ಓ ಮೆಣಸೇ...
ಲೋಕಸಭೆ ಚುನಾವಣೆ ವೇಳೆ ದೇಶದಲ್ಲಿ ಕಾಂಗ್ರೆಸ್ ಇಬ್ಭಾಗವಾಗಲಿದೆ - ಗೋವಿಂದ ಕಾರಜೋಳ, ಶಾಸಕ
ಬಿಜೆಪಿ ದೇಶವನ್ನೇ ಇಬ್ಭಾಗ ಮಾಡಲಿದೆ ಎಂಬ ಭಯದಲ್ಲಿದ್ದಾರೆ ಜನರು.
---------------------
ಉಪಚುನಾವಣೆ ಫಲಿತಾಂಶದ ಬಳಿಕ ಯಡಿಯೂರಪ್ಪ ಮುಖ್ಯಮಂತ್ರಿಯಾಗಲಿದ್ದಾರೆ -ಶೋಭಾ ಕರಂದ್ಲಾಜೆ, ಸಂಸದೆ
ಉಪಚುನಾವಣೆ ನಡೆಯುತ್ತಿರುವುದು ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವುದಕ್ಕಾಗಿ ಎಂದು ತಪ್ಪು ತಿಳಿದುಕೊಂಡಿದ್ದಾರೆ.
---------------------
ಮಹಾನುಭಾವರು ಜಾತಿ, ಪ್ರದೇಶಗಳಿಗೆ ಸೀಮಿತರಲ್ಲ -ಪ್ರಿಯಾಂಕ್ ಖರ್ಗೆ, ಸಚಿವ
ರಾಜಕಾರಣಿಗಳು ಅವರನ್ನು ಸೀಮಿತ ಮಾಡುತ್ತಾರೆ.
---------------------
ಶ್ರೀರಾಮುಲು ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ -ವಿ.ಸೋಮಣ್ಣ, ಮಾಜಿ ಸಚಿವ
ಯಡಿಯೂರಪ್ಪ ಮುಂದಿನ ಪ್ರಧಾನಿಯೇ?
---------------------
ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇದ್ದರೂ ಲೋಡ್‌ಶೆಡ್ಡಿಂಗ್ ಇಲ್ಲ - ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ
ಉಪಚುನಾವಣೆ ಮುಗಿಯುವವರೆಗೆ ಕಲಿದ್ದಲು ಕೊರತೆ ಬರಲಿಕ್ಕಿಲ್ಲ.
---------------------
ಮೋದಿ ಈಗ ನಿದ್ದೆ ಇಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ - ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ
ಕಾಂಗ್ರೆಸ್ ಗಾಢ ನಿದ್ದೆಯಲ್ಲಿದೆ ಎನ್ನುವುದು ಅದರ ಮೇಲಿರುವ ಆರೋಪ.
---------------------
ಕ್ಷುಲ್ಲಕ ಕಾರಣಕ್ಕೆ ರಾಜೀನಾಮೆ ನೀಡುವ ಜಾಯಮಾನ ನನ್ನದಲ್ಲ - ಎಚ್.ವಿಶ್ವನಾಥ್, ಜೆಡಿಎಸ್ ಅಧ್ಯಕ್ಷ
ಸಿದ್ದರಾಮಯ್ಯರು ‘ಮೀಟೂ’ ಆರೋಪ ಮಾಡಿದರೆ?
---------------------
‘ಅಚ್ಛೇ ದಿನ್’ ಎಂಬುದು ದೇಶದ ಬಹುದೊಡ್ಡ ಹಗರಣ -ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ರಫೇಲ್ ಹಗರಣವನ್ನು ಕೈ ಬಿಡಲಿದ್ದೀರಾ?
---------------------
ದೇವೇಗೌಡರು ಮೀಸಲು ಸೌಲಭ್ಯ ಕಲ್ಪಿಸದೇ ಇದ್ದಿದ್ದರೆ ಶ್ರೀರಾಮುಲು ಜನಪ್ರತಿನಿಧಿಯೇ ಆಗುತ್ತಿರಲಿಲ್ಲ -ಎಚ್.ಡಿ.ರೇವಣ್ಣ, ಸಚಿವ
ದೇವೇಗೌಡರು ತಮ್ಮ ಮನೆಯ ಜಮೀನಿನಲ್ಲಿ ಬೆಳೆಸಿದ ಬೆಳೆಯೇ ‘ಮೀಸಲು ಸೌಲಭ್ಯ’?
