ಪ್ರೇಕ್ಷಕರನ್ನು ಸಂಮೋಹನಗೊಳಿಸಿದ ಪುಂಗಿನಾದದ ಸೃಷ್ಟಿ

Update: 2019-06-15 18:31 GMT

‘ನಾಗಿನ್’ ಚಿತ್ರದ, ಪುಂಗಿನಾದದ ಸ್ವರಗತಿಗಳು ತುಂಬಿರುವ, ‘ಮನ್ ಡೋಲೆ....’ ಹಾಡಿಗೆ ಎಷ್ಟೊಂದು ಪ್ರತಿಭಾವಂತರು ದುಡಿದಿದ್ದಾರೆ ಎಂದರೆ ಅದೊಂದು ದಾಖಲೆಯೆಂದು ಕಾಣುತ್ತದೆ. ಸಂಗೀತ ನಿರ್ದೇಶಕರಾಗಿ ಹೇಮಂತಕುಮಾರ್. ಅವರ ಸಹಾಯಕರಾಗಿದ್ದ ರವಿ ಅವರು ಹಾರ್ಮೋನಿಯಂ ನುಡಿಸಿದರೆ, ಕಲ್ಯಾಣ್ ಜೀ ಅವರು ಕ್ಲಾವಯಲಿನ್ ನುಡಿಸಿದ್ದರು. ಲಕ್ಷ್ಮೀಕಾಂತ್ ಅವರು ತಬಲಾದಲ್ಲಿ ಸಾತ್ ನೀಡಿದರೆ, ಅದರ ಪುಂಗಿನಾದ ಸೃಷ್ಟಿಸಿದ ಲೂಸಿಲ ಪಖೆಕೋ ಪಿಯಾನೋ ಸ್ವರವನ್ನು ಸೇರಿಸಿದ್ದರು. ಈ ಪಟ್ಟಿಯಲ್ಲಿರುವ ಎಲ್ಲ ವ್ಯಕ್ತಿಗಳು ಭಾರತೀಯ ಪ್ರೇಕ್ಷಕರಿಗೆ ಪರಿಚಿತರು, ಲೂಸಿಲ ಪಖೆಕೋ ಅವರನ್ನು ಬಿಟ್ಟು. ಆದರೂ ಅವರ ಕಾಣಿಕೆ ಅರವತ್ತು ವರ್ಷಗಳ ನಂತರವಾದರೂ ದಾಖಲಾಗುತ್ತಿರುವುದು ಒಂದು ಅಚ್ಚರಿಯೇ, ನಾಗಿನ್‌ನ ಟ್ಯೂನ್‌ನಂತೆ!

ಜನಪ್ರಿಯತೆಯನ್ನು ಅಬಾಧಿತವಾಗಿ ಉಳಿಸಿಕೊಂಡ ಅನೇಕ ಚಿತ್ರಗೀತೆಗಳಿವೆ. ಸಾಹಿತ್ಯ ಅರ್ಥವಾಗದಿದ್ದರೂ, ಗೀತೆಯ ಲಯ, ಸಂಗೀತ, ಮಾಧುರ್ಯಕ್ಕೆ ಪ್ರೇಕ್ಷಕ ಮನಸೋಲುತ್ತಾನೆ. ಚಿತ್ರದ ಗುಣಮಟ್ಟ ಉತ್ತಮ ಗೀತೆಯೊಂದರ ಜನಪ್ರಿಯತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಅವು ಕೇಳುಗರ ಎದೆಯಲ್ಲಿ ಶಾಶ್ವತವಾಗಿ ನೆಲೆಯಾಗುತ್ತವೆ. ಅಂಥ ಚಿತ್ರಗೀತೆಗಳಲ್ಲಿ ಹಿಂದಿನ ‘‘ಮನ್ ಡೋಲೆ.... ಮೇರಾ ತನ್ ಡೋಲೆ.....’’, ತಮಿಳಿನ ‘‘ಸಿಂಗಾರ ಮೇಲನೆ ವಾ... ವಾ...’’, ತೆಲುಗಿನ ‘‘ಶಿವಶಂಕರಿ, ಶಿವಾನಂದ ಲಹರಿ’’, ಕನ್ನಡದ ‘‘ದೋಣಿ ಸಾಗಲಿ...’’ ಹಾಡುಗಳು ಕೆಲವು ಉದಾಹರಣೆಗಳು. ಈ ಹಾಡುಗಳು ಕಾಲ, ದೇಶದ ಗಡಿಯನ್ನು, ಭಾಷೆಯ ಮಿತಿಯನ್ನು ಮೀರಿ ಜನರ ಭಾವಭಿತ್ತಿಯಲ್ಲಿ ಬಂದಿಯಾಗಿವೆ. ಕಾಲ ಅವುಗಳ ಮಾಧುರ್ಯವನ್ನು ಕುಂದಿಸದು. ಬದಲಾಗುತ್ತಿರುವ ಚಿತ್ರ ಸಂಗೀತವು ಅವುಗಳ ಜನಪ್ರಿಯತೆಯನ್ನು ಅಳಿಸದು. ಆದರೆ ಈ ರೀತಿ ಪ್ರೇಕ್ಷಕರನ್ನು ಕಾಡುವ ಈ ಚಿತ್ರಗೀತೆಗಳು ಪಡೆಯುವ ಜನಪ್ರಿಯತೆ ಮಾತ್ರ ತರ್ಕಕ್ಕೆ ಮೀರಿದ ಲೆಕ್ಕಾಚಾರ.
‘ನಾಗಿನ್’(1954) ಚಿತ್ರದ ‘ಮನ್‌ಡೋಲೆ...’ ಹಾಡಿನ ಸಾಹಿತ್ಯ ಅನೇಕರಿಗೆ ಅರ್ಥವಾಗದು. ಅದನ್ನು ತಿಳಿಯಬೇಕೆಂಬ ಆಸೆ ಕೇಳುಗನಿಗೆ ಇದ್ದಂತಿಲ್ಲ. ಆದರೆ ಆ ಹಾಡನ್ನು ಕೇಳಿದವರು ‘ಪುಂಗಿ’ಯ ನಾದಕ್ಕೆ ಹಾವು ತಲೆದೂಗುವಂತೆ ತನ್ಮಯರಾಗಿ ಆಲಿಸುತ್ತಾರೆ. ಲತಾ ಮಂಗೇಶ್ಕರ್ ಅವರ ಮಧುರ ಕಂಠದಿಂದ ಸರಾಗವಾಗಿ ಹರಿಯುವ ನದಿಯಂತೆ ಸಣ್ಣ ತರಂಗಗಳ ಮಾಧುರ್ಯವನ್ನು ಉಕ್ಕಿಸುವ ಹಾಡು ಕೇಳುಗನ ಮೈ ಮನವನ್ನು ಆವರಿಸಿ ಪುಲಕವೆಬ್ಬಿಸುತ್ತದೆ.
ಈ ಹಾಡಿನಲ್ಲಿ ಲತಾ ಅವರ ಕಂಠದ ಜೊತೆ ಮತ್ತೊಂದು ‘ದನಿ’ಯೂ ಸೇರಿದೆ. ಅವರ ದನಿಯಲ್ಲಿ ಹಾಡು ಆರಂಭವಾಗುವ ಮುನ್ನ ಪುಂಗಿಯ ಸ್ವರಗತಿ, ಸಂಗೀತದ ಲಯ, ವಿಳಂಬಿಸುವ ರಾಗ ನಮ್ಮನ್ನು ಮುಂದಿನ ಅನುಭವಕ್ಕೆ ಸಿದ್ಧಪಡಿಸುತ್ತದೆ. ಪಲ್ಲವಿ ಮುಗಿದ ಕೂಡಲೇ ಭುಗಿಲ್ಲನೆ ಏಳುವ ಪುಂಗಿಯ ನಾದ ಕಣ್ಮುಚ್ಚಿ ಕುಳಿತವನ ಮುಂದೆ ನರ್ತನದ ಲಾಸ್ಯವನ್ನು ಚಿತ್ರಿಸತೊಡಗುತ್ತದೆ. ಇಡೀ ಹಾಡಿನ ಮೋಡಿಗೆ ಅದರಲ್ಲಿ ಬಳಕೆಯಾದ ಪುಂಗಿಯ ನಾದ ಅಥವಾ ‘ಬೀನ್ ಸಂಗೀತ’ವೇ ಮುಖ್ಯ ಕಾರಣ.
