ರಹಮತ್ ತರೀಕೆರೆ ಅವರ ಅಮೀರ್‌ಬಾಯಿ ಕರ್ನಾಟಕಿ

Update: 2019-04-20 18:31 GMT

ಈ ಕೃತಿಯ ರಚನೆಗೆ ರಹಮತ್ ತರೀಕೆರೆಯವರು ಹಾಕಿರುವ ಶ್ರಮ ಅಸಾಧಾರಣವಾದದ್ದು. ಸುಮಾರು ಐದು ವರ್ಷಗಳ ಕಾಲ ಕರ್ನಾಟಕದ ವಿವಿಧ ಸ್ಥಳಗಳು ಪುಣೆ, ಮುಂಬೈಯನ್ನು ಎಡತಾಕಿದ್ದಾರೆ. ನೂರಾರು ಜನರನ್ನು ಭೇಟಿ ಮಾಡಿದ್ದಾರೆ. ಸಿನೆಮಾ ರಂಗಭೂಮಿಗೆ ಸಂಬಂಧಿಸಿದಂತೆ ಆಸಕ್ತರ ಮನೆಯಲ್ಲಿ ಸಂಗ್ರಹವಾಗಿದ್ದ ಪುಸ್ತಕ, ವೃತ್ತ ಪತ್ರಿಕೆ, ಧ್ವನಿಮುದ್ರಿಕೆಗಳನ್ನು ಜಾಲಾಡಿದ್ದಾರೆ. ಅಂತರ್ಜಾಲವನ್ನು ತಡಕಾಡಿದ್ದಾರೆ. ಅಮೀರ್‌ಬಾಯಿ ಹುಟ್ಟಿ, ಬೆಳೆದ ಪ್ರದೇಶ ಮತ್ತು ಅವರು ತಮ್ಮ ವೃತ್ತಿ ಬದುಕಿನಲ್ಲಿ ಭೇಟಿ ನೀಡಿದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಅವರನ್ನು ಮುಖತಃ ಕಂಡವರ ಜೊತೆ ಮಾತನಾಡಿದ್ದಾರೆ. ತಮ್ಮ ಕಾಲದಲ್ಲಿ ಅಮೀರ್‌ಬಾಯಿ ಬಗ್ಗೆ ತಿಳಿದಿದ್ದ ಹಿರಿಯರಿಂದ ಮಾಹಿತಿ ಪಡೆದಿದ್ದಾರೆ. ಜೊತೆಗೆ ಕನ್ನಡ, ಮರಾಠಿ ರಂಗಭೂಮಿ ಮತ್ತು ಮುಂಬೈ, ಕರ್ನಾಟಕ ಚಿತ್ರರಂಗದ ಇತಿಹಾಸವನ್ನು ಕೆದಕಿದ್ದಾರೆ. ಈ ಎಲ್ಲ ಪರಿಶ್ರಮದಿಂದ ಈ ಅಪೂರ್ವ ಕೃತಿಯೊಂದು ಒಡಮೂಡಿದೆ.

‘ಹಾಡುನಟಿಯ ಜೀವನ ಕಥನ’ ಎಂಬ ಉಪ ಶೀರ್ಷಿಕೆಯ ಜೊತೆಗೆ ರಚಿತಗೊಂಡಿರುವ ವಿದ್ವಾಂಸ ರಹಮತ್ ತರೀಕೆರೆ ಅವರ ‘ಅಮೀರ್‌ಬಾಯಿ ಕರ್ನಾಟಕಿ’ ಕೃತಿಯು ಒಬ್ಬ ಕಲಾವಿದೆಯ ಬದುಕಿನ ಏಳು-ಬೀಳುಗಳ, ಸಿದ್ಧಿ ಸಾಧನೆಗಳ ಚಿತ್ರಣ ಮಾತ್ರವಲ್ಲ, ಒಂದು ಕಾಲಘಟ್ಟದಲ್ಲಿನ ಸಮಾಜದ ಸಾಂಸ್ಕೃತಿಕ ಚರಿತ್ರೆಯೂ ಆಗಿದೆ. ಈ ಕೃತಿಯನ್ನು ಓದುತ್ತಿರುವಂತೆ ಅದು ಸಂಸ್ಕೃತಿಯ ಆತ್ಮ ಚರಿತ್ರೆಯಂತೆ ಭಾಸವಾಗುತ್ತದೆ. ಆ ಚರಿತ್ರೆಯ ಎಳೆಯಲ್ಲಿ ನಮ್ಮ ಕತೆಯೂ ಹೆಣೆದುಕೊಂಡಿರುವಂತೆ ಕಾಣುತ್ತದೆ. ಈ ಪರಂಪರೆಯ ಕೊಂಡಿಯಲ್ಲಿ ನಮ್ಮ ಸ್ಥಾನವೆಲ್ಲಿ ಎಂದು ನಿರ್ದೇಶಿಸುವಷ್ಟು ಸೂಕ್ಷ್ಮವಾಗಿದೆ.

