ನರಸಿಂಹರಾಜು: ಅನುಕರಿಸಲಾಗದ ಅಮರ ನಟ

Update: 2019-07-13 18:43 GMT

ಜುಲೈ ತಿಂಗಳಿನಲ್ಲಿ ಹುಟ್ಟಿ ಜುಲೈ ತಿಂಗಳಿನಲ್ಲಿಯೇ ಇಹಲೋಕ ತ್ಯಜಿಸಿದ ಕನ್ನಡದ ಸರ್ವಶ್ರೇಷ್ಠ ಹಾಸ್ಯನಟ ಟಿ. ಆರ್. ನರಸಿಂಹರಾಜು ಅವರು ಬದುಕಿದ್ದರೆ ಈ ತಿಂಗಳು 97ನೇ ವರ್ಷಕ್ಕೆ ಕಾಲಿಡುತ್ತಿದ್ದರು. ಕನ್ನಡ ಚಿತ್ರರಂಗಕ್ಕೆ ಆರಂಭದಲ್ಲಿ ಒಳಬಲ ತಂದುಕೊಟ್ಟು ಇಪ್ಪತ್ತೈದು ವರ್ಷಗಳ ಚಲನಚಿತ್ರರಂಗದ ಬದುಕಿನಲ್ಲಿ 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡಿಗರನ್ನು ರಂಜಿಸಿದ ಯುಗದ ನಗುವಿನ ನೆನಪಿನ ಲೇಖನ.

ಆತ ತೆರೆಯ ಮೇಲೆ ಕಾಣಿಸಿಕೊಂಡ ತಕ್ಷಣವೇ ಪ್ರೇಕ್ಷಕನ ಮುಖದ ಸ್ನಾಯುಗಳು ಅಪ್ರಜ್ಞಾಪೂರ್ವಕವಾಗಿ ಸಡಿಲವಾಗುತ್ತವೆ. ತುಟಿಗಳು ಬಿರಿಯುತ್ತವೆೆ. ಅವರವರ ಹಿನ್ನೆಲೆ, ಪ್ರೇರಣೆ, ಗ್ರಹಿಕೆಯ ಸಾಮರ್ಥ್ಯಕ್ಕನುಗುಣವಾಗಿ ನಗು ಮುಖದಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಅವರಿಗೆ ‘ಹಾಸ್ಯ ಚಕ್ರವರ್ತಿ’ ಎಂದು ರಸಿಕರು ನೀಡಿದ ಬಿರುದು ಒಪ್ಪುತ್ತದೆ. ಆದರೆ ಕನ್ನಡ ಚಿತ್ರರಂಗದ ಪಾಲಿಗೆ ಅವರು ಒಂದು ಯುಗದ ಮಾಸದ ನಗು. ಅವರೇ ತಿಪಟೂರು ರಾಮರಾಜ್ ನರಸಿಂಹರಾಜು.
ಟಿ.ಆರ್. ನರಸಿಂಹರಾಜು ಕನ್ನಡಿಗರ ಪಾಲಿಗೆ ಒಂದು ಹೆಸರಲ್ಲ. ಒಬ್ಬ ನಟನಲ್ಲ. ಕನ್ನಡಿಗರು ತಮ್ಮ ಬಂಧು ಬಳಗದ ಸದಸ್ಯನೆನ್ನುವ ಮಟ್ಟದಲ್ಲಿ ಅವರನ್ನು ಆರಾಧಿಸಿದರು. ಪೌರಾಣಿಕ, ಐತಿಹಾಸಿಕ, ಅತಿಮಾನುಷ, ಜಾನಪದ ಕಥಾವಸ್ತುವಿನ ಚಿತ್ರಗಳ ಪಾತ್ರವೇ ಇರಲಿ, ಪ್ರೇಕ್ಷಕರ ಪಾಲಿಗೆ ತಾವು ರಿಲೇಟ್ ಮಾಡಿಕೊಳ್ಳಬಹುದಾದ ತಮ್ಮ ಸಮುದಾಯದ ನಡುವೆ ಸಹಜವಾಗಿ ಬದುಕುವ ವ್ಯಕ್ತಿಯಂತೆ ಕಂಡರು. ತಮ್ಮ ಸಂಕಟಕ್ಕೆ ಒದಗಿ ಬರುವ ನೆಂಟನಂತೆ ಭಾವಿಸಿದರು. ಅವರು ಸುರಿಸಿದ ನಗೆ ಮಲ್ಲಿಗೆಯ ಚೆಲುವಿಗೆ ಸೋತರು. ಅದರ ಪರಿಮಳಕ್ಕೆ ಪರವಶರಾದರು. ತಮ್ಮ ಭಾವಭಿತ್ತಿಯಲ್ಲಿ ಅವರ ಬಿಂಬವೊಂದನ್ನು ಶಾಶ್ವತವಾಗಿ ಚಿತ್ರಿಸಿ ನಿಲ್ಲಿಸಿಕೊಂಡರು.
ಕನ್ನಡ ಚಿತ್ರರಂಗದ ಪಾಲಿಗೆ ನರಸಿಂಹರಾಜು ಅವರು ವಹಿಸಿದ ಪಾತ್ರಗಳು ಕೇವಲ ಹಾಸ್ಯ-ರಂಜನೆಗಾಗಿಯೇ ಹೆಣೆದವುಗಳಲ್ಲ. ಸಂಸ್ಕೃತ ಕಾವ್ಯಮೀಮಾಂಸೆಯ ಪ್ರಕಾರ ಹಾಸ್ಯ ನವರಸಗಳಲ್ಲಿ ಒಂದೆನಿಸಿದ ಹಾಸ್ಯ ಸಿನೆಮಾದಲ್ಲಿ ಕೇವಲ ರಂಜನೆಗಾಗಿಯೇ ಹೆಣೆಯಲಾದ ಸೂತ್ರವಲ್ಲ; ಹಾಸ್ಯ ಪಾತ್ರಗಳಿಗೆ ನಗುತರಿಸುವ ಉದ್ದೇಶ ಸಾಧನೆಯ ಆಚೆಗಿನ ಸಾಮಾಜಿಕ ಮತ್ತು ಸಾಮುದಾಯಿಕ ಹೊಣೆಗಾರಿಕೆಗಳನ್ನು ಸಿನೆಮಾ ಸಮರ್ಥವಾಗಿ ಬಿಂಬಿಸಿತು. ಹಾಸ್ಯ ಕೇವಲ ಚಿತ್ತವೃತ್ತಿಯ ಅಭಿವ್ಯಕ್ತಿ ಮಾತ್ರವಲ್ಲ. ಸಿನೆಮಾದ ಕಥೆಯ ಆಶಯಗಳನ್ನು ಸಮರ್ಥವಾಗಿ ಬಿಂಬಿಸುವ ಸಾಧನವೆಂಬುದು ಕೆಲವೇ ಪರಿಣತ ಹಾಸ್ಯ ನಟರಿಂದ ಸಾಧ್ಯವಾಯಿತು. ಚಾರ್ಲಿ ಚಾಪ್ಲಿನ್‌ಗಿಂತ ಶ್ರೇಷ್ಠ ಉದಾಹರಣೆ ಮತ್ತೊಂದಿಲ್ಲ. ಹಾಗೆಯೇ ಕನ್ನಡದ ಸಂದರ್ಭದಲ್ಲಿ ಹಾಸ್ಯಕ್ಕೆ ಸ್ಥಳೀಯ ಸಾಂಸ್ಕೃತಿಕ ಲೇಪನದ ಜೊತೆಗೆ ಸಮಾಜವನ್ನು ತೀಕ್ಷ್ಣ ವಿಮರ್ಶೆಗೊಳಪಡಿಸುವ ಪಾತ್ರಗಳಿಗೆ ವಿಶಿಷ್ಟವಾದ ಅಭಿನಯದಿಂದ ನರಸಿಂಹರಾಜು ಅವರು ಜೀವ ತುಂಬಿದರು. ಹಾಗಾಗಿ ಅವರ ಬಹುತೇಕ ಪಾತ್ರಗಳು ಇಂದಿಗೂ ಕನ್ನಡ ಸಂಸ್ಕೃತಿಯನ್ನು ಬಿಂಬಿಸುವ ಸಾಧನಗಳಂತೆ ಕಾಣುತ್ತದೆ. ಹಾಸ್ಯಕ್ಕೆ ಒಂದು ತಾಂತ್ರಿಕ ಚೌಕಟ್ಟನ್ನು ತಂದುಕೊಟ್ಟ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಹೇಳಿಕೊಟ್ಟ ಕಾರಣಕ್ಕಾಗಿ ನರಸಿಂಹರಾಜು ಅವರು ಮುಖ್ಯರಾಗುತ್ತಾರೆ. ನರಸಿಂಹರಾಜು ಅವರು ನಟಿಸಿದ ಚಿತ್ರಗಳಲ್ಲಿ ಹಾಸ್ಯ ಸನ್ನಿವೇಶಗಳು ಚಿತ್ರ ನಿರೂಪಣೆಗೆ ಒದಗಿಸುವ ಕಾಮಿಕ್ ರಿಲೀಫ್ ಆಗದೆ ಬಹುತೇಕ ಚಿತ್ರಗಳಲ್ಲಿ ಚಿತ್ರದ ಆಶಯದ ಜೊತೆಯಲ್ಲಿಯೇ ಹೆಣೆದುಕೊಂಡು ಬದುಕಿಗೆ ಭಾಷ್ಯ ಬರೆಯುವ ರೀತಿಯಲ್ಲಿ ಅಡಕವಾಗಿರುವುದರಿಂದ ಅಧ್ಯಯನಕ್ಕೆ ಯೋಗ್ಯವಾಗಿದೆ.


ಚಲನಚಿತ್ರರಂಗಕ್ಕೆ ನರಸಿಂಹರಾಜು ಅವರ ಆಗಮನವೇ ಒಂದು ಚಾರಿತ್ರಿಕ ಸಂದರ್ಭದ ಸೃಷ್ಟಿಗೆ ನಾಂದಿಯಾಯಿತು. 1954ನೇ ಇಸವಿ ಕನ್ನಡ ಚಲನಚಿತ್ರರಂಗಕ್ಕೆ ಸಂಬಂಧಿಸಿದಂತೆ ಒಂದು ವಿಶಿಷ್ಟ ವರ್ಷ. ಆ ವರ್ಷ ಬಿಡುಗಡೆಯಾಗಿ ಸಂಚಲನ ಮೂಡಿಸಿದ ‘ಬೇಡರ ಕಣ್ಣಪ್ಪ’ಚಿತ್ರದ ಮೂಲಕ ಇಬ್ಬರು ಮಹಾನ್ ನಟರ ಆಗಮನವಾಯಿತು. ಒಬ್ಬರು ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಬೆಳೆದ ಡಾ. ರಾಜಕುಮಾರ್. ಮತ್ತೊಬ್ಬರು ಕನ್ನಡ ಚಿತ್ರರಂಗದ ಮನರಂಜನೆಯ ದಿಗಂತವನ್ನು ವಿಸ್ತರಿಸಿದ ಟಿ. ಆರ್. ನರಸಿಂಹರಾಜು. ಆ ಚಿತ್ರದಲ್ಲಿ ಇಬ್ಬರದೂ ಮುಖ್ಯ ಪಾತ್ರಗಳೇ! ಆ ಚಿತ್ರದ ಯಶಸ್ಸಿನಲ್ಲಿ ಇಬ್ಬರ ಕಾಣಿಕೆಯೂ ದೊಡ್ಡದು. ಈ ಇಬ್ಬರು ರಾಜರು ಜೋಡಿಯಾಗಿ ಎರಡು ದಶಕಗಳಿಗೂ ಅಧಿಕ ಕಾಲ ಕನ್ನಡ ಚಿತ್ರರಂಗವನ್ನು ಮಾತ್ರವಲ್ಲ ಕನ್ನಡ ಪ್ರೇಕ್ಷಕರ ಎದೆಯನ್ನೂ ಆಳಿದರು. ಬೇಡರ ದಿಣ್ಣನಾಗಿ ರಾಜ್, ಎಳೆಯ ಪೂಜಾರಿಯ ಕಾಶಿ ಪಾತ್ರದಲ್ಲಿ ನರಸಿಂಹರಾಜು ಅವರು ಆರಂಭಿಸಿದ ಯಶಸ್ಸು ಅಬಾಧಿತವಾಗಿ ಮುಂದುವರಿದದ್ದು ಕನ್ನಡ ಚಿತ್ರರಂಗದ ಇತಿಹಾಸದ ಒಂದು ಸೋಜಿಗ.
ನರಸಿಂಹರಾಜು ಅವರಿಗೆ ಸಂಬಂಧಿಸಿದಂತೆ, ಅವರು ಕನ್ನಡದ ಹಲವು ಪ್ರಥಮಗಳ ಹರಿಕಾರರು.
ಈಗಾಗಲೇ ಹೇಳಿದಂತೆ ಅವರು ಕನ್ನಡ ಪ್ರೇಕ್ಷಕರು ತಮ್ಮನ್ನು ತಾವು ಅವರ ಜೊತೆಗೆ ರಿಲೇಟ್ ಮಾಡಿಕೊಂಡ ಮೊದಲ ನಟ ಮಾತ್ರವಲ್ಲ; ಕನ್ನಡ ಚಿತ್ರರಂಗದ ಮೊದಲ ಸ್ಟಾರ್ ನಟ. ‘ಬೇಡರ ಕಣ್ಣಪ್ಪ’ಚಿತ್ರದ ನಂತರ ಹಂತ ಹಂತವಾಗಿ ಕನ್ನಡಿಗರ ಹೃದಯದಲ್ಲಿ ಮೊದಲ ಬಾರಿಗೆ ಭದ್ರಸ್ಥಾನ ಪಡೆದ ಅವರು ಅರವತ್ತನೆಯ ದಶಕದಲ್ಲಿ ಎಷ್ಟು ಬೇಡಿಕೆಯ ನಟರಾಗಿದ್ದರೆಂದರೆ, ಅವರು ಭೂಮಿಕೆಯಲ್ಲಿದ್ದರೆ ಅದು ಬಾಕ್ಸ್ ಆಫೀಸ್ ಗ್ಯಾರಂಟಿ ಪತ್ರ ಎಂದೇ ನಿರ್ಮಾಪಕರು ನಂಬಿದ್ದರು. ಅವರ ನಂಬಿಕೆ ಹುಸಿಯಾದದ್ದೂ ಅಪರೂಪ. ತಮ್ಮ ಸಮಕಾಲೀನ ನಟರಿಗಿಂತ ಹೆಚ್ಚಿನ ಬೇಡಿಕೆಯ ನಟರಾಗಿದ್ದರು. ಅವರ ಕಾಲ್‌ಶೀಟ್ ಖಾತ್ರಿಯಾದ ನಂತರವೇ ನಿರ್ಮಾಪಕ-ನಿರ್ದೇಶಕರು ಇತರ ಕಲಾವಿದರು ಆಯ್ಕೆಯಾಗುತ್ತಿದ್ದರು. ಇದಕ್ಕೆ ಅನೇಕ ಸಾಕ್ಷ್ಯಗಳು ಆಗಾಗ್ಗೆ ಪತ್ರಿಕೆಯಲ್ಲಿ, ಸಂದರ್ಶನಗಳಲ್ಲಿ ಪ್ರಕಟವಾಗಿವೆ.
ಈ ಹಿನ್ನೆಲೆಯಿಂದ ನೋಡಿದಾಗ ಕನ್ನಡ ಚಿತ್ರರಂಗದ ಆರ್ಥಿಕ ಕಸುವಿಗೆ ಮೊದಲ ಒತ್ತಾಸೆಯಾಗಿ, ಒಳಬಲವಾಗಿ ನಿಂತವರು ನರಸಿಂಹರಾಜು. ಇದು ಉತ್ಪ್ರೇಕ್ಷೆಯ ಮಾತಂತೂ ಅಲ್ಲ. ಚರಿತ್ರೆಯೇ ಈ ಹೇಳಿಕೆಗೆ ಅನೇಕ ನಿದರ್ಶನಗಳನ್ನು ಒದಗಿಸುತ್ತದೆ. ‘ಬೇಡರ ಕಣ್ಣಪ್ಪ’ (1954) ಬಿಡುಗಡೆಯಾಗುವ ವೇಳೆಗೆ ಕನ್ನಡ ಚಿತ್ರರಂಗ ತನ್ನ ಇಪ್ಪತ್ತು ವರ್ಷಗಳ ಅಸ್ತಿತ್ವದಲ್ಲಿ ನಿರ್ಮಿಸಿದ್ದ ಚಿತ್ರಗಳು ಕೇವಲ 40. ಅದಾದ ಹದಿಮೂರು ವರ್ಷಗಳಲ್ಲಿ ಬಿಡುಗಡೆಯಾದ ‘ನಕ್ಕರೇ ಅದೇ ಸ್ವರ್ಗ’ ಎಂಬ ವಿಶಿಷ್ಟ ಶೀರ್ಷಿಕೆಯ ಚಿತ್ರ ಕನ್ನಡದ 209ನೇ ಚಿತ್ರ. ಅಂದರೆ ಈ ಅವಧಿಯಲ್ಲಿ 169 ಚಿತ್ರಗಳು ಬಿಡುಗಡೆಯಾಗಿದ್ದವು. ಅವುಗಳಲ್ಲಿ ನರಸಿಂಹರಾಜು ಅವರು ನೂರು ಚಿತ್ರಗಳಲ್ಲಿ ನಟಿಸಿದ್ದರು; ಕನ್ನಡಿಗರನ್ನು ನಗಿಸಿದ್ದರು; ಚಿಂತನೆಗೆ ಹಚ್ಚಿದ್ದರು. ಅಂದರೆ ಬಿಡುಗಡೆಯಾದ ಪ್ರತಿ ಹತ್ತು ಚಿತ್ರಗಳಲ್ಲಿ ಆರು ಚಿತ್ರಗಳಲ್ಲಿ ನರಸಿಂಹರಾಜು ಅವರು ನಟಿಸಿದ್ದರು. ಹೀಗಾಗಿ ಅವರು ಕನ್ನಡದ ಮೊದಲ ಸ್ಟಾರ್ ನಟ; ಮೊದಲ ಶತಚಿತ್ರ ನಟ; ಕನ್ನಡ ಚಿತ್ರರಂಗಕ್ಕೆ ಆರ್ಥಿಕ ಒಳಬಲವನ್ನು ಒದಗಿಸಿದ ಮೊದಲ ಕಲಾವಿದ.
ನರಸಿಂಹರಾಜು ಅವರು ಸುದೀರ್ಘಕಾಲ ಹಾಸ್ಯನಟನ ಪಾತ್ರವನ್ನು ಪೋಷಿಸಿ ಜನಪ್ರಿಯತೆ ಉಳಿಸಿಕೊಳ್ಳಲು ಸಾಧ್ಯವಾದ ಕಾರಣಗಳು ಕುತೂಹಲಕಾರಿಯಾಗಿವೆ.


ಒಂದು, ಅವರು ಅಭಿನಯಕ್ಕೆ ತಂದ ವಿವಿಧ ಬಗೆಯ ಲೇಪನಗಳು; ಅನೇಕ ಸ್ವರೂಪದ ಹಾಸ್ಯ ಪಾತ್ರಗಳಿಗೆ ಅವರು ಜನ್ಮ ನೀಡಿದರು. ‘ಬೇಡರ ಕಣ್ಣಪ್ಪ’ಚಿತ್ರದ ದುಷ್ಟ ಪೂಜಾರಿ ಕೈಲಾಸನಾಥ ಶಾಸ್ತ್ರಿಯ ಮಗ ಕಾಶಿಯ ಪಾತ್ರದಲ್ಲಿ ಅಪ್ಪನ ದುಷ್ಟತನದ ವಿರುದ್ಧ ತಿರುಗಿ ಬೀಳುತ್ತಲೇ ಪ್ರೇಕ್ಷಕರು ಹೊಟ್ಟೆ ಹುಣ್ಣಾಗುವಂತೆ ನಗಿಸಿದ ನರಸಿಂಹರಾಜು ಅವರು ತಮ್ಮ ಪಾತ್ರಗಳಿಗೆ ವಿವಿಧ ಆಯಾಮಗಳನ್ನು ನೀಡಿದರು. ‘ಬೇಡರ ಕಣ್ಣಪ್ಪ’ ಚಿತ್ರದ ನಂತರ ಶಂಕರ್ ಸಿಂಗ್ ಅವರ ‘ಮುಟ್ಟಿದ್ದೆಲ್ಲ ಚಿನ್ನ’ ಚಿತ್ರದ ನಾಯಕಪಾತ್ರ ವಹಿಸಿದರೂ ಮುಂದೆ ಅವರು ಪಾತ್ರದ ಅವಧಿಯ ಬಗ್ಗೆ ಚಿಂತಿಸಲಿಲ್ಲ. ಪೌರಾಣಿಕ, ಜಾನಪದ ಮತ್ತು ಐತಿಹಾಸಿಕ ಚಿತ್ರಗಳಲ್ಲಿ ಅವರು ಪ್ರಭುತ್ವವನ್ನು ಗೇಲಿಮಾಡುವ (ವೀರಕೇಸರಿ), ಲೋಭತನವನ್ನು ಅಪಹಾಸ್ಯ ಮಾಡುವ (ಸ್ಕೂಲ್ ಮಾಸ್ಟರ್, ಎಮ್ಮೆ ತಮ್ಮಣ್ಣ ಇತ್ಯಾದಿ), ಸಾಮಾಜಿಕ ಪೊಳ್ಳುತನವನ್ನು ಬಯಲಿಗೆಳೆವ (ಸದಾರಮೆ, ನಾಡಿನ ಭಾಗ್ಯ ಇತ್ಯಾದಿ)- ಹೀಗೆ ಗಂಭೀರವಾದ ವಿಚಾರಗಳಿಗೆ ಹಾಸ್ಯದ ಲೇಪನ ನೀಡಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುವ ರೀತಿಯಲ್ಲಿ ರಂಜಿಸಿದರು.
ನರಸಿಂಹರಾಜು ಅವರು ಯಾವುದೇ ಪಾತ್ರವನ್ನು ಅತ್ಯಂತ ಸಹಜವಾಗಿ ನಿರ್ವಹಿಸುತ್ತಿದ್ದರು. ತಮ್ಮ ಪಾತ್ರದಲ್ಲಿ ನಗೆಯೇ ಪ್ರಧಾನವಾದರೂ ಹಾಸ್ಯದ ಜೊತೆಗೆ ವ್ಯಂಗ್ಯ, ವಿಡಂಬನೆ, ವಿನೋದದಂತಹ ರುಚಿಶುದ್ಧ ಅಭಿವ್ಯಕ್ತಿ ಅವರ ಟ್ರಂಪ್‌ಕಾರ್ಡ್ ಆಗಿತ್ತು. ನಿರ್ವಿಕಾರ ಭಾವದ ಪೆದ್ದು ಮೋರೆಯಡಿಯಲ್ಲಿ ಹಾಸ್ಯದ ಸೆಳಕು ಹಲವು ಚಿತ್ರಗಳಲ್ಲಿ ಕೋರೈಸಿದರೆ, ಅಸಹಾಯಕತೆಯ ಸನ್ನಿವೇಶಗಳಲ್ಲಿ ತೋರುವ ಸಾಹಸಗಳು, ಪೇಚಾಟಗಳು, ನ್ಯಾಯದ ಪರ ನಿಲ್ಲುವ ಸಮಯದಲ್ಲಿ ಎದುರಿಸುವ ಅಪಾಯಗಳನ್ನು ಉಪಾಯದಿಂದ ಗೆಲ್ಲುವ ತಂತ್ರಗಾರಿಕೆಗಳಲ್ಲಿ ಹಾಸ್ಯ ತಾನೇ ತಾನಾಗಿ ಉಕ್ಕಿ ಹರಿಯುತ್ತಿತ್ತು.