---------------------
ಭಾರತದ ಭವಿಷ್ಯ ತಂತ್ರಜ್ಞಾನದ ಮೇಲೆ ನಿಂತಿದೆ -ನರೇಂದ್ರ ಮೋದಿ, ಪ್ರಧಾನಿ
ಬಹುಶಃ ಅಮಿತ್ ಅವರ ‘ತಂತ್ರ’ ಜ್ಞಾನದ ಬಗ್ಗೆ ಹೇಳುತ್ತಿರಬೇಕು.
---------------------
ಜೆಡಿಎಸ್ ಮತ್ತು ಕಾಂಗ್ರೆಸ್ ಒಂದೇ ತಾಯಿಯ ಮಕ್ಕಳಿದ್ದಂತೆ -ಮಧು ಬಂಗಾರಪ್ಪ, ಶಿವಮೊಗ್ಗ ಲೋಕಸಭಾ ಅಭ್ಯರ್ಥಿ
ತಂದೆ ಮಾತ್ರ ಹಲವರಿದ್ದಾರೆ ಎಂದಾಯಿತು.
---------------------
ಶ್ರೀರಾಮುಲು ಮೊದಲು ಕಾಂಗ್ರೆಸಿಗರಾಗಿದ್ದರು -ಡಿ.ಕೆ.ಶಿವಕುಮಾರ್, ಸಚಿವ
ಅದು ಅವರ ಮೇಲಿರುವ ಅತಿ ದೊಡ್ಡ ಕಳಂಕವಂತೆ.
---------------------
ಎಚ್.ಡಿ.ದೇವೇಗೌಡರು ಸಿದ್ದರಾಮಯ್ಯರನ್ನು ಆಲಂಗಿಸಿಕೊಂಡಿರುವುದು ಮಹಾಭಾರತದಲ್ಲಿ ಧೃತರಾಷ್ಟ್ರ ಆಲಿಂಗನದಂತೆ -ಆರ್.ಅಶೋಕ್, ಮಾಜಿ ಉಪಮುಖ್ಯಮಂತ್ರಿ
ಹಿಂದೆ ಅವರ ಆಲಿಂಗನಕ್ಕೆ ಸಿಕ್ಕಾಗ ಹೇಗಿತ್ತು?
---------------------
ಹಿಂದುತ್ವಕ್ಕಾಗಿಯಾದರೂ ಶಿವಸೇನೆ ಬಿಜೆಪಿ ಜೊತೆ ಕೈ ಜೋಡಿಸಲಿ - ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ
ದೇಶದ ಏಳಿಗೆಗಾಗಿ ಯಾರು ಯಾರ ಜೊತೆ ಕೈ ಜೋಡಿಸಬೇಕು?
---------------------
ಯುವಕರು ಹಿಂದುತ್ವ ಮತ್ತು ರಾಷ್ಟ್ರೀಯತೆಯ ಬಗ್ಗೆ ಹೆಚ್ಚು ಒಲವು ತೋರುತ್ತಿದ್ದಾರೆ -ಸುಬ್ರಮಣಿಯನ್ ಸ್ವಾಮಿ, ಬಿಜೆಪಿ ನಾಯಕ
ಬೀದಿಯಲ್ಲಿ ದೊಣ್ಣೆ ಹಿಡಿದು ತಿರುಗಾಡುವುದು ಯುವಕರಿಗೆ ಸದಾ ಪ್ರಿಯ.
