ಆಂಗ್ಲರನ್ನು ಉಳಿಸಲಲ್ಲ, ನಮ್ಮ ಮನೆ ಉಳಿಸಿಕೊಳ್ಳಲು...
ಕಳೆದ ಮಹಾಯುದ್ಧ ಸ್ಥಗಿತಗೊಂಡಾಗಿನಿಂದ ಮಹಾರರನ್ನು ಸೈನ್ಯದಲ್ಲಿ ಸೇರಿಸಿಕೊಳ್ಳುತ್ತಿರಲಿಲ್ಲ. ಆದರೆ ಡಾ.ಬಾಬಾಸಾಹೇಬ ಅಂಬೇಡ್ಕರ್‌ರ ಸುದೀರ್ಘ ಪ್ರಯತ್ನದ ಬಳಿಕ ಮುಂಬರುವ ಅಕ್ಟೋಬರ್ ತಿಂಗಳಿಂದ ಮಹಾರ ಜನರ ಎರಡು ತುಕಡಿಯನ್ನು ನಿರ್ಮಿಸುವ ನಿರ್ಧಾರವನ್ನು ಹಿಂದೂಸ್ಥಾನ ಸರಕಾರ ಕೈಗೊಂಡಿದೆ. ಅದರಂತೆ ಮಹಾರ ತರುಣರು ಈ ಅವಕಾಶದ ಲಾಭವನ್ನು ಪಡೆದು ಸೈನ್ಯ ಸೇರಲೆಂಬ ಕಾರಣಕ್ಕಾಗಿ ಬುಧವಾರ ದಿನಾಂಕ 24 ಅಕ್ಟೋಬರ್ 1941ರ ರಾತ್ರಿ ಆರ್. ಎಂ. ಭಟ್ಟ ಹೈಸ್ಕೂಲ್ ಪರೇಲದಲ್ಲಿ ಬಹಿರಂಗ ಸಭೆಯನ್ನು ಏರ್ಪಡಿಸಲಾಗಿತ್ತು. ಸಭಾಂಗಣ ಜನ ಸಮುದಾಯದಿಂದ ಎಷ್ಟೆಲ್ಲ ತುಂಬಿಕೊಂಡಿತ್ತೆಂದರೆ, ಹಾಲ್ ಮತ್ತು ಟೆರೆಸ್ ಮೇಲೂ ಜನ ನಿಂತುಕೊಂಡಿದ್ದರು.
ಸರಿಯಾಗಿ 9:35ಕ್ಕೆ ಡಾ.ಬಾಬಾಸಾಹೇಬ ಅಂಬೇಡ್ಕರರು ಸಭಾಂಗಣಕ್ಕೆ ಆಗಮಿಸಿದರು. ಆಗ ನಡೆದ ಜೈಕಾರ ಮತ್ತು ಕರತಾಡನದಿಂದ ವಾತಾವರಣವೆಲ್ಲ ಮೊಳಗಿತು. ಬಳಿಕ ‘ಜನತಾ’ ಪತ್ರಿಕೆಯ ಮೆನೇಜರ್‌ರಾದ ಶ್ರೀ.ಕೆ.ವ್ಹಿ.ಸವಾದಕರರು ಸಭೆಯ ಉದ್ದೇಶವನ್ನು ವಿವರಿಸಿದರು. ಬಾಬಾಸಾಹೇಬರಿಗೆ ಭಾಷಣ ಮಾಡುವಂತೆ ಕೋರಿದರು.
ಸದ್ಗಹಸ್ಥರೇ!
ಇಂದಿನ ತುರ್ತು ಸಭೆಯ ಉದ್ದೇಶವೇನೆಂದರೆ ನಮ್ಮ ಸಮಾಜದವರಿಗಾಗಿ ಹಿಂದೂಸ್ಥಾನ ಸರಕಾರವು ಆರಂಭಿಸಲಿರುವ ಎರಡು ಬಟಾಲಿಯನ್ ಬಗೆಗೆ ಮಾಹಿತಿಯನ್ನು ನೀಡಬೇಕಾಗಿದೆ. 1932 ರಲ್ಲಿ ಹೀಗೇ 111ನೇ ಮಹಾರ ಬಟಾಲಿಯನ್ ನಿರ್ಮಿಸಲಾಗಿತ್ತು. ಈ ಬಟಾಲಿಯನ್‌ನ ಸೈನಿಕರು ಕಳೆದ ಮಹಾಯುದ್ಧದಲ್ಲಿ ಮಹಾರ ಸಮಾಜದವರ ಕ್ಷಾತ್ರತೇಜಸ್ಸನ್ನು ಜನರಿಗೆ ತೋರಿಸಿದರು. ಆದರೆ ಮಹಾಯುದ್ಧದ ಬಳಿಕ ಸರಕಾರವು ಬಟಾಲಿಯನನ್ನು ಸ್ಥಗಿತಗೊಳಿಸಿತು. ಹಲವು ಮಹಾರ ಯುವಕರು ಸೈನ್ಯದಲ್ಲಿ ಭರ್ತಿಯಾಗಲೆಂದು ಅರ್ಜಿ ಸಲ್ಲಿಸಿದರು. ಆದರೆ ಅವರನ್ನು ಸೈನ್ಯದಲ್ಲಿ ಸೇರಿಸಿಕೊಳ್ಳಲಿಲ್ಲ. ಆರಂಭಗೊಂಡ ಯುದ್ಧವು ಮುಗಿದ ಬಳಿಕ ಸರಕಾರವು ಅಸ್ಪಶ್ಯ ಕಾರ್ಮಿಕ ಪಥಕ (Labour corps) ನಿರ್ಮಿಸುವ ಯೋಜನೆಗೆ ಮುಂದಾಯಿತು.
