ಇದು ಪ್ರಧಾನಿ ಮೋದಿ ಮಾಡಿದ ನೈಜ ಸರ್ಜಿಕಲ್ ಸ್ಟ್ರೈಕ್: ಐಟಿ ದಾಳಿಗೆ ಕುಮಾರಸ್ವಾಮಿ ವ್ಯಂಗ್ಯ
ಬೆಂಗಳೂರು, ಮಾ. 28: ಪ್ರಧಾನಿ ನರೇಂದ್ರ ಮೋದಿ ಮಾಡಿರುವ ನಿಜವಾದ ಸರ್ಜಿಕಲ್ ಸ್ಟ್ರೈಕ್ ಇದಾಗಿದೆ. ಆದರೆ, ಇದನ್ನು ಮಾಡಿದ್ದು ಮಾತ್ರ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಎಂದು ಜೆಡಿಎಸ್-ಕಾಂಗ್ರೆಸ್ ಮುಖಂಡರ ಮೇಲಿನ ಐಟಿ ದಾಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ರಾಜ್ಯದ ವಿವಿಧೆಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಸಂಬಂಧಿಸಿದಂತೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ಐಟಿ ಮುಖ್ಯಸ್ಥ ಬಾಲಕೃಷ್ಣನ್ ಅವರಿಗೆ ನೀಡಿರುವ ಸಂವಿಧಾನಾತ್ಮಕ ಹುದ್ದೆಯು ದ್ವೇಷ ರಾಜಕಾರಣಕ್ಕೆ ದಾಳವಾಗಿ ಬಳಸಲ್ಪಡುತ್ತದೆ ಎಂದು ದೂರಿದ್ದಾರೆ.
ಕೇಂದ್ರ ಸರಕಾರ ಸರಕಾರಿ ಆಡಳಿತ ಯಂತ್ರವನ್ನು ಮತ್ತು ಭ್ರಷ್ಟ ಅಧಿಕಾರಿಗಳನ್ನು ಪ್ರತಿಪಕ್ಷಗಳ ವಿರುದ್ಧ ಬಳಸುತ್ತಿರುವುದು ಖಂಡನೀಯ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಆದಾಯ ತೆರಿಗೆ ಇಲಾಖೆ ರಾಜಕೀಯ ಪ್ರೇರಿತವಾಗಿ ಚುನಾವಣೆ ಸಂದರ್ಭದಲ್ಲಿ ದಾಳಿ ಮಾಡಿದ್ದು, ದೇಶದಲ್ಲಿ ವಿಪಕ್ಷಗಳು ಇರಬಾರದೆಂಬುದು ಮೋದಿ ಅಜೆಂಡಾ. ಐಟಿ ಮುಖ್ಯಸ್ಥ ಬಾಲಕೃಷ್ಣ ಒಬ್ಬ ಬಿಜೆಪಿ ಏಜೆಂಟ್. ಐಟಿ ಮುಖ್ಯಸ್ಥರು ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಐಟಿ ಬಿಜೆಪಿಯ ಅಂಗ ಸಂಸ್ಥೆಯಾಗಿದೆ. ಆಪರೇಷನ್ ಕಮಲಕ್ಕೆ 10 ಕೋಟಿ ರೂ.ನಿಂದ 30ಕೋಟಿ ರೂ.ನಂತೆ 200-300 ಕೋಟಿ ರೂ.ಆಫರ್ ಕೊಟ್ಟಿದ್ದರು. ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’
-ದಿನೇಶ್ ಗುಂಡೂರಾವ್ ಕೆಪಿಸಿಸಿ ಅಧ್ಯಕ್ಷ
‘ಐಟಿ ಅಧಿಕಾರಿಗಳಿಗೆ ದಾಳಿ ನಡೆಸುವ ಅಧಿಕಾರವಿದೆ. ಆದರೆ, ನಿಷ್ಪಕ್ಷಪಾತವಾಗಿ ನಡೆಸಬೇಕು. ಅದಕ್ಕೆ ಸಮಯ ಎಂಬುದು ಇದೆ. ಚುನಾವಣೆ ಘೋಷಣೆಯಾಗಿ ಪ್ರಚಾರ ನಡೆಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮೈತ್ರಿ ಶಾಸಕರು, ಸಚಿವರ ಮನೆ ಮೇಲೆ ದಾಳಿ ನಡೆದಿದೆ. ಇದು ನಿಜಕ್ಕೂ ಖಂಡನೀಯ. ಅಧಿಕಾರಿಗಳು ತಮ್ಮ ಕೆಲಸ ಮಾಡುವುದರಲ್ಲಿ ತಪ್ಪಿಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್ ನಾಯಕರನ್ನೆ ಗುರಿಯನ್ನಾಗಿಟ್ಟುಕೊಂಡಿದ್ದು ಸರಿಯಲ್ಲ’
-ಎಂ.ಬಿ.ಪಾಟೀಲ್, ಗೃಹ ಸಚಿವ
PM @narendramodi's real surgical strike is out in the open through IT dept raids. The constitutional post offer for IT officer Balakrishna helped the PM in his revenge game. Highly deplorable to use govt machinery, corrupt officials to harrass opponents during election time.
— H D Kumaraswamy (@hd_kumaraswamy) 28 March 2019