ಅತಿ ಕಡಿಮೆ ಮೂತ್ರ ವಿಸರ್ಜನೆಯಾಗುತ್ತಿದೆಯೇ: ಇಲ್ಲಿವೆ ಅದರ ಕಾರಣಗಳು ಮತ್ತು ಅಪಾಯಗಳು

Update: 2018-11-28 10:43 GMT

ಅತಿ ಕಡಿಮೆ ಮೂತ್ರ ವಿಸರ್ಜನೆಯಾಗುವ ಸ್ಥಿತಿಯನ್ನು ವೈದ್ಯಕೀಯವಾಗಿ ‘ಒಲಿಗುರಿಯಾ’ ಎಂದು ಹೆಸರಿಸಲಾಗಿದೆ. ಮೂತ್ರ ವಿಸರ್ಜನೆಯ ಪ್ರಮಾಣ ದಿನವೊಂದಕ್ಕೆ ವಯಸ್ಕರಲ್ಲಿ 400 ಎಂಎಲ್‌ಗಿಂತ,ಮಕ್ಕಳಲ್ಲಿ 0.5 ಎಂಎಲ್/ಕೆಜಿ/ಎಚ್ ಮತ್ತು ಶಿಶುಗಳಲ್ಲಿ 1ಎಂಎಲ್/ಕೆಜಿ/ಎಚ್‌ಗಿಂತ ಕಡಿಮೆಯಿದ್ದರೆ ಅದನ್ನು ಒಲಿಗುರಿಯಾ ಎಂದು ವ್ಯಾಖ್ಯಾನಿಸಲಾಗಿದೆ.

ಒಲಿಗುರಿಯಾ ಭವಿಷ್ಯದಲ್ಲಿ ಸಂಭಾವ್ಯ ಮೂತ್ರಪಿಂಡ ವೈಫಲ್ಯವನ್ನು ಸೂಚಿಸುತ್ತದೆ ಮತ್ತು ಇದನ್ನು ತೀವ್ರ ಮೂತ್ರಪಿಂಡ ಹಾನಿ(ಎಕೆಐ) ಅಥವಾ ತೀವ್ರ ಮೂತ್ರಪಿಂಡ ವೈಫಲ್ಯವನ್ನು ನಿರ್ಧರಿಸಲು ಮಾಪಕವನ್ನಾಗಿ ಅನ್ವಯಿಸಲಾಗುತ್ತದೆ.

ಒಲಿಗುರಿಯಾ ಮೂತ್ರಪಿಂಡ ವೈಫಲ್ಯದ ಎಚ್ಚರಿಕೆಯನ್ನು ನೀಡುವ ಮೊದಲ ಲಕ್ಷಣವಾಗಿದೆ.

►ಒಲಿಗುರಿಯಾಕ್ಕೆ ಕಾರಣಗಳು

ಪ್ರಿ-ರೇನಲ್ ಕಾರಣವು ಮೂತ್ರಪಿಂಡಗಳಲ್ಲಿ ರಕ್ತ ಪರಿಚಲನೆಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಮೂತ್ರಪಿಂಡಗಳಿಗೆ ರಕ್ತ ಪೂರೈಕೆಯ ಕೊರತೆಯುಂಟಾದಾಗ ಅದರ ಕಾರ್ಯನಿರ್ವಹಣೆಗೆ ವ್ಯತ್ಯಯವಾಗುತ್ತದೆ. ಮೂತ್ರಪಿಂಡಕ್ಕೆ ತನ್ನ ಕಾರ್ಯಗಳನ್ನು ರ್ನಿಹಿಸಲು ಸಾಧ್ಯವಾಗದಿದ್ದಾಗ ಮೂತ್ರ ವಿಸರ್ಜನೆಯ ಪ್ರಮಾಣ ಕಡಿಮೆಯಾಗುತ್ತದೆ. ಉಸಿರಾಟದ ತೊಂದರೆ,ಮಿದುಳಿನ ರಕ್ತಸ್ರಾವ,ಪ್ರಸವಕಾಲೀನ ಉಸಿರುಗಟ್ಟುವಿಕೆ,ಹೆಮೊಲಿಸಿಸ್,ಜನ್ಮಜಾತ ಹೃದ್ರೋಗ ಇತ್ಯಾದಿಗಳು ಪ್ರಿ-ರೇನಲ್ ಕಾರಣಗಳಲ್ಲೊಳಗೊಂಡಿವೆ. ಪೋಸ್ಟ್-ರೇನಲ್ ಕಾರಣಗಳಲ್ಲಿ ಮೂತ್ರಕೋಶದ ದ್ವಾರದಲ್ಲಿ ತಡೆ,ನರವ್ಯವಸ್ಥೆಗೆ ಹಾನಿಯಿಂದಾಗಿ ಮೂತ್ರಕೋಶದಲ್ಲಿ ಸಮಸ್ಯೆಇತ್ಯಾದಿಗಳು ಸೇರಿವೆ. ಇತರ ಸಾಮಾನ್ಯ ಕಾರಣಗಳುಹೀಗಿವೆ.