1954ರಲ್ಲಿ ಬಿಡುಗಡೆಯಾದ ‘ನಾಗಿನ್’ ಒಂದು ಸಾಧಾರಣ ಪ್ರೇಮಕಥನ. ಹಾವುಗಳನ್ನು ಹಿಡಿಯುವ ನಾಗ ಬುಡಕಟ್ಟಿನ ಎರಡು ಕುಲಗಳಿಗೆ ಸೇರಿದ ಗಂಡು ಹೆಣ್ಣಿನ ನಡುವೆ ಅರಳುವ ಪ್ರೇಮಕ್ಕೆ ಯಥಾಪ್ರಕಾರ ಕುಲ ಹಿರಿಯರ ವಿರೋಧ; ಅಡ್ಡಿ ಆತಂಕಗಳನ್ನು ಗೆಲ್ಲುವ ಜೋಡಿಗೆ ಕೊನೆಗೂ ಸುಖಾಂತ್ಯ (ಸತತ ಐದು ಹಾಡುಗಳ ಕ್ಲೈಮ್ಯಾಕ್ಸ್). ಇಲ್ಲಿ ನಾಯಕಿ (ಮಾಲಾ) ನೃತ್ಯಗಾತಿಯಾದರೆ, ನಾಯಕ (ಸನಾತನ್) ಸಂಗೀತಗಾರ. ನಾಗ ಬುಡಕಟ್ಟಿಗೆ ಸೇರಿದ ಕಾರಣ ನಾಯಕಿ ಹಾವಿನಂತೆ ಬಳುಕಿ ನರ್ತಿಸುವವಳು. ನಾಯಕ ಪುಂಗಿಯ ಮೂಲಕ ಸುಮಧುರ ನಾದವನ್ನು ಸೃಜಿಸಬಲ್ಲ.


ಈ ಚಿತ್ರದ ಅಭೂತಪೂರ್ವ ಯಶಸ್ಸಿಗೆ ಎರಡು ಮುಖ್ಯ ಕಾರಣ. ಆಗ ತಾನೇ ಚಲನಚಿತ್ರರಂಗದಲ್ಲಿ ಬೇರುಬಿಡಲು ಪ್ರಯತ್ನಿಸುತ್ತಿದ್ದ ನಟಿ ವೈಜಯಂತಿ ಮಾಲಾ ಅವರ ನೃತ್ಯ ಮತ್ತು ಅಭಿನಯ. ಸಂಗೀತ ನಿರ್ದೇಶಕ ಹೇಮಂತಕುಮಾರ್ ಅವರು ಪ್ರೇಕ್ಷಕರು ತಲೆದೂಗುವಂತೆ ಸಂಯೋಜಿಸಿದ ಹಾಡುಗಳು. ಅದರಲ್ಲೂ ಇಡೀ ಚಿತ್ರವನ್ನು ಆವರಿಸಿಕೊಂಡಿರುವ ಪ್ರೇಕ್ಷಕರನ್ನು ಸಂಮೋಹನಗೊಳಿಸಿದ ಪುಂಗಿಯ ನಾದದ ಮಾಧುರ್ಯ ಮತ್ತು ಚೆಲುವು. ಈ ‘ಬೀನ್’ ಅಥವಾ ಪುಂಗಿಯ ಸಂಗೀತ ಅದೆಷ್ಟು ಮೋಡಿ ಮಾಡಿತೆಂದರೆ, ಅದರ ಸುತ್ತ ಅನೇಕ ದಂತಕತೆಗಳು ಸೃಷ್ಟಿಯಾದವು. ಚಲನಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಸಮಯದಲ್ಲಿ ಈ ಬೀನ್ ಸಂಗೀತದ ದೃಶ್ಯ ತೆರೆಯ ಮೇಲೆ ಬಂದಾಗ, ಅದರ ನಾದಕ್ಕೆ ಆಕರ್ಷಿತಗೊಂಡು ನಿಜವಾದ ನಾಗರಹಾವುಗಳು ಚಿತ್ರಮಂದಿರಕ್ಕೆ ನುಗ್ಗಿ ತೆರೆಯ ಮುಂದೆ ಹೆಡೆ ಎತ್ತಿ ನರ್ತಿಸುತ್ತಿದ್ದವು. ಅವುಗಳನ್ನು ಕಂಡು ಪ್ರೇಕ್ಷಕರು ಬೆಚ್ಚಿ ಸಿನಿಮಾ ಮಂದಿರದಿಂದ ಹೊರಕ್ಕೆ ಓಡುತ್ತಿದ್ದರು ಎಂಬ ಕತೆಗಳು ಹಲವಾರು. ಅಲ್ಲದೆ ಥಿಯೇಟರ್‌ಗಳ ಮುಂದೆ ಮಾಲೀಕರು ಹಾವಾಡಿಗರನ್ನು ಕರೆಸಿ ಪ್ರದರ್ಶನ ಏರ್ಪಡಿಸುತ್ತಿದ್ದರಂತೆ; ಹಾವುಗಳು ಚಿತ್ರಮಂದಿರಕ್ಕೆ ಹೋಗದಿರಲಿ ಎಂಬುದು ಒಂದು ಕಾರಣವಾದರೆ, ಪ್ರೇಕ್ಷಕರನ್ನು ಸೆಳೆಯುವುದು ಮತ್ತೊಂದು. ಶಬ್ದವನ್ನು ಆಲಿಸಲಾರದ ಹಾವುಗಳು ಪುಂಗಿಯ ನಾದಕ್ಕೆ ಶರಣಾಗುವ ಮಿಥ್ಯೆಯನ್ನು ನಂಬಿಸಿ ಪ್ರೇಕ್ಷಕರ ಮನವನ್ನು ಸೂರೆಗೊಂಡು, ಧನವನ್ನು ಕೊಳ್ಳೆ ಹೊಡೆದ ಇಂಥದೊಂದು ಸಿನಿಮಾ ಪ್ರಕರಣ ಮತ್ತೊಂದಿಲ್ಲ. ಇದ್ದರೂ ವಿರಳಾತಿ ವಿರಳ.
