ಲಕ್ಷ್ಮಿ ಶಾನೇ ಟಾಪಾಗವ್ಳೆ.. ಆದರೆ..

Update: 2023-06-30 06:04 GMT

ಚಿತ್ರ: ಆದಿಲಕ್ಷ್ಮಿ ಪುರಾಣ

ತಾರಾಗಣ: ನಿರೂಪ್ ಭಂಡಾರಿ, ರಾಧಿಕಾ ಪಂಡಿತ್

ನಿರ್ದೇಶನ: ಪ್ರಿಯಾ ವಿ.

ನಿರ್ಮಾಣ: ರಾಕ್‌ಲೈನ್ ವೆಂಕಟೇಶ್

ಬೆಂಗಳೂರಲ್ಲಿ ಹರಡಿರುವ ಡ್ರಗ್ ಮಾಫಿಯಾ. ಅದನ್ನು ತಡೆಯಲು ಅಂಡರ್‌ಕವರ್ ಪೊಲೀಸ್ ಆಫೀಸರ್ ಆಗಿ ಕೆಲಸ ಮಾಡುವ ಆದಿತ್ಯ ಚಿತ್ರದ ನಾಯಕ. ಟೂರ್ ಆ್ಯಂಡ್ ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಾ ಸುಳ್ಳನ್ನೇ ಹೆಚ್ಚು ಹೇಳುತ್ತಾ ದಿನ ದೂಡುವವಳು ಲಕ್ಷ್ಮೀ. ಅವಳೇ ಚಿತ್ರದ ನಾಯಕಿ. ಹಾಗಾಗಿ ಇವರಿಬ್ಬರ ಭೇಟಿ ಆಗಲೇಬೇಕು. ಆದರೆ ಚಿತ್ರದಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗುತ್ತಾರೆ. ಪರಸ್ಪರ ಸ್ನೇಹಿತರಾಗುತ್ತ್ತಾರೆ. ಲವ್ ಅಟ್ ಫಸ್ಟ್ ಸೈಟ್ ಎನ್ನುವಂತೆ ಇಬ್ಬರಿಗೂ ಮೊದಲ ನೋಟದಲ್ಲೇ ಪ್ರೀತಿ ಮೂಡುತ್ತದೆ. ಆದರೆ ಸುಳ್ಳುಗಳಿಗೆ ದಾಸಳಾಗಿರುವ ಲಕ್ಷ್ಮೀ ತನಗೆ ಮದುವೆಯಾಗಿರುವುದಾಗಿ ಆದಿಗೆ ಸುಳ್ಳು ಹೇಳುತ್ತಾಳೆ! ಆತನಲ್ಲಿ ಸತ್ಯ ಹೇಳಲೆಂದು ಹೋದವಳಿಗೆ ಆತನಿಗೆ ಸುಳ್ಳು ಎಂದರೇನೇ ಅಲರ್ಜಿ ಎನ್ನುವ ಸತ್ಯದ ಅರಿವಾಗಿ ಸುಳ್ಳಿಗೆ ಸುಳ್ಳು ಸೇರಿಸುತ್ತಾ ಹೋಗುತ್ತಾಳೆ. ಆದರೆ ಕೆಲವು ದಿನಗಳಲ್ಲೇ ಆಕೆಗೆ ಅದುವರೆಗೆ ತಿಳಿದಿರದ ಸತ್ಯವೊಂದು ಅರಿವಾಗುತ್ತದೆ. ಅದೇ ಆದಿ ಪೊಲೀಸ್ ಕಾಪ್ ಎನ್ನುವ ವಿಚಾರ. ಅಷ್ಟರಲ್ಲಿ ಚಿತ್ರ ಮಧ್ಯಂತರ ತಲುಪಿರುತ್ತದೆ.