ಇದಕ್ಕೆ ಕಾರಣವಿದೆ. ನಮ್ಮ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನದಲ್ಲಿ ಲೇಖಕರೇ ಎತ್ತಿ ತೋರಿಸುವ ಹಾಗೆ ಸಾಹಿತ್ಯಕ ಮತ್ತು ರಾಜಕೀಯ ವಿದ್ಯಮಾನಗಳದ್ದೇ ಪಾರಮ್ಯ. ಶಾಸ್ತ್ರೀಯ ಕಲಾ ಪ್ರಕಾರಗಳ ಅಧ್ಯಯನ, ವಿಶ್ಲೇಷಣೆಗೆ ಹೆಚ್ಚಿನ ಮಹತ್ವ. ಇತ್ತೀಚೆಗೆ ದೇಸೀ ಚಿಂತನೆಗಳು, ಅಂತರ್‌ರಾಷ್ಟ್ರೀಯ ವಿದ್ಯಮಾನಗಳು ಸಂಸ್ಕೃತಿ ಚಿಂತನೆಯಲ್ಲಿ ಪ್ರಾಬಲ್ಯ ಸಾಧಿಸಿವೆ.

ಆದರೆ ಜನರನ್ನು ರಂಜಿಸುವ ವೃತ್ತಿ ರಂಗಭೂಮಿ, ಸಿನೆಮಾ, ಅಂಚಿಗೆ ಸರಿದಿರುವ ಅನೇಕ ಜಾನಪದ ಕಲೆ, ಕಲಾವಿದರು, ಕಲಾ ತಂಡಗಳ ಬಗ್ಗೆ ನಮ್ಮ ಸಂಶೋಧನಾ ಸಂಸ್ಥೆಗಳು, ಮಾಧ್ಯಮಗಳು, ಶೈಕ್ಷಣಿಕ ಕೇಂದ್ರಗಳು ಗಂಭೀರವಾದ ಅಧ್ಯಯನ ಚರ್ಚೆಯನ್ನು ಹುಟ್ಟುಹಾಕಲೇ ಇಲ್ಲ. ನಮ್ಮ ಮಾಧ್ಯಮಗಳಂತೂ ಸಿನೆಮಾ ರಂಗದ ಬಗ್ಗೆ ಉದ್ಯಮಪರವಾಗಿ ನಿಂತು ಕಾರ್ಯನಿರ್ವಹಿಸಿರುವುದೇ ಹೆಚ್ಚು. ಹಾಗಾಗಿ ರಾಜ್‌ಕುಮಾರ್ ಅವರಂತಹ ಮೇರು ನಟರ ಬಗ್ಗೆ ಹೊಗಳಿಕೆಯ ಸರಣಿಗಳು ಹೆಚ್ಚು ಪ್ರಕಟವಾಗಿದೆಯೇ ಹೊರತು ಒಂದು ಸಾಂಸ್ಕೃತಿಕ ವಿದ್ಯಮಾನವಾಗಿ ಅವರ ವೃತ್ತಿ ಬದುಕನ್ನು ಅಧ್ಯಯನಕ್ಕೆ ಒಳಪಡಿಸಿರುವ ಪ್ರಯತ್ನಗಳು ವಿರಳವೆಂದೇ ಹೇಳಬಹುದು.

ಕೆಲವು ದೊಡ್ಡ ತಾರೆಗಳನ್ನು (ಭೀಮಸೇನ್ ಜೋಶಿ, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಗುಬ್ಬಿ ವೀರಣ್ಣ ಮತ್ತವರ ಸಂಸ್ಥೆ) ಹೊರತುಪಡಿಸಿದರೆ ಒಂದು ಕಾಲದಲ್ಲಿ ಲಕ್ಷಾಂತರ ಜನರನ್ನು ತಮ್ಮ ಅಭಿನಯ ಮತ್ತು ಸಂಗೀತದಿಂದ ರಂಜಿಸಿ ಅವರನ್ನು ಗೆದ್ದು ದಂತಕತೆಯಾಗಿದ್ದ ಗುಳೇದಗುಡ್ಡ ಗಂಗೂಬಾಯಿ, ಬಚ್ಚಾಸಾನಿ, ಮಹಮದ್ ಪೀರ್, ಟೈಗರ್ ವರದಾಚಾರ್ಯ, ಸುಬ್ಬಯ್ಯನಾಯ್ಡು, ವಾಮನರಾವ್ ಮಾಸ್ಟರ್, ದೇವೇಂದ್ರಪ್ಪ, ಗರೂಡ ಸದಾಶಿವರಾಯರು, ಹಂದಿಗನೂರು ಸಿದ್ರಾಮಪ್ಪ, ಕೊಟ್ಟೂರು ಬಸಪ್ಪ.... ಹೀಗೆ ಅನೇಕ ಅಭಿಜಾತ ಕಲಾವಿದರ ಬಗ್ಗೆ ಪರಿಚಯಾತ್ಮಕ ಮಾಹಿತಿಗಳ ಹೊರತಾಗಿ ಒಂದು ಕಾಲಘಟ್ಟದ ಸಾಂಸ್ಕೃತಿಕ ರಾಯಭಾರಿಗಳಾಗಿ ಅವರು ನಿರ್ವಹಿಸಿದ ಕಾರ್ಯ, ಏರಿದ ಎತ್ತರಗಳ ಬಗ್ಗೆ ಗಂಭೀರವಾದ ಅಧ್ಯಯನಗಳೇ ಆಗಿಲ್ಲ.

