ದಿಲ್ಲಿ ದರ್ಬಾರ್

Update: 2018-10-27 18:37 GMT

ಸಿನ್ಹಾಗೆ ಜೆಪಿಯಾಗುವ ಕನಸು?
ಮಾಜಿ ಕೇಂದ್ರ ಸಚಿವ ಮತ್ತು ಬಿಜೆಪಿಯ ಬಂಡಾಯ ನಾಯಕ ಯಶವಂತ ಸಿನ್ಹಾ ಮೆದುಮಾತಿಗೆ ಹೆಸರಾದವರು. ಆದರೆ ವಿವಿಧ ವಿವಾದಗಳ ವೇಳೆ ನರೇಂದ್ರ ಮೋದಿ ಸರಕಾರದ ಮೇಲೆ ವಾಗ್ದಾಳಿ ನಡೆಸುವಲ್ಲಿ ಮುಂಚೂಣಿ ನಾಯಕ. ಅವರು ಸಮಾಜವಾದಿ ಮುಖಂಡ ಹಾಗೂ ಇಂದಿರಾಗಾಂಧಿ ವಿರುದ್ಧ ತುರ್ತು ಪರಿಸ್ಥಿತಿ ಅವಧಿಯಲ್ಲಿ ಅಂದರೆ 70ರ ದಶಕದಲ್ಲಿ ಹೋರಾಟದ ನೇತೃತ್ವ ವಹಿಸಿದ್ದ ಜಯಪ್ರಕಾಶ್‌ನಾರಾಯಣ್ ಅವರಿಂದ ಸ್ಫೂರ್ತಿ ಪಡೆದಂತಿದೆ. ಅದು ಎಷ್ಟರಮಟ್ಟಿಗೆ ಎಂದರೆ, ಜೆಪಿಯವರ ಚಿತ್ರ ದಿಲ್ಲಿಯಲ್ಲಿರುವ ಸಿನ್ಹಾ ಬಂಗಲೆಯಲ್ಲಿ ರಾರಾಜಿಸುತ್ತಿದೆ. ವಾಸ್ತವವಾಗಿ ಸಿನ್ಹಾ 1980ರ ದಶಕದ ಅರ್ಧದಲ್ಲಿ ಸಮಾಜವಾದಿ ಮುಖಂಡರಾಗಿಯೇ ರಾಜಕೀಯ ಆರಂಭಿಸಿದವರು. ನಾಗರಿಕ ಸೇವಾ ಹುದ್ದೆಯನ್ನು ತೊರೆದು ಜನತಾ ಪಕ್ಷ ಸೇರಿದರು. ಬಳಿಕ ಅವರು ಬಲಪಂಥೀಯರಾಗಿ ಮಾರ್ಪಾಡು ಹೊಂದಿ ಬಿಜೆಪಿ ಸೇರಿದರು. ಜೆಪಿ ಬಗ್ಗೆ ಸಿನ್ಹಾ ಅವರನ್ನು ಯಾರು ಕೇಳಿದರೂ, ನಾನು ರಾಜಕೀಯವಾಗಿ ಮಾತ್ರವಲ್ಲ; ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ಕೂಡಾ ಜೆಪಿಯವರಿಗೆ ಹೊಂದಿಕೊಂಡಿದ್ದೇನೆ ಎಂದು ಹೇಳುತ್ತಾರೆ. ಸಿನ್ಹಾ ಅವರು ಹೇಳುವಂತೆ ಜೆಪಿಯಂಥ ನಾಯಕರು, ದೇಶದ ಮೀಸಲು ಶಕ್ತಿಗಳಾಗಿದ್ದು, ದೇಶಕ್ಕೆ ಅಗತ್ಯವಿದ್ದಾಗ ತಮ್ಮ ಪಾತ್ರವನ್ನು ನಿರ್ವಹಿಸುವವರು. ಜೆಪಿಯವರ ಇದೇ ಹೆಜ್ಜೆಯನ್ನು ಸಿನ್ಹಾ ಅನುಸರಿಸಬೇಕು ಮತ್ತು ದೇಶಕ್ಕೆ ಅಗತ್ಯವಾದ್ದನ್ನು ಮಾಡಬೇಕು ಎಂದು ನಿರ್ಧರಿಸಿದಂತಿದೆ. ಜೆಪಿಯವರ ಕಾರ್ಯವನ್ನು ಸಿನ್ಹಾ ಮುಂದುವರಿಸುತ್ತಾರೆಯೇ ಎನ್ನುವ ಪ್ರಶ್ನೆಗೆ ಕಾಲವೇ ಉತ್ತರಿಸಬೇಕು.


