ಪತ್ನಿಯ ಜೊತೆ ಮತದಾನ: ಖರ್ಗೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚು.ಆಯೋಗಕ್ಕೆ ಬಿಜೆಪಿ ದೂರು
ಬೆಂಗಳೂರು, ಎ. 23: ಕಲಬುರಗಿ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ತಮ್ಮ ಪತ್ನಿಯೊಂದಿಗೆ ಮತದಾನ ಮಾಡುವ ಮೂಲಕ ‘ಪ್ರಜಾ ಪ್ರತಿನಿಧಿ ಕಾಯ್ದೆ’ ಉಲ್ಲಂಘಿಸಿದ್ದು, ಅವರ ವಿರುದ್ಧ ಚುನಾವಣಾ ಆಯೋಗ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಮನವಿ ಮಾಡಿದೆ.
ಮಂಗಳವಾರ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯ ಬೂತ್ ಸಂಖ್ಯೆ 119ರಲ್ಲಿ ಪತ್ನಿಯೊಂದಿಗೆ ಮತಗಟ್ಟೆಗೆ ತೆರಳಿದ್ದು ದಂಪತಿ ಒಟ್ಟಿಗೆ ಮತದಾನ ಮಾಡಿದ್ದು, ಇದು ಗುಪ್ತ ಮತದಾನ ಮಾಡಬೇಕೆಂಬ ‘ಪ್ರಜಾ ಪ್ರತಿನಿಧಿ ಕಾಯ್ದೆ’ ಉಲ್ಲಂಘನೆಯಾಗಿದೆ. ಅಲ್ಲದೆ, ಈ ಬಗ್ಗೆ ಎಚ್ಚರಿಕೆ ವಹಿಸಬೇಕಿದ್ದ ಚುನಾವಣಾಧಿಕಾರಿಗಳು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ಸಂಬಂಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ನೇತೃತ್ವದ ನಿಯೋಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಆ ಬಳಿಕ ಮಾತನಾಡಿದ ರವಿಕುಮಾರ್, ಖರ್ಗೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಕಾಯ್ದೆ ಉಲ್ಲಂಘನೆಗೆ ಪ್ರೋತ್ಸಾಹ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ವಹಿಸಬೇಕು ಎಂದು ಆಗ್ರಹಿಸಿದ್ದೇವೆ ಎಂದರು.
ಮಾಧ್ಯಮಗಳನ್ನು ಮತಗಟ್ಟೆಗೆ ಕರೆದೊಯ್ಯುವಂತಿಲ್ಲ. ಆದರೆ, ಮಲ್ಲಿಕಾರ್ಜುನ ಖರ್ಗೆ ಮಾಧ್ಯಮ ಪ್ರತಿನಿಧಿಗಳನ್ನು ಮತಗಟ್ಟೆಗೆ ಕರೆದೊಯ್ದಿದ್ದು, ಕಾನೂನು ಉಲ್ಲಂಘಿಸಲಾಗಿದೆ. ಈ ಬಗ್ಗೆಯೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದು ರವಿಕುಮಾರ್ ತಿಳಿಸಿದರು.
ನೀತಿ ಸಂಹಿತೆ ಉಲ್ಲಂಘನೆ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮತಗಟ್ಟೆಯಲ್ಲೇ ಮತಯಾಚನೆ ಮಾಡಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆಂದು ಆರೋಪಿಸಲಾಗಿದೆ. ಜಿಲ್ಲೆಯ ಹಿಂಡಲಗಾ ಬೂತ್ ಸಂಖ್ಯೆ 60ರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಎಂದು ಕೋರಿದ್ದಾರೆಂದು ದೂರಲಾಗಿದೆ.