ಇರಲಿ, ಆದರೆ ಪ್ರೇಕ್ಷಕರನ್ನು ಮರುಳುಗೊಳಿಸಿದ ಈ ಬೀನ್ ಸಂಗೀತವನ್ನು ಸೃಜಿಸಿದವರು ನಿಜಕ್ಕೂ ಯಾರು? ಪುಂಗಿಯು ಒಂದು ಜನಪದ ಸಂಗೀತ ವಾದ್ಯವಾಗಿದ್ದು ಚಿತ್ರದಲ್ಲಿ ಬರುವ ಪುಂಗಿಯ ನಾದದಷ್ಟು ವೈವಿಧ್ಯದ ರಾಗಗಳನ್ನು ಅದು ಹೊರಡಿಸಲಾರದು. ಅದರ ನಾದವೂ ಸಿನಿಮಾದ ಬೀನ್ ನಾದದಷ್ಟು ಮಧುರವಾಗಿರದು. ಚಿತ್ರದ ಸಂಗೀತ ನಿರ್ದೇಶಕರು ಹೇಮಂತ್‌ಕುಮಾರ್. ಅವರ ಸಹಾಯಕರಾಗಿ ಪ್ರತಿಭಾವಂತರ ಸಮೂಹವೇ ಇತ್ತು. ಮುಂದೆ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಭಾರತೀಯ ಸಿನಿಮಾ ಸಂಗೀತದಲ್ಲಿ ತಮ್ಮದೇ ಛಾಪು ಮೂಡಿಸಿದ ರವಿ, ಕಲ್ಯಾಣ್‌ಜಿ(ಆನಂದ್ ಜೀ ಜೋಡಿ), ಲಕ್ಷ್ಮೀಕಾಂತ್(ಪ್ಯಾರೇ ಲಾಲ್ ಜೋಡಿ) ಜೊತೆಗೆ ಹಲವಾರು ಪ್ರವೀಣ ವಾದ್ಯಗಾರರಿದ್ದರು. ಇಂಥ ಪ್ರತಿಭಾ ಸಂಗಮದಲ್ಲಿ ಸೃಷ್ಟಿಯಾದ ನಾಗಿನ್ ಸಿನಿಮಾದ ಹಾಡುಗಳು ಜನಮನ ಸೂರೆಗೊಂಡಿದ್ದರೆ ಅಚ್ಚರಿಪಡಬೇಕಿಲ್ಲ.


ಆದರೆ ಈ ಪುಂಗಿಯ ನಾದವನ್ನು ಸೃಷ್ಟಿಸಿದವರ ಬಗ್ಗೆ ಸ್ವಾರಸ್ಯಕರವಾದ ಕತೆಯೇ ಇದೆ.
ಮುಂಬೈನ ಪತ್ರಕರ್ತ ಶ್ಯಾಮಾನುಜ ಎಂಬುವರು ಇದರ ಜಾಡು ಹಿಡಿದು, ಆ ಸೃಷ್ಟಿಕರ್ತನನ್ನು ಹುಡುಕಲು ಹೊರಟಾಗ ಕಂಡ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ದಾಖಲಿಸಿದ್ದಾರೆ. ಏಕೆಂದರೆ ಈ ವಿಶಿಷ್ಟ ನಾದವನ್ನು ಸೃಷ್ಟಿಸಿದವರು ರವಿ ಎಂದು ಒಬ್ಬರು ಹೇಳಿದರೆ, ಕಲ್ಯಾಣ್ ಜೀ ಅವರ ಹೆಸರಿಗೆ ದಾಖಲಿಸಿದವರು ಹಲವರು. ಕಲ್ಯಾಣ್ ಜೀ ಅವರು ಈಗ ಬಳಕೆಯಲ್ಲಿರುವ ಸಿಂಥಸೈಜರ್‌ನಂತಿದ್ದ, ಆದರೆ ಇಷ್ಟೊಂದು ಆಧುನಿಕವಲ್ಲದ ಕ್ಲಾವಯಲಿನ್ ಎಂಬ ವಾದ್ಯವನ್ನು ನುಡಿಸುತ್ತಾ ಅದರಲ್ಲಿ ಬಗೆಬಗೆಯ ದನಿಗಳನ್ನು ಸೃಷ್ಟಿಸುತ್ತಿದ್ದರು. ಹಾಗೆ ಸೃಷ್ಟಿಯಾದದ್ದು ಈ ಪುಂಗಿನಾದ ಎಂದು ಕೆಲವರು ಹೇಳಿದರೆ ರವಿ ಅವರು ತಾವೇ ಮೊದಲು ಅದನ್ನು ಹಾರ್ಮೊನಿಯಂನಲ್ಲಿ ಸೃಷ್ಟಿಸಿದೆನೆಂದು ಸಂದರ್ಶನವೊಂದ ರಲ್ಲಿ ಹೇಳಿ ಕಲ್ಯಾಣ್ ಜೀ ಅವರ ಖಾತೆಗೆ ಅದು ದಾಖಲಾಗುವುದು ಸರಿಯಲ್ಲವೆಂದು ಹೇಳಿದ್ದರು. ಅದೇ ಸಂದರ್ಶನದಲ್ಲಿ ರವಿ ಅವರು ನಿಜವಾಗಿ ಅದನ್ನು ಸೃಷ್ಟಿಸಿದಾಕೆ ಲೂಸಿಲ. ನಾನು ಅದನ್ನು ಮಾರ್ಪಡಿಸಿ ಚಿತ್ರ ಸಂಗೀತಕ್ಕೆ ಅಳವಡಿಸಿದೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿದ್ದರು.