ಆದಿತ್ಯನ ಮದುವೆಗಾಗಿ ಸದಾ ಒತ್ತಾಯಿಸುವ ತಂದೆ ರಾಮೇಗೌಡ ಮತ್ತು ತಾಯಿ ಸೀತಮ್ಮ ಅದಕ್ಕಾಗಿ ನಾಟಕಗಳನ್ನು ಆಡುತ್ತಿರುತ್ತಾರೆ. ಇದೇ ಸಂದರ್ಭದಲ್ಲಿ ಈ ದಂಪತಿ ಲಕ್ಷ್ಮಿಯನ್ನು ಭೇಟಿಯಾಗುತ್ತಾರೆ. ಇದರ ನಡುವೆ ನಾಯಕ ಡ್ರಗ್ಸ್ ಮಾಫಿಯಾದ ಬೆನ್ನು ಬಿದ್ದಿರುತ್ತಾನೆ. ಮುಂದೇನಾಗುತ್ತದೆ ಎನ್ನುವುದೇ ಚಿತ್ರಕ್ಕೆ ಕುತೂಹಲ ತುಂಬುವಂಥ ಕ್ಲೈಮ್ಯಾಕ್ಸ್! ಆದಿಯ ಪಾತ್ರದಲ್ಲಿ ನಿರೂಪ್ ಭಂಡಾರಿಗೆ ಪೊಲೀಸ್ ಪಾತ್ರವನ್ನು ನಿಭಾಯಿಸುವ ಪ್ರಥಮ ಅವಕಾಶ. ಆರಡಿ ಎತ್ತರ ಮತ್ತು ಪೊಲೀಸ್ ಪಾತ್ರಕ್ಕೆ ಬೇಕಾಗುವಂಥ ಪರ್ಸನಾಲಿಟಿ ಎಲ್ಲವೂ ಇದ್ದರೂ ನಿರೂಪ್ ನಲ್ಲಿ ಅಧಿಕಾರಿಯ ಅಚ್ಚುಕಟ್ಟುತನವನ್ನು ಕಾಣಲು ಸಾಧ್ಯವಾಗುವುದಿಲ್ಲ. ಅಂಡರ್ ಕವರ್ ಅಧಿಕಾರಿ ಬೇರೆ ಆಗಿರುವುದರಿಂದ ಸಮವಸ್ತ್ರದ ಶಿಸ್ತನ್ನೂ ನಿರೀಕ್ಷಿಸುವಂತಿಲ್ಲ. ಎಲ್ಲಕ್ಕಿಂತ ಪಾತ್ರವೇ ಪೊಲೀಸನ ದಕ್ಷತೆಗಿಂತ ಪ್ರೇಮಿಯ ಗೊಂದಲಗಳನ್ನು ಹೇಳುವುದಕ್ಕೆ ಹೆಚ್ಚು ಒತ್ತು ನೀಡಿದೆ. ಹಾಗಾಗಿ ಪ್ರೇಮಿಯಾಗಿ ನಿರೂಪ್‌ಗೆ ಫುಲ್ ಮಾರ್ಕ್ಸ್ ನೀಡಬಹುದು. ಲಕ್ಷ್ಮೀ ಪಾತ್ರದಲ್ಲಿ ರಾಧಿಕಾ ಪಂಡಿತ್ ಚಿತ್ರದ ಪ್ರಮುಖ ಆಕರ್ಷಣೆ ಎಂದೇ ಹೇಳಬಹುದು. ಒಂದೆರಡು ಸಂದರ್ಭದಲ್ಲಿ ನಟಿ ಸುಹಾಸಿನಿಯನ್ನು ನೆನಪಿಸುವ ಮ್ಯಾನರಿಸಮ್ಮಿನಿಂದ ರಾಧಿಕಾ ಗಮನ ಸೆಳೆಯುತ್ತಾರೆ. ಬಹುಶಃ ಚಿತ್ರದ ನಿರ್ದೇಶಕಿ ಪ್ರಿಯಾ ಸುಹಾಸಿನಿಯವರ ಜತೆಗೆ ಕಾರ್ಯನಿರ್ವಹಿಸಿದ್ದರೆನ್ನುವುದು ಕೂಡ ಇದಕ್ಕೆ ಕಾರಣವಿರಬಹುದು. ಇದೇ ಆರೋಪವನ್ನು ತಾರಾ ಅವರ ಮೇಲೆಯೂ ಹೊರಿಸುವ ಮಟ್ಟಕ್ಕೆ ಪ್ರಿಯಾ ಪ್ರಭಾವ ಎದ್ದು ಕಾಣುತ್ತದೆ. ತಾರಾ ಕೊನೆಗೂ ತಮ್ಮ ಸ್ವಂತ ಶೈಲಿಯಿಂದಲೇ ಮನಸಲ್ಲಿ ಉಳಿಯುತ್ತಾರೆ. ಲಡ್ಡು ಲಕ್ಷ್ಮಿಯಾಗಿ ರಾಧಿಕಾ ಕೂಡ ಒಬ್ಬ ಕೀಳರಿಮೆಯಿಂದ ಕೊರಗುವ ಯುವತಿ ಅದರಿಂದ ಪಾರಾಗಲು ಹೇಗೆಲ್ಲ ಪ್ರಯತ್ನಿಸುತ್ತಾಳೆ ಎನ್ನುವುದನ್ನು ಮನದಟ್ಟಾಗುವ ರೀತಿಯಲ್ಲಿ ವ್ಯಕ್ತಪಡಿಸುವಲ್ಲಿ ಗೆದ್ದಿದ್ದಾರೆ. ಆದಿಯ ತಾಯಿ ಶಾಂತಮ್ಮನ ಪಾತ್ರ ನಿರ್ವಹಿಸಿರುವ ತಾರಾಗೆ ರಾಮೇಗೌಡನಾಗಿ ಜೋಡಿಯಾಗಿದ್ದಾರೆ ಸುಚೇಂದ್ರ ಪ್ರಸಾದ್. ಅದೇ ಮನೆಯಲ್ಲಿರುವ ಆಕೆಯ ಸಹೋದರನಾಗಿ ಜೋ ಸೈಮನ್ ನಟಿಸಿದ್ದಾರೆ. ನಿರೂಪ್ ಜತೆಗಾರರಾದ ಪೊಲೀಸ್ ಪಾತ್ರಗಳಲ್ಲಿ ಯಶ್ ಶೆಟ್ಟಿ ಮತ್ತು ವಿಶಾಲ್ ನಾಯರ್ ನೆನಪಲ್ಲಿ ಉಳಿಯುತ್ತಾರೆ. ರಾಧಿಕಾ ಸಹೋದರನಾಗಿ ಭರತ್ ಕಲ್ಯಾಣ್ ನಟಿಸಿದ್ದಾರೆ. ಅವರ ಜೋಡಿ ಸೇರಿದಂತೆ ಒಂದಷ್ಟು ತಮಿಳು ಮುಖಗಳು ಮತ್ತು ಅವರಿಗೆ ಹೊಂದಿಕೊಳ್ಳದ ಕಂಠದಾನಗಳು ರಸಭಂಗಗೊಳಿಸುತ್ತವೆ

