ಹುದ್ದೆ ಘನತೆ ಮತ್ತು ನೈತಿಕ ಹೊಣೆಗಾರಿಕೆ
ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರರೇ ನಿರ್ಣಾಯಕ ಶಕ್ತಿ. ಆದರೆ ಈ ಮತದಾರರನ್ನು ಸೆಳೆಯಲು ವಾಮ ಮಾರ್ಗಗಳನ್ನು ಅನುಸರಿಸುವುದು, ಸಂವೇದನೆಯೇ ಇಲ್ಲದೆ ಭೂತಕಾಲದ ಹೆಜ್ಜೆಗಳನ್ನೇ ಸಂಪೂರ್ಣವಾಗಿ ನಿರಾಕರಿಸುವುದು ಪ್ರಬುದ್ಧ ರಾಜಕಾರಣದ ಲಕ್ಷಣವಲ್ಲ. ಈ ಪ್ರಬುದ್ಧತೆಯ ಕೊರತೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
‘‘ಒಂದು ಕಾಲದಲ್ಲಿ ಭಾರತದಲ್ಲಿ ಪ್ರಧಾನ ಮಂತ್ರಿ ಎಂದು ಕರೆಯಲಾಗುವ ಗೌರವಯುತ ಹುದ್ದೆ ಇತ್ತು’’, ‘‘ಭಾರತದಲ್ಲಿ ಸಂಭಾವಿತ, ಸೌಜನ್ಯಯುತ ರಾಜಕಾರಣಿಗಳು ಇದ್ದರು’’, ‘‘ಇಲ್ಲಿನ ರಾಜಕಾರಣಿಗಳು ಸಭ್ಯತೆಯಿಂದ ವರ್ತಿಸುತ್ತಿದ್ದರು’’, ‘‘ಭಾರತದ ರಾಜಕಾರಣದಲ್ಲಿ ನೈತಿಕತೆಗೆ ತನ್ನದೇ ಆದ ವಿಶಿಷ್ಟ ಸ್ಥಾನ ಇತ್ತು’’, ಬಹುಶಃ ಇನ್ನು ಒಂದೆರಡು ದಶಕಗಳ ನಂತರ ಭಾರತದ ರಾಜಕೀಯ, ಸಾಹಿತ್ಯಕ ಸಂಕಥನಗಳಲ್ಲಿ ಇಂತಹ ಭೂತಕಾಲದ ನೆನಪುಗಳನ್ನು ಕಾಣಲು ಸಾಧ್ಯ ಎನಿಸುತ್ತಿದೆ. ಆಂಗ್ಲ ಭಾಷೆಯಲ್ಲಿ ಸ್ಟೇಟ್ಸ್‌ಮೆನ್ ಎನ್ನುವ ಪದ ಬಳಕೆಯಲ್ಲಿದೆ. ಕನ್ನಡದಲ್ಲಿ ರಾಜನೀತಿಜ್ಞ, ರಾಜಕೀಯ ನಿಪುಣ, ರಾಜತಂತ್ರಜ್ಞ ಎಂದು ಹೇಳಲಾಗುತ್ತದೆ. ಮೂಲತಃ ಈ ಪದ ಐರೋಪ್ಯ ಇತಿಹಾಸದ ಊಳಿಗಮಾನ್ಯ ಮತ್ತು ರಾಜಪ್ರಭುತ್ವ ವ್ಯವಸ್ಥೆಯ ಮೂಲ ಹೊಂದಿದ್ದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದನ್ನು ಅಕ್ಷರಶಃ ಪರಿಗಣಿಸಬೇಕಿಲ್ಲ. ಆದರೂ ಸಾಮಾನ್ಯ ಪರಿಭಾಷೆಯಲ್ಲಿ ಸ್ಟೇಟ್ಸ್‌ಮೆನ್ ಎಂದರೆ ತನ್ನ ಹುದ್ದೆಗೆ ಮತ್ತು ಪದವಿಗೆ ಚ್ಯುತಿ ಬರದಂತೆ ಸಾಮಾಜಿಕ ಹೊಣೆಗಾರಿಕೆಯಿಂದ, ನೈತಿಕತೆಯ ನೆಲೆಯಲ್ಲಿ ತನ್ನ ಘನತೆಯನ್ನು ಕಾಪಾಡಿಕೊಳ್ಳುವ ರೀತಿಯಲ್ಲಿ ವರ್ತಿಸುವುದು ಎಂದು ಹೇಳಬಹುದು ಅಥವಾ ಕನ್ನಡದಲ್ಲೇ ಹೇಳುವುದಾದರೆ ಘನತೆವೆತ್ತ ಎಂದೂ ಹೇಳಬಹುದು.
