ಓ ಮೆಣಸೇ…

Update: 2019-06-23 18:30 GMT

ಉಷ್ಟ್ರಾಸನ ಅಭ್ಯಾಸ ಮಾಡುವುದರಿಂದ ಬೆನ್ನು, ಭುಜ ಸದೃಢವಾಗುತ್ತದೆ - ನರೇಂದ್ರ ಮೋದಿ, ಪ್ರಧಾನಿ.
 ಬೆಲೆ ಏರಿಕೆಯ ಭಾರ ಹೊರಲು ಜನರಿಗೆ ಉಷ್ಟ್ರಾಸನವೇ ಗತಿ.

---------------------
ಪ್ರಧಾನಿ ಮೋದಿ ಸುಗ್ರೀವಾಜ್ಞೆ ಮೂಲಕ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮುಂದಾದರೆ ಅವರನ್ನು ಯಾರೂ ತಡೆಯಲು ಸಾಧ್ಯವಿಲ್ಲ - ಉದ್ಧವಠಾಕ್ರೆ, ಶಿವಸೇನಾ ವರಿಷ್ಠ.
ಸುಗ್ರೀವಾಜ್ಞೆಯ ಮೂಲಕ ಸಂವಿಧಾನವನ್ನು ಕೆಡವುವ ಸಾಧ್ಯತೆಯ ಬಗ್ಗೆ ಮೋದಿ ಯೋಚಿಸುತ್ತಿದ್ದಾರೆ.

---------------------

ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ನೀಡಿರುವ ರಾಜೀನಾಮೆಯನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ - ಎಚ್.ಡಿ ದೇವೇಗೌಡ, ಜೆಡಿಎಸ್ ವರಿಷ್ಠ.
  ಅಂದರೆ ಅವರಿಗೆ ಸಚಿವ ಸ್ಥಾನ ನೀಡುವ ಪ್ರಶ್ನೆಯೇ ಇಲ್ಲ ಎಂಬ ಪರೋಕ್ಷ ಹೇಳಿಕೆಯೇ?
---------------------
 ಕಾಂಗ್ರೆಸ್‌ಗೆ ಮಹತ್ವದ ಸರ್ಜರಿಯೊಂದು ಆಗಬೇಕಿದೆ - ವೀರಪ್ಪ ಮೊಯ್ಲಿ, ಮಾಜಿ ಸಂಸದ.

ಹೌದು, ತಮ್ಮಂತಹ ಹಿರಿಯರಿಗೆ ಪಕ್ಷದಲ್ಲಿ ವಿಶ್ರಾಂತಿ ನೀಡುವ ಕ್ರಾಂತಿಕಾರಿ ಸರ್ಜರಿ.

---------------------
  
ಭಾರತ ಸನಾತನ ಧರ್ಮದ ಪ್ರತಿಯೊಂದು ವಿದ್ಯೆಯೂ ಪಾಶ್ಚಿಮಾತ್ಯರ ದಾಳಿಯಿಂದ ನಲುಗಿದೆ - ರಾಘವೇಶ್ವರ ಭಾರತಿ ಸ್ವಾಮೀಜಿ, ರಾಮ ಚಂದ್ರಾಪುರ ಮಠ.
ಶೃಂಗಾರವೂ ಒಂದು ವಿದ್ಯೆಯೇ?
---------------------
  
ಪಾಕಿಸ್ತಾನದ ಮೇಲೆ ಟೀಮ್ ಇಂಡಿಯಾದಿಂದಲೂ ಮತ್ತೊಂದು ಸ್ಟ್ರೈಕ್ ನಡೆದಿದೆ. ಫಲಿತಾಂಶ ಮಾತ್ರ ಅದೇ - ಅಮಿತ್ ಶಾ, ಕೇಂದ್ರ ಸಚಿವ
  ಬಿಹಾರದಲ್ಲಿ ಮಕ್ಕಳ ಮಾರಣ ಹೋಮದ ವಿರುದ್ಧ ಒಂದು ಸ್ಟ್ರೈಕ್ ನಡೆಸಬಾರದೇ?
---------------------
  