ಈ ಕೊರತೆಯನ್ನು ನೀಗಿಸುವ ರೀತಿಯಲ್ಲಿ ಕನ್ನಡಿಗರ ಸ್ಮತಿಕೋಶದಲ್ಲಿ ಮರೆಗೆ ಸರಿದಿದ್ದ ಅಮೀರ್‌ಬಾಯಿ ಕರ್ನಾಟಕಿ ಅವರ ಜೀವನಕತೆಯನ್ನು ರಹಮತ್ ತರೀಕೆರೆ ಅವರು ಕಟ್ಟಿಕೊಟ್ಟಿದ್ದಾರೆ. ಅವರ ಕತೆಯ ನೆಪದಲ್ಲಿ ಒಂದು ಸಾಂಸ್ಕೃತಿಕ ಚರಿತ್ರೆಯನ್ನೇ ನಿರ್ಮಿಸಿದ್ದಾರೆ.

ಈ ಕೃತಿಯ ರಚನೆಗೆ ರಹಮತ್ ತರೀಕೆರೆಯವರು ಹಾಕಿರುವ ಶ್ರಮ ಅಸಾಧಾರಣವಾದದ್ದು. ಸುಮಾರು ಐದು ವರ್ಷಗಳ ಕಾಲ ಕರ್ನಾಟಕದ ವಿವಿಧ ಸ್ಥಳಗಳು ಪುಣೆ, ಮುಂಬೈಯನ್ನು ಎಡತಾಕಿದ್ದಾರೆ. ನೂರಾರು ಜನರನ್ನು ಭೇಟಿ ಮಾಡಿದ್ದಾರೆ. ಸಿನೆಮಾ ರಂಗಭೂಮಿಗೆ ಸಂಬಂಧಿಸಿದಂತೆ ಆಸಕ್ತರ ಮನೆಯಲ್ಲಿ ಸಂಗ್ರಹವಾಗಿದ್ದ ಪುಸ್ತಕ, ವೃತ್ತ ಪತ್ರಿಕೆ, ಧ್ವನಿಮುದ್ರಿಕೆಗಳನ್ನು ಜಾಲಾಡಿದ್ದಾರೆ. ಅಂತರ್ಜಾಲವನ್ನು ತಡಕಾಡಿದ್ದಾರೆ. ಅಮೀರ್‌ಬಾಯಿ ಹುಟ್ಟಿ, ಬೆಳೆದ ಪ್ರದೇಶ ಮತ್ತು ಅವರು ತಮ್ಮ ವೃತ್ತಿ ಬದುಕಿನಲ್ಲಿ ಭೇಟಿ ನೀಡಿದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಅವರನ್ನು ಮುಖತಃ ಕಂಡವರ ಜೊತೆ ಮಾತನಾಡಿದ್ದಾರೆ. ತಮ್ಮ ಕಾಲದಲ್ಲಿ ಅಮೀರ್‌ಬಾಯಿ ಬಗ್ಗೆ ತಿಳಿದಿದ್ದ ಹಿರಿಯರಿಂದ ಮಾಹಿತಿ ಪಡೆದಿದ್ದಾರೆ. ಜೊತೆಗೆ ಕನ್ನಡ, ಮರಾಠಿ ರಂಗಭೂಮಿ ಮತ್ತು ಮುಂಬೈ, ಕರ್ನಾಟಕ ಚಿತ್ರರಂಗದ ಇತಿಹಾಸವನ್ನು ಕೆದಕಿದ್ದಾರೆ. ಈ ಎಲ್ಲ ಪರಿಶ್ರಮದಿಂದ ಈ ಅಪೂರ್ವ ಕೃತಿಯೊಂದು ಒಡಮೂಡಿದೆ.