ಈ ವಿಷಯದ ಕುರಿತು ನನ್ನ ಸಲಹೆ ಕೇಳಿದಾಗ, ನೀವು ಅಸ್ಪಶ್ಯರನ್ನು ಸೈನ್ಯದಲ್ಲಿ ಭರ್ತಿಮಾಡಿಕೊಳ್ಳುವುದಿಲ್ಲವೆಂದಾಗ, ನಮ್ಮ ಜನರು ಕಾರ್ಮಿಕ ಪಥಕದಲ್ಲಿ ಭಾಗವಹಿಸುವುದಿಲ್ಲ. ಕಾರ್ಮಿಕ ಪಥಕದಲ್ಲಿ ನಮ್ಮ ಜನ ಬೇಕೆಂದಿದ್ದರೆ, ಮೊದಲು ನಮ್ಮವರನ್ನು ಸೈನ್ಯದಲ್ಲಿ ಭರ್ತಿಮಾಡಿಕೊಳ್ಳಿ ಎಂದು ಹೇಳಿದೆ. ನನ್ನ ಮಾತಿನಿಂದ ಸರಕಾರ ಮನಸ್ಸು ಬದಲಾಯಿಸಿತು. ನಮ್ಮದೇ ಒಂದು ಬಟಾಲಿಯನ್ ನಿರ್ಮಿಸಲು ಸರಕಾರ ನಿರ್ಧರಿಸಿತ್ತು. ಮತ್ತೂ ಒಂದು ಬಟಾಲಿಯನ್ ನಿರ್ಮಿಸುವ ಭರವಸೆಯನ್ನೂ ನೀಡಿದೆ. ಸೈನ್ಯದಲ್ಲಿ ಸೈನಿಕರಾಗಿ ಮಹಾರರು, ಅವರ ಮೇಲಿನ ಅಧಿಕಾರಿಯಾಗಿ ಮೇಲುಜಾತಿಯವರು ಇರಬಾರದು, ಅಧಿಕಾರಿಗಳಾಗಿ ಮಹಾರರೇ ಇರಬೇಕೆಂದೂ ಹೇಳಿದೆ. ನನ್ನ ಈ ಮಾತಿಗೂ ಸರಕಾರ ಮಾನ್ಯತೆಯನ್ನು ನೀಡಿದೆ. ಹೀಗಾಗಿ ನಮ್ಮ ಜನರು ಕೇವಲ ಜಮಾದಾರ ಸುಭೇದಾರರಷ್ಟೇ ಆಗಿರದೆ, ಲೆಪ್ಟಿನೆಂಟ್ ಹುದ್ದೆಯನ್ನು ಸಹ ಪಡೆಯಬಹುದಾದ ಸಾಧ್ಯತೆಯಿದೆ. ಕಳೆದ ಶನಿವಾರ ನನ್ನ ಮತ್ತು ರಾಜ್ಯಪಾಲರ ಭೇಟಿಯಾಯಿತು. ಈವರೆಗೆ 600-700 ಅಸ್ಪಶೃರು ಹೆಸರನ್ನು ಬಟಾಲಿಯನ್‌ನಲ್ಲಿ ನೋಂದಾಯಿಸಿದ್ದಾರೆಂದು ನನಗೆ ತಿಳಿಸಲಾಯಿತು.
