ಮೋಟಾರು ವಾಹನ ಕಾಯ್ದೆ ಖಂಡಿಸಿ ಪ್ರತಿಭಟನೆ

Update: 2019-07-30 18:16 GMT

ಬೆಂಗಳೂರು, ಜು.30: ಕೇಂದ್ರ ಸರಕಾರ ಜಾರಿ ಮಾಡಲು ಮುಂದಾಗಿರುವ ಮೋಟಾರು ವಾಹನ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ಜನಾಂದೋಲನ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮಂಗಳವಾರ ಬೆಂಗಳೂರಿನ ಕಸ್ತೂರಿ ನಗರದ ಆರ್‌ಟಿಒ ಕಚೇರಿ ಬಳಿ ಎರಡೂ ಸಂಘಟನೆಗಳ ನೂರಕ್ಕೂ ಅಧಿಕ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರದ ಜನವಿರೋಧಿ ಮೋಟಾರು ವಾಹನ ಕಾಯ್ದೆಯನ್ನು ಖಂಡಿಸಿದರು. ಇದನ್ನು ಕೂಡಲೇ ಸರಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಎಂ.ಆರ್.ವೆಂಕಟೇಶ್, ಕೇಂದ್ರ ಸರಕಾರ ನೂತನವಾಗಿ ಜಾರಿಗೆ ತಂದಿರುವ ಮೋಟಾರ್ ವಾಹನ ಕಾಯ್ದೆಯಿಂದಾಗಿ ವಾಹನ ಚಾಲಕರು ಹಾಗೂ ವಾಹನ ಮಾಲಕರು ತೀವ್ರ ಸಂಕಷ್ಟಕ್ಕೀಡಾಗುತ್ತಾರೆ. ಹೆಲ್ಮೆಟ್ ಧರಿಸದಿರುವುದು, ವಿಮೆ ಕಟ್ಟದಿರುವುದು, ಚಾಲನಾ ಪರವಾನಿಗೆ ನವೀಕರಣ ಮಾಡದಿರುವುದು ಸೇರಿದಂತೆ ಸಣ್ಣಪುಟ್ಟ ತಪ್ಪುಗಳಿಗೆ ಸಾವಿರಾರು ರೂ.ಗಳು ದಂಡ ವಿಧಿಸಿರುವುದು ಸರಿಯಲ್ಲ ಎಂದರು.

ಕಸ್ತೂರಿ ನಗರದ ಆರ್‌ಟಿಒ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಪಾಲ್ಗೊಳ್ಳುತ್ತಾರೆ. ಸಾರ್ವಜನಿಕರ ಮೇಲೆ ದೌರ್ಜನ್ಯ ನಡೆಸುತ್ತಾರೆ ಎಂದ ಅವರು, ಯಾವುದೇ ನೂತನ ಚಾಲನಾ ಪರವಾನಿಗೆ ಪಡೆಯಲು ಅಧಿಕಾರಿಗಳು ಗುರುತಿಸಿರುವ ಮಧ್ಯವರ್ತಿಗಳ ಮೂಲಕ ಹೋದರೆ ಮಾತ್ರ ಡಿಎಲ್ ಸಿಗುತ್ತಿದೆ. ಇಲ್ಲದಿದ್ದರೆ, ಸುಲಭವಾಗಿ ಡಿಎಲ್ ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಹಣ ನೀಡದಿದ್ದರೆ ಒಂದು ಕೆಲಸವೂ ಆಗುವುದಿಲ್ಲ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News