ಹೃದಯ ರೋಗ ಶಸ್ತ್ರಚಿಕಿತ್ಸೆ: ಬಡ ರೋಗಿಗಳಿಗೆ ಸೂಕ್ತ ಮಾರ್ಗದರ್ಶನ ಅಗತ್ಯ- ಡಾ.ತಮೀಮ್ ಅಹ್ಮದ್
ಬೆಂಗಳೂರು, ಜು.31: ಹೃದಯ ಸಂಬಂಧಿ ರೋಗಗಳು ಹಾಗೂ ಶಸ್ತ್ರ ಚಿಕಿತ್ಸೆಗಳಿಗೆ ಸಂಬಂಧಿಸಿದಂತೆ ಬಡವರು ಹಾಗೂ ಮಧ್ಯಮ ವರ್ಗದವರಿಗೆ ಸೂಕ್ತ ಮಾಹಿತಿ ಇಲ್ಲದ ಕಾರಣ, ಅವರುಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಕಾರ್ಡಿಯಾಕ್ ಫ್ರಂಟಿಡಾದ ಹಾರ್ಟ್ ಟೀಮ್ ನಿರ್ದೇಶಕ ಡಾ.ತಮೀಮ್ ಅಹ್ಮದ್ ತಿಳಿಸಿದರು.
ಬುಧವಾರ ನಗರದ ಫ್ರೇಝರ್‌ಟೌನ್‌ನಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೊಲಂಬಿಯಾ ಏಷಿಯಾ, ಮಣಿಪಾಲ್ ಆಸ್ಪತ್ರೆ, ಸಪ್ತಗಿರಿ ಆಸ್ಪತ್ರೆ, ಎಚ್‌ಬಿಎಸ್ ಆಸ್ಪತ್ರೆ, ಸ್ಪೆಷಲಿಸ್ಟ್ ಆಸ್ಪತ್ರೆ ಹಾಗೂ ಹೊಸೂರಿನ ಶ್ರೀಚಂದ್ರಶೇಖರ ಆಸ್ಪತ್ರೆಯಲ್ಲಿನ ತಜ್ಞರ ವೈದ್ಯರು ಒಂದು ತಂಡವನ್ನು ರಚಿಸಿಕೊಂಡು ಬಡ ಹಾಗೂ ಮಧ್ಯಮ ರೋಗಿಗಳ ನೆರವಿಗೆ ಧಾವಿಸಿದ್ದೇವೆ ಎಂದರು.
ವೈದ್ಯರು ಹಾಗೂ ರೋಗಿಗಳ ನಡುವಿನ ಅಂತರ ಹೆಚ್ಚಾಗಿರುವುದರಿಂದ, ರೋಗಿಗಳ ಆರ್ಥಿಕ ಪರಿಸ್ಥಿತಿ ವೈದ್ಯರ ಗಮನಕ್ಕೆ ಬರುವುದಿಲ್ಲ. ಆದುದರಿಂದ, ನಮ್ಮ ವೈದ್ಯರ ತಂಡ ಪರಸ್ಪರ ಸಮಾಲೋಚನೆಗಳನ್ನು ನಡೆಸಿ ಬಡವರಿಗೆ ಅಗ್ಗದ ದರದಲ್ಲಿ ಉತ್ತಮ ಚಿಕಿತ್ಸೆ ಯಾವ ರೀತಿಯಲ್ಲಿ ಕಲ್ಪಿಸಿಕೊಡಬಹುದು ಎಂಬುದರ ಮಾರ್ಗದರ್ಶನ ನೀಡುತ್ತಿದ್ದೇವೆ ಎಂದು ಅವರು ಹೇಳಿದರು.
ಬಿಪಿಎಲ್ ಕಾರ್ಡುದಾರರಿಗೆ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸಂಬಂಧಪಟ್ಟ ರೋಗಿಗಳು ಯಾವ ರೀತಿಯಲ್ಲಿ ಪಡೆದುಕೊಳ್ಳಬಹುದು ಎಂಬುದರ ಬಗ್ಗೆಯೂ ವಿಶೇಷ ಗಮನ ಹರಿಸಲಾಗುತ್ತದೆ. ತಂತ್ರಜ್ಞಾನ ಬೆಳೆದಂತೆ ಚಿಕಿತ್ಸೆಯ ವಿಧಾನಗಳು ಬದಲಾಗುತ್ತಿವೆ. ಆದುದರಿಂದ, ಹೃದಯ ಸಂಬಂಧಿ ಸಮಸ್ಯೆಗಳು ಇರುವವರು ಯಾವುದೇ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವ ಮುನ್ನ ನಮ್ಮನ್ನು ಸಂಪರ್ಕಿಸಿದರೆ ಸೂಕ್ತವಾದ ಮಾರ್ಗದರ್ಶನ ನೀಡಲಾಗುವುದು ಎಂದು ಅವರು ತಿಳಿಸಿದರು.
ಇತ್ತೀಚೆಗಷ್ಠೆ ನಾವು ವಿದೇಶಿ ವ್ಯಕ್ತಿಯೊಬ್ಬರಿಗೆ ಕೀ ಹೋಲ್ ಮೂಲಕ ಬೈಪಾಸ್ ಸರ್ಜರಿ ಮಾಡಿದ್ದೇವೆ. 7-10 ದಿನಗಳಲ್ಲಿ ಆ ವ್ಯಕ್ತಿ ಗುಣಮುಖರಾಗಿ ತಮ್ಮ ಸಾಮಾನ್ಯ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಬೈಪಾಸ್ ಸರ್ಜರಿಗೆ ಕನಿಷ್ಠ 5 ಲಕ್ಷ ರೂ.ಖರ್ಚಾಗುತ್ತದೆ, ವಾಲ್ವ್ ಅಳವಡಿಕೆಗೆ 7 ಲಕ್ಷ ರೂ.ಖರ್ಚಾಗುತ್ತದೆ. ಆದರೆ, ನಾವು ಈ ಪ್ರಮಾಣವನ್ನು ಗಣನೀಯವಾಗಿ ಕಡಿಮೆ ಮಾಡುವ ನಿಟ್ಟನಲ್ಲಿ ಶ್ರಮಿಸುತ್ತಿದ್ದೇವೆ ಎಂದು ತಮೀಮ್ ಅಹ್ಮದ್ ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿನ ಸೌಲಭ್ಯಗಳು ವಿರಳವಾಗಿರುವ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಜೊತೆಗೆ, ಪಶ್ಚಿಮ ಬಂಗಾಳ, ಓಡಿಶಾ, ಬಿಹಾರ, ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿಯೂ ನಮ್ಮ ತಂಡ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಆಸಕ್ತರು ನಮ್ಮ ಕಚೇರಿ ‘ಕಾರ್ಡಿಯಾಕ್ ಫ್ರಂಟಿಡಾ, ಕೋಲ್ಸ್ ಚಿಲ್‌ಮ್ಯಾನ್, 87/1, 4ನೇ ಮಹಡಿ, ಬ್ಯಾಂಕ್ ಆಫ್ ಬರೋಡ ಮೇಲೆ, ಕೋಲ್ಸ್ ರಸ್ತೆ, ಫ್ರೇಝರ್ ಟೌನ್, ಬೆಂಗಳೂರು-560005, ದೂರವಾಣಿ ಸಂಖ್ಯೆ: 9482919452, 9108373617, 9591967280ಗೆ ಸಂಪರ್ಕಿಸಬಹುದಾಗಿದೆ ಎಂದು ತಮೀಮ್ ಅಹ್ಮದ್ ಹೇಳಿದರು.