ಈ ಮನೆಮದ್ದುಗಳನ್ನು ಬಳಸಿ, ಪ್ರಯಾಣದ ಅಸ್ವಸ್ಥತೆಯನ್ನು ನಿವಾರಿಸಿ
ಹಲವರಿಗೆ ಪ್ರವಾಸಕ್ಕೆ ಹೊರಟಾಗಲೆಲ್ಲ ಅಸ್ವಸ್ಥತೆ ಕಾಡುತ್ತದೆ. ನಿರಂತರ ತಲೆನೋವು,ತಲೆ ಸುತ್ತುವಿಕೆ,ವಾಂತಿ ಮತ್ತು ಹೊಟ್ಟೆ ಬಿಗಿತ ಇತ್ಯಾದಿ ಅಸ್ವಸ್ಥತೆಗಳೆಲ್ಲ ಪ್ರವಾಸದ ಮೋಜನ್ನೇ ನುಂಗಿಬಿಡುತ್ತವೆ. ಇವುಗಳಿಂದಾಗಿ ವ್ಯಕ್ತಿಯು ದಣಿಯುತ್ತಾನೆ ಮತ್ತು ಸುತ್ತಾಡುವ ಉತ್ಸಾಹವನ್ನೇ ಕಳೆದುಕೊಳ್ಳುತ್ತಾನೆ.
ಪ್ರಯಾಣದ ಅಸ್ವಸ್ಥತೆಯು ನರಮಂಡಲವನ್ನು ಗೊಂದಲಕ್ಕೀಡು ಮಾಡುತ್ತದೆ. ಅದು ರವಾನಿಸುವ ಮಿಶ್ರ ಸಂಕೇತಗಳು ವಾಕರಿಕೆ ಮತ್ತು ವಾಂತಿ,ಹಲವಾರು ಪ್ರಕರಣಗಳಲ್ಲಿ ತೀವ್ರ ತಲೆನೋವುಗಳಿಗೂ ಕಾರಣವಾಗುತ್ತದೆ. ವೈಜ್ಞಾನಿಕವಾಗಿ ಇದನ್ನು ಕೈನೆಟೋಸಿಸ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಕೇವಲ ಔಷಧಿಗಳ ಸೇವನೆಯು ಈ ಅಸ್ವಸ್ಥತೆಯನ್ನು ಪರಿಣಾಮಕಾರಿಯಾಗಿ ನಿವಾರಿಸುವುದಿಲ್ಲ ಮತ್ತು ಮನೆಮದ್ದುಗಳು ಉಪಶಮನ ನೀಡುತ್ತವೆ. ಅಂತಹ ಕೆಲವು ಮನೆಮದ್ದುಗಳ ಮಾಹಿತಿಗಳಿಲ್ಲಿವೆ........
►ಹಸಿ ಶುಂಠಿ ಅಥವಾ ಶುಂಠಿ ಕಷಾಯ
ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿರೋಧಕ ಗುಣಗಳನ್ನು ಹೊಂದಿರುವ ಶುಂಠಿಯು ಪ್ರಯಾಣದ ಅಸ್ವಸ್ಥತೆಯನ್ನು ಪರಿಣಾಮಕಾರಿಯಗಿ ನಿವಾರಿಸುತ್ತದೆ. ಅದರಲ್ಲಿರುವ ಜಿಂಜಿರಾಲ್ ವಾಂತಿ,ದಣಿವು ಮತ್ತು ವಾಕರಿಕೆಗಳಿಗೆ ರಾಮಬಾಣವಾಗಿದೆ. ಶುಂಠಿಯು ನಮ್ಮ ಶರೀರಕ್ಕೆ ಅಗತ್ಯವಾದ ವಿಟಾಮಿನ್‌ಗಳನ್ನೂ ಒಳಗೊಂಡಿದೆ. ಪ್ರಯಾಣದ ಅಸ್ವಸ್ಥತೆಯನ್ನು ನಿವಾರಿಸಲು ಹಸಿ ಶುಂಠಿಯನ್ನು ಅಗಿದು ತಿನ್ನಬಹುದು ಇಲ್ಲವೇ ಶುಂಠಿಯ ಕಷಾಯವನ್ನು ಸೇವಿಸಬಹುದು.