ಪತ್ರಕರ್ತರ ಬೆಂಬಲ ಯಾಚಿಸಿದ ರಾಹುಲ್
ರಫೇಲ್‌ನಂಥ ಹಗರಣ ಮತ್ತು ತೀರಾ ಇತ್ತೀಚಿನ ಸಿಬಿಐ ವಿವಾದದಂಥ ಪ್ರಕರಣಗಳನ್ನು ಅರ್ಥ ಮಾಡಿಕೊಳ್ಳಲು ಕಾಂಗ್ರೆಸ್ ನಾಯಕತ್ವ, ತನಿಖಾ ಪತ್ರಕರ್ತರೊಬ್ಬರ ನೆರವು ಯಾಚಿಸಿದೆ ಎಂಬ ವದಂತಿಗಳು ರಾಜಧಾನಿಯಲ್ಲಿ ದಟ್ಟವಾಗಿ ಹಬ್ಬಿವೆ. ಯಾವುದೇ ಇಂಥ ವಿಷಯವನ್ನು ಎಬ್ಬಿಸಬೇಕಾದರೆ ಯಾವ ಕೋನದಿಂದ ಅದನ್ನು ನೋಡಬೇಕು ಮತ್ತು ಹೇಗೆ ಈ ವಿಚಾರಗಳನ್ನು ಆಳವಾಗಿ ಅರ್ಥ ಮಾಡಿಕೊಳ್ಳಬೇಕು ಎಂಬ ಸಲಹೆಯನ್ನು ಈ ಪತ್ರಕರ್ತ ನೀಡುತ್ತಿದ್ದಾರೆ ಎನ್ನುವುದು ಆಂತರಿಕ ಮೂಲಗಳಿಂದ ತಿಳಿದುಬಂದ ವಿಚಾರ. ಆದರೆ ಈ ವ್ಯಕ್ತಿಗಳು ಸರಕಾರದ ಯಾವುದೇ ರಹಸ್ಯ ದಾಖಲೆಗಳನ್ನು ಪರಿಶೀಲಿಸಲು ಮುಂದಾದಲ್ಲಿ ತೊಂದರೆಗೆ ಸಿಲುಕಿಕೊಳ್ಳುವ ಅಪಾಯವೂ ಇದೆ. ಸರಕಾರ ಸುಲಭವಾಗಿ ಇವರ ಮೇಲೆ ಅಧಿಕೃತ ರಹಸ್ಯಗಳ ಕಾಯ್ದೆ ಅನ್ವಯ ಪ್ರಕರಣ ದಾಖಲಿಸುವ ಎಲ್ಲ ಸಾಧ್ಯತೆಯೂ ಇದೆ. ರಾಹುಲ್‌ಗಾಂಧಿಯವರು ಇಂಥ ವಿವಾದಗಳನ್ನು ಕೆದಕಿ, ಸರಕಾರಕ್ಕೆ ಆತಂಕ ತರುವ ಜತೆಗೆ ತಮ್ಮ ಗಡಿಯನ್ನೂ ವಿಸ್ತರಿಸಿಕೊಳ್ಳುತ್ತಿದ್ದಾರೆ ಎನಿಸುತ್ತದೆ.


