ಓ ಮೆಣಸೇ…

Update: 2019-06-30 18:31 GMT

ಬಿಜೆಪಿ ನನ್ನ ಹೆತ್ತ ತಾಯಿಗೆ ಸಮಾನ - ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ
‘ಗೌಡತ್ವ’ದ ಮುಂದೆ ಹೆತ್ತ ತಾಯಿಯೂ ತೃಣ ಸಮಾನ ಅಲ್ಲವೇ?
---------------------

ರಾಜ್ಯ ಸರಕಾರ ನಮ್ಮ ಕೈಯಲ್ಲಿ ಇಲ್ಲ ಎನ್ನುವ ಕೊರಗು ಬಿಜೆಪಿಯ ಪ್ರತಿಯೊಬ್ಬರಲ್ಲಿದೆ - ನಳಿನ್‌ಕುಮಾರ್ ಕಟೀಲು, ಸಂಸದ
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕುರಿತಂತೆಯೂ ಇಲ್ಲಿನ ಬಿಜೆಪಿಯ ಪ್ರತಿಯೊಬ್ಬರಲ್ಲೂ ಅದೇ ಕೊರಗಿದೆ.

---------------------

ಮೈತ್ರಿ ಧರ್ಮದಡಿ ಲೋಕಸಭೆ ಚುನಾವಣೆ ಎದುರಿಸಿದ್ದರಿಂದ ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ನೆಲಕಚ್ಚಬೇಕಾಯಿತು - ಕೆ.ಎಚ್.ಮುನಿಯಪ್ಪ, ಮಾಜಿ ಸಂಸದ
ಒಟ್ಟಿನಲ್ಲಿ ಧರ್ಮಕ್ಕಿದು ಕಾಲವಲ್ಲ.

---------------------
ಬಿಜೆಪಿ ಹರಿಯುತ್ತಿರುವ ನದಿಯಂತೆ ಶುಭ್ರವಾಗಿದೆ - ಶೋಭಾ ಕರಂದ್ಲಾಜೆ, ಸಂಸದೆ
  ಗಂಗಾನದಿಯನ್ನು ಶುಚಿಗೊಳಿಸಲು ಕೋಟಿಗಟ್ಟಲೆ ಸುರಿಯುತ್ತಿರುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ?

---------------------

ಮೈತ್ರಿ ನಂಬಿಯೇ ನಾವೆಲ್ಲ ಲೋಕಸಭಾ ಚುನಾವಣೆಯಲ್ಲಿ ಕೆಟ್ಟು ಹೋದೆವು - ವೀರಪ್ಪಮೊಯ್ಲಿ, ಮಾಜಿ ಸಂಸದ
ನಿಮ್ಮಂತಹ ಹಿರಿಯರನ್ನು ನಂಬಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಕೆಟ್ಟು ಕೂತಿದೆ.

---------------------
ಕಾಂಗ್ರೆಸ್ ನನ್ನ ಬಾಯಿಗೆ ಬೀಗ ಹಾಕಿದೆ - ಡಿ.ಕೆ.ಶಿವಕುಮಾರ್, ಸಚಿವ
  ಬೀಗದ ಕೈ ಸಿದ್ದರಾಮಯ್ಯರ ಜೇಬಿನಲ್ಲಿದೆಯೇ?

---------------------

ಗ್ರಾಮ ವಾಸ್ತವ್ಯದ ಕ್ರೆಡಿಟ್ ಕೇವಲ ಜೆಡಿಎಸ್‌ಗೆ ಮಾತ್ರವಲ್ಲ್ಲ, ಸಮ್ಮಿಶ್ರ ಸರಕಾರಕ್ಕೆ ಸೇರಿದ್ದು - ಡಾ.ಜಿ.ಪರಮೇಶ್ವರ್, ಉಪಮುಖ್ಯಮಂತ್ರಿ
ವಾಸ್ತವ್ಯ ಅವರದು, ಕ್ರೆಡಿಟ್ ನಿಮ್ಮದೇ?