►ಪರಿಮಳ ಚಿಕಿತ್ಸೆ
ಪ್ರಯಾಣದ ಅಸ್ವಸ್ಥತೆಯಿರುವವರು ತಮ್ಮೊಂದಿಗೆ ಎಸೆನ್ಶಿಯಲ್ ಆಯಿಲ್ ಅಥವಾ ಸಾರಭೂತ ತೈಲಗಳನ್ನು ಒಯ್ಯುವುದು ಒಳ್ಳೆಯದು. ಪರಿಮಳ ಚಿಕಿತ್ಸೆ ಮತ್ತು ಸಾರಭೂತ ತೈಲಗಳು ಮನಸ್ಸನ್ನು ಉಲ್ಲಸಿತಗೊಳಿಸುವುದು ಮಾತ್ರವಲ್ಲ, ಔಷಧಿಗಳನ್ನು ಬಳಸದೆ ಪ್ರಯಾಣದ ಅಸ್ವಸ್ಥತೆಯನ್ನೂ ನಿವಾರಿಸುತ್ತವೆ. ಇವು ಪ್ರಮುಖ ಇಂದ್ರಿಯಗಳನ್ನು ಪ್ರಚೋದಿಸುವ ಮೂಲಕ ಹಿತಕರ ಅನುಭವವನ್ನು ನೀಡುತ್ತವೆ ಮತ್ತು ವಾಕರಿಕೆಯನ್ನು ಕಡಿಮೆ ಮಾಡುತ್ತವೆ. ಪ್ರಯಾಣದಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಾಗ ಈ ತೈಲವನ್ನು ಮೂಸುವುದರಿಂದ ಅಂತಹ ಲಕ್ಷಣಗಳು ಕಡಿಮೆಯಾಗುತ್ತವೆ ಮತ್ತು ಮನಸ್ಸು ಉಲ್ಲಸಿತಗೊಳ್ಳುತ್ತದೆ.
►ಮಂಜುಗಡ್ಡೆಯ ಬಳಕೆ
ಪ್ರಯಾಣದ ಅಸ್ವಸ್ಥತೆಯುಂಟಾದಾಗ ಸುತ್ತುಮುತ್ತಲಿನ ಪರಿಸರದಿಂದ ನಮ್ಮ ಮನಸ್ಸನ್ನು ದೂರವಿರಿಸಲು ಮತ್ತು ಫೋನ್‌ನಲ್ಲಿ ಮಾತನಾಡಲು ಅಥವಾ ಸಹಪ್ರಯಾಣಿಕರೊಂದಿಗೆ ಹರಟೆ ಹೊಡೆಯಲು ಪ್ರಯತ್ನಿಸಬೇಕು. ವೀಡಿಯೊ ಗೇಮ್ ಅಥವಾ ಓದುವಿಕೆಯಲ್ಲಿಯೂ ತೊಡಗಿಸಿಕೊಳ್ಳಬಹುದು. ಹೀಗೆ ಮಾಡುವಾಗ ಬಾಯಿಯಲ್ಲಿ ಮಂಜುಗಡ್ಡೆಯ ತುಂಡನ್ನಿಟ್ಟುಕೊಂಡು ಚೀಪುತ್ತಿರುವುದರಿಂದ ತಲೆಸುತ್ತುವಿಕೆ ಮತ್ತು ವಾಕರಿಕೆಯ ಲಕ್ಷಣಗಳು ಕಡಿಮೆಯಾಗುತ್ತವೆ.
►ಅಕ್ಯುಪಂಕ್ಚರ್
ತುರ್ತು ಸಂದರ್ಭಗಳಲ್ಲಿ ಅಥವಾ ತಡೆಯಲಾಗದ ವಾಕರಿಕೆ ಮತ್ತು ಪ್ರಯಾಣದ ಅಸ್ವಸ್ಥತೆಯಿದ್ದಾಗ ಅಕ್ಯುಪಂಕ್ಚರ್ ನೆರವಾಗುತ್ತದೆ. ಇಂತಹ ಸ್ಥಿತಿಗಳಲ್ಲಿ ನಿಮ್ಮ ಸ್ನೇಹಿತರು ಅಥವಾ ಕುಟುಂಬದ ಸ್ನೇಹಿತರ ನೆರವು ಪಡೆದುಕೊಳ್ಳಿ. ನಿಮ್ಮ ಮಣಿಗಂಟಿನ ಕೆಳಗೆ ಉಬ್ಬಿದ ಭಾಗವನ್ನು ಕಂಡುಕೊಂಡು ಮಧ್ಯದ ಮತ್ತು ತೋರು ಬೆರಳುಗಳಿಂದ 30 ಸೆಕೆಂಡ್‌ಗೂ ಹೆಚ್ಚಿನ ಕಾಲ ಅದನ್ನು ಒತ್ತಿ ಹಿಡಿಯಲು ಅವರನ್ನು ಕೇಳಿಕೊಳ್ಳಿ. ನೀವು ನಂಬದಿರಬಹುದು,ಆದರೆ ಇದು ನಿಜಕ್ಕೂ ಜಾದೂವನ್ನೇ ಮಾಡುತ್ತದೆ. ಅದು ಕೆಲವೇ ಸೆಕೆಂಡ್‌ಗಳಲ್ಲಿ ನಿಮ್ಮಲ್ಲಿಯ ಅಸ್ವಸ್ಥತೆಯ ಲಕ್ಷಣಗಳನ್ನು ಮಾಯವಾಗಿಸುತ್ತದೆ. ಪ್ರಾಚೀನ ವೈದ್ಯಪದ್ಧತಿಯಂತೆ ಈ ಬಿಂದುವು ಹೃದಯಾವರಣಕ್ಕೆ ಸಾಗುವ ಮಾರ್ಗದಲ್ಲಿಯ ಆರನೇ ಬಿಂದುವಾಗಿದೆ ಮತ್ತು ಅದು ಕ್ಷಣದಲ್ಲಿ ವಾಕರಿಕೆಯ ಲಕ್ಷಣಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ.