ದಿಲ್ಲಿ ದರ್ಬಾರ್

Update: 2018-11-03 18:39 GMT

ರಾಹುಲ್ ಚತುರತೆ
ರಾಹುಲ್ ಗಾಂಧಿ ಬಗ್ಗೆ ಬಿಜೆಪಿ ಏನೇ ಹೇಳಿದರೂ ಅಡ್ಡಿ ಇಲ್ಲ. ಆದರೆ ಟೀಕೆಗಳಿಗೆ ಅಂಜಿ ತಾವು ಓಡಿಹೋಗುವವರಲ್ಲ ಎಂದು ರಾಹುಲ್ ಸಾಬೀತುಪಡಿಸಿದ್ದಾರೆ. ಮೊದಲನೆಯದಾಗಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಬಹುತೇಕ ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕುವ ಹಂತಕ್ಕೆ ಬಂದಿತ್ತು. ಇದೀಗ ಬಿಜೆಪಿ ಮಧ್ಯಪ್ರದೇಶದಲ್ಲೂ ಆತಂಕ ಎದುರಿಸುತ್ತಿದೆ. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಹಾಗೂ ಜ್ಯೋತಿರಾದಿತ್ಯ ಸಿಂಗ್ ನಡುವಿನ ವೈಮನಸ್ಯದ ಪ್ರತಿಕೂಲ ಸ್ಥಿತಿಯ ನಡುವೆಯೂ ರಾಹುಲ್ ಎಚ್ಚರಿಕೆಯ ನಡೆ ಇಟ್ಟಿದ್ದಾರೆ. ಮುಂಚೂಣಿ ನಾಯಕ ಕಮಲ್‌ನಾಥ್ ಅವರನ್ನೂ ಕಾಂಗ್ರೆಸ್ ಅಧ್ಯಕ್ಷರು ನಿಭಾಯಿಸಬೇಕಾಗಿದೆ. ಇಷ್ಟಾಗಿಯೂ ಇಂಧೋರ್‌ನಲ್ಲಿ ಇತ್ತೀಚೆಗೆ ಪ್ರಚಾರ ಕಾರ್ಯದಲ್ಲಿದ್ದಾಗ ರಾಹುಲ್ ಆರಾಮವಾಗಿದ್ದರು. ಉದ್ಯಮಿಗಳ ಜತೆಗಿನ ಸಭೆಯಲ್ಲಿ, ‘ಸರ್’ ಎಂದು ಸಂಬೋಧಿಸದಂತೆ ಅವರು ಉದ್ಯಮಿಗಳಲ್ಲಿ ಮನವಿ ಮಾಡಿದರು. ಸಿಂಧ್ಯಾ ಹಾಗೂ ಕಮಲ್‌ನಾಥ್ ಬಗ್ಗೆ ಮಾಧ್ಯಮದವರು ಅಭಿಪ್ರಾಯ ಕೇಳಿದಾಗಲೂ ಸ್ಮಾರ್ಟ್ ಉತ್ತರ ನೀಡಿದ ರಾಹುಲ್, ಕಮಲ್‌ನಾಥ್ ಅನುಭವಿ ನಾಯಕ ಹಾಗೂ ಸಿಂಧ್ಯಾ ಆಕರ್ಷಕ ಹಾಗೂ ಚುರುಕಿನ ಮುಖಂಡ ಎಂದು ಹೇಳಿದರು. ರಾಹುಲ್ ಕೂಡಾ ರಾಜಕೀಯ ಚತುರತೆ ಕಲಿಯುತ್ತಿದ್ದಾರೆಯೇ ಅಥವಾ ಆಕಸ್ಮಿಕವೇ?