ಆದರೆ ಕೊರತೆಯೆಂದರೆ, ಅಧಿಕಾರಿಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳದ್ದು. ಆಗವರು ಹೇಳಿದ್ದೇನೆಂದರೆ ‘‘ನಿಮ್ಮ ಕರಾರನ್ನು ನಾವು ಒಪ್ಪಿಕೊಂಡಂತೆ, ನೀವು ಅಮಲ್ದಾರರ ಹುದ್ದೆಯನ್ನು ತುಂಬಲು ಅರ್ಹ ಅಭ್ಯರ್ಥಿಯನ್ನು ಕಳಿಸುವುದು ನಿಮ್ಮ ಕರ್ತವ್ಯ’’ ಹೀಗಾಗಿ ಅಮಲ್ದಾರ ಹುದ್ದೆಗಾಗಿ ಎರಡೂ ಬಟಾಲಿಯನ್‌ನಲ್ಲಿಯ ಸೈನಿಕರಿಗಾಗಿ ಯೋಗ್ಯ ಅಭ್ಯರ್ಥಿಯನ್ನು ಕಳಿಸಬೇಕಾಗಿದೆ. ಕೆಲವರಿಗೆ ಬಟಾಲಿಯನ್ ಬಗೆಗೆ ಶಂಕೆ ತಲೆದೋರಿತು. ಅವರು ನನ್ನನ್ನು ಕೇಳಿದರು. ‘‘ಸರಕಾರವು ವಿಸ್ತಾರಗೊಳಿಸಿದ ವೈಸರಾಯ್ ಕಾರ್ಯಕಾರಿ ಮಂಡಳದಲ್ಲಿ ಒಬ್ಬ ಅಸ್ಪಶ್ಯ ಪ್ರತಿನಿಧಿಯನ್ನೂ ಸೇರಿಸಿಕೊಂಡಿಲ್ಲ, ಹಾಗೆಯೇ, ಮಹಾರ ವತನದ ಹೆಚ್ಚಿಸಿದ ಕಂದಾಯ ವಿರೋಧದಲ್ಲಿ ನಾವು ಚಳವಳಿ ಮಾಡುತ್ತಲಿದ್ದೇವೆ. ಹೀಗಿರುವಾಗ ಸೈನ್ಯದಲ್ಲಿ ಭರ್ತಿಯಾಗಿ ಸರಕಾರಕ್ಕೆ ಹೇಗೆ ಸಹಾಯ ಮಾಡುವುದು?’’ ಆ ಪ್ರಶ್ನೆಗೆ ಉತ್ತರಿಸಲೆಂದೇ ಈ ಸಭೆಯನ್ನು ಕರೆಯಲಾಗಿದೆ.
ಸದ್ಯ ಹಿಂದೂಸ್ಥಾನದಲ್ಲಿಯ ಉಳಿದ ಸಮಾಜದವರ ಆಲೋಚನಾ ಕ್ರಮ ಹೇಗಿದೆ ಎಂಬ ಮಾಹಿತಿಯನ್ನು ನಿಮಗೆ ನೀಡುತ್ತೇನೆ. ಆಂಗ್ಲರು ನಮಗೆ ಸ್ವರಾಜ್ಯ ನೀಡುತ್ತಿಲ್ಲವೆಂದಾಗ, ನಾವು ಅವರಿಗೂ ಸಹಾಯ ಮಾಡಬಾರದು ಎಂದು ಕಾಂಗ್ರೆಸ್ ಹೇಳುತ್ತದೆ. ಇಲ್ಲಿ ಎರಡು ಸಂಗತಿಯ ಬಗೆಗೆ ಹೇಳಬೇಕು. ಮೊದಲನೆಯದು, ಒಬ್ಬ ವ್ಯಕ್ತಿಯ ಸ್ವಂತ ಮನೆಯಿದೆ ಎಂದುಕೊಳ್ಳಿ. ಮನೆ ಮಾಲಕನನ್ನು ಬಲವಂತದಿಂದ ಹೊರಗೆ ದಬ್ಬಿ ಬೇರೊಬ್ಬ ವ್ಯಕ್ತಿಯು ಮನೆಯೊಳಗೆ ನುಗ್ಗಿದ್ದಾನೆ. ಮೂರನೇ ವ್ಯಕ್ತಿಯು ಬಂದು ಮನೆಸೇರಿದ ಎರಡನೇ ವ್ಯಕ್ತಿಗೆ ಮನೆಯಿಂದ ಹೊರಬೀಳುವಂತೆ ಹೇಳುತ್ತಾನೆ. ಅವನು ಹೊರಬೀಳದೇ ಇರುವುದನ್ನು ಕಂಡು ಮನೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಒಡ್ಡುತ್ತಾನೆ. ಇಂಥದ್ದೇ ಸಂಗತಿಯು ಸದ್ಯ ನಡೆದಿದೆ. ನಾವು ಈ ದೇಶದ ಮಾಲಕರು. ಆಂಗ್ಲರು ಈ ದೇಶದೊಳಗೆ ಹೊಕ್ಕಿದ್ದಾರೆ. ಅವರು ಇಲ್ಲಿಂದ ಹೊರಟು ಹೋಗಬೇಕೆಂದು ಉಳಿದವರಂತೆ ನಮಗೂ ಅನಿಸುತ್ತದೆ. ಒಂದೊಮ್ಮೆ ಹಿಟ್ಲರ್ ಇಲ್ಲಿಗೆ ಬಂದು, ಆಂಗ್ಲರಿಗೆ ನೀವು ಇಲ್ಲಿಂದ ಹೊರಟು ಹೋಗಿ, ಇಲ್ಲದಿದ್ದರೆ ದೇಶವನ್ನು ಸುಟ್ಟು ನಾಶಗೊಳಿಸುತ್ತೇವೆ ಎಂದರೆ? ಹೇಳಿ ಹಾನಿಯಾಗುವುದು ಯಾರದ್ದು? ಇದು ಆಂಗ್ಲರ ಹಾನಿಯಲ್ಲ. ಈ ದೇಶದ ಜನರದ್ದೇ ಹಾನಿಯಾಗುತ್ತದೆ. ಇದನ್ನು ನೀವು ಸದಾ ಗಮನದಲ್ಲಿರಿಸಬೇಕು. ಈ ಯುದ್ಧದಲ್ಲಿ ಆಂಗ್ಲರಿಗೆ ಸಹಾಯ ಮಾಡಿ ಎಂದು ನಾನು ಹೇಳಲು ಕಾರಣವೇನೆಂದರೆ, ಆಂಗ್ಲರನ್ನು ಉಳಿಸಲು ಎಂದಲ್ಲ, ನಮ್ಮ ಮನೆ ಸುಟ್ಟು ಬೂದಿಯಾಗಬಾರದೆಂದು.
ಎರಡನೇ ವಿಷಯ, ವೈಸರಾಯ್ ಡಾ. ಅಂಬೇಡ್ಕರರನ್ನು ತಮ್ಮ ಕಾರ್ಯಕಾರಿ ಮಂಡಳಿಯಲ್ಲಿ ಸೇರಿಸಿಲ್ಲವೆಂದಾಗ, ಸೈನ್ಯದಲ್ಲಿ ಏಕೆ ಭರ್ತಿಯಾಗುವುದು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ನಾನು ನೀಡುವ ಉತ್ತರವಿಷ್ಟೇ. ಭೀಕರ ಕಾಳಗಕ್ಕೂ, ಕೋಪದಿಂದ ಸೆಟೆಯುವುದಕ್ಕೂ ಅಜಗಜಾಂತರವಿದೆ ಅಲ್ಲವೇ? ನಮ್ಮ ಪ್ರತಿನಿಧಿಯನ್ನು ಕಾರ್ಯಕಾರಿ ಮಂಡಳದೊಳಗೆ ಸೇರಿಸಿಕೊಳ್ಳದೇ ಇರುವುದರಿಂದ ನಮಗೆ ಅನ್ಯಾಯವಾಗಿದೆ ಎನ್ನುವುದು ನನಗೂ ಒಪ್ಪಿಗೆಯಿದೆ. ಸ್ವತಃ ವೈಸರಾಯನೇ ನನ್ನೆದುರಿಗೆ ಇದನ್ನು ಒಪ್ಪಿಕೊಂಡಿದ್ದಾನೆ. ಒಂದು ವೇಳೆ ಸರಕಾರ ತಾವು ಮಾಡಿದ್ದೇ ಕಾನೂನು ಎಂಬ ನೀತಿಯನ್ನು ಅವಲಂಬಿಸಿದರೆ ಮತ್ತು ದರ್ಪದಿಂದ ಬೇಕಾದ ಹಾಗೆ ಕುಶಾಲು ಚಳವಳಿಯನ್ನು ಮಾಡಿ, ನಾವು ನಿಮಗಾಗಿ ಏನೂ ಮಾಡುವುದಿಲ್ಲ ಎಂದರೆ ನಾವು ಸರಕಾರಕ್ಕೆ ಏನು ಹಾನಿ ಮಾಡಲಿದ್ದೇವೆ, ನಮ್ಮ ಹತ್ತಿರ ಸಾಧನಗಳೂ ಸಹ ಉಪಲಬ್ಧವಿಲ್ಲ. ಇಂಥ ಸಮಯದಲ್ಲಿ ನಾವು ಸರಕಾರದ ಮೇಲೆ ಸಿಟ್ಟಿಗೇಳುವುದುಬಿಟ್ಟು ಬೇರೇನು ಮಾರ್ಗವಿದೆ? ನನಗೆ ನನ್ನ ಬಾಲ್ಯದ ಘಟನೆ ನೆನಪಾಗುತ್ತಿದೆ.