ಹಾಸ್ಯ ಎನ್ನುವುದು ಅಶ್ಲೀಲತೆ, ದ್ವಂದ್ವಾರ್ಥ ಸಂಭಾಷಣೆಯ ಗುಂಡಿಯಲ್ಲಿ ಬಿದ್ದು ಒದ್ದಾಡುವ ಯುಗಕ್ಕಿಂತ ಭಿನ್ನವಾದ ಯುಗದಲ್ಲಿ ಜೀವಿಸಿದ್ದ ನರಸಿಂಹರಾಜು ಅವರು ಮಾತುಗಳನ್ನು ಮೀರಿದ ಆಂಗಿಕ ಅಭಿನಯದಲ್ಲಿ ಯಶಸ್ಸು ಕಂಡು, ಒಂದೇ ಬಗೆಯ ಪಾತ್ರಗಳಲ್ಲಿ ಕ್ರಮೇಣ ಆವರಿಸುವ ಏಕತಾನತೆಯನ್ನು ಒಡೆಯುವಲ್ಲಿ ಯಶಸ್ಸು ಕಂಡರು. ಹಾಸ್ಯವು ಬದುಕನ್ನು ಭಿನ್ನವಾದ ವಾರೆನೋಟ ಅಥವಾ ವಕ್ರವಾಗಿ ನೋಡುವ ಒಂದು ಕ್ರಮ. ಅಸಂಗತೆಯಲ್ಲಿ ಸುಸಂಗತ ಅರ್ಥವನ್ನು ಕಟ್ಟಿಕೊಡುವ ವಿಧಾನ. ತಮಗೆ ಸ್ವಭಾವಸಿದ್ಧವಾಗಿ ಬಂದ ಪೆಚ್ಚು ಮೋರೆ, ಉಬ್ಬು ಹಲ್ಲು, ಬಳಕುವ ದೇಹ, ಮಿಂಚಿನ ಕಣ್ಣು, ಸ್ಪಷ್ಟ ಉಚ್ಚಾರಣೆಯ ಮಾತು, ಮಾತಿನಲ್ಲಿ ಏರಿಳಿತವನ್ನು ನಿಯಂತ್ರಿಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದ ನರಸಿಂಹರಾಜು ಅವರು ಎಲ್ಲ ವಯೋಮಾನದ ಪ್ರೇಕ್ಷಕರಿಗೂ ಮೆಚ್ಚುಗೆಯಾಗಿದ್ದರು. ಅಲ್ಲದೆ ಬದುಕಿನಲ್ಲಿನ ಅಂಚಿನ ಪಾತ್ರಗಳಿಗೆ, ಗೌಣವೆನಿಸಿದ, ತಿರಸ್ಕಾರ ಯೋಗ್ಯ ಪಾತ್ರಗಳಿಗೆ ಘನತೆ ತಂದರು. ತಿರಸ್ಕಾರಕ್ಕೊಳಗಾಗುವ ಅಳಿಯ (ವರದಕ್ಷಿಣೆ, ಪ್ರತಿಧ್ವನಿ ಇತ್ಯಾದಿ), ಹೆಣ್ಣನ್ನು ಒಲಿಸಿಕೊಳ್ಳಲಾಗದ ಹೇಡಿ (ಬೆಟ್ಟದ ಹುಲಿ, ಕನ್ನಿಕಾ ಪರಮೇಶ್ವರಿ ಕತೆ), ದುಷ್ಟ ಪಾತ್ರಗಳಿಂದ ಕಿರುಕುಳ ಅನುಭವಿಸುವ ನತದೃಷ್ಟ ಅನಾಥ (ಸಂಧ್ಯಾರಾಗ ಇತ್ಯಾದಿ), ಅಸಹಾಯಕ ರೈತ (ನಾಡಿನ ಭಾಗ್ಯ) ಇಂತಹ ಕರುಣಾಜನಕ ಪಾತ್ರಗಳೂ ಪುಟಿದೇಳುವ ರೀತಿಯಲ್ಲಿ ಅಭಿನಯಿಸಿದ ನರಸಿಂಹರಾಜು ಅವರಲ್ಲಿ ಕನ್ನಡಿಗರು ತಮ್ಮನ್ನು ತಾವೇ ಕಂಡುಕೊಂಡಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ.