---------------------
ಜಾತಿಗೊಂದು ಸಂಘಟನೆಯಿಂದ ದೇಶದ ಅಖಂಡತೆಗೆ ಅಪಾಯ -ಎಸ್.ಅಂಗಾರ, ಶಾಸಕ
ಅಂಬೇಡ್ಕರ್ ಕೆಳ ಜಾತಿಯವರನ್ನು ಸಂಘಟಿಸದೇ ಇದ್ದಿದ್ದರೆ, ನೀವು ಶಾಸಕರಾಗುವುದು ಸಾಧ್ಯವಿತ್ತೇ?
---------------------
ಯಡಿಯೂರಪ್ಪ ಬಿಜೆಪಿಯ ಮಾಸ್‌ಲೀಡರ್ - ಪ್ರಹ್ಲಾದ್ ಜೋಷಿ, ಸಂಸದ
ಮೋಸದ ಲೀಡರ್ ಎಂದಂತಾಯಿತು.
---------------------
ಉಪಚುನಾವಣೆಗಳು ಲೋಕಸಭಾ ಚುನಾವಣೆಗೆ ದಿಕ್ಸೂಚಿಯಲ್ಲ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
ಅಂದರೆ ಸೋಲಿನ ಸೂಚನೆಗಳು ಕಂಡಿವೆ.
---------------------
ಹಿಂದುತ್ವದ ಪ್ರತಿಪಾದನೆಯಿಂದ ಹಸಿದವರ ಹೊಟ್ಟೆ ತುಂಬದು - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಹಸಿದ ರಾಜಕಾರಣಿಗಳ ಹೊಟ್ಟೆ ತುಂಬುವುದು.
---------------------
‘ವೀರಶೈವ’ ಮತ್ತು ‘ಲಿಂಗಾಯುತ’ ‘ಮುಸ್ಲಿಂ’ ಮತ್ತು ‘ಮೊಹಮ್ಮಡನ್’ ಇದ್ದಹಾಗೆ, ಎರಡೂ ಒಂದೇ -ಡಾ.ಎಂ.ಚಿದಾನಂದಮೂರ್ತಿ, ಸಂಶೋಧಕ
ಎರಡು ಒಂದೇ ಎಂದಾದ ಮೇಲೆ, ತಾವೇಕೆ ಟೋಪಿ ಧರಿಸಿ, ಗಡ್ಡ ಬಿಡಬಾರದು?
---------------------
ಇತಿಹಾಸ ತಿಳಿದವನು ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ - ಯು.ಟಿ.ಖಾದರ್, ಸಚಿವ
ಯಾರ ಇತಿಹಾಸ ಎನ್ನುವುದು ಪ್ರಶ್ನೆ.
---------------------
ರಾಜಯೋಗ ಇದ್ದವರು ರಾಜಕೀಯದಲ್ಲಿ ಮೇಲೇರುತ್ತಾರೆ -ಮೋಟಮ್ಮ, ಮಾಜಿ ಸಚಿವೆ
ಆ ಯೋಗವನ್ನು ನಾನು ಕಲಿಸಿಕೊಡುತ್ತೇನೆ ಎಂದರಂತೆ ರಾಮ್‌ದೇವ್.
---------------------
ಎಚ್.ಡಿ.. ದೇವೇಗೌಡರು ಸ್ವಯಂ ಘೋಷಿತ ಮಣ್ಣಿನ ಮಗ -ಕೆ.ಎಸ್.ಈಶ್ವರಪ್ಪ, ಶಾಸಕ
ತಾವು ಬಿಜೆಪಿಯ ಪಾಲಿನ ಹುಣ್ಣಿನ ಮಗನೇ?
---------------------
ಇನ್ನೂ 100 ವರ್ಷ ಈ ದೇಶವನ್ನು ಬ್ರಿಟಿಷರೇ ಆಳಿದ್ದರೆ ಒಳ್ಳೆಯದಿತ್ತು - ಧರಂವೀರ್ ಸಿಂಗ್, ರಾಜಸ್ಥಾನ ಬಿಎಸ್ಪಿ ಅಧ್ಯಕ್ಷ
ನೇರವಾಗಿ ಬ್ರಿಟನ್‌ಗೇ ತೆರಳಿ ಬಿಡಿ. ಅಲ್ಲಿ ಅವರೇ ಆಳುತ್ತಿದ್ದಾರೆ.