ಸ್ವಾತಂತ್ರ, ಅಧಿಕಾರ ಮತ್ತು ಸತ್ಯ

Update: 2019-06-07 05:20 GMT
ಸ್ವಾತಂತ್ರ, ಅಧಿಕಾರ ಮತ್ತು ಸತ್ಯ
  • whatsapp icon

ಸೃಜನಾತ್ಮಕ ಪರಿಕಲ್ಪನೆಗಳ ಮೂಲಕ ಬಹುತ್ವವಾದಿ ಭಾರತವನ್ನು ನಿರ್ಮಿಸಲು ಬಳಕೆಯಾಗಬೇಕಿದ್ದ ಸ್ವಾತಂತ್ರ್ಯವನ್ನು ಭಯ, ದ್ವೇಷ ಮತ್ತು ದಮನಗಳಂಥ ಆಕ್ರಮಣಕಾರಿ ಭಾವನೆಗಳ ಮೂಲಕ ನಾಶ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಒಂದು ಪ್ರತಿಗಾಮಿ ಅರ್ಥದಲ್ಲಿ ಈ ಪ್ರೇರಣೆಗಳೇ ಸತ್ಯದ ಸಾರವಾಗುತ್ತಿದ್ದು ಅದು ಸತ್ಯವನ್ನು ಇನ್ನಷ್ಟು ದಮನಕಾರಿಯಾಗಿಸುತ್ತಿದೆ.


ಭಾರತವು ಮತ್ತೊಮ್ಮೆ ಈಗ ಕವಲುದಾರಿಯಲ್ಲಿ ಬಂದುನಿಂತಿದೆ. ಒಂದೆಡೆ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದವರು ಚುನಾವಣಾ ಪ್ರಜಾತಂತ್ರದ ಬೃಹತ್ ವಿಜಯವನ್ನು ಸಂಭ್ರಮಿಸುವುದರಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ ನಾಗರಿಕ ಸಮಾಜದ ಆಲೋಚಿಸುವ ಮತ್ತು ಉನ್ನತ ಅಥವಾ ದಾರುಣ ಸತ್ಯಗಳ ಸಂವಹನ ಸ್ವಾತಂತ್ರ್ಯಗಳು ಸ್ವಾತಂತ್ರ್ಯ ರಾಹಿತ್ಯದ ಸ್ಥಿತಿಯಿಂದಾಗಿ ತೀವ್ರವಾದ ಅಡೆತಡೆಗಳನ್ನು ಎದುರಿಸುತ್ತಿವೆ. ಇದು ಪ್ರಜಾತಂತ್ರದ ಉಪಸ್ಥಿತಿಯಲ್ಲಿಯೇ ಎದುರಾಗಿರುವ ಸಂದರ್ಭವಾಗಿದೆ. ಸತ್ಯದ ಸೊಲ್ಲಿನ ಸಾಧ್ಯತೆಗಳನ್ನು ನಿರ್ವಚನ ಮಾಡುತ್ತಿದ್ದ ಅಧಿಕಾರ ಮತ್ತು ಸ್ವಾತಂತ್ರ್ಯದ ನಡುವಿನ ಪರಿವರ್ತನಾಕಾರಿ ಸಂಬಂಧಗಳು ಈಗ ಪ್ರತಿಗಾಮಿಯಾದ ಮತ್ತು ವೈರುಧ್ಯಪೂರಿತ ತಿರುವನ್ನು ಪಡೆದುಕೊಂಡಿವೆ. ಐತಿಹಾಸಿಕವಾಗಿ ತಳಸಮುದಾಯಗಳ ವಿಮೋಚನಾ ಹೋರಾಟಗಳಲ್ಲಿ ಸ್ವಾತಂತ್ರ್ಯ ಮತ್ತು ಅಧಿಕಾರಗಳ ನಡುವಿನ ಸೌಹಾರ್ದಯುತ ಸಂಬಂಧಗಳು ಅಭಿವ್ಯಕ್ತಗೊಳ್ಳುತ್ತಿದ್ದವು. ಆದರೆ ಅವೀಗ ಬಹುತ್ವವಾದಿ ಮೌಲ್ಯ ಪದ್ಧತಿಯನ್ನು ನಾಶಮಾಡಿ ದಮನಕಾರಿಯಾದ ಏಕರೂಪಿ ಮೌಲ್ಯಪದ್ಧತಿಗಳಡಿಯಲ್ಲಿ ತರಬಯಸುವ ಉದ್ದೇಶಗಳ ಸಾಧನೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಸೃಜನಾತ್ಮಕ ಪರಿಕಲ್ಪನೆಗಳ ಮೂಲಕ ಬಹುತ್ವವಾದಿ ಭಾರತವನ್ನು ನಿರ್ಮಿಸಲು ಬಳಕೆಯಾಗಬೇಕಿದ್ದ ಸ್ವಾತಂತ್ರ್ಯವನ್ನು ಭಯ, ದ್ವೇಷ ಮತ್ತು ದಮನಗಳಂಥ ಆಕ್ರಮಣಕಾರಿ ಭಾವನೆಗಳ ಮೂಲಕ ನಾಶ ಮಾಡಲು ಬಳಸಿಕೊಳ್ಳಲಾಗುತ್ತಿದೆ. ಒಂದು ಪ್ರತಿಗಾಮಿ ಅರ್ಥದಲ್ಲಿ ಈ ಪ್ರೇರಣೆಗಳೇ ಸತ್ಯದ ಸಾರವಾಗುತ್ತಿದ್ದು ಅದು ಸತ್ಯವನ್ನು ಇನ್ನಷ್ಟು ದಮನಕಾರಿಯಾಗಿಸುತ್ತಿದೆ. ಅಧಿಕಾರ ಮತ್ತು ಸ್ವಾತಂತ್ರ್ಯಗಳು ಪ್ರತಿಗಾಮಿ ದಾರಿಯನ್ನು ಹಿಡಿದಾಗ ದುರ್ಬಲ ಸಮುದಾಯಗಳ ಮೇಲೆ ವಿನಾಶಕಾರಿ ಪರಿಣಾಮಗಳನ್ನು ಬೀರುತ್ತವೆ. ಭಾರತ ಸಮಾಜದ ದುರ್ಬಲ ಸಮುದಾಯಗಳ ಮೇಲೆ ಹಿಂಸಾಚಾರದಲ್ಲಿ ತೊಡಗಿರುವವರು ತಮ್ಮನ್ನು ತಾವು ಸ್ವತಂತ್ರರೆಂದು ಭಾವಿಸಿಕೊಳ್ಳುವುದಲ್ಲದೆ ದುರ್ಬಲ ಸಮುದಾಯಗಳನ್ನು ತೀವ್ರವಾಗಿ ಘಾಸಿಗೊಳಿಸುವಷ್ಟು ಸಾಮಾಜಿಕವಾಗಿ ಪ್ರಬಲರೂ ಆಗಿದ್ದಾರೆ. ಗುಜರಾತಿನ ಉನಾದಲ್ಲಿ 2016ರಲ್ಲಿ ನಾಲ್ವರು ದಲಿತರನ್ನು ಸಾರ್ವಜನಿಕವಾಗಿ ಥಳಿಸಿದ ಸಂದರ್ಭದಲ್ಲಿ ಅಧಿಕಾರ ಮತ್ತು ಸ್ವಾತಂತ್ರ್ಯಗಳ ನಡುವಿನ ಈ ಅಪಾಯಕಾರಿ ಸಂಬಂಧಗಳು ಎದ್ದುಕಂಡಿತು.