ಈ ಕೃತಿಯ ವಿಶಿಷ್ಟತೆ ಇರುವುದೇ ಇಲ್ಲಿನ ಸಾಂಸ್ಕೃತಿಕ ಮಾಹಿತಿ, ಅದರ ವಿಶ್ಲೇಷಣೆ ಮತ್ತು ಒಳನೋಟಗಳ ಸಮೃದ್ಧಿಯಿಂದ. ಹಾಗಾಗಿ ಇದು ಒಂದು ಕಾಲಘಟ್ಟದಲ್ಲಿ ರಂಗಭೂಮಿ, ಸಂಗೀತ ಮತ್ತು ಚಲನಚಿತ್ರ ಕಲೆಗಳು ಪಡೆದುಕೊಂಡ ಚಲನಶೀಲತೆ ಮತ್ತು ಹೊರಳು ದಾರಿಗಳನ್ನು ದಾಖಲಿಸುತ್ತದೆ.

ರಹಮತ್ ತರೀಕೆರೆಯವರು ಒಂದೆಡೆ ರಂಗಭೂಮಿಗೂ ಸಂಗೀತಕ್ಕೂ ಇದ್ದಂತಹ ನಂಟು, ರಂಗಭೂಮಿಗೂ ಸಿನೆಮಾ ಕ್ಷೇತ್ರಕ್ಕೂ ಏರ್ಪಟ್ಟ ಸಾವಯವ ಸಂಬಂಧ, ಅವೆರಡೂ ಕ್ಷೇತ್ರಗಳು ಪರಸ್ಪರ ಮಾಡಿದ ಪ್ರಭಾವ ಮತ್ತು ಪರಿಣಾಮ, ಈ ಕಲೆಗಳ ಜಾತ್ಯತೀತ ಸ್ವರೂಪ ಮತ್ತು ಆ ಮೂಲಕ ಗುಡಿ ಸಂಸ್ಕೃತಿಯ ಕಲಾವಿದರು ತಮ್ಮ ಸಾಂಪ್ರದಾಯಿಕ ಚೌಕಟ್ಟಿನಿಂದ ವಿಮುಕ್ತಿ ಪಡೆದು ಸ್ವತಂತ್ರ ಅಸ್ತಿತ್ವವನ್ನು ಪಡೆದುಕೊಂಡ ರೀತಿ ಮತ್ತು ಈ ಕ್ಷೇತ್ರದಲ್ಲಿ ಉದಯಿಸಿದ ತಾರೆಗಳು, ಅವರ ಸಂಭ್ರಮಗಳು ಮತ್ತು ಕಂಡ ದುರಂತಗಳನ್ನು ಸ್ಪಷ್ಟ ಆಧಾರಗಳಿಂದ ನಿರೂಪಿಸುತ್ತಾ ಹೋಗುತ್ತಾರೆ. ಕಳೆದ ಶತಮಾನದಲ್ಲಿ ಒಂದೆಡೆ ಸ್ವಾತಂತ್ರ್ಯ ಸಂಗ್ರಾಮ ಗರಿಗಟ್ಟಿಕೊಳ್ಳುತ್ತಿರುವಾಗಲೇ ಕಲೆ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲಿ ಸ್ವಭಾವ ಸಿದ್ಧವಾಗಿ ಇದ್ದಂತಹ ಜಾತ್ಯತೀತ ಮತ್ತು ಧರ್ಮಾತೀತ ಸ್ವರೂಪ ಹಾಗೂ ಒಂದು ಧರ್ಮವನ್ನು ಅನುಸರಿಸಿಯೂ ಮತ್ತೊಂದು ಧರ್ಮದ ಬಗ್ಗೆ ಸಮಾನ ಗೌರವವನ್ನು ಉಳಿಸಿಕೊಂಡಿದ್ದ ಸಮುದಾಯದ ಸಜ್ಜನಿಕೆ ಮತ್ತು ವಿವೇಕವನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತಾರೆ. ಹೀಗೆ ಅನೇಕ ಕ್ಷೇತ್ರಗಳ ಮಾಹಿತಿ ಮತ್ತು ಒಳನೋಟಗಳ ಕಡಲೊಂದು ನಮ್ಮ ಮುಂದೆ ಮೊರೆಯುತ್ತಾ ನಿಲ್ಲುತ್ತದೆ. ಈ ಕಡಲನ್ನು ತಮ್ಮ ವಿಶ್ಲೇಷಣೆಯ ಕಡೆಗೋಲಿನಲ್ಲಿ ಲೇಖಕರು ಮಥಿಸುತ್ತಾರೆ. ಈ ಮಥನದಿಂದ ಅಮೀರ್‌ಬಾಯಿ ಕರ್ನಾಟಕಿ ಎಂಬ ನವನೀತವೊಂದು ಸಂಶ್ಲೇಷಣೆಗೊಂಡು ತೇಲುತ್ತದೆ.