ನ್ಯಾಯಾಲಯದಲ್ಲಿ ‘ಸಂಪಾದಕ’ ಅಕ್ಬರ್
ಕಳೆದ ವಾರ ಮಾಜಿ ಸಚಿವ ಎಂ. ಜೆ. ಅಕ್ಬರ್ ಸಾಕ್ಷ್ಯ ನುಡಿಯಲು ಬಂದಿದ್ದರು. ‘ಮೀ ಟೂ’ ಚಳವಳಿಯಲ್ಲಿ ತಮ್ಮ ಮೇಲೆ ಆರೋಪ ಮಾಡಿದ ಪತ್ರಕರ್ತೆ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆಯಲ್ಲಿ ಅಕ್ಬರ್ ಕಾಣಿಸಿಕೊಂಡದ್ದು ಮಾಜಿ ಸಂಪಾದಕರಾಗಿ. ಅಕ್ಬರ್ ಅವರ ಸಂಪಾದಕರ ಕಣ್ಣು ಸಾಕ್ಷಿಯ ಕಟಕಟೆಯ ಪಕ್ಕದಲ್ಲೇ ಇದ್ದ ಟ್ರಾನ್‌ಸ್ಕ್ರಿಪ್ಷನ್ ಕಂಪ್ಯೂಟರ್ ಪರದೆಯ ಮೇಲೆ ಹರಿದಿತ್ತು. ಆರಂಭದಲ್ಲಿ ಅಕ್ಬರ್ ಪದೇ ಪದೇ ತಿದ್ದುಪಡಿ ಮಾಡಿಕೊಳ್ಳುವಂತೆ ಅಧಿಕಾರಿಗಳನ್ನು ಕೇಳುತ್ತಿದ್ದರು. ಆದರೆ ಹೇಳಿಕೆ ಪೂರ್ಣಗೊಂಡ ಬಳಿಕ ಹೇಳಿಕೆಯ ಪ್ರತಿಯನ್ನು ನಿಮಗೆ ನೀಡಿ, ಸರಿಪಡಿಸಲು ಅವಕಾಶ ನೀಡಲಾಗುತ್ತದೆ ಎಂದು ನ್ಯಾಯಾಧೀಶರು ಹೇಳಿದ ಬಳಿಕವಷ್ಟೇ ಅಕ್ಬರ್ ತಿದ್ದುಪಡಿಗೆ ಸೂಚಿಸುವುದನ್ನು ನಿಲ್ಲಿಸಿದರು.

ಸುಮಾರು ಒಂದು ಗಂಟೆ ಸಾಕ್ಷ್ಯ ನುಡಿದ ಅವರು ಸುಮಾರು 10 ನಿಮಿಷ ಕಾಲ ಹೇಳಿಕೆಗಳನ್ನು ಮರು ಪರಿಶೀಲಿಸಿದರು. ಅಕ್ಬರ್ ಇಂಗ್ಲಿಷ್‌ನ ಕೆಲ ಕಠಿಣ ಪದಗಳನ್ನು ಬಳಸಿದರು. ಅದನ್ನು ಅರ್ಥ ಮಾಡಿಕೊಳ್ಳುವುದು ನ್ಯಾಯಾಲಯದ ಗುಮಾಸ್ತರಿಗೂ ಕಷ್ಟವಾಯಿತು. ಒಂದು ಹಂತದಲ್ಲಿ ಅಕ್ಬರ್ ತಮ್ಮ ಸ್ವಂತ ವಕೀಲೆ ಗೀತಾ ಲೂತ್ರಾ ತಪ್ಪುಇಂಗ್ಲಿಷ್ ಪದಬಳಕೆ ಮಾಡಿದಾಗ ಅದನ್ನೂ ಸರಿಪಡಿಸಿದರು. ಅಕ್ಬರ್ ಅವರ ಜತೆ ಕೆಲಸ ಮಾಡಿದ ಕೆಲವರು ಹೇಳುವಂತೆ ತಮ್ಮ ಅಧೀನ ಸಿಬ್ಬಂದಿಯ ರಜೆ ಚೀಟಿಯಲ್ಲೂ ತಪ್ಪುಗಳನ್ನು ಹುಡುಕಿ ಅಕ್ಬರ್ ಸರಿಪಡಿಸುತ್ತಿದ್ದರು. ಆದರೆ ಬಹುಶಃ ಮಹಿಳೆಯರ ಬಗೆಗಿನ ತಮ್ಮ ನಡತೆಯನ್ನು ಅವರು ಪುನರ್ ಪರಿಶೀಲಿಸಿಕೊಂಡಿದ್ದರೆ, ತಮ್ಮನ್ನು ಸಮರ್ಥಿಸಿಕೊಳ್ಳಲು ನ್ಯಾಯಾಲಯದ ಕಟ್ಟೆ ಏರುವ ಪ್ರಮೇಯ ಬರುತ್ತಿರಲಿಲ್ಲ.