ಭಾರತದ ಅಲ್ಪಸಂಖ್ಯಾತರ ಮೇಲಿನ ಗುಂಪುದಾಳಿಗಳು ತಡೆಯಿಲ್ಲದೆಯೇ ಮುಂದುವರಿದಿವೆ. ಮುಂಬೈನ ಪ್ರತಿಷ್ಠಿತ ಮೆಡಿಕಲ್ ಕಾಲೇಜೊಂದರಲ್ಲಿ ಎರಡೆರಡು ಬಗೆಯಲ್ಲಿ ದುರ್ಬಲಳಾಗಿದ್ದ ವೈದ್ಯಳೊಬ್ಬರ ಆತ್ಮಹತ್ಯೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲ್ಲಿ ಅದರಲ್ಲೂ ಮೆಡಿಕಲ್ ಕಾಲೇಜುಗಳಲ್ಲಿ ಮುಂದುವರಿಯುತ್ತಲೇ ಇರುವ ಸರಣಿ ಆತ್ಮಹತ್ಯೆಗಳಿಗೆ ಇತ್ತೀಚಿನ ಸೇರ್ಪಡೆಯಾಗಿದೆ. ದಮನಕಾರಿ ಸತ್ಯಗಳಿಗೆ ಅನಧಿಕೃತ ಅವಕಾಶಗಳನ್ನು ಒದಗಿಸುವ ಮೂಲಕ ರಾಜಕೀಯ ಅಧಿಕಾರವು ತನ್ನ ಟೀಕಾಕಾರರ ಬಾಯಿ ಮುಚ್ಚಿಸುತ್ತದೆ ಮತ್ತು ದುರ್ಬಲರ ಬದುಕಿನ ಮೇಲೆ ಆಟವಾಡುತ್ತಾ ಸತ್ಯವನ್ನು ಸೀಳುತ್ತದೆ. ಇವೆಲ್ಲವೂ ದಮನ ಸ್ವರೂಪದಲ್ಲಿರುವ ಸತ್ಯದ ಉದಾಹರಣೆಗಳಾಗಿವೆ. ದಮನದಲ್ಲಿ ಆಶ್ರಯ ಪಡೆದಿರುವ ಸತ್ಯವು ಪ್ರಜಾತಾಂತ್ರಿಕ ಭಿನ್ನಮತವನ್ನು ಸಹಿಸುವುದಿಲ್ಲ; ಮಾತ್ರವಲ್ಲ ಅದು ಸಂವಾದವನ್ನು ಒಪ್ಪುವುದಿಲ್ಲವಾದ್ದರಿಂದ ಪ್ರತಿಪಾದನೆ ಮತ್ತು ಪ್ರತಿವಾದಗಳ ಬಗ್ಗೆ ತೀವ್ರವಾದ ಅಸಹನೆಯನ್ನು ಪ್ರದರ್ಶಿಸುತ್ತದೆ ಹಾಗೂ ಅದು ತನ್ನ ಅಂತರಾತ್ಮದ ಮಾತುಗಳಿಗೂ ಕಿವಿಗೊಡುವುದಿಲ್ಲ. ದೌರ್ಜನ್ಯ ಮತ್ತು ಹಿಂಸಾಚಾರಗಳ ಬಾಂಧವ್ಯದಲ್ಲಿ ತನ್ನ ಸಾರವನ್ನು ಕಾಣಬಯಸುವ ಸತ್ಯವು ಆತ್ಮದ ಪರಿಭಾಷೆಯನ್ನು ಪರಿಗಣಿಸುವುದಿಲ್ಲ ಮತ್ತು ಆ ಕಾರಣದಿಂದಲೇ ಅದರಲ್ಲಿ ಮೋಹನ್‌ದಾಸ್ ಕರಮ್‌ಚಂದ್ ಗಾಂಧಿಗೆ ಯಾವ ಸ್ಥಾನವೂ ಇರುವುದಿಲ್ಲ.