---------------------

ಇರಾನ್ ಯಾವತ್ತೂ ಪರಮಾಣು ಅಸ್ತ್ರವನ್ನು ಪಡೆಯಲು ಸಾಧ್ಯವಿಲ್ಲ - ಡೊನಾಲ್ಡ್ ಟ್ರಂಪ್, ಅಮೆರಿಕ ಪ್ರಧಾನಿ
ನಿಮ್ಮಿಂದ ಪಡೆಯುವ ಉದ್ದೇಶವೂ ಅವರಿಗಿಲ್ಲ.

---------------------

ಸಮಾಜದಲ್ಲಿ ಬದಲಾವಣೆ ತರಲು ಶಿಕ್ಷಕನಿಂದ ಮಾತ್ರ ಸಾಧ್ಯ - ಕಲ್ಲಡ್ಕ ಪ್ರಭಾಕರಭಟ್, ಆರೆಸ್ಸೆಸ್ ನಾಯಕ
ತಮ್ಮಂಥವರನ್ನು ಸೂಕ್ತ ಸಂದರ್ಭದಲ್ಲಿ ಬಂಧಿಸಿ ಜೈಲಿಗೆ ತಳ್ಳುವ ಮೂಲಕ ಪೊಲೀಸರಿಗೂ ಆ ಬದಲಾವಣೆ ತರಲು ಸಾಧ್ಯವಿದೆ.

---------------------

ಸಮಾಜವಾದಿ ಪಕ್ಷ ದಲಿತ ವಿರೋಧಿ - ಮಾಯಾವತಿ, ಬಿಎಸ್ಪಿ ನಾಯಕಿ
  ದಲಿತ ವಿರೋಧಿ ಎನ್ನುವ ಕಾರಣಕ್ಕಾಗಿ ಚುನಾವಣೆಯಲ್ಲಿ ಅವರೊಂದಿಗೆ ಮೈತ್ರಿ ಮಾಡಿಕೊಂಡಿರಾ?

---------------------
ವಿಂಗ್ ಕಮಾಂಡರ್ ಅಭಿನಂದನ್ ಮೀಸೆಯನ್ನು ರಾಷ್ಟ್ರೀಯ ಮೀಸೆಯಾಗಿ ಘೋಷಿಸಿ - ಅಧೀರ್‌ರಂಜನ್‌ಚೌದರಿ, ಕಾಂಗ್ರೆಸ್ ನಾಯಕ
ಆ ಮೀಸೆಯನ್ನು ಕಂಡಾಕ್ಷಣ ಭಾರತೀಯರು ಎದ್ದು ನಿಲ್ಲಬೇಕೇ?

---------------------
ರಾಹುಲ್‌ಗಾಂಧಿ ಇಲ್ಲದ ಕಾಂಗ್ರೆಸ್‌ನ್ನು ಊಹಿಸಲೂ ಸಾಧ್ಯವಿಲ್ಲ - ಕಮಲ್‌ನಾಥ್, ಮಧ್ಯಪ್ರದೇಶ ಮುಖ್ಯಮಂತ್ರಿ
ಒಟ್ಟಿನಲ್ಲಿ ಗಾಂಧಿ ಹೆಸರಿಲ್ಲದೆ ನಿಮಗೆ ರಾಜಕೀಯ ನಡೆಸುವುದು ಸಾಧ್ಯವಿಲ್ಲ ಎನ್ನಿ.

---------------------

ಕರಾವಳಿ ಭಾಗದಲ್ಲಿ ಗೋಹತ್ಯೆ, ಅಕ್ರಮ ಗೋಸಾಗಾಟದಿಂದ ಬಹಳಷ್ಟು ಸಮಸ್ಯೆಯಾಗುತ್ತಿದೆ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ಪ್ರತಿಪಕ್ಷ ನಾಯಕ
ಸದ್ಯಕ್ಕೆ ಅದರ ನೇತೃತ್ವವನ್ನು ಸಂಘಪರಿವಾರ ವಹಿಸಿ ಸಮಸ್ಯೆಗಳನ್ನು ನಿವಾರಿಸಿದೆ.

---------------------

ಯಾವುದೇ ಪಕ್ಷದವರಾಗಿರಬಹುದು ಸಮುದಾಯ(ವಾಲ್ಮೀಕಿ)ದ ವಿಷಯ ಬಂದಾಗ ನಾವೆಲ್ಲಾ ಒಂದೇ - ಶ್ರೀರಾಮುಲು, ಶಾಸಕ
ವಾಲ್ಮೀಕಿಗಾಗಿ ಒಂದಾದರೆ, ರಾಮನ ಹೆಸರಲ್ಲಿ ಒಂದಾದವರ ಕತೆ ಏನು?

