ಹೃದಯ ವೈಫಲ್ಯದ ಲಕ್ಷಣಗಳನ್ನು ಎದುರಿಸುವುದು ಹೇಗೆ?: ಇಲ್ಲಿದೆ ವಿವರ

Update: 2019-04-29 14:18 GMT

ಶರೀರಕ್ಕೆ ಸಾಕಷ್ಟು ರಕ್ತವನ್ನು ಪೂರೈಸಲು ಹೃದಯಕ್ಕೆ ಸಾಧ್ಯವಾಗದಿದ್ದಾಗ ಅಂತಹ ಸ್ಥಿತಿಯನ್ನು ಹೃದಯ ವೈಫಲ್ಯ ಎಂದು ಕರೆಯಲಾಗುತ್ತದೆ. ರಕ್ತಪೂರೈಕೆಯಲ್ಲಿ ಕೊರತೆಯಿಂದಾಗಿ ಶರೀರದ ವಿವಿಧ ಭಾಗಗಳು ಸೂಕ್ತವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದು ಹೃದಯದ ಸ್ನಾಯುಗಳು ದುರ್ಬಲಗೊಳ್ಳುತ್ತಿರುವುದನ್ನು ಸೂಚಿಸುತ್ತದೆ ಮತ್ತು ರಕ್ತವನ್ನು ಪಂಪ್ ಮಾಡುವ ಪ್ರಕ್ರಿಯೆ ನಿಧಾನಗೊಳ್ಳುತ್ತದೆ. ಇದು ಭವಿಷ್ಯದಲ್ಲಿ ತೀವ್ರ ಸಮಸ್ಯೆಗಳನ್ನುಂಟು ಮಾಡುತ್ತದೆ.

ಹೃದಯ ವೈಫಲ್ಯದ ಲಕ್ಷಣಗಳು

ಉಸಿರಾಟದ ತೊಂದರೆ,ಬಳಲಿಕೆ ಮತ್ತು ನಿಶ್ಶಕ್ತಿ,ವೇಗವಾದ ಅಥವಾ ನಿಯಮಿತ ಹೃದಯ ಬಡಿತಗಳು,ದಿಢೀರ್ ದೇಹತೂಕ ಏರಿಕೆ,ಹಸಿವು ಕುಂಠಿತಗೊಳ್ಳುವುದು,ಹೊಟ್ಟೆ ಊದಿಕೊಳ್ಳುವುದು,ಏಕಾಗ್ರತೆಗೆ ಕಷ್ಟ,ಎದೆ ನೋವು,ಕಾಲು ಮತ್ತು ಕಣಕಾಲುಗಳಲ್ಲಿ ಊತ ಇವು ಹೃದಯ ವೈಫಲ್ಯವನ್ನು ಸೂಚಿಸಬಹುದಾದ ಲಕ್ಷಣಗಳಲ್ಲಿ ಸೇರಿವೆ.

ಹೃದಯ ವೈಫಲ್ಯವನ್ನು ತಡೆಯುವುದು ಹೇಗೆ?

ವ್ಯಕ್ತಿಯ ಜೀವನಶೈಲಿಯು ಹೃದಯ ವೈಫಲ್ಯದ ಅಪಾಯದ ಮೇಲೆ ಪ್ರಭಾವ ಬೀರಬಲ್ಲುದು. ಯಾವುದೇ ಬದಲಾವಣೆಗಳಿಲ್ಲದ, ನಿಂತ ನೀರಿನಂತಹ ಜೀವನಶೈಲಿಯು ಖಂಡಿತವಾಗಿಯೂ ಹೃದಯ ವೈಫಲ್ಯದ ಅಪಾಯವನ್ನು ಹೆಚ್ಚಿಸುತ್ತದೆ. ನಿಮ್ಮ ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡುವುದನ್ನು ಖಚಿತ ಪಡಿಸುವ ಅಭ್ಯಾಸಗಳನ್ನು ನೀವು ಮೈಗೂಡಿಸಿಕೊಳ್ಳಬೇಕಾಗುತ್ತದೆ. ಆರೋಗ್ಯಕರ ಜೀವನಶೈಲಿಯು ಆರೋಗ್ಯಕರ ಹೃದಯಕ್ಕೆ ಕಾರಣವಾಗುತ್ತದೆ. ನಿಮ್ಮ ಹೃದಯವನ್ನು ಹೃದಯ ವೈಫಲ್ಯದ ಲಕ್ಷಣಗಳಿಂದ ರಕ್ಷಿಸುವ ಕೆಲವು ಟಿಪ್ಸ್ ಇಲ್ಲಿವೆ.....