ದೀಕ್ಷಿತ್ ಪುನರಾಗಮನ
ದಿಲ್ಲಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ಮಾಕೆನ್ ಅವರು ತಮ್ಮ ಆರೋಗ್ಯ ಕಾರಣದಿಂದಾಗಿ ಈ ಹುದ್ದೆಯಲ್ಲಿ ಮುಂದುವರಿಯಲು ಆಸಕ್ತಿ ಹೊಂದಿದ್ದಾರೆಯೇ ಎಂಬ ಸಂದೇಹ ವ್ಯಕ್ತಪಡಿಸುವ ದಟ್ಟ ವದಂತಿಗಳು ದಿಲ್ಲಿಯಲ್ಲಿ ಹರಿದಾಡುತ್ತಿವೆ. ಬೆನ್ನುನೋವಿಗೆ ಚಿಕಿತ್ಸೆ ಪಡೆಯಲು ಅವರು ಈಗಾಗಲೇ ವಿದೇಶಕ್ಕೆ ಹೋಗಿದ್ದಾರೆ. ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ಈ ಹುದ್ದೆಯನ್ನು ನಿಭಾಯಿಸಿಕೊಂಡು ಹೋಗುವುದು ಸಾಧ್ಯವಾಗದು ಎಂದು ಪಕ್ಷದ ಮುಖಂಡರಿಗೆ ಸ್ಪಷ್ಟ ಸಂದೇಶವನ್ನು ಮಾಕೆನ್ ರವಾನಿಸಿದ್ದಾರೆ ಎನ್ನಲಾಗಿದೆ. ಚುನಾವಣಾ ಸಂದರ್ಭದಲ್ಲಿ ಹಿಂದೆ ನೀಡಿದಷ್ಟು ಸಮಯವನ್ನು ಈಗ ನೀಡುವುದು ಅಸಾಧ್ಯ ಎನ್ನುವುದು ಮಾಕೆನ್ ಅವರ ಅಭಿಪ್ರಾಯ. ತಲೆಮಾರಿನ ಬದಲಾವಣೆ ಪಕ್ಷಕ್ಕೆ ಹೊಡೆತ ನೀಡಿದ ಸಂದರ್ಭದಲ್ಲಿ ಮಾಕೆನ್ ಅವರನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರೇ ಸ್ವತಃ ದಿಲ್ಲಿ ಘಟಕಕ್ಕೆ ನಿಯೋಜಿಸಿದ್ದರು. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್, ಯುವ ಪೀಳಿಗೆಯ ಮುಖಂಡನಿಗೆ ದಾರಿ ಮಾಡಿಕೊಡಬೇಕಾಯಿತು. ಆದರೆ ಇದೀಗ ದಿಲ್ಲಿ ಘಟಕದ ಮುಖ್ಯಸ್ಥೆಯಾಗಿ ಶೀಲಾ ದೀಕ್ಷಿತ್ ಪುನರಾಗಮನದ ಸಾಧ್ಯತೆ ದಟ್ಟವಾಗಿದೆ. ಅವರು ಕೂಡಾ ಶಸ್ತ್ರಚಿಕಿತ್ಸೆಗೆ ಒಳಗಾಗಿ ಗುಣಮುಖರಾಗಿ ವಾಪಸಾಗಿದ್ದು, ದಿಲ್ಲಿ ಅಧ್ಯಕ್ಷ ಹುದ್ದೆಯನ್ನು ಇಚ್ಛಿಸಿದ್ದಾರೆ ಎನ್ನಲಾಗಿದೆ. ಮಾಕೆನ್ ಅವರು ತಮ್ಮದೇ ವಿಶಿಷ್ಟ ಕಾರ್ಯಶೈಲಿ ಮತ್ತು ಕಠಿಣ ಪರಿಶ್ರಮದ ಹಿನ್ನೆಲೆ ಹೊಂದಿರುವುದರಿಂದ ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರು ಈ ಬದಲಾವಣೆಯಲ್ಲಿ ಎಷ್ಟು ಆಸಕ್ತಿ ಹೊಂದಿದ್ದಾರೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಆದರೆ ದಿಲ್ಲಿಯನ್ನು 15 ವರ್ಷ ಆಳಿದ ದೀಕ್ಷಿತ್‌ಗೆ, ಪಕ್ಷವನ್ನು ಒಗ್ಗಟ್ಟಾಗಿ ಇಟ್ಟುಕೊಂಡು ಚುನಾವಣೆ ಗೆಲ್ಲುವುದು ಹೇಗೆ ಎನ್ನುವುದು ಚೆನ್ನಾಗಿ ಗೊತ್ತು ಎಂದು ಇತರ ಕೆಲವರು ಹೇಳುತ್ತಾರೆ.