---------------------

ಪ್ರಜಾತಂತ್ರಕ್ಕೆ ವಿರುದ್ಧವಾದ ಯಾವ ರಾಜಕೀಯ ಸಿದ್ಧಾಂತವೂ ಶಾಶ್ವತವಾಗಿ ಉಳಿಯುವುದಿಲ್ಲ - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಪ್ರಧಾನಿ ಮೋದಿಗೆ ಈ ಮೂಲಕ ಎಚ್ಚರಿಕೆಯೇ?

---------------------

ಕಳೆದ ಐದು ವರ್ಷಗಳಿಂದ ದೇಶದಲ್ಲಿ ಸೂಪರ್ ‘ಎಮರ್ಜೆನ್ಸಿ’ ಇದೆ - ಮಮತಾ ಬ್ಯಾನರ್ಜಿ, ಪ.ಬಂಗಾಳ ಮುಖ್ಯಮಂತ್ರಿ
ಇವಿಎಂ ಮತಯಂತ್ರ ಘೋಷಿಸಿದ ಎಮರ್ಜೆನ್ಸಿ ಅದು.

---------------------

ಭಾರತದ ಅಲ್ಪಸಂಖ್ಯಾತರು ಮೋದಿ ಸರಕಾರದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿದ್ದಾರೆ - ಕೆ.ಜೆ.ಅಲ್ಫೋನ್ಸ್, ರಾಜ್ಯಸಭೆ ಸದಸ್ಯ
ಶೇ. 2ರಷ್ಟಿರುವ ಜಾತಿಯ ಕುರಿತಂತೆ ಈ ಹೇಳಿಕೆ ನೀಡುತ್ತಿರುವುದಾದರೆ ನಿಜ.

---------------------

ತಂದೆ ದೇವೇಗೌಡರ ಮಾತು ಕೇಳಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಳಾಗುತ್ತಿದ್ದಾರೆ - ಉಮೇಶ್‌ಕತ್ತಿ, ಶಾಸಕ
ಮಗನ ಮಾತು ಮೀರಿ ದೇವೇಗೌಡರು ಹಾಳಾದರು ಎನ್ನುವ ಮಾತೂ ಇದೆ.

---------------------

ವ್ಯವಸ್ಥೆಯ ಮೇಲಿನ ಅಪನಂಬಿಕೆಯಿಂದಾಗಿಯೇ ಕಾಂಗ್ರೆಸ್ ಇಂದು ಜನರ ನಂಬಿಕೆ ಕಳೆದುಕೊಂಡಿದೆ - ನರೇಂದ್ರ ಮೋದಿ, ಪ್ರಧಾನಿ
  ಇವಿಎಂ ಮತಯಂತ್ರವೇ ನಿಮ್ಮ ದೃಷ್ಟಿಯಲ್ಲಿ ‘ವ್ಯವಸ್ಥೆ’ಯೇ?

---------------------

ಡೊನಾಲ್ಡ್ ಟ್ರಂಪ್ ನೈತಿಕ ಸಿದ್ಧಾಂತ ಇಲ್ಲದ ಮನುಷ್ಯ -ದಲಾಯಿಲಾಮಾ, ಟಿಬೆಟ್ ಆಧ್ಯಾತ್ಮಿಕ ನಾಯಕ
ಅಂತಹದೊಂದು ಸಿದ್ಧಾಂತ ಅಮೆರಿಕಕ್ಕೆ ಈ ಹಿಂದೆಯೂ ಇದ್ದಿರಲಿಲ್ಲ.

---------------------

ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಆಮೇಲೆ ನಾಯಿ ಕೂಡಾ ಅವರನ್ನು ಮೂಸಲ್ಲ - ಈಶ್ವರಪ್ಪ, ಶಾಸಕ
  ನಿಮ್ಮನ್ನು ಈಗ ನಾಯಿ ಮೂಸುತ್ತಿದೆಯೇ?
---------------------

Writer - ಪಿ.ಎ.ರೈ

contributor

Editor - ಪಿ.ಎ.ರೈ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!