ ಮಾಡಲು ಮುಂದಾಗಿದ್ದಾರೆ. ಆದರೆ ಕಿಶೋರ್ ಭೇಟಿ ಮಾಡುವ ಇಚ್ಛೆ ಪಾಸ್ವಾನ್ ಅವರಿಗೆ ಇರಲಿಲ್ಲ ಎನ್ನಲಾಗಿದೆ. ಕೊನೆಗೆ ಭೇಟಿ ಮಾಡಲು ಒಪ್ಪಿಗೆ ನೀಡಿದರು. ಆದರೆ ಈ ತಂತ್ರಗಾರ ಹಾಗೂ ಕೇಂದ್ರ ಸಚಿವ ಪಾಸ್ವಾನ್ ನಡುವಿನ ಭೇಟಿ ವಿಷಯ ಅವರ ಭೇಟಿಗೆ ಮುನ್ನವೇ ಟಿವಿ ವಾಹಿನಿಗಳಿಗೆ ಸೋರಿಕೆಯಾಯಿತು. ಟಿವಿಗಳಲ್ಲಿ ಈ ಬಗೆಗಿನ ಸುದ್ದಿಗಳು ಪ್ರಸಾರವಾಗುತ್ತಿದ್ದಂತೆ ಅಸಮಾಧಾನಗೊಂಡ ಪಾಸ್ವಾನ್ ಆ ಭೇಟಿಯನ್ನೂ ರದ್ದು ಮಾಡಿದರು. ಇದರಿಂದ ಈ ಬಾರಿಯ ಮಹಾಘಟಬಂಧನದ ಪ್ರಯತ್ನ ಫಲ ನೀಡುವಂತೆ ಕಾಣುತ್ತಿಲ್ಲ. ವಿರೋಧಿಗಳನ್ನು ಸ್ನೇಹಿತರನ್ನಾಗಿ ಪರಿವರ್ತಿಸುವ ಕೌಶಲವನ್ನು ಕಿಶೋರ್ ಬಹುಶಃ ಕಳೆದುಕೊಂಡಂತಿದೆ.


ಸಿಂಧಿಯಾ ಸಿಡಿಮಿಡಿ
ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಮಧ್ಯಪ್ರದೇಶದಲ್ಲಿ ಕೂಡಾ ಅಸಮಾಧಾನ ಹೊಗೆಯಾಡುತ್ತಿದೆ. ಈ ಪರಿಣಾಮವಾಗಿ ಸಿಂಧಿಯಾ ಅವರ ಭದ್ರಕೋಟೆ ಶಿವಪುರಿಯಲ್ಲೇ ಪ್ರತಿಭಟನೆ, ಆಕ್ರೋಶ ಕಟ್ಟೆಯೊಡೆದಿದೆ. ರಾಜ್ಯದ ಸಚಿವೆ ಯಶೋಧರಾರಾಜೇ ಸಿಂಧಿಯಾ, ಪಕ್ಷದ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲೇ ಸಭಾತ್ಯಾಗ ಮಾಡಿದ್ದರು. ಬಿಜೆಪಿಯ ರಾಜಮಾತೆ ಎನಿಸಿಕೊಂಡಿದ್ದ ಅತ್ಯುನ್ನತ ನಾಯಕಿ ವಿಜಯರಾಜೇ ಸಿಂಧಿಯಾ ಅವರ ಕಿರಿಯ ಪುತ್ರಿ, ತಮ್ಮ ತಾಯಿಯ ಭಾವಚಿತ್ರವನ್ನು ಪೋಡಿಯಂನಲ್ಲಿ ಪ್ರದರ್ಶಿಸದಿದ್ದ ಬಗ್ಗೆ ಸಿಟ್ಟಾಗಿದ್ದಾರೆ. ಬಿಜೆಪಿ ರಾಜ್ಯ ಘಟಕ, ವಿಜಯರಾಜೇ ಸಿಂಧಿಯಾ ಅವರ ಜನ್ಮಶತಮಾನೋತ್ಸವವನ್ನು ಆಚರಿಸುತ್ತಿದೆ. ಇದು ಗ್ವಾಲಿಯರ್‌ನಿಂದ ದಿಲ್ಲಿಯವರೆಗೆ ಓಟವನ್ನೂ ಆಯೋಜಿಸಿದೆ. ಈ ಉದ್ರಿಕ್ತ ನಾಯಕಿ, ಶಾ ಪಾಲಿನ ಕಣ್ಮಣಿ. ಏಕೆಂದರೆ ಶಿವಪುರಿ ಶಾಸಕಿಯಾಗಿರುವ ಅವರು ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿಭಾಯಿಸಿದ್ದಾರೆ. ಆದರೆ ಆಂತರಿಕ ಕಚ್ಚಾಟ ಸಹಜವಾಗಿಯೇ ಶಾ ಅವರ ಗಮನ ಸೆಳೆದಿದೆ. ಆಡಳಿತ ವಿರೋಧಿ ಅಲೆಯ ವಿರುದ್ಧ ಬಿಜೆಪಿ ಹೋರಾಡುತ್ತಿರುವ ರಾಜ್ಯದಲ್ಲಿ, ಚುನಾವಣೆ ಸಂದರ್ಭದಲ್ಲಿ ಈ ರಾಜಮನೆತನದ ನಾಯಕಿ ಮುನಿಸಿಕೊಳ್ಳುವುದನ್ನು ಶಾ ಸಹಿಸಲಾರರು.