ಅಸ್ತಾನಾ ದಿಢೀರ್ ಉದಯ
2000ನೇ ಇಸವಿಯಲ್ಲಿ ಯುವ ಐಪಿಎಸ್ ಅಧಿಕಾರಿಯಾದ ರಾಕೇಶ್ ಅಸ್ತಾನಾ ಅವರಿಗೆ ಕೇಂದ್ರ ಗೃಹಸಚಿವರಾಗಿದ್ದ ಎಲ್.ಕೆ.ಅಡ್ವಾಣಿಯವರನ್ನು ಭೇಟಿ ಮಾಡುವ ಅವಕಾಶ ದೊರಕಿದ್ದು, ಅವರ ವೃತ್ತಿಜೀವನದ ಮಹತ್ವದ ತಿರುವು. ಅಡ್ವಾಣಿಯವರ ಭೇಟಿಗೆ ಭದ್ರತಾ ಕ್ರಮಗಳ ಹೊಣೆ ಅವರದ್ದಾಗಿತ್ತು ಹಾಗೂ ಅತಿಥಿಗೃಹದಲ್ಲಿ ಗೃಹಸಚಿವರನ್ನು ಭೇಟಿ ಮಾಡುವ ಅವಕಾಶವೂ ಸಿಕ್ಕಿತು. ಒಬ್ಬ ಹಿರಿಯ ಅಧಿಕಾರಿ ಅಡ್ವಾಣಿಯವರಿಗೆ ಅಸ್ತಾನಾ ಅವರನ್ನು ಪರಿಚಯಿಸಿದರು. ಕಿರು ಸಂವಾದದಲ್ಲೇ ಅಸ್ತಾನಾ ಅಡ್ವಾಣಿಯವರ ಗಮನ ಸೆಳೆದರು. ‘‘ನಿಮ್ಮ ಆದರ್ಶ ಯಾರು?’’ ಎಂದು ಅಡ್ವಾಣಿ ಪ್ರಶ್ನಿಸಿದರು. ‘‘ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲಭಭಾಯಿ ಪಟೇಲ್’’ ಎಂಬ ಉತ್ತರ ಯುವ ಅಧಿಕಾರಿಯಿಂದ ಬಂತು. ಅಡ್ವಾಣಿ ಪ್ರತಿ ಬಾರಿ ಗುಜರಾತ್‌ಗೆ ಭೇಟಿ ನೀಡಿದಾಗಲೂ ಅವರ ಭದ್ರತಾ ವ್ಯವಸ್ಥೆಯ ಹೊಣೆ ಹೊತ್ತಿದ್ದ ಅಸ್ತಾನಾ ಸಹಜವಾಗಿಯೇ ಅವರ ಮೆಚ್ಚುಗೆಗೆ ಪಾತ್ರರಾದರು. ಮೋದಿ ಗುಜರಾತ್‌ನ ಮುಖ್ಯಮಂತ್ರಿಯಾದ ತಕ್ಷಣ ಅಸ್ತಾನಾ, ಮೋದಿ ಗಮನವನ್ನೂ ಸೆಳೆದರು. 2002ರಲ್ಲಿ ಗೋಧ್ರಾದಲ್ಲಿ ಸಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ ಮತ್ತು ಆ ಬಳಿಕ ನಡೆದ ಗಲಭೆಯ ವಿಚಾರಣೆ ನಡೆಸಿದವರಲ್ಲಿ ರಾಕೇಶ್ ಕೂಡಾ ಒಬ್ಬರು. ಈ ಹತ್ಯಾಕಾಂಡ ಪೂರ್ವನಿಯೋಜಿತ ಎನ್ನುವ ಮುಖ್ಯಮಂತ್ರಿ ಮೋದಿ ಹೇಳಿಕೆಯನ್ನು ಅಸ್ತಾನಾ ವರದಿ ಸಮರ್ಥಿಸಿತ್ತು. ಆ ಬಳಿಕ ಅಸ್ತಾನಾ ಹಿಂದಿರುಗಿ ನೋಡಿದ್ದೇ ಇಲ್ಲ. ಅಂತಿಮವಾಗಿ ಮೋದಿ ಅವರನ್ನು ಸಿಬಿಐಗೆ ಕರೆತಂದರು. ಇದೀಗ ಅವರನ್ನು ಪದಚ್ಯುತಗೊಳಿಸಿದ್ದರೂ, ಅವರು ತಮ್ಮದೇ ಹಿಡಿತವನ್ನು ಸಿಬಿಐನಲ್ಲಿ ಹೊಂದಿದ್ದಾರೆ ಎನ್ನುವುದು ಸಿಬಿಐನ ಕೆಲ ಅಧಿಕಾರಿಗಳ ಅನಿಸಿಕೆ. ಅಸ್ತಾನಾ ಪಾಳಯದ ಯಾವ ಸದಸ್ಯರನ್ನೂ ವರ್ಗಾಯಿಸಿಲ್ಲ; ಆದರೆ ಅಲೋಕ್ ವರ್ಮಾ ಅವರ ಕಿರಿಯ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗಿದೆ ಎಂದು ಸಿಬಿಐನ ಒಳಗಿನವರು ಹೇಳುತ್ತಾರೆ. ಅಸ್ತಾನಾ ಮತ್ತೆ ಬರಬಲ್ಲರು; ಆದರೆ ವರ್ಮಾಗೆ ಅದು ಅಸಾಧ್ಯ ಎನ್ನುವ ಅಂದಾಜು ಹಲವರಲ್ಲಿದೆ. ಏಕೆಂದರೆ ಮೋದಿ ಅಸ್ತಾನಾರ ಬೆಂಬಲಕ್ಕಿದ್ದಾರೆ!