ಹೀಗೆ ಒಂದು ಸಮೃದ್ಧ ಪರಂಪರೆಯಿಂದ ಎದ್ದು ಬರುವ ಅಮೀರ್‌ಬಾಯಿ ಕರ್ನಾಟಕಿಯವರ ಜೀವನಕತೆಯ ಜೊತೆ ಹೆಣೆದುಕೊಂಡಿರುವ ಸಂಸ್ಕೃತಿಯ ಚರಿತ್ರೆಯನ್ನು ಓದಿದಾಗ ನಾವು ಕಳೆದುಹೋದ ಒಡಲ ಪೀಳಿಗೆಯ ದನಿಯೊಂದರ ವಿಷಾದಗೀತೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಜೊತೆಗೆ ನಮ್ಮದೇ ಚರಿತ್ರೆಯಾದ ಅದರ ಶ್ರೀಮಂತಿಕೆ ಕಂಡು ಧನ್ಯತೆಯ ಭಾವ ಉಕ್ಕುತ್ತದೆ.

ಜೊತೆಗೆ ತರೀಕೆರೆಯವರ ಪ್ರಯತ್ನವು ಹಿಂದೆ ಸಹಜವೆಂಬಂತೆ ಅಸ್ತಿತ್ವದಲ್ಲಿದ್ದ ಹಿಂದೂ-ಮುಸಲ್ಮಾನ ಸಂಸ್ಕೃತಿಯ ಸಾಮರಸ್ಯಕ್ಕೆ ಅನೇಕ ಸಂಗತಿಗಳನ್ನು ನೆನಪಿಸುತ್ತಾರೆ. ಮುಂಬೈ ಕರ್ನಾಟಕದ ರಂಗಭೂಮಿಗಳಲ್ಲಿ ಬಹುಧಾರ್ಮಿಕ ಪರಿಸರ ನೆಲೆಸಲು ಹಲವು ಶತಮಾನಗಳಿಂದ ಬೇರು ಬಿಟ್ಟಿದ್ದ ಸೂಫಿ ಮತ್ತು ಮೊಹರಂ ಪರಂಪರೆಗಳ ಕೊಡುಗೆಯನ್ನು ಎತ್ತಿ ಹಿಡಿದಿದ್ದಾರೆ. ಬಹುಧಾರ್ಮಿಕ ನೆಲೆಯ ಅಮೀರ್ ಖುಸ್ರೋ ಹಿಂದೂಸ್ಥಾನಿ ಸಂಗೀತದ ಪಿತಾಮಹನೆಂಬುದನ್ನು ನೆನಪಿಸುತ್ತಾ ಗುರುಶಿಷ್ಯ ಪರಂಪರೆಯಲ್ಲಿ ಉಭಯ ಧರ್ಮಗಳ ವ್ಯಕ್ತಿಗಳು ಸಮಾನ ಗೌರವದಿಂದ ಸಂಗೀತೋಪಾಸನೆಯನ್ನು ಮಾಡಿದ ಧರ್ಮಾತೀತ ಪರಂಪರೆಯನ್ನು ಗುರುತಿಸುತ್ತಾರೆ. ಮುಸಲ್ಮಾನ ಧರ್ಮದಿಂದ ಬಂದ ಕಲಾವಿದರು ಆರಂಭದಲ್ಲಿ ಹಿಂದೂ ಪುರಾಣದ ದೇವತೆಗಳು, ಐತಿಹಾಸಿಕ ವ್ಯಕ್ತಿಗಳ ಪಾತ್ರಗಳನ್ನು ಸಹಜವೆನ್ನುವ ರೀತಿಯಲ್ಲಿ ನಿರ್ವಹಿಸುತ್ತಿದ್ದದು ಮತ್ತು ಅದನ್ನು ಎರಡೂ ಧರ್ಮದವರು ಯಾವುದೇ ಆಕ್ಷೇಪಣೆಯಿಲ್ಲದೆ ಸಹಜವಾಗಿ ಸ್ವೀಕರಿಸುತ್ತಾ ಮೆಚ್ಚುತ್ತಿದ್ದ ಪರಿಗೆ ಅಸಂಖ್ಯಾತ ಉದಾಹರಣೆ ನೀಡುತ್ತಾರೆ. ಮುಸ್ಲಿಂ ಸಮುದಾಯದ ಕೊಡುಗೆಯನ್ನು ಅನುಮಾನಿಸುವ ಇತ್ತೀಚಿನ ಮನಸ್ಸುಗಳಿಗೆ ಈ ಪುಸ್ತಕ ಒಂದು ಸಮರ್ಥವಾದ ಉತ್ತರವನ್ನು ನೀಡುತ್ತದೆ.