ನನ್ನ ತಂದೆ ಯಡಿಯೂರಪ್ಪ ನಮಗೋಸ್ಕರ ಬದುಕುವುದಕ್ಕಿಂತ ಸಮಾಜಕ್ಕಾಗಿ ಬದುಕಬೇಕೆಂದು ಹೇಳಿದ್ದಾರೆ - ಬಿ.ವೈ. ವಿಜಯೇಂದ್ರ. ಬಿಜೆಪಿ ಯುವ ಮೋರ್ಚಾ ಪ್ರ. ಕಾರ್ಯದರ್ಶಿ.
ಸ್ವ ಮಜಾಕ್ಕಾಗಿ ಎಂದು ಹೇಳಿರಬೇಕು, ಇನ್ನೊಮ್ಮೆ ಕೇಳಿಕೊಳ್ಳಿ.

---------------------
  
ಹಿರಣ್ಯಕಶಿಪು ಮತ್ತು ಪ್ರಹ್ಲಾದರ ನಡುವೆ ವಿವಾದ ಉಂಟಾಗಿದ್ದೇ ಶಿಕ್ಷಣ ನೀತಿಗಾಗಿ - ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ.
ಹೌದಂತೆ. ಪ್ರಹ್ಲಾದನದು ಸಂಸ್ಕೃತ ಮೀಡಿಯಂ, ಹಿರಣ್ಯ ಕಶಿಪುವಿನದ್ದು ದ್ರಾವಿಡ ಮೀಡಿಯಂ.
---------------------
  ಮುಖ್ಯಮಂತ್ರಿ ಕುಮಾರಸ್ವಾಮಿ ರಾಜಕೀಯ ನಿವೃತ್ತಿ ಪ್ರಕಟಿಸಿ ಸಿನೆಮಾ ನಿರ್ಮಾಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿ
- ಚಂದ್ರಶೇಖರ ಪಾಟೀಲ, ಸಾಹಿತಿ
   
ಕಣ್ಣೀರಿನ ಚಿತ್ರಗಳು ಸಾಲು ಸಾಲು ಹೊರಬರಬಹುದು.

---------------------
  ನಾನು ಗರ್ಭಿಣಿ ಆಗಿದ್ದಾಗ ಯೋಗ ಮಾಡಿದ್ದರ ಪರಿಣಾಮ ಹೆರಿಗೆಯ ನಂತರ ಮೂರೇ ತಿಂಗಳಲ್ಲಿ ಕೆಲಸಕ್ಕೆ ಮರಳಿದೆ
- ಲಾರಾ ದತ್ತಾ, ಮಾಜಿ ವಿಶ್ವ ಸುಂದರಿ
   
ಯೋಗ ಮಾಡಿದ್ದರಿಂದಲೇ ನಾನು ಗರ್ಭಿಣಿಯಾದೆ ಎಂದು ಹೇಳಲಿಲ್ಲ ಪುಣ್ಯ.

---------------------
  ಉಪ್ಪು ತಿಂದವರೆಲ್ಲ ನೀರು ಕುಡಿದಿದ್ದಾರೆಯೇ ?
- ರೋಷನ್ ಬೇಗ್, ಶಾಸಕ   
ಈಗಷ್ಟೇ ಕುಡಿಯುತ್ತಿದ್ದಾರೆ.

---------------------
  ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿದ ಜನ ‘ನಮ್ಮ ನಿರ್ಧಾರ ಸರಿಯಲ್ಲ’ ಎಂದು ಬೇಸರ ಮಾಡಿಕೊಳ್ಳುವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇವೆ
- ಕುಮಾರಸ್ವಾಮಿ, ಮುಖ್ಯಮಂತ್ರಿ
   
‘ನಮ್ಮ ನಿರ್ಧಾರ ಸರಿ ಇಲ್ಲ’ ಎಂದು ಕಾಂಗ್ರೆಸ್‌ನವರು ಹಣೆ ಚಚ್ಚಿಕೊಳ್ಳುವಂತಾಗಿದೆ. 