ಹಾಸ್ಯಪಾತ್ರವನ್ನು ವಹಿಸುವುದು ಮೇಲ್ನೋಟಕ್ಕೆ ಸುಲಭವೆಂದು ಕಂಡರೂ ನಟರ ಪ್ರಕಾರ ಅತ್ಯಂತ ಕ್ಲಿಷ್ಟಕರ ಅಭಿನಯವೆಂದರೆ ಹಾಸ್ಯವನ್ನು ಉಕ್ಕಿಸುವುದು. ಪ್ರಪಂಚದ ಸರ್ವಶ್ರೇಷ್ಠ ಮತ್ತು ಯಶಸ್ವಿ ಹಾಸ್ಯ ಕಲಾವಿದರಲ್ಲಿ ಬಹುತೇಕರು ಬದುಕಿನಲ್ಲಿ ಕಷ್ಟ ಕಾರ್ಪಣ್ಯಗಳನ್ನುಂಡು ಗಟ್ಟಿಯಾದವರೇ ಕಾಣುತ್ತಾರೆ. ಅತ್ಯಂತ ದಾರುಣವಾದ ಬದುಕನ್ನು ಅನುಭವಿಸಿದ ಚಾರ್ಲಿ ಚಾಪ್ಲಿನ್, ಇಲಿನಾಯಿಸ್ ಪ್ರಾಂತದ ವೇಶ್ಯೆಯೊಬ್ಬಳಿಗೆ ಜನಿಸಿದ ರಿಚರ್ಡ್ ಪ್ರಯರ್, ಅಪ್ಪನ ಹೆಸರೇ ತಿಳಿಯದ ರಸಲ್‌ಬಾಂಡ್, ಕುಡುಕ ತಂದೆಯ ಕಿರುಕುಳಕ್ಕೆ ಬೇಸತ್ತು ಮನೆ ತೊರೆದು ಅಲೆದು ನೆಲೆ ಕಂಡ ಬಿಲ್ ಕಾಸಿ, ಅಷ್ಟೇ ಏಕೆ ಹೆತ್ತವರೇ ಅಲ್ಪಮೊತ್ತಕ್ಕೆ ಮಾರಾಟ ಮಾಡಿದ ನಮ್ಮ ಬಾಲಣ್ಣ- ಇವರೆಲ್ಲ ಬದುಕಿನ ಅಗ್ನಿದಿವ್ಯದಲ್ಲಿ ಬೆಂದು ಗಟ್ಟಿಯಾಗಿ ನಟನೆಯಲ್ಲಿ ಶ್ರೇಷ್ಠ ಮಟ್ಟ ಮುಟ್ಟಿದವರು. ಅಂತೆಯೇ 1923ರಲ್ಲಿ ಜನಿಸಿದ ನರಸಿಂಹರಾಜು ಅವರು ತಮ್ಮ ಸಂಸಾರಕ್ಕಾಗಿ ಮೂರನೇ ವಯಸ್ಸಿನಲ್ಲಿ ಬಣ್ಣ ಹಚ್ಚಿದವರು. ಹಲವಾರು ಕಂಪೆನಿಗಳಲ್ಲಿ ಬಾಲನಟನಾಗಿ ಬೆಳೆದು ಗುಬ್ಬಿ ಕಂಪೆನಿ ಸೇರಿ ಪ್ರಬುದ್ಧ ನಟನಾಗಿ ಬೆಳೆದು ನೋವು ನುಂಗಿ ನಗಿಸಿದರು. ಇತರರ ನಗುವನ್ನು ವೃದ್ಧಿಸಿ ನೋವನ್ನು ಶಮನಗೊಳಿಸುವ ಕಾಯಕದಲ್ಲಿ ಸಾರ್ಥಕ ಕಂಡವರು. ಈ ನಿಟ್ಟಿನಲ್ಲಿ ನೋಡಿದಾಗ ನರಸಿಂಹರಾಜು ಅವರು ಕನ್ನಡ ಚಿತ್ರರಂಗಕ್ಕೆ ಕೊಟ್ಟ ನಲಿವು, ಕಾಣಿಕೆ ಅಸದಳವಾದದ್ದು.