ಹೃದಯದ ತೊಂದರೆ ಕಾಣಿಸಿಕೊಂಡರೆ ತಕ್ಷಣ ಚಿಕಿತ್ಸೆ ಪಡೆಯಿರಿ

ನಿಮಗೆ ಹೃದಯದ ಇತರ ಸಮಸ್ಯೆಗಳಿದ್ದಲ್ಲಿ ಇವು ಹೃದಯ ವೈಫಲ್ಯಕ್ಕೆ ಕಾರಣವಾಗಬಹುದಾದ್ದರಿಂದ ಸಾಧ್ಯವಾದಷ್ಟು ಶೀಘ್ರ ಇವುಗಳಿಗೆ ಚಿಕಿತ್ಸೆ ಪಡೆಯುವುದು ಮುಖ್ಯವಾಗುತ್ತದೆ. ಹೃದಯ ವೈಫಲ್ಯಕ್ಕೆ ಗುರಿಯಾಗುವ ಅಪಾಯವನ್ನು ತಗ್ಗಿಸಲು ರಕ್ತದೊತ್ತಡದ ನಿಯಂತ್ರಣ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಿಕೊಳ್ಳಬೇಕಾಗುತ್ತದೆ. ಅಲ್ಲದೆ ಔಷಧಿಗಳನ್ನು ಅತಿಯಾಗಿ ಅವಲಂಬಿಸುವುದನ್ನು ನಿವಾರಿಸಬೇಕು. ನಿಮಗೆ ಹೃದಯಾಘಾತದ ಯಾವುದೇ ಲಕ್ಷಣಗಳ ಅನುಭವವಾದರೆ ಅದು ಹೃದಯ ವೈಫಲ್ಯಕ್ಕೆ ಕಾರಣವಾಗಬಹುದಾದ್ದರಿಂದ ತಕ್ಷಣವೇ ವೈದ್ಯರನ್ನು ಸಂಪರ್ಕಿಸುವುದು ಅತ್ಯಗತ್ಯವಾಗುತ್ತದೆ.

ಸೂಕ್ತ ಆಹಾರಗಳನ್ನೇ ಸೇವಿಸಿ

ಹೃದಯ ವೈಫಲ್ಯಕ್ಕೆ ಗುರಿಯಾಗುವ ಅಪಾಯವನ್ನು ಕಡಿಮೆ ಮಾಡಲು ಹೃದಯಕ್ಕೆ ಆರೋಗ್ಯಕರವಾದ ಆಹಾರಗಳ ಸೇವೆನೆಯನ್ನು ರೂಢಿಸಿಕೊಳ್ಳಬೇಕು. ಕೊಬ್ಬು,ಸಕ್ಕರೆ ಮತ್ತು ಉಪ್ಪಿನ ಸೇವನೆಗಳ ಮೇಲೆ ಮಿತಿಯಿರಲಿ. ಒಳ್ಳೆಯ ಕೊಬ್ಬು ಇರುವ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ಹೆಚ್ಚೆಚ್ಚು ತಾಜಾ ತರಕಾರಿ ಮತ್ತು ಹಣ್ಣುಗಳು ನಿಮ್ಮ ಆಹಾರ ಕ್ರಮದಲ್ಲಿರಲಿ.

ಧೂಮ್ರಪಾನವನ್ನು ವರ್ಜಿಸಿ

ಧೂಮ್ರಪಾನವು ಹೃದ್ರೋಗಗಳಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ನಿಕೋಟಿನ್ ಬಳಕೆಯು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ ಮತ್ತು ಇದರಿಂದಾಗಿ ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ. ಕಾರ್ಬನ್ ಮೊನೊಕ್ಸೈಡ್ ರಕ್ತದಲ್ಲಿಯ ಆಮ್ಲಜನಕದ ಪ್ರಮಾಣವನ್ನು ಕಡಿಮೆಗೊಳಿಸುತ್ತದೆ ಮತ್ತು ರಕ್ತನಾಳಗಳ ಒಳಪದರಗಳಿಗೆ ಹಾನಿಯನ್ನುಂಟು ಮಾಡುತ್ತದೆ.