ನಾವು 3-4 ಸೋದರರು ಅತ್ತೆಯ ಬಳಿ ವಾಸಿಸುತ್ತಿದ್ದೆವು. ಊಟದ ಕಾಲಕ್ಕೆ ನನಗೆ ಹೆಚ್ಚು ಅವನಿಗೆ ಕಡಿಮೆ ಎಂಬ ತಕರಾರು ನಡೆಯುತ್ತಿತ್ತು. ಇಂಥ ಜಗಳದಲ್ಲಿ ನನ್ನದೇ ಮೊದಲ ನಂಬರು. ಒಮ್ಮೆ ಸೋದರತ್ತೆ ಬದನೆ ಪಲ್ಯ ಮಾಡಿದ್ದಳು. ಊಟದ ಕಾಲಕ್ಕೆ ನನಗೆ ಬದನೇ ಹೋಳು ಕಡಿಮೆ ಹಾಕಿದ್ದಕ್ಕಾಗಿ ನಾನು ಜಗಳವಾಡಿದೆ. ಆ ದಿನ ನನಗೆ ಏನೂ ಸಿಗದಂತೆ ಮಾಡಬೇಕೆಂದು ನನ್ನ ಸೋದರರು ಹಠ ತೊಟ್ಟಿದ್ದರಿಂದ ನನ್ನ ಜಗಳದಿಂದ ಏನೂ ಉಪಯೋಗವಾಗಲಿಲ್ಲ. ನಾನು ಸಿಟ್ಟಿಗೆದ್ದು ಊಟ ಬಿಟ್ಟು ಹೊರನಡೆದೆ. ನಾನು ಹೋದ ಬಳಿಕ ನಾನು ಅರ್ಧಕ್ಕೆ ಬಿಟ್ಟು ಹೋದ ಬದನೇ ಹೋಳನ್ನೂ ನನ್ನ ಸೋದರರು ತಿಂದು ಹಾಕಿದರು. ಆ ದಿನ ನನಗೆ ಏನೂ ತಿನ್ನಲು ಸಿಗದೆ ಉಪವಾಸದಿಂದ ಬಳಲಬೇಕಾಯಿತು. ತಾತ್ಪರ್ಯವಿಷ್ಟೇ. ಎರಡೂ ಪಕ್ಷಗಳು ಶಕ್ತಿತುಲ್ಯವಾಗಿದ್ದರೆ ಜಗಳಯೋಗ್ಯ. ಹೀಗಾಗಿ ಸಿಟ್ಟಿಗೇಳುವುದರಿಂದ ಏನೂ ಲಾಭವಿಲ್ಲ ಎಂದೆನಿಸುತ್ತದೆ. ನಮ್ಮ ಬಳಿ ಏನೂ ಅಧಿಕಾರವಿಲ್ಲ, ಮಾತಿಗೂ ಕಾದಾಟಕ್ಕೂ ಬಹಳ ವ್ಯತ್ಯಾಸವಿದೆ. ವೈಸರಾಯ್ ತಪ್ಪು ಮಾಡಿರುವುದರಲ್ಲಿ ಶಂಕೆಯಿಲ್ಲದಿದ್ದರೂ ಸಿಟ್ಟಿಗೆದ್ದು ಜೋಪಡಿಯಲ್ಲಿ ಕೂತಿರುವುದರಲ್ಲಿ ಏನೂ ಲಾಭವಿಲ್ಲ.
ಮುಸ್ಲಿಂ ಲೀಗ್ ಮುಸಲ್ಮಾನರ ಬಲಾಢ್ಯ ಸಂಸ್ಥೆ. ಹಾವು ಮುಂಗುಸಿಯ ವೈರದಂತೆ ಆಂಗ್ಲ ಮತ್ತು ಈ ಸಂಸ್ಥೆಗಳ ನಡುವೆ ವೈರತ್ವವಿದೆ. ಆದರೂ ಮುಸಲ್ಮಾನರು ಏನೇನು ಸಾಧಿಸಿಕೊಳ್ಳುವುದು ಸಾಧ್ಯವೋ ಅದನ್ನೆಲ್ಲ ಸಾಧಿಸಿಕೊಳ್ಳುತ್ತಿದ್ದಾರೆ. ಸೈನ್ಯದಲ್ಲಿ ಶೇ. 80 ಜನರು ಮುಸಲ್ಮಾನರಿದ್ದಾರೆ. ಶೇ.50 ಅಮಲ್ದಾರರಿದ್ದಾರೆ, ಶೇ.80-90 ಮಿಲಿಟರಿ ಕಾಂಟ್ರಾಕ್ಟರ್ಸ್ ಮುಸಲ್ಮಾನರಿದ್ದಾರೆ. ಇದು ನಿಜವಾದ ವಸ್ತುಸ್ಥಿತಿ. ಮುಸಲ್ಮಾನರು ದಬ್ಬಾಳಿಕೆಗಿಂತ ವ್ಯವಹಾರಕ್ಕೆ ಹೆಚ್ಚು ಮಹತ್ವ ನೀಡುವುದರಿಂದ, ಹರಿಯುವ ಹೊಳೆಯಲ್ಲಿ ಕೈ ತೊಳೆದುಕೊಳ್ಳುತ್ತಾರೆ. ಮುಸಲ್ಮಾನರ ಕೈಯಲ್ಲಿ ಶಕ್ತಿಯಿದೆ. ಅಂಥ ಪರಿಸ್ಥಿತಿ ನಮ್ಮದಲ್ಲ. ಹೀಗಿರುವಾಗಲೂ ಅವರು ನಮ್ಮ ಎಲ್ಲ ಬೇಡಿಕೆಯನ್ನು ಒಪ್ಪಿಕೊಂಡಿದ್ದೇ ಅಚ್ಚರಿಯ ಸಂಗತಿ.