ವರ್ಮಾ ಹಿಂದೆ ಧೋವಲ್?
ಸಿಬಿಐ ಸಂಸ್ಥೆಯನ್ನು ಆವರಿಸಿಕೊಂಡ ವಿವಾದದ ಬೆಂಕಿ ನಂದಿಸಲು ಸರಕಾರದ ಪರವಾಗಿ ಶಮನ ಕಾರ್ಯಕ್ಕೆ ಸ್ವತಃ ಅಜಿತ್ ಧೋವಲ್ ಧುಮುಕಿದ್ದಾರೆ. ಮಧ್ಯರಾತ್ರಿಯ ನಿರ್ಧಾರ ಹಾಗೂ ಹಲವು ಮಂದಿ ಸಿಬಿಐ ಅಧಿಕಾರಿಗಳನ್ನು ಅಂಡಮಾನ್ ನಿಕೋಬಾರ್‌ನಂಥ ದೂರದ ಪ್ರದೇಶಕ್ಕೆ ವರ್ಗಾವಣೆ ಮಾಡಿರುವುದೂ ಸೇರಿದಂತೆ ಏನೇ ನಡೆದಿದ್ದರೂ, ಸಿಬಿಐನಲ್ಲಿ ಕೆಲಸ ಮಾಡಿದ ಯಾವ ಅನುಭವವೂ ಇಲ್ಲದಿದ್ದ ಅಲೋಕ್ ವರ್ಮಾ ಅವರನ್ನು ಆ ಹುದ್ದೆಗೆ ನಿಯೋಜಿಸುವಂತೆ ಸೂಚಿಸಿದ್ದವರು ಧೋವಲ್. ವರ್ಮಾ ಅವರು ಪ್ರತಿಸ್ಪರ್ಧಿ ರಾಕೇಶ್ ಅಸ್ತಾನಾ ತೆರೆಯ ಮುಂದೆ ಬರುವವರೆಗೂ ಧೋವಲ್ ಹಾಗೂ ವರ್ಮಾ ಚೆನ್ನಾಗಿಯೇ ಇದ್ದರು. ನಿಜವಾಗಿ ನಿಷ್ಠಾವಂತರಾದ ಧೋವಲ್, ತಮ್ಮ ಬಾಸ್‌ಗಳ ಪರವಾಗಿ ವರ್ಮಾ ಅವರನ್ನು ದೂರ ಎಸೆದಂತಿದೆ. ಇದುವರೆಗೂ ತಾವು ಏನು ಮಾಡಬಹುದೋ ಅದಕ್ಕಿಂತ ಹೆಚ್ಚಿನ ಪ್ರಯತ್ನವನ್ನೇ ಅವರು ಮಾಡಿದ್ದಾರೆ. ಸಿಬಿಐ ಬೆಳವಣಿಗೆಗಳ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ. ಆದರೆ ಸರಕಾರ ಮಾತ್ರ ಈ ಬಿರುಗಾಳಿಯಿಂದ ನಿರಾಳವಾಗುವ ವಿಶ್ವಾಸದಲ್ಲಿದೆ. ಬಹುಶಃ ಸುಪ್ರೀಂಕೋರ್ಟ್ ತೀರ್ಪಿನಿಂದ ಉದ್ಭವಿಸಬಹುದಾದ ಯಾವುದೇ ಸಮಸ್ಯೆಯನ್ನು ಎದುರಿಸಲು ಧೋವಲ್ ಬಳಿ ಅಸ್ತ್ರ ಇದೆ ಎಂಬ ವಿಶ್ವಾಸ ಸರಕಾರದ್ದು.