ಈ ಮಾಹಿತಿಯ ಎಳೆಯನ್ನು ಆಧರಿಸಿ ನಿಜವಾದ ಸೃಷ್ಟಿಕರ್ತನನ್ನು ಹುಡುಕಲು ಹೊರಟ ಶ್ಯಾಮಾನುಜ ಅವರಿಗೆ ಮುಂಬೈ ಸಂಗೀತ ಪ್ರಪಂಚ ನಡೆದು ಬಂದ ದಾರಿಯ ಒಂದು ಚಿತ್ರವೇ ದೊರೆಯಿತು. ಅನೇಕ ವ್ಯಕ್ತಿಗಳನ್ನು ಸಂದರ್ಶಿಸಿ, ದಾಖಲೆಗಳನ್ನು ಜಾಲಾಡಿದ ನಂತರ ಲೂಸಿಲ ಪಖೆಕೋ(ಪಷೆಕೊ) ಎಂಬಾಕೆ ಹೇಮಂತ್‌ಕುಮಾರ್ ತಂಡದಲ್ಲಿ ಪಿಯಾನೋ ನುಡಿಸುತ್ತಿದ್ದ ಗೋವಾ ಮೂಲದ ಸಂಗೀತಗಾರ್ತಿ ಎಂಬುದು ತಿಳಿಯಿತು. ಗೋವಾದಿಂದ ಮುಂಬೈಗೆ ಬಂದ ಲೂಸಿಲ ಇಲ್ಲಿನ ಅನೇಕ ವಾದ್ಯವೃಂದ ಮತ್ತು ಸಂಗೀತ ನಿರ್ದೇಶಕರ ಜೊತೆಯಲ್ಲಿ ಪಿಯಾನೋ ನುಡಿಸುತ್ತಿದ್ದರು. ನಲವತ್ತು ಐವತ್ತರ ದಶಕದಲ್ಲಿ ಗೋವಾದ ಗಿಟಾರಿಸ್ಟ್ ಗಳು, ಪಿಯಾನೋ ವಾದಕರು, ಪಾಶ್ಚಿಮಾತ್ಯ ಸಂಗೀತ ಉಪಕರಣಗಳನ್ನು ನುಡಿಸುತ್ತಿದ್ದವರು ಮುಂಬೈ ಚಲನಚಿತ್ರ ಸಂಗೀತಗಾರರಿಗೆ ನೆರವಾಗುತ್ತಿದ್ದರು. 1948ರಲ್ಲಿ ಮುಂಬೈಗೆ ಬಂದ ಲೂಸಿಲ ಬಹಳ ಬೇಗ ಜನಪ್ರಿಯರಾದರು. ಬರೀ ಪುರುಷರೇ ತುಂಬಿದ ಸಿನಿಮಾ ಸಂಗೀತ ಜಗತ್ತಿನಲ್ಲಿ ತನ್ನ ಪ್ರತಿಭೆಯಿಂದಲೇ ಬೇಡಿಕೆಯ ಸಂಗೀತಗಾರ್ತಿಯಾಗಿದ್ದಳು.
