ಕೇಂದ್ರ ಸರಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಟೀಕಿಸಿದ ನಟ ಸೂರ್ಯ

Update: 2019-07-16 12:49 GMT

ಚೆನ್ನೈ, ಜು. 16: ದೇಶಾದ್ಯಂತ 30 ಕೋಟಿ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವ ನೂತನ ಶಿಕ್ಷಣ ನೀತಿ ವಿರುದ್ಧ ಮಾತನಾಡಲು ಯಾರೊಬ್ಬರೂ ಮುಂದೆ ಬರುತ್ತಿಲ್ಲ ಎಂದು ಜನಪ್ರಿಯ ನಟ ಸೂರ್ಯ ಹೇಳಿದ್ದಾರೆ. ಶ್ರೀ ಶಿವಕುಮಾರ್ ಪ್ರತಿಷ್ಠಾನದ 40ನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಸೂರ್ಯ, ಇದರ ಕೆಲವು ನಿಯಮಗಳು ಗ್ರಾಮಗಳಲ್ಲಿರುವ ವಿದ್ಯಾರ್ಥಿಗಳನ್ನು ಅನನುಕೂಲ ಸ್ಥಿತಿಯಲ್ಲೇ ಉಳಿಸಿಕೊಳ್ಳುತ್ತದೆ ಎಂದಿದ್ದಾರೆ.

ಈ ಶಿಕ್ಷಣ ನೀತಿ ಪ್ರವೇಶ ಪರೀಕ್ಷೆ ಬಗ್ಗೆ ಗಮನ ಕೇಂದ್ರೀಕರಿಸಿದೆ. ಆದರೆ, ಶಿಕ್ಷಣದ ಗುಣಮಟ್ಟ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣದ ಬಗ್ಗೆ ಗಮನ ಕೊಟ್ಟಿಲ್ಲ. ಸಮಾನ ಶಿಕ್ಷಣ ನೀಡದೆ, ವಿದ್ಯಾರ್ಥಿಗಳಿಂದ ಗುಣಮಟ್ಟ ನಿರೀಕ್ಷಿಸುವುದು ಹೇಗೆ ? ಎಂದು ಅವರು ಪ್ರಶ್ನಿಸಿದರು.

ನೂತನ ಶಿಕ್ಷಣ ನೀತಿಯ ಅನನುಕೂಲತೆ ಬಗ್ಗೆ ತಿಳಿಯದ ಎಲ್ಲ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಪ್ರತಿನಿಧಿಯಾಗಿ ನಾನಿಲ್ಲಿ ನಿಂತಿದ್ದೇನೆ ಎಂದು ಅವರು ಹೇಳಿದರು. ಆದರೆ, ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಸೂರ್ಯ ಟೀಕಿಸಿರುವುದು ರಾಜ್ಯದ ನಾಯಕರಲ್ಲಿ ಅಸಮಾಧಾನ ಉಂಟು ಮಾಡಿದೆ. ತಮಿಳುನಾಡು ಮಾಹಿತಿ ಹಾಗೂ ಪ್ರಸಾರ ಸಚಿವ ಕಡಂಬೂರು ಸಿ. ರಾಜು ಅವರು, ಸೂರ್ಯ ಅವರಿಗೆ ಶಿಕ್ಷಣ ನೀತಿಯ ಬಗ್ಗೆ ಏನೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಸೂರ್ಯ ಅವರನ್ನು ‘ಅರೆ ಬೆಂದ ನಟ’ ಎಂದು ಕರೆದಿದ್ದಾರೆ.

 ಸೂರ್ಯ ಅವರು ಶಿಕ್ಷಣ ನೀತಿಯನ್ನು ಟೀಕಿಸುವ ಮೂಲಕ ಹಿಂಸಾಚಾರಕ್ಕೆ ಆಹ್ವಾನ ನೀಡಿದ್ದಾರೆ ಎಂದು ಬಿಜೆಪಿ ನಾಯಕ ಎಚ್. ರಾಜಾ ಹೇಳಿದ್ದಾರೆ. ಕೇಂದ್ರ ಸರಕಾರದ ವಿರುದ್ಧದ ಹೇಳಿಕೆ ಸೂರ್ಯ ಅವರ ರಾಜಕೀಯ ಮಹತ್ವಾಕಾಂಕ್ಷೆಯನ್ನು ಪ್ರದರ್ಶಿಸಿದೆ ಎಂದು ಬಿಜೆಪಿಯ ರಾಜ್ಯ ಅಧ್ಯಕ್ಷ ಸೌಂದರರಾಜನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News