ಆದ್ದರಿಂದ ಕಾಲೇಜಿನಲ್ಲಿ ಕಲಿಯುವ ಮತ್ತು ಇತರ ಸುಶಿಕ್ಷಿತ ಯುವಕರು ಈ ಎರಡೂ ಬಟಾಲಿಯನ್‌ನಲ್ಲಿಯ ಅಮಲ್ದಾರರ ಹುದ್ದೆಯನ್ನು ಪಡೆಯಲು ಮುಂದಾಗಬೇಕು. ಸರಕಾರ ನನಗೆ ನೀಡಿದ ಭರವಸೆ ಏನೆಂದರೆ, ಒಂದು ವೇಳೆ ಯುದ್ಧದ ಬಲಿಕ ಈ ಬಟಾಲಿಯನ್ ಸ್ಥಗಿತಗೊಂಡಲ್ಲಿ, ಸೈನ್ಯದಲ್ಲಿದ್ದ ಜನರಿಗೆ ಸಿವಿಲ್‌ನಲ್ಲಿ ಒಳ್ಳೆ ನೌಕರಿ ನೀಡುವ ವ್ಯವಸ್ಥೆ ಮಾಡಲಾಗುವುದು. ಆದ್ದರಿಂದ ಇಷ್ಟೆಲ್ಲ ಅವಕಾಶ ನಮಗೆ ಲಭಿಸಿರುವಾಗ ಅದರ ಲಾಭ ಪಡೆಯುವುದು ನಮ್ಮನ್ನು ಅವಲಂಬಿಸಿದೆ. ಕಲಿತವರ ಮೇಲೆ ಈ ಹೊಣೆಗಾರಿಕೆಯಿದೆ ಎಂಬುದನ್ನು ಮರೆಯಬೇಡಿ.
ನಮ್ಮ ಯುವಕರು ನೆರಳಲ್ಲಿ ಕೂರುವುದನ್ನು ಬಿಡಬೇಕು. ನನಗೂ ನೆರಳಲ್ಲೇ ಕೆಲಸ ಸಿಗಲೆಂದು ಅನಿಸುತ್ತಿತ್ತು. ಇತ್ತೀಚೆಗೆ ಎಲ್ಲರೂ ಮಹಾರರ ವಿರುದ್ಧದಲ್ಲಿದ್ದಾರೆ. ಉಳಿದ ಜಾತಿಯವರಿಗೆ ಮಾದಾರರ ಬಗೆಗೆ, ಸಮಗಾರರ ಬಗೆಗೆ, ಭಂಗಿಗಳ ಬಗೆಗೆ ಪ್ರೇಮವಿದೆ. ಆದರೆ ಮಹಾರರ ಬಗೆಗೆ ಮಾತ್ರವಿಲ್ಲ. ಅದಕ್ಕೆ ಉದಾಹರಣೆ ಬೇರೆಯಾರೂ ಆಗಿರದೇ ನಾನೇ ಆಗಿದ್ದೇನೆ. ಇತರರು ನನ್ನನ್ನು ಪಿಶಾಚಿ ಎಂದು ಭಾವಿಸುತ್ತಾರೆ. ನನ್ನ ಸುತ್ತಲಿರುವ ಜನರನ್ನು ಭೂತಗಣದವರೆಂದು ಒಪ್ಪುತ್ತಾರೆ. 1923 ರಿಂದ ಅಸ್ಪಶ್ಯರ ನ್ಯಾಯಕ್ಕಾಗಿ ನಾನು ಹೋರಾಡುತ್ತಿದ್ದೇನೆ. ಅಸ್ಪಶ್ಯರನ್ನು ಪೊಲೀಸ್ ಇಲಾಖೆಯಲ್ಲಿ ಸೇರಿಸಿಕೊಳ್ಳಲೆಂದು ನಾನು ಜಗಳಮಾಡಿದೆ. ಲಾಭವೇನಾಯಿತೆಂದರೆ, ಸದ್ಯ ಇಬ್ಬರು ಸಮಗಾರರು ಮತ್ತು ಒಬ್ಬ ಮಾದಿಗನು ಸಬ್‌ಇನ್‌ಸ್ಪೆಕ್ಟರ್ ಆಗಿದ್ದಾರೆೆ. ಮಹಾರ ಮಾತ್ರ ಒಬ್ಬನೂ ಇಲ್ಲ! ಏನು ಕಾರಣವಿರಬಹುದು? ಸಂದರ್ಶನಕ್ಕೆ ಕರೆಸಿದ ಮಹಾರನಿಗೆ ನೀವು ಅಂಬೇಡ್ಕರರ ಅನುಯಾಯಿಯೇ ಎಂದು ಕೇಳಲಾಯಿತು.