ಗೋವಾ ಮೂಲದ ಜಾರ್ಜ್ ಪಖೆಕೋ ಎಂಬಾತನನ್ನು ಮದುವೆಯಾಗಿ ಮುಂಬೈಗೆ ಬಂದು ಸಂಸಾರ ಹೂಡಿದ ಲೂಸಿಲ ಲಂಡನ್‌ನ ಟ್ರಿನಿಟಿ ಕಾಲೇಜು ಮತ್ತು ರಾಯಲ್ ಕಾಲೇಜ್ ಆಫ್ ಮ್ಯೂಸಿಕ್‌ನಿಂದ ಸಂಗೀತದಲ್ಲಿ ಪದವಿ ಪಡೆದು ಪಿಯಾನೋವಾದಕಿಯಾಗಿ ಪ್ರಸಿದ್ಧಿಗೆ ಬಂದಳು. 1953ರಲ್ಲಿ ನಾಗಿನ್ ಚಿತ್ರದ ಆಶಯ ಸಂಗೀತಕ್ಕೆ ಎಲ್ಲರೂ ತಲೆಕೆಡಿಸಿಕೊಳ್ಳುತ್ತಿದ್ದ ಕಾಲದಲ್ಲಿ ಲೂಸಿಲ ಅವರು ಪಿಯಾನೋದಲ್ಲಿ ಒಂದು ಸ್ವರವನ್ನು ನುಡಿಸಿದರಂತೆ. ಪುಂಗಿಯ ನಾದಕ್ಕೆ ಹತ್ತಿರವಾದ, ಹಾವಿನ ಭಾವಗಳನ್ನು ಅಭಿವ್ಯಕ್ತಿಸುವ ಟ್ಯೂನ್ ಇದಾಗಬಹುದೆಂದು ಹೇಮಂತಕುಮಾರ್ ಅದನ್ನು ಆರಿಸಿದಾಗ, ಸಹಾಯಕ ನಿರ್ದೇಶಕರಾದ ರವಿ ಅವರು ಹಾರ್ಮೋನಿಯಂನಲ್ಲಿ ಅದೇ ಟ್ಯೂನ್ ಸುಧಾರಿಸಿದರು. ಮುಂದೆ ನಡೆದದ್ದು ಇತಿಹಾಸ. ಆದರೆ ಆ ಟ್ಯೂನ್ ಚಿತ್ರ ಬಿಡುಗಡೆಯಾದ ನಂತರ ಈ ಪ್ರಮಾಣದ ಯಶಸ್ಸು ಸಾಧಿಸುತ್ತದೆಂಬ ಅಂದಾಜು ಯಾರಿಗೂ ಇರಲಿಲ್ಲ. ಹಾಗಾಗಿ ಅದರ ಬಗ್ಗೆ ಸರಿಯಾದ ದಾಖಲೆ ಆಗಲಿಲ್ಲ. ಅದೇನೇ ಇರಲಿ, ನಾಗಿನ್ ಚಿತ್ರದ ಯಶಸ್ಸಿಗೆ ಕಾರಣವಾದ ಮತ್ತು ಮುಂದೆ ಭಾರತೀಯ ಚಿತ್ರ ಸಂಗೀತದಲ್ಲಿ ಶಾಶ್ವತವಾದ ಸ್ಥಾನ ಪಡೆದ ಈ ಪುಂಗಿನಾದದ ಸೃಷ್ಟಿಯ ಮೂಲ ಕರ್ತೃ ಲೂಸಿಲ ಪಖೆಕೋ ಎಂಬುದು ರುಜುವಾತಾಯಿತು. ಭಾರತೀಯ ಚಿತ್ರ ಸಂಗೀತವು ಶ್ರೀಮಂತವಾಗಲು ಇಂಥ ಅಭಿಜಾತ ಮತ್ತು ಅನಾಮಧೇಯ ಪ್ರತಿಭಾವಂತರ ಕಾಣಿಕೆ ದೊಡ್ಡದು. ಅಂಥವರ ಪ್ರತಿನಿಧಿಯಾಗಿ ಲೂಸಿಲ ಪಖೆಕೋ ಅವರಿಗೆ ಶರಣು ಹೇಳೋಣ.