ನಿರ್ಜಲೀಕರಣ:ಇದು ಒಲಿಗುರಿಯಾಕ್ಕೆ ಪ್ರಮುಖ ಕಾರಣವಾಗಿದೆ. ಶರೀರದಲ್ಲಿ ಸಾಕಷ್ಟು ನೀರಿನ ಕೊರತೆಯಾದಾಗ ನಿರ್ಜಲೀಕರಣವುಂಟಾಗುತ್ತದೆ. ಅತಿಸಾರ,ಜ್ವರ,ವಾಂತಿ ಅಥವಾ ಇತರ ಯಾವುದೇ ಅನಾರೋಗ್ಯ ನಿರ್ಜಲೀಕರಣಕ್ಕೆ ಕಾರಣವಾಗುತ್ತವೆ.

ಸಂಪೂರ್ಣ ಮೂತ್ರನಾಳ ತಡೆ:ಮೂತ್ರವು ಮೂತ್ರಪಿಂಡದಿಂದ ಹೊರಗೆ ಹೋಗಲು ಸಾಧ್ಯವಾಗದಿದ್ದಾಗ ಮೂತ್ರನಾಳ ತಡೆಯುಂಟಾಗುತ್ತದೆ. ಇದು ಮೂತ್ರಪಿಂಡಕ್ಕೆ ಮತ್ತು ಕೆಲವು ಗಂಭೀರ ಪ್ರಕರಣಗಳಲ್ಲಿ ಎರಡೂ ಮೂತ್ರಪಿಂಡಗಳಿಗೆ ಹಾನಿಯನ್ನುಂಟುಮಾಡುತ್ತದೆ. ಮೂತ್ರಪಿಂಡಕ್ಕೆ ಯಾವುದೇ ಹಾನಿಯು ಅದರ ಕ್ಷಮತೆಯನ್ನು ಕುಗ್ಗಿಸುತ್ತದೆ ಮತ್ತು ವೈಫಲ್ಯಕ್ಕೂ ಕಾರಣವಾಗಬಹುದು. ಮೂತ್ರನಾಳ ತಡೆಯು ವಿವಿಧ ವೇಗಗಳಲ್ಲಿ ಶರೀರದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ,ಅದು ವಾಕರಿಕೆ,ಅಂಗಾಂಗಗಳಲ್ಲಿ ನೋವು,ವಾಂತಿ,ಜ್ವರ ಮತ್ತು ಪ್ರಾಸ್ಟೇಟ್ ಗ್ರಂಥಿಯ ಊತಕ್ಕೆ ಕಾರಣವಾಗುತ್ತದೆ.

ಔಷಧಿಗಳು: ಔಷಧಿಗಳು ನಮ್ಮ ಶರೀರಕ್ಕೆ ಒಳ್ಳೆಯದು ಮಾಡಲೆಂದೇ ಇವೆ,ನಿಜ. ಆದರೆ ಅವು ನಮ್ಮ ಶರೀರಕ್ಕೆ ಕೇವಲ ಒಳ್ಳೆಯದನ್ನೇ ಮಾಡಬೇಕೆಂದಿಲ್ಲ. ವಿವಿಧ ಔಷಧಿಗಳು ನಮ್ಮ ಶರೀರದ ಮೇಲೆ ಅಡ್ಡಪರಿಣಾಮಗಳನ್ನು ಉಂಟು ಮಾಡುತ್ತವೆ. ಮೂತ್ರವರ್ಧಕಗಳು,ಆ್ಯಂಟಿಕೊಲಿನೊರ್ಜಿಕ್‌ಗಳು,ಕಿಮೊಥೆರಪಿ ಇತ್ಯಾದಿ ಔಷಧಿಗಳು ಕಡಿಮೆ ಮೂತ್ರವಿಸರ್ಜನೆಗೆ ಕಾರಣವಾಗಬಹುದು. ಕೆಲವು ಆ್ಯಂಟಿಬಯೊಟಿಕ್‌ಗಳು ನಮ್ಮ ಶರೀರದಲ್ಲಿಯ ದ್ರವಗಳನ್ನು ಬಳಸುವುದರಿಂದಲೂ ಮೂತ್ರ ವಿಸರ್ಜನೆಯು ಕಡಿಮೆಯಾಗುತ್ತದೆ.

ರಕ್ತನಷ್ಟ: ಗಾಯ ಆಥವಾ ಇತರ ಯಾವುದೇ ಕಾರಣದಿಂದ ಹೆಚ್ಚಿನ ಪ್ರಮಾಣದಲ್ಲಿ ರಕ್ತವು ನಷ್ಟವಾದರೆ ಅದು ಒಲಿಗುರಿಯಾವನ್ನುಂಟು ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ರಕ್ತದ ಪೂರೈಕೆಯಲ್ಲಿ ಕೊರತೆಯುಂಟಾಗುವುದು ಇದಕ್ಕೆ ಕಾರಣ.