ವೋರಾ ಆಜ್ಞೆ
ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪಕ್ಷದ ಪ್ರಧಾನ ಆಡಳಿತಗಾರ ಹುದ್ದೆಯನ್ನು ಮಾಜಿ ಖಜಾಂಚಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಮೋತಿಲಾಲ್ ವೋರಾ ಅವರಿಗೆ ವಹಿಸಿದ್ದು, ಅವರ ಮಾರ್ಗದರ್ಶನದಲ್ಲಿ ಭಾರೀ ಬದಲಾವಣೆಗಳು ಕಾಣುತ್ತಿವೆ. ಖಜಾಂಚಿ ಅಹ್ಮದ್ ಪಟೇಲ್ ಅವರ ಪರವಾಗಿ ಚೆಕ್ಕುಗಳಿಗೆ ವೋರಾ ಸಹಿ ಮಾಡುತ್ತಿದ್ದು, ಪಕ್ಷದ ಪದಾಧಿಕಾರಿಗಳಿಗೆ ಏನು ಮಾಡಬೇಕು ಏನು ಮಾಡಬಾರದು ಎಂಬ ವಿಚಾರಗಳ ದೊಡ್ಡ ಪಟ್ಟಿಯನ್ನೇ ನೀಡಿದ್ದಾರೆ. ಉದಾಹರಣೆಗೆ, 70ಕ್ಕೂ ಅಧಿಕ ಮಂದಿ ಪ್ರಧಾನ ಕಾರ್ಯದರ್ಶಿಗಳು ಅವರು ಯಾವ ರಾಜ್ಯದಲ್ಲಿ ಕಾರ್ಯ ನಿರ್ವಹಿಸಬೇಕೋ ಆ ರಾಜ್ಯದಲ್ಲಿ ತಿಂಗಳಿಗೆ ಕನಿಷ್ಠ 15 ದಿನಗಳನ್ನು ಕಳೆಯುವಂತೆ ಆದೇಶಿಸಿದ್ದಾರೆ. ಈ ಅವಧಿಯಲ್ಲಿ ಸ್ಥಳೀಯ ಕಾಂಗ್ರೆಸ್ ಘಟಕ, ಈ ಗಣ್ಯರ ಅಗತ್ಯಗಳನ್ನು ಪೂರೈಸಬೇಕು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ. ಆದರೆ ಬಹುತೇಕ ರಾಜ್ಯ ಘಟಕಗಳು ಸಂಪನ್ಮೂಲ ಕೊರತೆ ಎದುರಿಸುತ್ತಿರುವುದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದರಿಂದಾಗಿ ಈ ಘಟಕಗಳು ತಮ್ಮ ಅತಿಥಿಗಳ ಅಗತ್ಯಗಳನ್ನು ಈಡೇರಿಸುವ ಸ್ಥಿತಿಯಲ್ಲೂ ಇಲ್ಲ.
ಪದೇ ಪದೇ ವಿಮಾನಯಾನ ಮಾಡುವ ಕಾಂಗ್ರೆಸಿಗರಿಗೂ ವೋರಾ ಕೆಟ್ಟ ಸುದ್ದಿ ತಂದಿದ್ದಾರೆ. ಇದಕ್ಕಾಗಿಯೇ ವಿಮಾನಯಾನವನ್ನು ತಡೆಯುವಂತೆ ಸೂಚಿಸಿದ್ದಾರೆ. ಕಾಂಗ್ರೆಸ್ ಸಂಸದರು ಮತ್ತು ಶಾಸಕರು ತಮ್ಮ ಪ್ರವಾಸ ಹಾಗೂ ತುಟ್ಟಿಭತ್ತೆಯನ್ನು ಸ್ವಯಂಪ್ರೇರಿತರಾಗಿ ತ್ಯಜಿಸುವಂತೆಯೂ ಸೂಚಿಸಿದ್ದಾರೆ. ಅಧಿಕಾರದಿಂದ ಹೊರಗಿರುವ ಕಾರಣದಿಂದ ಸಹಜವಾಗಿಯೇ, ಅದು ಭಾರೀ ಬೆಲೆ ತೆರಬೇಕಾಗಿ ಬಂದಿದೆ. ಬಹುಶಃ ಪರ್ಸನ್ನು ಹೇಗೆ ಬಿಗಿಯಾಗಿ ಹಿಡಿದಿಟ್ಟುಕೊಳ್ಳಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75