ರೈಲ್ವೆ ಮಂಡಳಿಯಲ್ಲೂ ಹಗ್ಗಜಗ್ಗಾಟ
ಸಿಬಿಐ ಮಾತ್ರ ಸಂಘರ್ಷ ಎದುರಿಸುತ್ತಿರುವ ಸರಕಾರಿ ಸಂಸ್ಥೆಯಲ್ಲ. ದಿಲ್ಲಿಯಲ್ಲಿರುವ ಭಾರತೀಯ ರೈಲ್ವೆ ಕೇಂದ್ರ ಕಚೇರಿಯಲ್ಲೂ ಹಗ್ಗಜಗ್ಗಾಟ ನಡೆದಿದೆ; ಆದರೆ ಭಿನ್ನ ಸ್ವರೂಪದ್ದು. ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಮುಂದಿಟ್ಟಿರುವ ಪ್ರಸ್ತಾವದ ಬಗ್ಗೆ ರೈಲ್ವೆ ಮಂಡಳಿಯ ಕೆಲ ಹಿರಿಯ ಸದಸ್ಯರು ಸಚಿವರ ವಿರುದ್ಧ ತೋಳೇರಿಸಿದ್ದಾರೆ. ತಮಗಾಗಿ ಮೀಸಲಿಟ್ಟಿರುವ ಎರಡು ಸಲೂನ್ ಕಾರುಗಳನ್ನು ವಾಣಿಜ್ಯ ಬಳಕೆಗೆ ನೀಡಲು ಸಚಿವರು ಮುಂದಾಗಿದ್ದಾರೆ. ಈ ವಿಶೇಷ ಕೋಚ್‌ಗಳನ್ನು ಬಳಸುವುದು ಅಪರೂಪ. ಆದ್ದರಿಂದ ಹಣ ಪಾವತಿಸುವ ಸಾರ್ವಜನಿಕರು ಇದನ್ನು ಬಳಸಬಹುದು ಎನ್ನುವುದು ಗೋಯಲ್ ವಾದ. ಆರ್ಥಿಕ ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿರುವ ರೈಲ್ವೆಗೆ ಒಂದಷ್ಟು ಆದಾಯ ಈ ಮೂಲದಿಂದ ಬರುತ್ತದೆ ಎನ್ನುವುದು ಅವರ ಲೆಕ್ಕಾಚಾರ. ಆದರೆ ಈ ಐಷಾರಾಮಿ ಜಗತ್ತಿಗೆ ಸಾರ್ವಜನಿಕರು ಲಗ್ಗೆ ಹಾಕುವ ಪ್ರಸ್ತಾವ ರೈಲ್ವೆಭವನದ ಹಿರಿಯ ಅಧಿಕಾರಿಗಳಿಗೆ ಪಥ್ಯವಾಗಿಲ್ಲ. ಅತ್ಯಾಧುನಿಕ ಸೌಲಭ್ಯಗಳನ್ನು ಅಳವಡಿಸಿದ್ದರೂ ಇವು ಅಮೂಲ್ಯ ಪಳೆಯುಳಿಕೆಗಳು. ಆದ್ದರಿಂದ ಸಾರ್ವಜನಿಕರು ಇಲ್ಲಿಗೆ ಲಗ್ಗೆ ಇಡುವುದು ಸರಿಯಲ್ಲ ಎಂಬ ಅಭಿಪ್ರಾಯ ಅವರದ್ದು. ಇತಿಹಾಸ ಮತ್ತು ಪರಂಪರೆ ಬಗ್ಗೆ ಕೆಲ ಹಿರಿಯ ಅಧಿಕಾರಿಗಳಿಗಾದರೂ ಕಾಳಜಿ ಇದ್ದಂತಿದೆ. ಆದರೆ ಅಂತಿಮವಾಗಿ ಗೋಯಲ್‌ಗೆ ತಮ್ಮ ಕಾರ್ಯ ಹೇಗೆ ಸಾಧಿಸಿಕೊಳ್ಳಬೇಕು ಎನ್ನುವುದು ಗೊತ್ತಿರುವುದರಿಂದ ಅವರೇ ಯುದ್ಧ ಗೆಲ್ಲಬಹುದು.