ಗಾಂಧಿಯ ದೃಷ್ಟಿಯಲ್ಲಿ ಸತ್ಯವು ಅಂತರಾತ್ಮದೊಂದಿಗೆ ಸಂಭಾಷಿಸುವ ಮೂಲಕ ತಾತ್ವಿಕ ಪರಿಶುದ್ಧತೆಯನ್ನು ಪಡೆಯುತ್ತದೆ ಹಾಗೂ ಅದು ತನಗೆ ತಾನೇ ಕಠಿಣವಾದ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತದೆ. ಆದರೆ ದಮನಕಾರಿಯಾದ ಸತ್ಯಕ್ಕೆ ಹಾಲಿ ದ್ವೇಷದ ರಾಜಕಾರಣವು ಪೂರಕ ವಾಗಿರುವುದರಿಂದ ಅದರಲ್ಲಿ ಚಿಂತನೆಯೂ ಜೀವಂತವಾಗಿರುವುದಿಲ್ಲ. ಆದ್ದರಿಂದ ಅದರಲ್ಲಿ ಬಿ. ಆರ್. ಅಂಬೇಡ್ಕರ್‌ಗೂ ಸ್ಥಾನವಿರುವುದಿಲ್ಲ. ಅಂಬೇಡ್ಕರ್ ಅವರ ಸತ್ಯವು ಗಟ್ಟಿಯಾದ ಮತ್ತು ಪಾರದರ್ಶಕವಾದ ಚರ್ಚೆಗಳನ್ನು ಆಧರಿಸಿದೆ. ಬೇಕಾಬಿಟ್ಟಿ ಪ್ರತಿಪಾದನೆಗಳನ್ನು ಪರಿಷ್ಕರಿಸಿ ಗಟ್ಟಿಯಾದ ಮತ್ತು ನಿರ್ಣಯಾತ್ಮಕ ಪ್ರತಿಪಾದನೆಗಳನ್ನು ಮುಂದಿಡುವುದು ಅದರ ಗುರಿ. ಗಾಂಧಿಯವರಿಗೆ ಸ್ವಾತಂತ್ರ್ಯವು ಆತ್ಮದ ಬಲದೊಂದಿಗೆ ಬೆಸೆದುಕೊಂಡಿದ್ದರೆ ಅಂಬೇಡ್ಕರ್ ಅವರ ಸತ್ಯವು ಚಿಂತನೆಯ ಬಲದೊಂದಿಗೆ ಬೆರೆತುಕೊಂಡಿದೆ. ಈ ಸಂಯೋಜನೆಯ ಅತ್ಯುತ್ತಮವಾದ ಅಭಿವ್ಯಕ್ತಿಯು ಗಾಂಧಿ ಮತ್ತು ಅಂಬೇಡ್ಕರ್ ಅವರಿಬ್ಬರೂ ಕೈಗೊಂಡ ಸತ್ಯಾಗ್ರಹಗಳ ಸಿದ್ಧಾಂತ ಮತ್ತು ಆಚರಣೆಗಳಲ್ಲಿ ಕಂಡುಬರುತ್ತದೆ. ವಾಗ್ವಾದ ಮತ್ತು ಸಂವಾದಗಳು, ಸತ್ಯದ, ಉದಾಹರಣೆಗೆ ಜಾತಿ ವ್ಯವಸ್ಥೆಯಂತಹ ಸತ್ಯದ, ಸಾರ್ವಜನಿಕ ದರ್ಶನವನ್ನು ಮಾಡಿಸುವುದರಿಂದ ಈ ಚಿಂತಕರಲ್ಲಿ ವಾಗ್ವಾದ ಮತ್ತು ಸಂವಾದಗಳು ಅತ್ಯಂತ ಮಹತ್ವವನ್ನು ಪಡೆಯುತ್ತವೆ. ಇಂತಹ ಸಾರ್ವಕಾಲಿಕ ಮತ್ತು ಸನಾತನ ಪ್ರಶ್ನೆಗಳನ್ನು ಏಕಪಕ್ಷೀಯವಾಗಿ ತಿರಸ್ಕರಿಸದೆ ಅವನ್ನು ಶಿಕ್ಷಣವೇತ್ತರು ಪಾರದರ್ಶಕ ಚರ್ಚೆಯ ಮೂಲಕ ಎದುರಾಗಬೇಕು ಮತ್ತು ಅವನ್ನು ಮೀರಿ ಬೆಳೆಯಬೇಕು. ಹಾಗೆಯೇ ಸಾಮಾನ್ಯ ಜನರೂ ಸಹ ತಮ್ಮ ದೈನಂದಿನ ಆಚರಣೆಗಳಲ್ಲಿ ಅವನ್ನು ಎದುರಾಗಬೇಕು.

