ಬಂಜಾರ ಸಮುದಾಯದ ಪೂರ್ವಿಕರ ಇತಿಹಾಸ ಸಂಶೋಧನೆಯಾಗಲಿ: ಬಿ.ಟಿ.ಲಲಿತಾನಾಯಕ್
ಬೆಂಗಳೂರು, ಮಾ.13: ಬಂಜಾರ ಸಮುದಾಯದ ಪೂರ್ವಿಕರ ಇತಿಹಾಸದ ಬಗ್ಗೆ ಸಂಶೋಧನೆಗಳಾಗಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವೆ ಹಾಗೂ ಲೇಖಕಿ ಬಿ.ಟಿ.ಲಲಿತಾನಾಯಕ್ ಹೇಳಿದ್ದಾರೆ.
ಬುಧವಾರ ನಗರದ ನಯನ ಸಭಾಂಗಣದಲ್ಲಿ ಕರ್ನಾಟಕ ಪ್ರದೇಶ ಬಂಜಾರ ಮಹಿಳಾ ಸೇವಾ ಸಮಾಜದ ವತಿಯಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ, ಬಂಜಾರ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಂಜಾರ ಸಮುದಾಯವು ರಜಪೂತ, ಮುಸ್ಲಿಮ್, ಸಿಖ್ ಸಮುದಾಯಕ್ಕೆ ಸೇರಿದ್ದವರನ್ನು ಒಳಗೊಂಡಿದೆ. ಅಲ್ಲದೆ, ಬ್ರಾಹ್ಮಣರನ್ನೂ ನಮ್ಮ ಸಮುದಾಯ ಒಳಗೊಂಡಿದೆ ಎಂದ ಅವರು, ರಾಮ, ಹನುಮ ಎಲ್ಲರೂ ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ, ಕಾಲಾನಂತರದ ನಾಗರಿಕತೆಯಲ್ಲಿ ನಮ್ಮ ಸ್ವಂತಿಕೆಯನ್ನು ಕಳೆದುಕೊಂಡಿದ್ದೇವೆ ಎಂದು ತಿಳಿಸಿದರು.
ಬಂಜಾರ ಸಮುದಾಯವು ಅತ್ಯಂತ ಶ್ರೀಮಂತ ಹಾಗೂ ಶ್ರೇಷ್ಠವಾದ ಸಂಸ್ಕೃತಿಯನ್ನು ಒಳಗೊಂಡಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಮುದಾಯವು ದಿಕ್ಕು ತಪ್ಪುತ್ತಿದೆ ಎಂದ ಅವರು, ಹಿಂದೆ ಜಾತೀಯತೆಯನ್ನು ಮೀರಿ ಬದುಕುತ್ತಿದ್ದೆವು. ಇಂದು ಆ ಪದ್ಧತಿ ಇಲ್ಲವಾಗಿದೆ. ಹೀಗಾಗಿ, ದೇಶದಲ್ಲಿ ಜಾತಿ, ಧರ್ಮ, ಭೇದ-ಭಾವವನ್ನು ಬಿಟ್ಟು ಬದುಕಬೇಕು ಎಂದು ನುಡಿದರು.
ಬಂಜಾರರ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದ್ದು, ಅಂದಿನ ಸಮಾಜದಲ್ಲಿನ ಕ್ರೌರ್ಯವನ್ನು ಮೌಖಿಕವಾಗಿ ಹಾಡುತ್ತಿದ್ದರು. ಅದನ್ನು ಇಂದಿಗೂ ಮುಂದುವರಿಸಲಾಗಿದೆ. ಆದರೆ, ಸಮುದಾಯದ ಸಾಹಿತ್ಯವನ್ನು ಒಂದು ಕಡೆ ಸಂಗ್ರಹಿಸಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದೇಶದಲ್ಲಿ ಬಂಜಾರ ಸಮುದಾಯದ ಎಲ್ಲರೂ ಶಿಕ್ಷಣವನ್ನು ಪಡೆಯಬೇಕು. ಸಂವಿಧಾನವನ್ನು ಹಾಗೂ ಕಾನೂನನ್ನು ಅರಿಯಬೇಕು. ಆವಾಗಲೇ ನಮ್ಮನ್ನು ನಾವು ರಕ್ಷಿಸಿಕೊಂಡು, ಬೇರೆಯವರನ್ನು ರಕ್ಷಿಸಲು ಸಾಧ್ಯವಾಗುತ್ತದೆ. ಹಿಂಸಾ ಪ್ರವೃತ್ತಿಯನ್ನು ಬಿಟ್ಟು ಅಹಿಂಸಾ ಮಾರ್ಗದಲ್ಲಿ ನಡೆಯಬೇಕು ಎಂದು ಅವರು ಕರೆ ನೀಡಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಭಾಯಿ ಮಾತನಾಡಿ, ಬಂಜಾರ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ ಇಂದಿಗೂ ಹಿಂದುಳಿದಿದ್ದಾರೆ. ನಮ್ಮ ಸಮುದಾಯ ಸ್ವಾಭಿಮಾನದಿಂದ, ಸ್ವಾವಲಂಬಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಸಮುದಾಯದ ಎಲ್ಲ ಮಹಿಳೆಯರಿಗೂ ಶಿಕ್ಷಣ ಸಿಗಬೇಕು. ಆ ಮೂಲಕ ಬದಲಾವಣೆ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಆಶಾಭಾಯಿ ರಾಥೋಡ, ಸಾಹಿತಿ ಇಂಧುಮತಿ ಲಮಾಣಿ, ಸುಜಾತ ರಾಥೋಡ್ ಸೇರಿದಂತೆ ಮತ್ತಿತರರಿದ್ದರು.