ಅವನು ಹೌದು ಎಂದ ಕೂಡಲೇ ಅವನನ್ನು ಆಯ್ಕೆ ಮಾಡಲಿಲ್ಲ. ಈಗ ಪೊಲೀಸ್ ಇನ್‌ಸ್ಪೆಕ್ಟರ್ ಹುದ್ದೆಗೂ, ನನಗೂ ಏನು ಸಂಬಂಧ? ಅದೇ ರೀತಿ ಕಳೆದ ತಿಂಗಳು ನಮ್ಮ ಕೆಲವು ಪದವೀಧರರನ್ನು ಮಾಮಲೇದಾರರ ಹುದ್ದೆಗಾಗಿ ಸಂದರ್ಶನಕ್ಕೆ ಕರೆಯಲಾಯಿತು. ಕರೆದವರು ಮಧ್ಯಭಾಗದ ಕಮಿಶನರ್. ಅಲ್ಲಿ ಅವರಿಗೆ ವತನಕ್ಕೆ ಸಂಬಂಧಿಸಿದ ಭೂಕಂದಾಯದ ಬಗೆಗೆ ಕೇಳಲಾಯಿತು. ಭೂಕಂದಾಯದ ಏರಿಕೆಯ ಮತ್ತು ಅಭ್ಯರ್ಥಿಯ ಸಂದರ್ಶನದ ಸಂಬಂಧವಾದರೂ ಏನು? ಈ ಭೂಕಂದಾಯದ ಬಗೆಗೆ ಯೋಗ್ಯ ಉತ್ತರವನ್ನು ನೀಡಿದರೂ ಸಹ ಒಬ್ಬ ಮಹಾರ ಅಭ್ಯರ್ಥಿಯೂ ಆಯ್ಕೆಯಾಗಲಿಲ್ಲವೇಕೆ? ಸಾರಾಂಶ, ಮಹಾರ ಜಾತಿಯ ಮೇಲೆ ಎಲ್ಲರೂ ಕಣ್ಣಿಟ್ಟಿದ್ದಾರೆ.
ನಮ್ಮ ಸಮಾಜದಲ್ಲಿಯ ಯುವಕರು ಮಾಮಲೇದಾರ, ಸಬ್-ಜಡ್ಜ್, ಡೆ.ಕಲೆಕ್ಟರ್‌ರಾಗುವುದು ಅಸಾಧ್ಯವಾಗಬಹುದು. ಆದರೆ ಎರಡು ವರ್ಷ ಸೈನ್ಯದಲ್ಲಿ ಕೆಲಸ ಮಾಡುವುದರಿಂದ ನೀವು ಅಧಿಕಾರಿಗಳಾಗುವುದು ಸುಲಭವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಮುಂದೆ ನಮಗೇನಾದರೂ ಲಾಭ ಮಾಡಿಕೊಳ್ಳಬೇಕೆಂದಿದ್ದರೆ, ಮೊದಲಿಗೆ ಕೆಲದಿನ ಕಷ್ಟಪಡಬೇಕಾಗುತ್ತದೆ. ಕಲ್ಲು ಚಾಣದ ಹೊಡೆತ ಸಹಿಸದೇ ದೇವರ ಮೂರ್ತಿಯಾಗಲಾರದು. ಹೀಗಾಗಿ ಮೆಟ್ರಿಕ್ ಪಾಸಾದವರು, ಬಿ.ಎ. ಮುಗಿಸಿದರು ಈ ಅವಕಾಶದ ಲಾಭ ಪಡೆಯುವುದು ಅಗತ್ಯ.