ಜನತೆಯ ಆಚರಣೆಗಳಲ್ಲಿ ಜಾತಿ ಮತ್ತು ಲಿಂಗಾಧಾರಿತ ಆಚರಣೆಗಳ ಸತ್ಯಗಳ ಹಲವಾರು ಪ್ರಶ್ನೆಗಳು ಮನೆಮಾಡಿಕೊಂಡಿರುವುದರಿಂದ ಇದು ಅತ್ಯಂತ ಮುಖ್ಯವಾದದ್ದಾಗಿದೆ. ಬುದ್ಧಿಜೀವಿಗಳು ಈ ಸತ್ಯವನ್ನು ಅಧಿಕಾರಕ್ಕೆ ಮನವರಿಕೆ ಮಾಡಿಕೊಡುತ್ತಾರೆ ಮತ್ತು ಅದರಲ್ಲಿ ಸಿಲುಕಿಕೊಂಡವರಿಗೆ ಪುನರ್‌ನೆನಪು ಮಾಡಿಕೊಡುತ್ತಾರೆ. ಸತ್ಯವನ್ನು ಅಧಿಕಾರದ ಮುಖಕ್ಕೆ ಹೊಡೆಯುವಂತೆ ಹೇಳುವ ಬುದ್ಧಿಜೀವಿಗಳ ಬಗ್ಗೆ ನಾವು ಸಕಾರಾತ್ಮಕ ಧೋರಣೆಯನ್ನು ತಾಳಬೇಕಾಗಿದೆ. ಏಕೆಂದರೆ ಅವರು ಆದರ್ಶಪ್ರಾಯ ಮೌಲ್ಯಗಳ ಪರವಾಗಿ ಸತ್ಯವನ್ನು ನುಡಿಯುತ್ತಾರೆ; ವಾಸ್ತವವಾಗಿ ಅವರು ತಮ್ಮ ಅಂತರಾತ್ಮದ ತುಡಿತದ ಅನಿವಾರ್ಯತೆಯಿಂದಾಗಿಯೇ ಸತ್ಯವನ್ನು ಪ್ರತಿಪಾದಿಸುತ್ತಾರೆ. ಈ ಅಗತ್ಯವೇ ಅವರನ್ನು ನೈತಿಕ ಸಂಪನ್ಮೂಲವಾದ ಸ್ವಾತಂತ್ರ್ಯ ಮತ್ತು ಅಧಿಕಾರದ ಮೇಲಿನ ನಿಯಂತ್ರಣವನ್ನು ಪಡೆದುಕೊಳ್ಳುವಂತೆ ಮಾಡುತ್ತದೆ. ಆಲೋಚಿಸಬಲ್ಲ ಜನತೆಯ ಜೊತೆಜೊತೆಗೇ ಬುದ್ಧಿಜೀವಿಗಳ ಚಿಂತನೆಯೂ ಸಾಗುವುದರಿಂದ ಸಮಾಜದಲ್ಲಿ ಬುದ್ಧಿಜೀವಿಗಳಿಗೆ ಪ್ರಮುಖ ಪಾತ್ರವಿದೆ. ಜನತೆಯಲ್ಲಿ ಹರಿದು ಹಂಚಿಹೋಗಿರುವ ಚಿಂತನೆಗಳ ವಿವಿಧ ಪದರುಗಳನ್ನು ಒಟ್ಟುಗೂಡಿಸಲು ಬೇಕಾದ ಪರಿಸ್ಥಿತಿಯನ್ನು ಅವರು ಅನಾವರಣಗೊಳಿಸುತ್ತಾರೆ. ಜನರ ನಡುವೆ ಸಂವಾದ ಮತ್ತು ಸಂಭಾಷಣೆಗಳು ಮುರಿದುಬಿದ್ದಿರುವುದರ ಹಿಂದಿನ ಸತ್ಯವನ್ನು ಸಂವಹನ ಮಾಡುವ ಸ್ವಾತಂತ್ರ್ಯವು ಬುದ್ಧಿಜೀವಿಗಳಿಗೆ ಬೇಕಾಗುತ್ತದೆ. ಜನನಾಯಕರ ಭಾಷಣಗಳ ಸತ್ಯಾಸತ್ಯತೆಯನ್ನು ಪರಿಶೀಲನೆಗೊಳಪಡಿಸುವ ಸನ್ನಿವೇಶವೇ ಇಲ್ಲದಂತಾಗಿದೆ. ಮನುಷ್ಯರಾಗಿ ಉತ್ತಮ ಬದುಕನ್ನು ಕಂಡುಕೊಳ್ಳಲು ಬೇಕಾದ ಸೌಹಾರ್ದವನ್ನು ಕಲ್ಪಿಸಿಕೊಳ್ಳಲು ಒಂದು ವಿಮರ್ಶಾತ್ಮಕ ರಾಜಕೀಯ ನಿರ್ಧಾರವನ್ನು ತೆಗೆದುಕೊಳ್ಳುವ ಮತ್ತು ಅದನ್ನು ಸದೃಢಗೊಳಿಸಿಕೊಳ್ಳುವ ಅಗತ್ಯವಿದೆ. ಅದನ್ನು ಸಾಧಿಸಿಕೊಳ್ಳಲು ಸಾಮೂಹಿಕ ಸಂವಾದ ಪ್ರಕ್ರಿಯೆಗಳಲ್ಲಿ ನಿಯಮಿತವಾಗಿ ತೊಡಗಿಕೊಳ್ಳಲು ಜನತೆ ಪರಸ್ಪರರ ನಡುವೆ ಸಂವಹನವನ್ನು ರೂಪಿಸಿಕೊಳ್ಳುವ ಅಗತ್ಯವಿದೆ.


ಕೃಪೆ: Economic and Political Weekly

Writer - ಗೋಪಾಲ್ ಗುರು

contributor

Editor - ಗೋಪಾಲ್ ಗುರು

contributor

Similar News