ಏನೇ ಇರಲಿ, ಒಂದು ದಶಕದ ಹಿಂದಿನ ರಾಜಕಾರಣಕ್ಕೆ ಹೋಲಿಸಿದರೆ ಭಾರತದಲ್ಲಿ ಈ ಪದ ಅರಬ್ಬಿ ಸಮುದ್ರದಲ್ಲಿ ಕಳೆದುಹೋಗಿದೆಯೇನೋ ಎನಿಸುವುದಿಲ್ಲವೇ? ಅಯೋಧ್ಯೆಯ ಕೂಸುಗಳಿಗೆ ಬಹುಶಃ ಈ ಪದದ ಅರ್ಥವಾಗಲಿಕ್ಕಿಲ್ಲ. ಆದರೆ ತುರ್ತುಪರಿಸ್ಥಿತಿಯ ವೈಕಲ್ಯಗಳಿಗೆ ಬಲಿಯಾದ ಪೀಳಿಗೆಗೆ ಖಂಡಿತವಾಗಿಯೂ ಅರಿವಾಗುತ್ತದೆ. ಈ ವ್ಯತ್ಯಾಸವನ್ನು ಏಕೆ ಗುರುತಿಸಬೇಕೆಂದರೆ ಇಂದಿನ ಯುವ ಪೀಳಿಗೆಗೆ ರಾಜಕಾರಣದಲ್ಲೂ ಕೆಲವು ಮೌಲ್ಯಗಳಿವೆ ಎನ್ನುವುದನ್ನು ಮನದಟ್ಟು ಮಾಡಬೇಕಿದೆ. 1970ರ ದಶಕದ ಬಾಲ್ಯ ಜೀವನದಲ್ಲಿ ಕಂಡ ವಾಸ್ತವಗಳು ಇಂದು ಇರಿಯುತ್ತವೆ. ಅಂದು ಪುರಸಭಾಧ್ಯಕ್ಷರ ನಡವಳಿಕೆ ಎಷ್ಟು ಗಾಂಭೀರ್ಯದಿಂದ ಕೂಡಿರುತ್ತಿತ್ತೆಂದರೆ ಅವರು ಇಡೀ ಊರಿಗೆ ಮಾರ್ಗದರ್ಶಕರಂತೆ ಕಾಣುತ್ತಿದ್ದರು. ಅಲ್ಲಿ ದರ್ಪ ಇರಲಿಲ್ಲ, ಅಹಮಿಕೆ ಇರಲಿಲ್ಲ, ಮೇಲ್‌ಸ್ತರದ ಶ್ರೇಷ್ಠತೆಯಾಗಲೀ ಕಾಣುತ್ತಿರಲಿಲ್ಲ. ಸಾರ್ವಜನಿಕ ಜೀವನದಲ್ಲಿ, ರಾಜಕೀಯ ನೆಲೆಯಲ್ಲಿ ಮತ್ತು ಅಧಿಕಾರ ರಾಜಕಾರಣದ ನೆಲೆಯಲ್ಲೂ ಇದನ್ನು ಕಾಣಬಹುದಿತ್ತು. ಜಾತಿ ನಿಷ್ಠೆಯ ಹೊರತಾಗಿಯೂ ಇದು ಸಾಮಾಜಿಕ ಸ್ತರದಲ್ಲಿ ಸಾಧ್ಯವಿತ್ತು ಎನ್ನುವುದು ವಿಶೇಷ.