ಅತೀಶಿ ಮರ್ಲೇನಾ ಅಥವಾ ಅತೀಶಿ ಸಿಂಗ್?
ದಿಲ್ಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಈಗಾಗಲೇ ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಜಾತಿ ಗುಂಪುಗಳನ್ನು ಓಲೈಸುವುದಕ್ಕೂ ಹಿಂದೆ ಮುಂದೆ ನೋಡಿಲ್ಲ. ಇತ್ತೀಚೆಗೆ ಆಪ್ ನಾಯಕಿ ಅತೀಶಿಯವರಿಗೆ ಮರ್ಲೇನಾ ಎಂಬ ಸರ್‌ನೇಮ್ ಕಿತ್ತುಹಾಕುವಂತೆ ಸೂಚಿಸಲಾಗಿದೆ. ಏಕೆಂದರೆ ಈ ಅಡ್ಡಹೆಸರು ವಿದೇಶಿ ಅಥವಾ ಹಿಂದೂ ಅಲ್ಲ ಎಂಬಂತೆ ಅನಿಸುತ್ತದೆ. ರಜಪೂತ್ ಸಮುದಾಯ ಆಯೋಜಿಸಿದ್ದ ಒಂದು ಸಮಾರಂಭದಲ್ಲಿ ಅತೀಶಿ ಸಿಂಗ್ ಎಂದು ಅವರನ್ನು ಕರೆಯಲಾಯಿತು. ಸಮಾರಂಭಕ್ಕೆ ಹಾಜರಾದ ಅತೀಶಿಯವರನ್ನು ಸಿಂಗ್ ಎಂದು ಕರೆದಾಗ ಸ್ವಲ್ಪಮುಜುಗರಕ್ಕೂ ಒಳಗಾದರು. ಆದರೆ ಪಕ್ಷ ಅದರ ಲಾಭ ಪಡೆದಂತಿದೆ. ಸಮಾರಂಭದಲ್ಲಿ ಆಕೆ ರಜಪೂತರ ಸಂಕೇತವಾದ ಖಡ್ಗದೊಂದಿಗೆ ಇರುವ ಫೋಟೊವನ್ನೂ ಕ್ಲಿಕ್ಕಿಸಲಾಗಿದೆ. ವಾಸ್ತವವಾಗಿ ಅತೀಶಿಯವರ ಮೂಲ ಸರ್‌ನೇಮ್ ಸಿಂಗ್ ಎಂದಾಗಿತ್ತು. ಮರ್ಲೇನಾ ಎಂಬ ಅಡ್ಡಹೆಸರು ಎಡಪಂಥೀಯರಾಗಿದ್ದ ಆಕೆಯ ಪೋಷಕರಿಂದ ಬಂದ ಬಳುವಳಿ. ಕಾರ್ಲ್ ಮಾರ್ಕ್ಸ್ ಮತ್ತು ವ್ಲಾದಿಮಿರ್ ಲೆನಿನ್ ಅವರ ನೆನಪಿಗಾಗಿ ಈ ಅಡ್ಡಹೆಸರು. ಅತೀಶಿ ಪೂರ್ವ ದಿಲ್ಲಿ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದು, ಇಲ್ಲಿ ಜಾತಿ ಪ್ರಮುಖ ಅಂಶವಾಗುವ ಸಾಧ್ಯತೆ ಕಡಿಮೆ. ಈ ಸಿಂಗ್ ವಿವಾದದಿಂದ ಎಎಪಿ ಅಂತರ ಕಾಯ್ದುಕೊಂಡಿದೆ. ಆದರೆ ಚುನಾವಣೆ ಗೆಲ್ಲಲು ಎಲ್ಲವನ್ನೂ ಮಾಡಬೇಕು ಎನ್ನುವುದನ್ನು ಖಾಸಗಿಯಾಗಿ ಪಕ್ಷದ ಮುಖಂಡರು ಒಪ್ಪಿಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75