ಕಾನೂನು ಹೋರಾಟ ಮಾಡಿ ಗೆಲ್ಲುತ್ತೇವೆ: ಎಚ್.ವಿಶ್ವನಾಥ್
ಬೆಂಗಳೂರು, ಜು.28: ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ 14 ಶಾಸಕರನ್ನು ಅನರ್ಹಗೊಳಿಸುವ ಮೂಲಕ ಅವಸರದ ತೀರ್ಮಾನ ಕೈಗೊಂಡಿದ್ದಾರೆ. ನಮ್ಮ ರಾಜೀನಾಮೆ ವಿಚಾರವನ್ನು ಸ್ಪೀಕರ್ ಗಮನಿಸಿಲ್ಲ. ಕೇವಲ ಸಿದ್ದರಾಮಯ್ಯ, ಕುಮಾರಸ್ವಾಮಿ ನೀಡಿರುವ ದೂರನ್ನು ಮಾತ್ರ ಪರಿಗಣಿಸಿದ್ದಾರೆ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಮಾಜಿ ಸಚಿವ ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ.
ರವಿವಾರ ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಅವರು, ಯಾವ ಯಾವ ಸಂದರ್ಭಗಳಲ್ಲಿ ಏನಾಯಿತು? ಮೈತ್ರಿ ಸರಕಾರ ಹೇಗೆ ನಡೆದುಕೊಂಡಿದೆ ಎಂಬುದನ್ನು ಜನ ಗಮನಿಸಿದ್ದಾರೆ. ಸ್ಪೀಕರ್ ನಮ್ಮ ರಾಜೀನಾಮೆ ಕುರಿತು ಯಾವ ಚರ್ಚೆಯನ್ನು ಮಾಡಿಲ್ಲ. ಸರಕಾರದಲ್ಲಿನ ಮೂವರು ಸಚಿವರು ರಾಜೀನಾಮೆ ನೀಡಿರುವುದು ಹುಡುಗಾಟದ ವಿಷಯವಲ್ಲ ಎಂದರು.
ಹಿರಿಯ ಕಾಂಗ್ರೆಸ್ ನಾಯಕ ಎಚ್.ಕೆ.ಪಾಟೀಲ್ ಜಿಂದಾಲ್ ವಿಚಾರದಲ್ಲಿ ರಾಜ್ಯ ಸರಕಾರದ ವಿರುದ್ಧ ಬಹಿರಂಗ ಪತ್ರ ಬರೆದಿದ್ದರು. ಅವರ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ. ನನಗೂ ಕಾನೂನಿನ ಅರಿವಿದೆ. ಈ ಸರಕಾರದ ನಡವಳಿಕೆಯಿಂದ ಬೇಸತ್ತು ಶಾಸಕ ಸ್ಥಾನಕ್ಕೆ ನಾವು ರಾಜೀನಾಮೆ ನೀಡಿದ್ದೇವೆ. ಈ ಅಂಶವನ್ನು ಯಾಕೆ ಸ್ಪೀಕರ್ ಪರಿಗಣಿಸಿಲ್ಲ ಎಂದು ಅವರು ಪ್ರಶ್ನಿಸಿದರು.
ನಾವೆಲ್ಲ ಶಾಸಕರು ಕಾನೂನು ಹೋರಾಟ ಮಾಡಿ ಗೆಲ್ಲುತ್ತೇವೆ. ಕ್ಷೇತ್ರದ ಜನರಲ್ಲಿ ನಾವು ಕ್ಷಮೆಯಾಚಿಸುತ್ತೇವೆ. ನಾವು ಹಣ ಅಧಿಕಾರಕ್ಕಾಗಿ ರಾಜೀನಾಮೆ ಕೊಟ್ಟಿಲ್ಲ. ಹೇಸಿಗೆ ಸರಕಾರದ ದುರಾಡಳಿತದ ವಿರುದ್ಧ ರಾಜೀನಾಮೆ ನೀಡಿದ್ದೇವೆ. ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿಶ್ವನಾಥ್ ಮನವಿ ಮಾಡಿದರು.
ಸರಕಾರಿ ರಜಾದಿನವನ್ನೂ ಲೆಕ್ಕಿಸದೆ ಸ್ಪೀಕರ್ ನಮ್ಮೆಲ್ಲರ ಅನರ್ಹತೆ ಆದೇಶ ಮಾಡಿರುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ. ಸುದ್ದಿಗೋಷ್ಠಿಯಲ್ಲಿ ಸ್ಪೀಕರ್, ಕೇವಲ ಶಾಸಕರ ಅನರ್ಹತೆ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಆದರೆ, ಅವರು ಸಲ್ಲಿಸಿರುವ ರಾಜೀನಾಮೆ ಕುರಿತು ಯಾವುದೇ ಪ್ರಸ್ತಾಪ ಇಲ್ಲ. ಇಂತಹ ತುರ್ತ ನಿರ್ಧಾರದ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದರು.
ಸ್ಪೀಕರ್ ಆದೇಶ ಕಾನೂನು ಬಾಹಿರ. ಸುಪ್ರೀಂ ಕೋರ್ಟ್ ಶಾಸಕರ ರಾಜೀನಾಮೆ ಇತ್ಯರ್ಥ ಮಾಡಲು ಸೂಚಿಸಿತ್ತು. ಇದೀಗ ಶಾಸಕರನ್ನು ಅನರ್ಹ ಮಾಡಿರುವುದು ನ್ಯಾಯಾಂಗ ನಿಂದನೆಯಾಗಲಿದೆ. ಶಾಸಕರನ್ನು ಅನರ್ಹಗೊಳಿಸುವ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸ್ಪೀಕರ್ ಅನುಸರಿಸಿಲ್ಲ.
-ಬಿ.ವಿ.ಆಚಾರ್ಯ, ಮಾಜಿ ಅಡ್ವೋಕೇಟ್ ಜನರಲ್