ಚಂದ್ರಬಾಬು ಔಟ್; ಜಗನ್ ಇನ್
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಜತೆಗಿನ ರಾಜಕೀಯ ವಿಚ್ಛೇದನದ ಬಳಿಕ ಬಿಜೆಪಿ, ವೈಎಸ್‌ಆರ್ ಕಾಂಗ್ರೆಸ್‌ನ ಮುಖ್ಯಸ್ಥ ವೈ.ಎಸ್.ಜಗನ್ ಮೋಹನ ರೆಡ್ಡಿ ಅವರ ಬಾಗಿಲು ತಟ್ಟುತ್ತಿದೆ. ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ರೆಡ್ಡಿಗೆ ಚೂರಿ ಇರಿದ ಘಟನೆ ಸಂಭವಿಸಿದ ತಕ್ಷಣ ಬಿಜೆಪಿ ಪತ್ರಿಕಾಗೋಷ್ಠಿ ನಡೆಸಿದ್ದು, ಇದಕ್ಕೆ ಸ್ಪಷ್ಟ ನಿದರ್ಶನ. ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳನ್ನು ಆಂಧ್ರ ಸರಕಾರ ಗುರಿ ಮಾಡಿದೆ ಎನ್ನುವುದು ಬಿಜೆಪಿ ಮುಖಂಡ ಜಿ.ವಿ.ಎಲ್. ನರಸಿಂಹ ರಾವ್ ಅವರ ಆರೋಪ. ಘಟನೆ ಬಗ್ಗೆ ನ್ಯಾಯಾಂಗ ತನಿಖೆಗೂ ಅವರು ಒತ್ತಾಯಿಸಿದ್ದಾರೆ. ಈ ಘಟನೆ ಬಗ್ಗೆ ಸಿಬಿಐ ತನಿಖೆಗೆ ಏಕೆ ಒತ್ತಾಯಿಸುತ್ತಿಲ್ಲ ಎಂಬ ಪ್ರಶ್ನೆ ಎದುರಾದಾಗ, ಈ ಪ್ರಶ್ನೆಯ ಹಿಂದಿನ ಮರ್ಮ ಅರ್ಥ ಮಾಡಿಕೊಂಡು, ಪ್ರಶ್ನೆಯನ್ನು ಲಘುವಾಗಿ ತೇಲಿಸಿ ಬಿಟ್ಟರು. ಆದರೆ ಈ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿದಂತಿದೆ ಹಾಗೂ ಬಿಜೆಪಿ ಇದಕ್ಕೆ ಬೆಲೆ ತೆರಲೇಬೇಕು ಎಂದು ನಿರ್ಧರಿಸಿದಂತಿದೆ. ಬಿಜೆಪಿ ವಿರುದ್ಧ 2019ರ ಚುನಾವಣೆಯಲ್ಲಿ ಮೈತ್ರಿಕೂಟ ಬೆಸೆಯುವ ಸಂಬಂಧ ತಾವು ಪದೇ ಪದೇ ದಿಲ್ಲಿಗೆ ತೆರಳುವುದಾಗಿ ಇತ್ತೀಚೆಗೆ ನಾಯ್ಡು ಹೇಳಿಕೆ ನೀಡಿದ್ದರು. ಈ ಉದ್ದೇಶದಿಂದ ಇತ್ತೀಚೆಗೆ ರಾಹುಲ್‌ಗಾಂಧಿಯವರನ್ನೂ ಭೇಟಿ ಮಾಡಿದ್ದರು. ಆದರೆ ದಕ್ಷಿಣದ ಬಗ್ಗೆ ಬಿಜೆಪಿಗೆ ಹೆಚ್ಚಿನ ನಿರೀಕ್ಷೆಯೇನೂ ಇಲ್ಲ. ಆದ್ದರಿಂದ ಜಗನ್ ಅವರನ್ನೇ ನೆಚ್ಚಿಕೊಳ್ಳುವ ಅನಿವಾರ್ಯ ಬಿಜೆಪಿಯದ್ದು.
***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75