ಮದರಾಸಿನಲ್ಲಿ ಮನೆ ಕಟ್ಟಿಸಿದ ಮೊದಲ ಕಲಾವಿದನೆಂಬ ಹೆಮ್ಮೆಗೆ ಪಾತ್ರವಾಗಿದ್ದ ನರಸಿಂಹರಾಜು ಅವರು ತುಂಬು ಸಂಸಾರದ ಪ್ರೀತಿಯ ಒಡೆಯರಾಗಿದ್ದರು. ಆದರೆ ತಾವು ಪ್ರೀತಿಸಿದ ಮಗ ಶ್ರೀಕಾಂತ ಅವರ ಸಾವಿನಿಂದ ಜರ್ಜರಿತರಾಗಿ ಆಘಾತದಿಂದ ಹೊರಬರಲು ವಿಫಲರಾದರು. ತಮ್ಮ ಮಗನ ಹೆಸರಿನ ಲಾಂಛನದಲ್ಲಿ ‘ಪ್ರೊ. ಹುಚ್ಚೂರಾಯ’ನಂತಹ ಸದಭಿರುಚಿಯ ಚಿತ್ರ ನಿರ್ಮಿಸಿದರು. ಆ ಬಾಬತ್ತಿನಿಂದಲೂ ಅವರು ಆರ್ಥಿಕವಾಗಿ ಲಾಭ ಪಡೆಯಲಿಲ್ಲ. ಐವತ್ತಾರು ವರ್ಷ ಪೂರ್ಣಗೊಳ್ಳಲು ಎರಡುವಾರ ಇರುವಂತೆಯೇ ತೀರಿಕೊಂಡರು. ಕನ್ನಡ ಚಿತ್ರರಂಗದಲ್ಲಿ ಎರಡೂವರೆ ದಶಕದ ಅವರ ಪಯಣ 11ನೇ ಜುಲೈ 1979ರಂದು ನಿಲುಗಡೆಯಾಯಿತು.


ಇಂತಹ ಮಹಾನ್ ಕಲಾವಿದನ ಬಗ್ಗೆ ಕನ್ನಡಿಗರ ಉಪೇಕ್ಷೆಯಂತೂ ಊಹಿಸಲು ಅಸಾಧ್ಯ. ಅವರ ಹೆಸರಿನಲ್ಲಿ ಸ್ಮಾರಕಗಳಿರಲಿ (ಅವರು ನಿಧನರಾದ ಕಾಲಕ್ಕೆ ಕಲಾವಿದರಿಗೆ ಈ ಮಟ್ಟಿನ ಪ್ರದರ್ಶನಪ್ರಿಯತೆ ಅಂಟಿಕೊಂಡಿರಲಿಲ್ಲ) ಯಾವುದಾದ ರೊಂದು ರಸ್ತೆ, ರಂಗಮಂದಿರ, ಬಡಾವಣೆಗೆ ಹೆಸರಿಟ್ಟಿರುವುದೂ ತಿಳಿದಿಲ್ಲ. ಇನ್ನು ಮೂರ್ತಿ ಸ್ಥಾಪನೆ, ಡಾಕ್ಟರೇಟ್ ಪದವಿ, ಅವರ ಹೆಸರಿನಲ್ಲಿ ಪ್ರಶಸ್ತಿ-ಯಾವುದೂ ಇಲ್ಲ. ಕನ್ನಡಿಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಅವರಿಗೆ ಅದರ ಹಂಗು ಬೇಡವಾಗಿತ್ತೇನೋ!
ಆದರೆ ಒಂದಂತೂ ಸತ್ಯ. ಕನ್ನಡದ ರಾಜ್ ಆದಿಯಾಗಿ ಎಲ್ಲ ಪ್ರಸಿದ್ಧ ನಟರು, ಹಾಸ್ಯ ನಟರನ್ನು ಅನುಕರಿಸುವ ಅಣಕು ಕಲಾವಿದರಿದ್ದಾರೆ. ಅವರ ಧ್ವನಿ, ಭಾವವನ್ನು ಅನುಕರಿಸುವಲ್ಲಿ ಯಶಸ್ಸು ಕಂಡವರಿದ್ದಾರೆ. ಶಾಲಾ-ಕಾಲೇಜುಗಳಲ್ಲಿಯೂ ಸಿನೆಮಾ ನಟರ ಹಾವಭಾವ, ಧ್ವನಿ, ಬಿಲ್ಡಪ್ ಡೈಲಾಗ್‌ಗಳನ್ನು ಮೂಲದಂತೆಯೇ ಅನುಕರಿಸಿ ಶ್ಲಾಘನೆ ಪಡೆದವರಿದ್ದಾರೆ. ಶಾಲಾ-ಕಾಲೇಜುಗಳಲ್ಲಾಗಲೀ, ಟಿ.ವಿ. ವೇದಿಕೆಗಳಲ್ಲಾಗಲೀ, ಆರ್ಕೆಸ್ಟ್ರಾ ಸಮಾರಂಭಗಳಲ್ಲಾಗಲೀ ನರಸಿಂಹರಾಜು ಅವರನ್ನು ಅನುಕರಿಸಲು, ಅವರ ಧ್ವನಿ, ಹಾವಭಾವಗಳನ್ನು ನಕಲು ಮಾಡಲು, ಯಾರಾದರೂ ಪ್ರಯತ್ನಿಸದಿರುವುದು ದಾಖಲಾರ್ಹ. ಯಾಕೆಂದರೆ ಅವರೊಬ್ಬ ಅನುಕರಿಸಲಾಗದ ಅಭಿಜಾತ ನಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75