ಪ್ರೀತಾ ಅವರ ಛಾಯಾಗ್ರಹಣ ಆಕರ್ಷಕವಾಗಿದೆ. ಆದರೆ ಅನೂಪ್ ಭಂಡಾರಿಯವರ ಸಂಗೀತದಲ್ಲಿ ಒಂದು ಹಾಡು ಮೊದಲೇ ಎಲ್ಲೋ ಕೇಳಿರುವಂಥ ಭಾವ ಮೂಡಿಸುತ್ತದೆ. ಆದರೆ ಮೈನವಿರೇಳಿಸೋ ಸ್ಟೇಟ್ಸ್ ಗಳಿಗೆ ನೀಡಿರುವ ಹಿನ್ನೆಲೆ ಸಂಗೀತ ಆಕರ್ಷಕವಾಗಿದೆ. ಆದರೆ ಚಿತ್ರದಲ್ಲಿ ಕತೆಯ ಭಾಗವೇ ಕಡಿಮೆ ಇರುವುದರಿಂದ ಸಿನೆಮಾ ನಿಧಾನಕ್ಕೆ ಸಾಗಿದಂತೆ ಅನಿಸುತ್ತದೆ. ಮಾತ್ರವಲ್ಲ ಚಿತ್ರದಲ್ಲಿ ಪ್ರಶಾಂತ್ ರಾಜಪ್ಪ ಅವರ ಪಂಚ್ ನೀಡುವಂಥ ಸಂಭಾಷಣೆಗಳು ಇದ್ದರೂ, ಅವುಗಳನ್ನು ತೋರಿಸಿರುವ ರೀತಿಯಿಂದಾಗಿ ಎಲ್ಲೋ ಏನೋ ಮಿಸ್ ಪ್ಲೇಸ್ ಆದಂತೆ ಗೋಚರಿಸುತ್ತದೆ.

ಆದಿ ಲಕ್ಷ್ಮಿ ಪುರಾಣದಲ್ಲಿ ಲಕ್ಷ್ಮಿಯ ಪುರಾಣಕ್ಕೆ ಒತ್ತು ಹೆಚ್ಚು. ಹಾಗಾಗಿ ಸಹಜವಾಗಿಯೇ ಇದು ಸುಳ್ಳುಬುರುಕಿಯೊಬ್ಬಳ ಬದುಕಿನ ಸುತ್ತ ಸಾಗುವ ಕತೆಯಾಗಿ ಮಾತ್ರ ಕಾಣುತ್ತದೆ. ಡ್ರಗ್ಸ್ ಮಾಫಿಯ ಕುರಿತಾದ ಕತೆಗೆ ಇನ್ನಷ್ಟು ಗಟ್ಟಿಯಾದ ಅಂಶಗಳನ್ನು ತುಂಬಿದ್ದಲ್ಲಿ ಇನ್ನಷ್ಟು ವೈವಿಧ್ಯಮಯ ಪ್ರೇಕ್ಷಕರ ಆಸಕ್ತಿ ಸೆಳೆಯುವ ಸಾಧ್ಯತೆ ಇತ್ತು ಎಂಬ ಅಂಶ ಕಾಡದೇ ಇರುವುದಿಲ್ಲ. ಆದರೆ ರಮೇಶ್ ಅರವಿಂದ್ ಅವರ ನವಿರಾದ ನಿರೂಪಣೆಯೊಂದಿಗೆ ಶುರುವಾಗುವ ಸಿನೆಮಾ ವೀಕೆಂಡ್ ಪ್ರೇಕ್ಷಕರಿಗೆ ಕುಟುಂಬ ಸಮೇತ ನೋಡಿ ಖುಷಿ ಪಡುವಂತೆ ಮೂಡಿ ಬಂದಿದೆ ಎನ್ನಬಹುದು.

Writer - ಶಶಿಕರ ಪಾತೂರು

contributor

Editor - ಶಶಿಕರ ಪಾತೂರು

contributor

Similar News