---------------------
  ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸದರು ಕಡ್ಡಾಯವಾಗಿ ಹಿಂದಿ ಕಲಿಯಬೇಕು
- ಅಮಿತ್ ಶಾ, ಕೇಂದ್ರ ಸಚಿವ
  ನೀವೇಕೆ ಕನ್ನಡ ಕಲಿಯಬಾರದು?
---------------------
  ಮೈತ್ರಿ ಸರಕಾರ ನುಗ್ಗೆ ಮರದ ರೀತಿ ಟೊಳ್ಳಾಗಿದೆ
- ಆರ್.ಅಶೋಕ್, ಶಾಸಕ
 ಸದಾ ನುಗ್ಗೇ ಮರದ ಬಗ್ಗೆ ಚಿಂತೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

---------------------
  ಅಭಿವೃದ್ಧಿಗೆ ವೇಗ ನೀಡುವುದೇ ಒಂದು ದೇಶ ಒಂದೇ ಚುನಾವಣೆ ಹಿಂದಿನ ಉದ್ದೇಶ
- ರಾಮನಾಥ ಕೋವಿಂದ್, ರಾಷ್ಟ್ರಪತಿ
   ಅತಿ ವೇಗ ಅಪಘಾತಕ್ಕೆ ಕಾರಣ.

--------------------- 
ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆಯಲ್ಲಿ ನಾನು ಮೂಗು ತೂರಿಸಲಾರೆ - ರಾಹುಲ್‌ಗಾಂಧಿ, ಕಾಂಗ್ರೆಸ್ ಅಧ್ಯಕ್ಷ
ಹಸ್ತ ತೂರಿಸಿದರೆ ಆಯಿತಪ್ಪ.

---------------------
  
ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯರಿಗೆ ಆ ಸ್ಥಾನದ ಅರ್ಥವೇ ಗೊತ್ತಿಲ್ಲ - ಎಚ್, ವಿಶ್ವನಾಥ್, ಶಾಸಕ
   
ಒಟ್ಟಿನಲ್ಲಿ ಸಿದ್ದರಾಮಯ್ಯರನ್ನು ಬಯ್ಯುವುದಕ್ಕಾಗಿಯೇ ಶಾಸಕರಾದಂತಿದೆ. -

--------------------
   
ರಾಹುಲ್‌ಗಾಂಧಿ ಯೋಗ ಮಾಡದ ಕಾರಣ ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷ ಸೋಲು ಕಂಡಿತು - ಬಾಬಾ ರಾಮ್‌ದೇವ್, ಯೋಗ ಗುರು.
   
ಪಕ್ಷ ಸೋಲುಕಂಡರೂ ಅವರ ಆರೋಗ್ಯ ತುಂಬಾ ಚೆನ್ನಾಗಿದೆ.

---------------------
  
ಮಧ್ಯಂತರ ಚುನಾವಣೆ ನಡೆದರೆ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲುತ್ತದೆ - ಕೆ.ಎಸ್. ಈಶ್ವರಪ್ಪ, ಶಾಸಕ
  ಮಧ್ಯಂತರ ಚುನಾವಣೆಗೆ ಅವಕಾಶ ಕೊಡುವುದಿಲ್ಲ ಎಂಬ ಯಡಿಯೂರಪ್ಪರ ಹೇಳಿಕೆಗೆ ಈ ರೀತಿಯ ಪ್ರತಿಕ್ರಿಯೆಯೇ?
---------------------
  ನಾನು ಮುಖ್ಯಮಂತ್ರಿ ಆದ ಮೇಲೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇನೆ
- ಕುಮಾರಸ್ವಾಮಿ ಮುಖ್ಯಮಂತ್ರಿ
  ತಮ್ಮ ಕುಟುಂಬದ ಎಲ್ಲರ ವಿಶ್ವಾಸವನ್ನು ತೆಗೆದುಕೊಂಡರೆ ಸಾಕೇ?
---------------------  
ಯೋಗದಿಂದ ಸಾಮರಸ್ಯವೂ ಸಾಧ್ಯ -ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ ಸದ್ಯಕ್ಕೆ ಯೋಗದ ಹೆಸರಲ್ಲಿ ಸಾಮರಸ್ಯವನ್ನು ಕೆಡಿಸುವ ಪ್ರಯತ್ನವಷ್ಟೇ ನಡೆಯುತ್ತಿದೆ 

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!