ಹಿಂದಿನ ಆ ಕಲಾವೈಭವವನ್ನು ಈಗ ಆನಂದಿಸುವ ಸ್ಥಿತಿ ನಮ್ಮಲ್ಲಿ ಉಳಿದಿದೆಯೇ ಎಂಬುದು ಈಗ ನಮ್ಮೆದುರು ಇರುವ ದೊಡ್ಡ ಪ್ರಶ್ನೆ (ಕಾಶ್ಮೀರದ ಮಹಿಳಾ ರಾಕ್‌ಬ್ಯಾಂಡ್‌ಗೆ ಆಗಿರುವ ಗತಿ ಇತ್ತೀಚಿನದು). ಈ ಹಿನ್ನೆಲೆಯಲ್ಲೇ ನಮಗೆ ಅಮೀರ್‌ಬಾಯಿ ಕರ್ನಾಟಕಿ ಕಳೆದುಹೋದ ಒಡಲ ಪೀಳಿಗೆಯ ದನಿಯಂತೆ ಕೇಳಿಸುತ್ತಾರೆ.

ಈ ಕೃತಿಯ ಕುತೂಹಲದ ಅಧ್ಯಾಯವೆಂದರೆ ಅಮೀರ್‌ಬಾಯಿಯವರ ಅಕ್ಕ ಗೋಹರ್‌ಬಾಯಿ ಅವರ ಜೀವನ ವೃತ್ತಾಂತ. ಇಡೀ ಕೃತಿ ಅಮೀರ್‌ಬಾಯಿ ಅವರ ಜೀವನ ಕಥನದ ಸುತ್ತ ಗಿರಕಿ ಹೊಡೆದರೂ, ಆ ಸುಳಿಯಿಂದ ಹೊರಬಂದು ಪ್ರತ್ಯೇಕವಾಗಿ ನಿಲ್ಲುವ ಅಧ್ಯಾಯ ಎಂದರೆ- ಅಕ್ಕ ಗೋಹರ್‌ಬಾಯಿ ಕರ್ನಾಟಕಿ.

ಅಮೀರ್‌ಬಾಯಿ ಕರ್ನಾಟಕಿ ಅವರಿಗಿಂತ ಎರಡು ವರ್ಷಕ್ಕೆ ದೊಡ್ಡವರು ಗೋಹರ್. ಇಬ್ಬರೂ ಬೀಳಿಗಿ ಸೋದರಿಯರು ಎಂದೇ ಪ್ರಸಿದ್ಧರಾದವರು. ಆದರೆ ಒಂದೇ ಕುಟುಂಬದಿಂದ ಬಂದ ಈ ಮಹಿಳೆಯರು ಎರಡು ವಿಭಿನ್ನ ಸ್ತ್ರೀ ಮಾತೃಕೆಗಳನ್ನು ಪ್ರತಿನಿಧಿಸುವುದು ಈ ಕೃತಿಯಲ್ಲಿ ಎದ್ದು ಕಾಣುತ್ತದೆ.

ಅಮೀರ್‌ಬಾಯಿ ಅವರು ಪುರುಷ ಸಮಾಜ ಸಭ್ಯ ಸ್ತ್ರೀ ಬಗ್ಗೆ ನಿರ್ಮಿಸಿರುವ ಬಿಂಬದ ಚೌಕಟ್ಟಿಗೆ ಸರಿಯಾಗಿ ಹೊಂದಿಕೊಳ್ಳುತ್ತಾರೆ. ಅವರಲ್ಲಿ ಸಜ್ಜನಿಕೆಯನ್ನು ಎಲ್ಲರೂ ಕಾಣುತ್ತಾರೆ. ಹುಟ್ಟಿದ ಊರು ಮತ್ತು ಕುಟುಂಬದ ಜೊತೆ ಗಾಢವಾದ ನಂಟು ಉಳಿಸಿಕೊಳ್ಳುತ್ತಾರೆ. ತಮ್ಮನ ನೆರವಿಗಾಗಿ ಬಿಜಾಪುರದಲ್ಲಿ ಟಾಕೀಸನ್ನು ಕಟ್ಟಿಸಿಕೊಡುತ್ತಾರೆ (ಮೊದಲು ವಿಜಯಾ ಟಾಕೀಸ್ ಈಗ ಅಮೀರ್ ಟಾಕೀಸ್). ತನ್ನ ಗಂಡ ನೀಡಿದ ದೈಹಿಕ, ಮಾನಸಿಕ ಹಿಂಸೆಯನ್ನು ತಾಳ್ಮೆಯಿಂದ ಸಹಿಸಿಕೊಂಡ ಸಾಧ್ವೀಮಣಿಯಾಗಿ ಅನುಕಂಪ ಪಡೆಯುತ್ತಾರೆ. ತನ್ನ ಮೃತದೇಹವನ್ನು ಸಂಗೀತ ಪ್ರಿಯ ಎರಡನೇ ಆದಿಲ್ ಶಾಹಿಯ ಇಬ್ರಾಹೀಂ ರೋಜಾದ ಬಳಿಯೇ ದಫನ್ ಮಾಡಲು ಇಚ್ಛಿಸುತ್ತಾರೆ. ಅವರ ಆಸೆಯೂ ಪೂರೈಸುತ್ತದೆ. ಕನ್ನಡ ಭಾಷೆಯ ನಂಟನ್ನು ಸಾವಿನಲ್ಲೂ ಉಳಿಸಿಕೊಳ್ಳುತ್ತಾರೆ.

ಆದರೆ ಅಕ್ಕ ಗೋಹರ್ ತುಸು ಮಹತ್ವಾಕಾಂಕ್ಷಿ ಹೆಣ್ಣು. ಮರಾಠಿ ಸಂಸ್ಕೃತಿಯ ಅಸ್ಮಿತೆಯಂತಿದ್ದ ಬಾಲ ಗಂಧರ್ವ ಅವರ ಹಾಡಿಗೆ ಮನಸೋತವರು. ವಿಶಿಷ್ಟ ಸನ್ನಿವೇಶದಲ್ಲಿ ಬಾಲ ಗಂಧರ್ವರ ಮನಸ್ಸನ್ನು ಗೆದ್ದವರು. ಮದುವೆಯಾಗಿದ್ದ ಬಾಲ ಗಂಧರ್ವರ ಜೊತೆ ಸಂಸಾರ ಹೂಡಿದವರು. ಸಂಪ್ರದಾಯದ ವಿರುದ್ಧ ಈಜಲು ಬಯಸಿದ ಗೋಹರ್ ತನ್ನ ಮನಸ್ಸಿಗೊಪ್ಪುವಂತೆ ಬದುಕಿದವರು. ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಳ್ಳುವ ನಿಟ್ಟಿನಲ್ಲಿ ಹೆಣಗಿದವರು. ಬಾಲ ಗಂಧರ್ವರು ಆರ್ಥಿಕವಾಗಿ ದುಃಸ್ಥಿತಿಯಲ್ಲಿದ್ದಾಗ ತನ್ನ ಸರ್ವಸ್ವವನ್ನೂ ನೀಡಿ ಕಂಪೆನಿಯನ್ನು ಉಳಿಸಿದವರು. ಅವರ ಮೊದಲ ಹೆಂಡತಿ ಸತ್ತ ಹನ್ನೊಂದು ವರ್ಷದ ನಂತರ ಒಂದೂವರೆ ದಶಕ ಸಂಸಾರ ನಡೆಸಿದ ಗೋಹರ್ ತನ್ನ 40ನೇ ವಯಸ್ಸಿನಲ್ಲಿ ಅರವತ್ತೊಂದು ವರ್ಷದ ಬಾಲ ಗಂಧರ್ವರನ್ನು ಮದುವೆಯಾದರು. ಅವರ ಅನಾರೋಗ್ಯ ಸ್ಥಿತಿಯಲ್ಲಿ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿದ ತ್ಯಾಗಿ.

ಕನ್ನಡಿಗಳು ಅದರಲ್ಲೂ ಮುಸಲ್ಮಾನಳಾದ ಗೋಹರ್ ಅವರು ತಮ್ಮ ಅಸ್ಮಿತೆಗೆ ಕಳಂಕ ತಂದ ಕಾರಣಕ್ಕೆ ಮರಾಠಿಗರು ಅವರನ್ನೆಂದೂ ಸಹಿಸಲಿಲ್ಲ. ಅದೇ ರೀತಿ ಕನ್ನಡಿಗರೂ ಆಕೆಯನ್ನು ತಿರಸ್ಕಾರದಿಂದ ನೋಡಿದರು. ಒಂದು ಪ್ರೇಮ ಪ್ರಕರಣದಲ್ಲಿ ಗೋಹರ್ ಅಪರಾಧವನ್ನು ಹುಡುಕಿದ ಸಮಾಜ, ಅದಕ್ಕೆ ಅರ್ಧಪಾಲು ಕಾರಣರಾದ ಬಾಲ ಗಂಧರ್ವರನ್ನು ದೂಷಿಸಲಿಲ್ಲ. ಧರ್ಮಾತೀತ ಸಂಬಂಧಗಳಲ್ಲಿ ಅರಳಿದ ಈ ಪ್ರೇಮದ ಅಧ್ಯಾಯ ಕೊನೆಗೂ ಸ್ಥಾಪಿತ ಸಾಮಾಜಿಕ ನೀತಿಗಳಲ್ಲೇ ಮೌಲ್ಯ ಮಾಪನಕ್ಕೆ ಒಳಗಾಯಿತು. ಆದರೂ ಗೋಹರ್-ಗಂಧರ್ವರ ನಡುವಿನ ಪ್ರಣಯ ಕೇವಲ ದೈಹಿಕವಾಗಿರದೇ ಅದೊಂದು ಅನುಭಾವಿಕ ನೆಲೆಯಲ್ಲಿ ಸಂಭವಿಸಿದ ಸಂಗತಿಯಾಗಿರುವುದನ್ನು ಈ ಕೃತಿ ನಿರೂಪಿಸುತ್ತದೆ.