ಭಾರತದಂತಹ ಸಾಂಪ್ರದಾಯಿಕ, ಗ್ರಾಮೀಣ ಹಿನ್ನೆಲೆಯ ಸಮಾಜದಲ್ಲಿ ರಾಜಕಾರಣ ತನ್ನದೇ ಆದ ವಿಶಿಷ್ಟ ಉನ್ನತ ಸ್ಥಾನ ಪಡೆಯುತ್ತದೆ. ವಿದ್ವತ್ ವಲಯದಲ್ಲಿ ಎಷ್ಟೇ ಸಾಧನೆಗೈದರೂ, ಹಳ್ಳಿಗಾಡುಗಳ, ಪಟ್ಟಣಗಳ ಮತ್ತು ನಗರ ಪ್ರದೇಶಗಳ ಜನಸಾಮಾನ್ಯರ ದೃಷ್ಟಿಯಲ್ಲಿ ರಾಜಕೀಯ ನಾಯಕರೆೇ ಎತ್ತರದಲ್ಲಿ ಕಾಣುತ್ತಾರೆ. ಭಾಷಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಭಿನ್ನತೆಗಳ ಪರಿಣಾಮ ಕಲೆ, ಸಾಹಿತ್ಯ ಮತ್ತು ಸಂಗೀತ ಮುಂತಾದ ವಿಶಿಷ್ಟ ವಲಯಗಳು ನೇಪಥ್ಯಕ್ಕೆ ಸರಿದು, ರಾಜಕಾರಣ ಸರ್ವವ್ಯಾಪಿಯಾಗಿ ತನ್ನ ಪ್ರಭಾವ ಬೀರುತ್ತದೆ. ಹಾಗಾಗಿಯೇ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ಎಂದರೆ ಹೋಮಿ ಜೆ. ಬಾಬಾ ಅವರಿಗಿಂತಲೂ ನೆಹರೂ ಮೊದಲು ನೆನಪಾಗುತ್ತಾರೆ. ಅಣ್ವಸ್ತ್ರ ಪರೀಕ್ಷೆ ಎಂದಾಕ್ಷಣ ಇಂದಿರಾ, ವಾಜಪೇಯಿ ನೆನಪಾಗುತ್ತಾರೆ. ಬಾಹ್ಯಾಕಾಶದಲ್ಲಿನ ಉಪಗ್ರಹಗಳನ್ನು ಹೊಡೆದುರುಳಿಸುವ ಕ್ಷಿಪಣಿಗಳನ್ನು ಕಂಡುಹಿಡಿದ ವಿಜ್ಞಾನಿಗಳ ಸಾಧನೆಗೆ ದೇಶದ ಪ್ರಧಾನಮಂತ್ರಿಗಳು ತಮ್ಮ ಬೆನ್ನು ತಟ್ಟಿಕೊಳ್ಳುತ್ತಾರೆ. ಶತ್ರು ಸೇನೆಯನ್ನು ಹೊಡೆದುರುಳಿಸುವ ಸೇನಾವಲಯದ ಸಾಧನೆ ತಮ್ಮದೆಂದು ರಾಜಕೀಯ ನಾಯಕರು ಸ್ವಪ್ರಶಂಸೆಯಲ್ಲಿ ತೊಡಗುತ್ತಾರೆ. ಈ ಸಾಧನೆಗಳ ಹಿಂದಿನ ವಿಜ್ಞಾನಿಗಳ ಬೌದ್ಧಿಕ ಪರಿಶ್ರಮವಾಗಲೀ, ವಿಜ್ಞಾನಿಗಳ ವ್ಯಕ್ತಿತ್ವವಾಗಲೀ, ಸೇನೆಯ ತ್ಯಾಗ ಬಲಿದಾನವಾಗಲೀ ಮುನ್ನೆಲೆಗೆ ಬರುವುದೇ ಇಲ್ಲ. ಇದು ದುರಂತ ಸರಿ ಆದರೆ ವಾಸ್ತವ. ಸಮಾಜದಲ್ಲಿ ಮೌಲ್ಯಗಳು ನಶಿಸುತ್ತಿವೆ ಎನ್ನುವ ಕೊರಗು ಮತ್ತು ಕೂಗು ಸಹ ಇದನ್ನೇ ಧ್ವನಿಸುತ್ತದೆ. ಮೌಲ್ಯಾಧಾರಿತ ರಾಜಕಾರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದರ ಹಿಂದೆಯೂ ಈ ಭಾವನೆ ದಟ್ಟವಾಗಿದೆ. ವಾಸ್ತವವಾಗಿ ಕ್ಷೀಣಿಸುತ್ತಿರುವುದು ರಾಜಕೀಯ, ಪ್ರಜಾತಾಂತ್ರಿಕ ಮೌಲ್ಯಗಳು. ನಾಗರಿಕ ಸಮಾಜದಲ್ಲಿ ಉದಾತ್ತವಾದ, ಉನ್ನತವಾದ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ವ್ಯಕ್ತಿಗಳು ಹೇರಳವಾಗಿದ್ದಾರೆ. ಆದರೆ ದೇಶದ ಆಡಳಿತ ವ್ಯವಸ್ಥೆ ಮತ್ತು ರಾಜಕೀಯ ಚೌಕಟ್ಟಿನಲ್ಲಿ ನಿರ್ಮಿತವಾಗುವ ಸಮೂಹ ಸನ್ನಿ ಈ ಮೌಲ್ಯ ಪ್ರತಿಪಾದಕರನ್ನು ಮೂಲೆಗುಂಪು ಮಾಡುತ್ತಿದೆ. ಪ್ರಭುತ್ವದ ಸಂರಕ್ಷಣೆ ಮತ್ತು ಆಳುವ ವರ್ಗಗಳ ಆಧಿಪತ್ಯ ರಾಜಕಾರಣದ ರಕ್ಷಣೆಗಾಗಿ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುವ ಮೌಲ್ಯಯುತ ಪ್ರತಿಪಾದನೆಗಳನ್ನು ನಿರ್ದಾಕ್ಷಿಣ್ಯವಾಗಿ ಮಟ್ಟಹಾಕಲಾಗುತ್ತದೆ. ತಮ್ಮ ರಾಜಕೀಯ ವರ್ಚಸ್ಸಿನ ವೃದ್ಧಿಗಾಗಿ ರಾಜಕೀಯ ನಾಯಕರು ಅಬ್ದುಲ್ ಕಲಾಂ ಅವರಂತಹ ಪ್ರತಿಭೆಗಳನ್ನೂ ಸಾಂಕೇತಿಕವಾಗಿ ಬಳಸಿಕೊಳ್ಳುವುದನ್ನು ನೋಡಿದ್ದೇವೆ. ಅಂಬೇಡ್ಕರ್, ಗಾಂಧಿ, ವಿವೇಕಾನಂದ ಮುಂತಾದ ಮಹನೀಯರ ಪುತ್ಥಳಿಗಳು ರಾಜಕೀಯ ಅಪಮೌಲ್ಯೀಕರಣವನ್ನು ತಡೆಗಟ್ಟುವ ರಕ್ಷಾಕವಚಗಳಾಗಿ ಬಳಸಲ್ಪಡುತ್ತಿರುವುದನ್ನೂ ಕಾಣುತ್ತಿದ್ದೇವೆ.
ಹೀಗಿರುವಾಗ ಭಾರತದ ರಾಜಕೀಯ ನಾಯಕರ ಪ್ರತಿ ಹೆಜ್ಜೆಯೂ, ಪ್ರತಿ ಮಾತೂ ಪರಾಮರ್ಶೆಗೊಳಗಾಗುತ್ತದೆ. ಸಭ್ಯತೆ, ಸೌಜನ್ಯ, ಸಂವೇದನೆ ಮುಂತಾದ ಉದಾತ್ತ ಗುಣಲಕ್ಷಣಗಳನ್ನು ರಾಜಕೀಯ ನಾಯಕರಲ್ಲಿ ಕಾಣಲು ಜನಸಾಮಾನ್ಯರು ಬಯಸುತ್ತಾರೆ. ಇದು ಕಾಣದಾದಾಗ ಮೌಲ್ಯಗಳು ಕುಸಿದಿವೆ ಎಂಬ ಹುಯಿಲು ಸಹಜವಾಗಿ ಕೇಳಿಬರುತ್ತದೆ. ಕೇವಲ ಮೂರು ದಶಕಗಳ ಹಿಂದೆ ಅಸಭ್ಯವಾಗಿ ವರ್ತಿಸುವ, ಸೌಜನ್ಯತೆ ಇಲ್ಲದೆ ವರ್ತಿಸುವ ರಾಜಕೀಯ ನಾಯಕರು ಬೆರಳೆಣಿಕೆಯಷ್ಟಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಸಭ್ಯತೆಯಿಂದ ಮಾತನಾಡುವ ರಾಜಕೀಯ ನಾಯಕರನ್ನು ಹುಡುಕಲು ಸೂಕ್ಷ್ಮದರ್ಶಕವೇ ಬೇಕೆನಿಸುವಷ್ಟು ಪರಿಸ್ಥಿತಿ ಹದಗೆಟ್ಟಿದೆ. ಜನಪ್ರತಿನಿಧಿಗಳಾಗಿ ಶಾಸನ ಸಭೆಗಳನ್ನು ಪ್ರವೇಶಿಸುವ ರಾಜಕೀಯ ನಾಯಕರಿಗೆ ತಮ್ಮ ಸಾಂವಿಧಾನಿಕ ಕರ್ತವ್ಯದ ಪ್ರಜ್ಞೆಯಂತೆಯೇ ಸಾರ್ವಜನಿಕ ಸಭ್ಯತೆಯ ಕನಿಷ್ಠ ಪ್ರಜ್ಞೆ ಇಲ್ಲದೆ ಹೋದರೆ ಏನಾಗುತ್ತದೆ ಎಂಬ ಪ್ರಶ್ನೆಗೆ 2019ರ ಚುನಾವಣೆಗಳು ಉತ್ತರ ನೀಡಿವೆ. ಕಳೆದ ಐದು ವರ್ಷಗಳ ಆಡಳಿತಾವಧಿಯಲ್ಲಿ ಎಲ್ಲ ಸಾಂವಿಧಾನಿಕ ಸಂಸ್ಥೆಗಳೂ ತಮ್ಮ ಅಂತಃಸತ್ವವನ್ನು ಕಳೆದುಕೊಂಡು, ತಮ್ಮ ಸ್ವತಂತ್ರ ಅಭಿವ್ಯಕ್ತಿಯನ್ನು ಕಳೆದುಕೊಂಡು ನಿಸ್ತೇಜವಾಗಿರುವ ಸಂದರ್ಭದಲ್ಲಿ ದೇಶದ ಪ್ರಧಾನಮಂತ್ರಿಯನ್ನೂ ಸೇರಿದಂತೆ ಎಲ್ಲ ರಾಜಕೀಯ ನಾಯಕರೂ ಎಗ್ಗಿಲ್ಲದೆ ತಮ್ಮ ವಾಗ್ಬಾಣಗಳನ್ನು ಪ್ರಯೋಗಿಸುತ್ತಿರುವುದು ಸ್ವತಂತ್ರ ಭಾರತದ ಅತ್ಯಂತ ನಾಚಿಕೆಗೇಡಿನ ಪರ್ವಕ್ಕೆ ನಾಂದಿ ಹಾಡಿದಂತಿದೆ. ಸ್ವತಂತ್ರ ಭಾರತದ 72 ವರ್ಷಗಳಲ್ಲಿ ಯಾವ ಪ್ರಧಾನಿಯೂ, ಯಾವ ಸರಕಾರವೂ ಸಹ ಆರೋಪಗಳಿಂದ ಹೊರತಾಗಿಲ್ಲ, ಪ್ರಶ್ನಾತೀತವೂ ಆಗಿಲ್ಲ. ಸರಕಾರಗಳ ತಪ್ಪುನಡೆಗಳೇ ಭವಿಷ್ಯದ ಹೆಜ್ಜೆಗಳನ್ನು ಸರಿಪಡಿಸಿರುವುದನ್ನೂ ಕಂಡಿದ್ದೇವೆ. ಇದು ನಿರಂತರವಾಗಿ ನಡೆಯುವ ಸಹಜ ಪ್ರಕ್ರಿಯೆ. ಆದರೆ ಒಂದು ಜವಾಬ್ದಾರಿಯುತ ಸರಕಾರ ಹಿಂದಿನ ತಪ್ಪುಗಳನ್ನು ಸರಿಪಡಿಸಲು ಯತ್ನಿಸಬೇಕೇ ಹೊರತು, ತನ್ನ ತಪ್ಪುಗಳನ್ನು ಮರೆಮಾಚಲು ಭೂತಕಾಲದ ಹೆಜ್ಜೆಗಳನ್ನು ರಕ್ಷಾಕವಚದಂತೆ ಬಳಸಬಾರದು. 60 ವರ್ಷಗಳಲ್ಲಿ ಕಾಂಗ್ರೆಸ್ ಏನು ಸಾಧಿಸಿದೆ ಎಂಬ ಮೋದಿಯವರ ಪ್ರಶ್ನೆಯಲ್ಲಿ ಇಂತಹ ಒಂದು ವಿಕೃತ ಅಪ್ರಬುದ್ಧತೆಯನ್ನು ಕಾಣಬಹುದು. ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರರೇ ನಿರ್ಣಾಯಕ ಶಕ್ತಿ. ಆದರೆ ಈ ಮತದಾರರನ್ನು ಸೆಳೆಯಲು ವಾಮ ಮಾರ್ಗಗಳನ್ನು ಅನುಸರಿಸುವುದು, ಸಂವೇದನೆಯೇ ಇಲ್ಲದೆ ಭೂತಕಾಲದ ಹೆಜ್ಜೆಗಳನ್ನೇ ಸಂಪೂರ್ಣವಾಗಿ ನಿರಾಕರಿಸುವುದು ಪ್ರಬುದ್ಧ ರಾಜಕಾರಣದ ಲಕ್ಷಣವಲ್ಲ. ಈ ಪ್ರಬುದ್ಧತೆಯ ಕೊರತೆ ಪ್ರಸ್ತುತ ರಾಜಕೀಯ ಬೆಳವಣಿಗೆಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಈ ಹಿನ್ನೆಲೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ದಿವಂಗತ ಪ್ರಧಾನಿ ರಾಜೀವ್ ಗಾಂಧಿಯನ್ನು ಕುರಿತಂತೆ ಆಡಿರುವ ಮಾತುಗಳು ಚರ್ಚೆಗೊಳಗಾಗಿವೆ. ಕೆಲವೇ ವರ್ಷಗಳಷ್ಟು ದೇಶದ ಪ್ರಧಾನಿಯಾಗಿ ಕೆಲವು ಮಹತ್ತರವಾದ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಭವಿಷ್ಯ ಭಾರತಕ್ಕೆ ಹೊಸ ಆಯಾಮ ಒದಗಿಸಿದ ರಾಜೀವ್ ಗಾಂಧಿ ಪ್ರಶ್ನಾತೀತರಲ್ಲ. ತಿಳಿನೀರಿನ ಕೊಳದಂತೆ ಕಾಣುವ ಪ್ರಾಮಾಣಿಕರೂ ಅಲ್ಲ ಎಂದೇ ಭಾವಿಸೋಣ. ಅವರ ಅಧಿಕಾರಾವಧಿಯಲ್ಲಿ ಕೈಗೊಂಡ ಕೆಲವು ನಿರ್ಧಾರಗಳೇ ಇಂದು ಭಾರತ ಫ್ಯಾಶಿಸಂನ ಹೊಸ್ತಿಲಲ್ಲಿ ನಿಂತಿದೆ ಎನ್ನುವುದೂ ಸುಳ್ಳಲ್ಲ. ಆದರೆ ರಾಜೀವ್ ಬಲಿಯಾಗಿದ್ದು ಭಯೋತ್ಪಾದನೆಗೆ. ನೆರೆ ರಾಷ್ಟ್ರದ ಉಗ್ರವಾದಕ್ಕೆ. ‘‘ನಿಮ್ಮ ತಂದೆ ನಂಬರ್ ಒನ್ ಭ್ರಷ್ಟಾಚಾರಿಯಾಗಿಯೇ ಕೊನೆಯುಸಿರೆಳೆದರು’’ ಎಂದು ರಾಹುಲ್ ಗಾಂಧಿಯವರನ್ನು ಉದ್ದೇಶಿಸಿ ಹೇಳುವಾಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಅಂಶ ನೆನಪಾಗಬೇಕಿತ್ತು. ಭಯೋತ್ಪಾದನೆಯ ಮೂಲೋತ್ಪಾಟನೆಗಾಗಿಯೇ ತಾವು ಜನಿಸಿರುವಂತೆ ವರ್ತಿಸುವ ಪ್ರಧಾನಿಗೆ ದೇಶದ ಮಾಜಿ ಪ್ರಧಾನಿಯೊಬ್ಬರ ತ್ಯಾಗ ಬಲಿದಾನಗಳು ರಾಜಕೀಯ ವಸ್ತುವಾಗುವುದು ಪ್ರಜ್ಞಾವಂತ ನಾಗರಿಕತೆಯ ಲಕ್ಷಣವಲ್ಲ ಎಂದಷ್ಟೇ ಹೇಳಬಹುದು.
ಆದರೆ ಬೇಕೋ ಬೇಡವೋ ಈ ದೇಶದ ರಾಜಕೀಯ ನಾಯಕತ್ವ ಈ ಪ್ರಜ್ಞೆಯನ್ನು ಕಳೆದುಕೊಂಡಿದೆ. ಇಂತಹ ವಿಕೃತಿಗಳನ್ನು ಸರಿಪಡಿಸಲೆಂದೇ ಸಂವಿಧಾನ ಸೃಷ್ಟಿಸಿರುವ ಸಂಸ್ಥೆಗಳು ನಿರ್ವೀರ್ಯವಾಗಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಭಯೋತ್ಪಾದಕರ ದಾಳಿಗೆ ತುತ್ತಾದ ಮಾಜಿ ಪ್ರಧಾನಿ ಹಾಲಿ ಪ್ರಧಾನಿಯಿಂದ ಅವಹೇಳನಕ್ಕೀಡಾದರೆ, ಮತ್ತೋರ್ವ ದಿಟ್ಟ ಪೊಲೀಸ್ ಅಧಿಕಾರಿ ಸಾಧ್ವಿ ಪ್ರಜ್ಞಾಸಿಂಗ್ ಅವರಂತಹ ಶಂಕಿತ ಭಯೋತ್ಪಾದಕಿಯ ಅವಹೇಳನಕ್ಕೆ ಗುರಿಯಾಗುತ್ತಾರೆ. ದುರಂತ ಎಂದರೆ ಮಾಲೆಗಾಂವ್ ಸ್ಫೋಟದಲ್ಲಿ ಇನ್ನೂ ಆರೋಪಿಯಾಗಿಯೇ ಇರುವ ಸಾಧ್ವಿ ಪ್ರಜ್ಞಾಸಿಂಗ್ ಹಿಂದೂಗಳ ಸಂಕೇತವಾಗಿಬಿಡುತ್ತಾರೆ. ಸಂವಿಧಾನವನ್ನು ರಕ್ಷಿಸುವ ಸಾಂವಿಧಾನಿಕ ವೇದಿಕೆ ನೈತಿಕವಾಗಿ ಭ್ರಷ್ಟವಾದ ಕೂಡಲೇ ಎಲುಬಿಲ್ಲದ ನಾಲಿಗೆಗೆ ಮುಕ್ತ ಸ್ವಾತಂತ್ರ್ಯ ಲಭ್ಯವಾಗುತ್ತದೆ. ಹಾಗಾಗಿಯೇ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮ ಪಕ್ಷ ಗೆಲ್ಲದಿದ್ದರೆ ದೇಶಕ್ಕೆ ಬೆಂಕಿ ಹಚ್ಚುತ್ತೇವೆ ಎಂದು ಹೇಳಿ ಆರೋಪಮುಕ್ತರೂ ಆಗುತ್ತಾರೆ. ಸಾಧ್ವಿ ಪ್ರಜ್ಞಾ ಸಿಂಗ್ ತಾವು ಬಾಬರಿ ಮಸೀದಿಯನ್ನು ಹೊಡೆದುರುಳಿಸಿದ್ದಾಗಿ ಹೆಮ್ಮೆಯಿಂದ ಘೋಷಿಸುತ್ತಾರೆ. ಮತ್ತೋರ್ವ ಸಾಧ್ವಿ ದೇಶದ ಎಲ್ಲ ಮುಸ್ಲಿಂ ಮತ್ತು ಕ್ರೈಸ್ತರಿಗೆ ಕಡ್ಡಾಯ ಸಂತಾನಹರಣ ಚಿಕಿತ್ಸೆ ಮಾಡುವುದಾಗಿ ಹೇಳುತ್ತಾರೆ. ಈ ಪ್ರಲಾಪಗಳು, ವೀರಾವೇಶದ ಮಾತುಗಳು, ಕೇವಲ ರಾಜಕೀಯ ಪ್ರೇರಿತ ಎಂದು ಸುಮ್ಮನಿರಲಾಗುವುದಿಲ್ಲ. ಇಂತಹ ವಿಕೃತಿಯ ಹಿಂದೆ ಇತಿಹಾಸವೇ ಅಡಗಿದೆ. ಸಾಂಸ್ಕೃತಿಕ ರಾಜಕಾರಣದ ಸುದೀರ್ಘ ಪಯಣ ಅಡಗಿದೆ. ರಾಜಕೀಯ ನಾಯಕತ್ವದಲ್ಲಿ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವ ಇಲ್ಲವಾದಾಗ ಇದು ಸಹಜವಾಗಿಯೇ ಮುನ್ನೆಲೆಗೆ ಬರುತ್ತದೆ. ಐದು ವರ್ಷಕ್ಕೊಮ್ಮೆ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ ಆಯ್ಕೆಯಾಗುವ ಜನಪ್ರತಿನಿಧಿಗಳು ಮೂಲತಃ ಪ್ರತಿನಿಧಿಸುವುದು ಈ ದೇಶದ ಸಂವಿಧಾನವನ್ನು ಮತ್ತು ಸಾಂವಿಧಾನಿಕ ಮೌಲ್ಯಗಳನ್ನು. ಸಾಂವಿಧಾನಿಕ ಭೂಮಿಕೆಯ ಮೇಲೆ ನಿಂತು ಜನಸಾಮಾನ್ಯರನ್ನು ಪ್ರತಿನಿಧಿಸುವ ಗುರುತರ ಹೊಣೆಗಾರಿಕೆ ಜನಪ್ರತಿನಿಧಿಗಳ ಮೇಲಿರುತ್ತದೆ. ಆದರೆ ಅಧಿಕಾರದ ಅಮಲು ಮತ್ತು ಪ್ರಾತಿನಿಧ್ಯದ ಅಹಮಿಕೆ ಬಹುತೇಕ ಜನಪ್ರತಿನಿಧಿಗಳ ನೈತಿಕತೆಯನ್ನು ಧ್ವಂಸ ಮಾಡಿದೆ. ತಮ್ಮ ಪ್ರತಿಯೊಂದು ಮಾತು ಸಹ ಸಾರ್ವಜನಿಕ ಜೀವನದಲ್ಲಿ ಪರಿಣಾಮ ಬೀರುತ್ತವೆ ಎಂಬ ಪ್ರಜ್ಞೆ ಇದ್ದರೂ ಸಹ ಸ್ವಾರ್ಥ ಸಾಧನೆಗಾಗಿ, ತಮ್ಮ ವ್ಯಕ್ತಿಗತ ಹಗೆ, ಸೇಡು ಮತ್ತು ದ್ವೇಷ ರಾಜಕಾರಣಕ್ಕೆ ಬಲಿಯಾಗುವ ಮೂಲಕ ಭಾರತದ ರಾಜಕೀಯ ನಾಯಕರು ಪ್ರಜಾತಂತ್ರ ವ್ಯವಸ್ಥೆಯ ಬುಡಕ್ಕೇ ವಿಷಪ್ರಾಸನ ಮಾಡುತ್ತಿದ್ದಾರೆ. ಅಕ್ರಮ ವಲಸೆಗಾರರೆಂದು ಗುರುತಿಸಲ್ಪಡುವ ಅಲ್ಪಸಂಖ್ಯಾತರನ್ನು ಗೆದ್ದಲು ಹುಳಗಳಿಗೆ ಹೋಲಿಸುವ ಕೇಂದ್ರ ಗೃಹ ಮಂತ್ರಿ ಮತ್ತು ಅವರ ಸಹಚರರು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಬುಡವನ್ನೇ ಕೊರೆಯುತ್ತಿರುವ ಗೆದ್ದಲುಗಳನ್ನು ಇನ್ನಾದರೂ ಗಮನಿಸಬೇಕಿದೆ.