ತೀವ್ರ ಆಘಾತ/ಸೋಂಕು: ಆಘಾತವುಂಟಾದ ಸಂದರ್ಭದಲ್ಲಿ ಶರೀರವು ಒಲಿಗುರಿಯಾಕ್ಕೆ ತುತ್ತಾಗಬಹುದು. ಸೆಪ್ಟಿಕ್,ಟಾಕ್ಸಿಕ್ ಅಥವಾ ಅನಫಿಲಾಕ್ಟಿಕ್ ಶಾಕ್‌ಗಳುಂಟಾದಾಗ ಶರೀರದಲ್ಲಿ ಉಂಟಾಗುವ ಬದಲಾವಣೆಗಳು ಪ್ರಿ-ರೇನಲ್ ವೈಫಲ್ಯಕ್ಕೆ ಕಾರಣವಾಗುತ್ತವೆ.

►ಒಲಿಗುರಿಯಾದ ಲಕ್ಷಣಗಳು

ಶರೀರದಲ್ಲಿ ದ್ರವಗಳ ಉಳಿದುಕೊಳ್ಳುವಿಕೆ,ಗಾಢವರ್ಣದ ಮೂತ್ರ, ಬಳಲಿಕೆ, ಶರೀರದಲ್ಲಿ ನೋವು,ವಾಕರಿಕೆ,ಊತ,ಜ್ವರ ಮತ್ತು ವಾಂತಿ ಇತ್ಯಾದಿಗಳು ಒಲಿಗುರಿಯಾದ ಲಕ್ಷಣಗಳಲ್ಲಿ ಸೇರಿವೆ.

►ಚಿಕಿತ್ಸೆ

 ಮೂತ್ರ ವಿಸರ್ಜನೆ ಕಡಿಮೆಯಾಗುವುದು ಗಂಭೀರ ವೈದ್ಯಕೀಯ ಸ್ಥಿತಿಯಾಗಿದ್ದು, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯವಾಗುತ್ತದೆ. ರೋಗನಿರ್ಧಾರಕ್ಕಾಗಿ ಮತ್ತು ಕಾರಣಗಳನ್ನು ವಿಶ್ಲೇಷಿಸಲು ವೈದ್ಯರು ರಕ್ತ ಪರೀಕ್ಷೆ,ಸಿಟಿ ಸ್ಕಾನ್,ಮೂತ್ರ ವಿಶ್ಲೇಷಣೆ, ಇಂಟ್ರಾವೆನಸ್ ಪೈಲೊಗ್ರಾಂ(ಐವಿಪಿ),ಹೊಟ್ಟೆಯ ಅಲ್ಟ್ರಾಸೌಂಡ್,ಯುರಿನ್ ಕಲ್ಚರ್ ಇತ್ಯಾದಿ ಪರೀಕ್ಷೆಗಳನ್ನು ನಡೆಸುತ್ತಾರೆ.

ನಿರ್ಜಲೀಕರಣವು ಒಲಿಗುರಿಯಾಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿರುವುದರಿಂದ ಆ ಬಗ್ಗೆ ಎಚ್ಚರಿಕೆ ವಹಿಸಬೇಕು. ಆಗಾಗ್ಗೆ ಸಾಕಷ್ಟು ನೀರನ್ನು ಸೇವಿಸುವುದರಿಂದ ನಿರ್ಜಲೀಕರಣವನ್ನು ತಡೆಯಬಹುದು. ಅತಿಸಾರ,ವಾಂತಿ ಅಥವಾ ಇತರ ಯಾವುದೇ ಕಾಯಿಲೆಯಿಂದ ಬಳಲುತ್ತಿರುವವರು ದ್ರವಗಳನ್ನು ಹೆಚ್ಚಾಗಿ ಸೇವಿಸುವಂತೆ ನೋಡಿಕೊಳ್ಳಬೇಕು.

ದೀರ್ಘಕಾಲೀನ ಒಲಿಗುರಿಯಾದ ಪರಿಣಾಮಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತವೆ. ಈ ಸ್ಥಿತಿಗೆ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಅದು ಹೃದಯ ವೈಫಲ್ಯ,ರಕ್ತಹೀನತೆ,ಪ್ಲೇಟ್‌ಲೆಟ್‌ಗಳ ಕಾರ್ಯದಲ್ಲಿ ವ್ಯತ್ಯಯ,ಅಧಿಕ ರಕ್ತದೊತ್ತಡ,ಅನ್ನನಾಳ ಸಮಸ್ಯೆಗಳಂತಹ ವಿವಿಧ ಅಪಾಯಗಳಿಗೆ ಕಾರಣವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News