ಈ ಅಮಲ್ದಾರರ ಹುದ್ದೆಗಾಗಿ ನಾವು ಜನರನ್ನು ಕಳಿಸದಿದ್ದರೆ, ಆ ಹುದ್ದೆಗೆ ಬೇರೆ ಜಾತಿಯ ಜನರನ್ನು ನೇಮಿಸಲಾಗುವುದು.ಉಚ್ಚ ಜಾತಿಯವರಿಗೆ ನಮ್ಮ ಮೇಲೆ ಪ್ರೀತಿಯಿಲ್ಲ ಎನ್ನುವುದು ನಿಮಗೆ ಮತ್ತೆ ಬೇರೆ ಹೇಳಬೇಕಾಗಿಲ್ಲ. ನಿಮಗೆ ಗೊತ್ತೇ ಇದೆ.ಅವರು ಅಧಿಕಾರಿಗಳಾದರು, ಎಂದರೆ ನಮ್ಮ ಸೈನಿಕರ ಮೇಲೆ ಸುಳ್ಳು ಆರೋಪ ಹೊರಿಸಿ, ಮಹಾರ ಜನರು ಸೈನ್ಯದಲ್ಲಿ ಕೆಲಸ ಮಾಡಲು ಅನರ್ಹರಾಗಿದ್ದಾರೆಂದು ಸರಕಾರದ ಗಮನಕ್ಕೆ ತರದೆ ಇರಲಾರರು.
ಆದ್ದರಿಂದ ನಮ್ಮಲ್ಲಿ ಕಲಿತವರಿಗೆ ಒಳ್ಳೆ ಅವಕಾಶ ಬಂದಿದೆ. ಕಾಲೇಜು ಶಿಕ್ಷಣದ ಬಳಿಕ ನಮ್ಮ ಯುವಕರು ಆಫೀಸಿನಲ್ಲಿ ಗುಮಾಸ್ತರಾಗಿ ಕೆಲಸ ಮಾಡಲೇ ಬೇಕಾಗುತ್ತದೆ. ಅಲ್ಲಿ ಅವರಿಗೆ ಹೆಚ್ಚಿನ ಭಡ್ತಿ ಸಿಗಲಾರದು. ಮಾಮಲೇದಾರ ಹುದ್ದೆಗಾಗಿ ಚಪ್ಪಲಿ ಸವೆಸುವುದಕ್ಕಿಂತ ಎರಡು ವರ್ಷ ಮಿಲಿಟರಿಯಲ್ಲಿ ಸೇವೆಸಲ್ಲಿಸಿದರೂ ಸಾಕಷ್ಟು ಸಂಬಳ ದೊರೆಯುತ್ತದೆ. ಯುದ್ಧದ ಬಳಿಕ ಸಿವ್ಹಿಲ್‌ನಲ್ಲಿ ವರಿಷ್ಠ ಹುದ್ದೆಯ ನೇಮಕಾತಿ ಮಾಡುವಾಗ ಸೈನ್ಯದಲ್ಲಿ ಸೇವೆಸಲ್ಲಿಸಿದವರಿಗೆ ಸವಲತ್ತು ನೀಡಲಿದ್ದಾರೆ. ನಮ್ಮ ಬಟಾಲಿಯನ್ ಸ್ಥಗಿತಗೊಂಡರೆ ಮಾತ್ರ ಈ ಪ್ರಶ್ನೆ ಏಳಲಿದೆ.ಆದರೆ ನಮ್ಮ ಬಟಾಲಿಯನ್ ಯುದ್ಧದ ನಂತರವೂ ಸಹ ಮುಂದುವರಿಯಲಿದೆ ಎಂಬ ಭರವಸೆ ಸರಕಾರದಿಂದ ನನಗೆ ಸಿಕ್ಕಿದೆ.
ಯುದ್ಧದಲ್ಲಿ ಹೆಸರು ನೋಂದಾಯಿಸಲು ಜನ ಹೆದರುತ್ತಾರೆ. ಆದರೆ ಸದ್ಯದ ಯುದ್ಧದ ಪರಿಸ್ಥಿತಿಯ ಕಡೆಗೆ ನೋಡಿದರೆ ಯುದ್ಧ ಬೇಗ ಮುಗಿಯುವ ಲಕ್ಷಣ ಕಾಣುತ್ತದೆ. ಆದ್ದರಿಂದ ನಮ್ಮ ತರುಣರು ಇದರ ಲಾಭವನ್ನು ಅಗತ್ಯ ಪಡೆಯಲಿ ಎಂದು ಹೇಳಿ ನನ್ನ ಭಾಷಣ ಮುಗಿಸುತ್ತೇನೆ.
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)