ಹೀಗೆ ಅಮೀರ್‌ಬಾಯಿ ಕರ್ನಾಟಕಿಯವರ ಜೀವನ ಕಥನ ಅನೇಕ ಸಂಭ್ರಮಗಳು, ದುರಂತಗಳು ಮತ್ತು ಸಾಂಸ್ಕೃತಿಕ ಚಲನಶೀಲತೆಯನ್ನೊಳಗೊಂಡ ವಿಶಿಷ್ಟ ಕೃತಿಯಾಗಿದೆ.

ಈ ಕೃತಿಯನ್ನು ಓದಿ ಮುಗಿಸಿದಾಗ ಇದು ಕನ್ನಡ ಜೀವನ ಕಥನ ಪರಂಪರೆಯಲ್ಲಿ ಒಂದು ವಿಶಿಷ್ಟ ಕಥನವೆಂಬುದು ಮನದಟ್ಟಾಗುತ್ತದೆ. ಜೀವನ ಕಥನವೆಂಬುದು ಒಬ್ಬ ವ್ಯಕ್ತಿಯ ಬದುಕಿನ ಏಳು-ಬೀಳುಗಳು, ಮಾಡಿದ ಸಾಧನೆಗಳು, ವಿಸ್ತರಿಸಿದ ಸಂಬಂಧಗಳ ಹುಡುಕಾಟಕ್ಕೆ ಮಾತ್ರ ಸೀಮಿತವಲ್ಲ; ಒಂದು ಕಾಲಘಟ್ಟದ ಚರಿತ್ರೆಯ ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಗಳ ಜೊತೆ ಬದುಕು ನಡೆಸುವ ಸಂಘರ್ಷದ ಫಲಿತ ಎನ್ನುವುದನ್ನು ಈ ಕೃತಿ ಶ್ರುತಪಡಿಸುತ್ತದೆ.

ಸಮಕಾಲೀನ ಸಂದರ್ಭದಲ್ಲಿ ಈ ಕೃತಿಯು ಅನೇಕ ಕಾರಣಗಳಿಗಾಗಿ ಮಹತ್ವದ್ದಾಗಿದೆ. ಮೊದಲನೆಯದಾಗಿ ಭಾರತೀಯ ಚಿತ್ರರಂಗವು ಮೂಕಿಯಿಂದ ಟಾಕಿಗೆ ಹೊರಳಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಹಾಡುನಟಿಯಾಗಿ ಮುಂಬೈ ಚಿತ್ರರಂಗಕ್ಕೆ ಅಡಿಯಿರಿಸಿ ತನ್ನ ಕಲಾ ಬದುಕಿನ ಮೂಲಕ ಜನರನ್ನು ರಂಜಿಸಿ ಕ್ರಮೇಣ ಸಮುದಾಯದ ಸ್ಮತಿಯಿಂದ ನೇಪಥ್ಯಕ್ಕೆ ಸರಿದ ಕಲಾವಿದೆಯೊಬ್ಬಳ ಬದುಕನ್ನು ಅದರ ಎಲ್ಲ ಸಾಧ್ಯತೆಗಳೊಂದಿಗೆ ರಹಮತ್ ಮತ್ತೆ ಕಟ್ಟಿಕೊಟ್ಟಿದ್ದಾರೆ.

ಮುಂಬೈ ಚಿತ್ರರಂಗವನ್ನು ಸೇರಿಯೂ ಕನ್ನಡದ ಬೇರುಗಳನ್ನು ಮರೆಯದೆ ಸಿಕ್ಕ ಅವಕಾಶಗಳಲ್ಲಿಯೇ ಕನ್ನಡದಲ್ಲಿಯೂ ನಟಿಸಿ, ಹಾಡಿ, ಕೊನೆಯವರೆಗೂ ಕನ್ನಡವನ್ನೇ ಉಸಿರಾಡಿದ ಮಹಾನ್ ಕಲಾವಿದೆಯೊಬ್ಬಳ ಬದುಕು ಇಲ್ಲಿದೆ.

ಅಮೀರ್‌ಬಾಯಿ ಅವರ ಬದುಕನ್ನು ನೆಪಮಾಡಿಕೊಂಡು ಒಂದು ಕಾಲಘಟ್ಟದ ಸಮಗ್ರ ಸಂಸ್ಕೃತಿಯ ಜಿಜ್ಞಾಸೆ ನಡೆಸಿರುವ ಲೇಖಕರು ಜೀವನ ಕಥನ ಪ್ರಕಾರದಲ್ಲಿ ಹೊಸ ಮಾದರಿಯೊಂದಕ್ಕೆ ನಾಂದಿ ಹಾಡಿದ್ದಾರೆ.

Writer - ಕೆ. ಪುಟ್ಟಸ್ವಾಮಿ

contributor

Editor - ಕೆ. ಪುಟ್ಟಸ್ವಾಮಿ

contributor

Similar News