ನಾಗಿನ್ ಚಿತ್ರದ, ಪುಂಗೀನಾದದ ಸ್ವರಗತಿಗಳು ತುಂಬಿರುವ, ಮನ್ ಡೋಲೆ.... ಹಾಡಿಗೆ ಎಷ್ಟೊಂದು ಪ್ರತಿಭಾವಂತರು ದುಡಿದಿದ್ದಾರೆ ಎಂದರೆ ಅದೊಂದು ದಾಖಲೆಯೆಂದು ಕಾಣುತ್ತದೆ. ಸಂಗೀತ ನಿರ್ದೇಶಕರಾಗಿ ಹೇಮಂತಕುಮಾರ್ ಅಂಥ ದಿಗ್ಗಜರಿದ್ದರು. ಅವರ ಸಹಾಯಕರಾಗಿದ್ದ ರವಿ ಅವರು ಹಾರ್ಮೋನಿಯಂ ನುಡಿಸಿದರೆ, ಕಲ್ಯಾಣ್ ಜೀ ಅವರು ಕ್ಲಾವಯಲಿನ್ ನುಡಿಸಿದ್ದರು. ಲಕ್ಷ್ಮೀಕಾಂತ್ ಅವರು ತಬಲಾದಲ್ಲಿ ಸಾತ್ ನೀಡಿದರೆ, ಅದರ ಪುಂಗೀನಾದ ಸೃಷ್ಟಿಸಿದ ಲೂಸಿಲ ಪಖೆಕೋ ಪಿಯಾನೋ ಸ್ವರವನ್ನು ಸೇರಿಸಿದ್ದರು. ಈ ಪಟ್ಟಿಯಲ್ಲಿರುವ ಎಲ್ಲ ವ್ಯಕ್ತಿಗಳು ಭಾರತೀಯ ಪ್ರೇಕ್ಷಕರಿಗೆ ಪರಿಚಿತರು, ಲೂಸಿಲ ಪಖೆಕೋ ಅವರನ್ನು ಬಿಟ್ಟು. ಆದರೂ ಲೂಸಿಲ ಅವರ ಕಾಣಿಕೆ ಅರವತ್ತು ವರ್ಷಗಳ ನಂತರವಾದರೂ ದಾಖಲಾಗುತ್ತಿರುವುದು ಒಂದು ಅಚ್ಚರಿಯೇ, ನಾಗಿನ್‌ನ ಟ್ಯೂನ್‌ನಂತೆ!
 ಈ ಚಿತ್ರದಲ್ಲಿ ಬಳಸಿದ ಬೀನ್ ಅಥವಾ ಪುಂಗಿಯ ನಾದ ಭಾರತೀಯ ಚಿತ್ರರಂಗದಲ್ಲಿ ಹಾವುಗಳ ದೃಶ್ಯ ಮತ್ತು ಸರ್ಪನೃತ್ಯಗಳಿಗೆ ಎಂದೆಂದಿಗೂ ಬದಲಿಸಲಾಗದ ಟ್ಯೂನ್ ನೀಡಿತು. ಇದು ಎಲ್ಲ ಭಾಷೆಗಳ ಚಲನಚಿತ್ರಗಳಲ್ಲೂ ಬಳಕೆಯಾಗುತ್ತಿರುವ ಟ್ಯೂನ್. ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಅವರು ನಾಗರಹಾವು ಚಿತ್ರದ ಥೀಮ್ ಸಂಗೀತವನ್ನು ಭಿನ್ನವಾಗಿ ಸಂಯೋಜಿಸಲು ಯತ್ನಿಸಿದ್ದಾರೆ. ಆದರೂ ಮೂಲ ನಾಗಿನ್‌ನ ಬೀನ್ ಸಂಗೀತದ ಛಾಯೆಯಿಂದ ಅವರಿಗು ಸಹ ಬಿಡಿಸಿಕೊಳ್ಳಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75