ದೀರ್ಘಾವಧಿಯವರೆಗೆ ಕುಳಿತಿರಬೇಡಿ

ನೀವು ಕಚೇರಿಯಲ್ಲೋ ಅಂಗಡಿಯಲ್ಲೋ ವೃತ್ತಿಯನ್ನು ನಿರ್ವಹಿಸುತ್ತಿದ್ದರೆ ದಿನವಿಡೀ ಕುಳಿತೇ ಇರಬೇಕಾಗುತ್ತದೆ. ನಿಮಗೆ ನಿಯಮಿತವಾಗಿ ವ್ಯಾಯಾಮ ಮಾಡಲೂ ಅವಕಾಶ ಸಿಗುವುದಿಲ್ಲ. ನೀವು ತುಂಬ ಹೊತ್ತು ಕುಳಿತುಕೊಂಡೇ ಇದ್ದರೆ ಹೃದ್ರೋಗಕ್ಕೆ ಗುರಿಯಾಗುವ ಹೆಚ್ಚಿನ ಸಾಧ್ಯತೆಯಿರುತ್ತದೆ. ಹೀಗಾಗಿ ನೀವು ಕುಳಿತೇ ಇರುವ ಸಮಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಕಚೇರಿಯಲ್ಲಿ ನಡುನಡುವೆ ಅಥವ ಮಧ್ಯಾಹ್ನ ಊಟದ ಬಳಿಕ ಅತ್ತಿತ್ತ ಕೆಲವು ಹೆಜ್ಜೆಗಳನ್ನು ಹಾಕುತ್ತಿರಬೇಕು. ನಿಮ್ಮ ಕೆಲಸಗಳ ಒತ್ತಡದ ನಡುವೆಯೂ ವ್ಯಾಯಾಮಕ್ಕೆ ಸ್ವಲ್ಪ ಸಮಯವನ್ನು ಮೀಸಲಿಡಿ.

ದೇಹತೂಕದ ಬಗ್ಗೆ ಗಮನವಿರಲಿ

ನೀವು ಹೆಚ್ಚಿನ ತೂಕವನ್ನು ಹೊಂದಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಿ.ಬೊಜ್ಜು ಹೃದ್ರೋಗಗಳಿಗೆ ಗುರಿಯಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅದು ನಿಮ್ಮ ರಕ್ತದೊತ್ತಡವನ್ನೂ ಹೆಚ್ಚಿಸುತ್ತದೆ ಮತ್ತು ಇದು ಹೃದಯದ ಆರೋಗ್ಯಕ್ಕೆ ತೀರ ಕೆಟ್ಟದ್ದು. ಆರೋಗ್ಯಕರವಾದ ದೇಹತೂಕವನ್ನು ಕಾಯ್ದುಕೊಳ್ಳಲು ಹೆಚ್ಚೆಚ್ಚು ದೈಹಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ.

ಆರೋಗ್ಯಯುತವಾದ ಹೃದಯಕ್ಕೆ ಕೆಲವು ಸಣ್ಣ ಸಣ್ಣ ಹೆಜ್ಜೆಗಳೇ ಸಾಕು. ಜೀವನಶೈಲಿಯಲ್ಲಿ ಕೆಲವು ಸಣ್ಣಪುಟ್ಟ ಬದಲಾವಣೆಗಳು ನಿಮ್ಮ ಹೃದಯದ ಆರೋಗ್ಯವನ್ನು ಖಂಡಿತ ಉತ್ತಮಗೊಳಿಸುತ್ತವೆ. ಔಷಧಿಗಳನ್ನು ಅತಿಯಾಗಿ ಅವಲಂಬಿಸಬೇಡಿ ಮತ್ತು ಕೆಲವು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News